ADVERTISEMENT

ಭಾರತದ ಹೊರಗೆ ವಾಟ್ಸ್ಆ್ಯಪ್ ಪಾವತಿ ವ್ಯವಸ್ಥೆ

ಅವಿನಾಶ್ ಬಿ.
Published 31 ಜನವರಿ 2020, 19:30 IST
Last Updated 31 ಜನವರಿ 2020, 19:30 IST
ಆ್ಯಪ್
ಆ್ಯಪ್   

ಪ್ರಸ್ತುತ ದೇಶದಲ್ಲಿ ಹಲವು ಕಂಪನಿಗಳು ಡಿಜಿಟಲ್‌ ವ್ಯಾಲೆಟ್‌ ಮೂಲಕ ಹಣ ಪಾವತಿ ಮಾಡುವಂತಹ ವ್ಯವಸ್ಥೆಯನ್ನು ಕಲ್ಪಿಸಿವೆ. ಈಗ ಆ ಸಾಲಿಗೆ ಸಾಮಾಜಿಕ ಸಂವಹನಾ ಆ್ಯಪ್ 'ವಾಟ್ಸ್ಆ್ಯಪ್' ಕೂಡ ಸೇರುತ್ತಿದೆ.

ಈ ಮೊದಲು ವಾಟ್ಸ್‌ಆ್ಯಪ್‌ ಪೇಮೆಂಟ್ ಚಾಲ್ತಿಗೆ ಬರುತ್ತದೆ ಎಂಬುದು ಕೇವಲ ಕುತೂಹಲವಾಗಿತ್ತು. ಆದರೆ ಇದೀಗ ಹೊಸ ಸುದ್ದಿಯೆಂದರೆ, ಇನ್ನಾರು ತಿಂಗಳಲ್ಲಿ ‘ವಾಟ್ಸ್ಆ್ಯಪ್ ಪೇ’ ಎಂಬ ಪಾವತಿ ವ್ಯವಸ್ಥೆ ಭಾರತ ಹೊರತಾಗಿ ಆರು ದೇಶಗಳಿಗೆ ಲಭ್ಯವಾಗಲಿದೆ.

ಕಳೆದ ಒಂದು ವರ್ಷದಿಂದ ಫೇಸ್‌ಬುಕ್ ಒಡೆತನದ ವಾಟ್ಸ್ಆ್ಯಪ್ ತನ್ನ ಪಾವತಿ ವ್ಯವಸ್ಥೆಯನ್ನು ಪೈಲಟ್ ಯೋಜನೆ ರೂಪದಲ್ಲಿ ಭಾರತದಲ್ಲಿ ಸುಮಾರು ಹತ್ತು ಲಕ್ಷ ಮಂದಿಗೆ ಒದಗಿಸಿತ್ತು. ಅದರಲ್ಲಿರಬಹುದಾದ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಈ ಪೈಲಟ್ ಯೋಜನೆಯಲ್ಲಿ ಅವಕಾಶವಿತ್ತು.

ADVERTISEMENT

‘ಅನಧಿಕೃತವಾಗಿ ಇದನ್ನು ’ವಾಟ್ಸ್ಆ್ಯಪ್ ಪೇ’ ಎಂದೇ ಕರೆಯಲಾಗುತ್ತಿದೆ. ಮುಂದಿನ ಆರು ತಿಂಗಳಲ್ಲಿ ಭಾರತದ ಹೊರಗೆಯೂ ಇದನ್ನು ವಿಸ್ತರಿಸಲಾಗುತ್ತದೆ’ ಎಂದು ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಹೇಳಿಕೊಂಡಿದ್ದಾರೆ.

ಈ ವ್ಯವಸ್ಥೆಯನ್ನು ಭಾರತದಲ್ಲಿ ಜಾರಿಗೊಳಿಸಲು ಸರ್ಕಾರ ಮತ್ತು ರಿಸರ್ವ್ ಬ್ಯಾಂಕ್‌ಗಳು ಮುಂದಿಟ್ಟಿರುವ ಕೆಲವು ಷರತ್ತುಗಳನ್ನು ಪೂರೈಸಲು ವಾಟ್ಸ್ಆ್ಯಪ್ ಶ್ರಮಿಸುತ್ತಲೇ ಇದೆ. ಅವುಗಳಲ್ಲಿ, ಭಾರತೀಯರ ದತ್ತಾಂಶವನ್ನು ಭಾರತದೊಳಗಿರುವ ಸರ್ವರ್‌ನಲ್ಲೇ ಶೇಖರಿಸಿಡಬೇಕೆಂಬುದು ಒಂದು. ’ಈ ಈ ಷರತ್ತನ್ನು ಪೂರೈಸುವವರೆಗೂ ಅನುಮತಿ ವಾಟ್ಸ್ಆ್ಯಪ್ ಪೇಮೆಂಟ್ ಬ್ಯಾಂಕ್‌ಗೆ ನೀಡಲಾಗುವುದಿಲ್ಲ’ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಆದ್ದರಿಂದ ಈ ಪೈಲಟ್ ಯೋಜನೆಯೂ ಸದ್ಯಕ್ಕೆ ಸ್ಥಗಿತವಾಗಿದೆ.

ಈ ರೀತಿಯ ಏಕೀಕೃತ ಪಾವತಿ ವ್ಯವಸ್ಥೆಯನ್ನು (ಯುಪಿಐ) ಭಾರತ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ನಿಭಾಯಿಸುತ್ತದೆ. ಆದರೆ, ಸ್ಥಳೀಯ ಸರ್ವರ್‌ಗಳಲ್ಲಿ ಈ ದತ್ತಾಂಶವನ್ನು ಕಾಯ್ದುಕೊಳ್ಳುವಂತಾದರೆ, ಅಂತರರಾಷ್ಟ್ರೀಯ ಪಾವತಿಯ ಸುಲಲಿತ ವಹಿವಾಟಿಗೆ ಸಮಸ್ಯೆಯಾಗುತ್ತದೆ ಎಂಬುದು ವಾಟ್ಸ್ಆ್ಯಪ್ ವಾದ. ಈಗಾಗಲೇ ವಿದೇಶೀ ಕಂಪನಿಗಳಾದ ಗೂಗಲ್, ಅಮೆಜಾನ್, ಒರೇಕಲ್, ಮೈಕ್ರೋಸಾಫ್ಟ್ ಅಜ್ಯೂರ್ ಮತ್ತಿತರ ಕಂಪನಿಗಳು ತಮ್ಮ ಸರ್ವರ್‌ಗಳನ್ನು ಭಾರತದಲ್ಲೇ ಸ್ಥಾಪಿಸುವ ಮೂಲಕ ಪಾವತಿ ವ್ಯವಸ್ಥೆಯನ್ನು ಜಾರಿಗೊಳಿಸಿವೆ. ವಾಟ್ಸ್ಆ್ಯಪ್ ಈ ಬಗ್ಗೆ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದರ ಮೇಲೆ ಅದರ ಪಾವತಿ ವ್ಯವಸ್ಥೆ ನಿಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.