ADVERTISEMENT

ಹೊಸ ನಿಯಮದ ಕುರಿತು ಬಳಕೆದಾರರ ಮನವೊಲಿಕೆಗೆ ವಾಟ್ಸ್ಆ್ಯಪ್‌ ಕಸರತ್ತು!

ವಿಶ್ವನಾಥ ಎಸ್.
Published 2 ಮಾರ್ಚ್ 2021, 19:30 IST
Last Updated 2 ಮಾರ್ಚ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಖಾಸಗಿತನಕ್ಕೆ ಸಂಬಂಧಿಸಿದ ತನ್ನ ಹೊಸ ನಿಯಮವನ್ನು ಬಳಕೆದಾರರು ಅಷ್ಟು ಸುಲಭಕ್ಕೆ ಒಪ್ಪಿಕೊಳ್ಳುವುದಿಲ್ಲ ಎನ್ನುವುದು ವಾಟ್ಸ್‌ಆ್ಯಪ್‌ ಗಮನಕ್ಕೆ ಬಂದಿದೆ. ಆ ಕಾರಣಕ್ಕಾಗಿಯೇ ಪದೇ ಪದೇ ಸ್ಪಷ್ಟನೆ, ಭರವಸೆ ಕೊಡುವ ಜೊತೆ ಜೊತೆಗೇ ನಿಯಮದಲ್ಲಿ ಕೆಲವೊಂದು ಬದಲಾವಣೆಗಳನ್ನೂ ಮಾಡುತ್ತಾ ಬಳಕೆದಾರರ ಮನವೊಲಿಸುವ ಕಸರತ್ತು ನಡೆಸುತ್ತಿದೆ.

ಹೊಸ ನಿಯಮದ ಬಗ್ಗೆ ಬಳಕೆದಾರರು, ಪ್ರಮುಖ ಉದ್ಯಮಿಗಳಿಂದ ತೀವ್ರ ಟೀಕೆ ವ್ಯಕ್ತವಾಗುತ್ತಿರುವುದು ಮಾತ್ರವಲ್ಲ. ವಾಟ್ಸ್ಆ್ಯಪ್‌ ಬಳಕೆ ಕೈಬಿಟ್ಟು ಸಿಗ್ನಲ್‌ ಮತ್ತು ಟೆಲಿಗ್ರಾಂ ಆ್ಯಪ್‌ ಬಳಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹೊಸದಾಗಿ ವಾಟ್ಸ್‌ಆ್ಯಪ್‌ ಡೌನ್‌ಲೋಡ್‌ ಮಾಡುವವರ ಸಂಖ್ಯೆಯಲ್ಲಿ ಇಳಿಕೆ ಕಂಡುಬರುತ್ತಿದೆ. ಈ ಬೆಳವಣಿಗೆಯು ವಾಟ್ಸ್ಆ್ಯಪ್‌ನ ನಿದ್ದೆಗೆಡಿಸುತ್ತಿದೆ. ಹೀಗಾಗಿ ಫೆಬ್ರುವರಿ 8ರಿಂದ ಜಾರಿಗೊಳಿಸಲು ಹೊರಡಿಸಿದ್ದ ನಿಯಮವನ್ನು ಮೇ 15ಕ್ಕೆ ಮುಂದೂಡಿದೆ. ತಪ್ಪು ಮಾಹಿತಿ ಹರಡುತ್ತಿರುವುದರಿಂದ ಹೊಸ ನೀತಿಯನ್ನು ಒಪ್ಪಿಕೊಳ್ಳುವ ಗಡುವನ್ನು ವಿಸ್ತರಣೆ ಮಾಡಿರುವುದಾಗಿ ಘೋಷಿಸಿದೆ.

ಖಾಸಗಿ ನೀತಿಯಲ್ಲಿ ಮಾಡಿರುವ ಬದಲಾವಣೆಗಳನ್ನು ಕೈಬಿಡುವಂತೆ ಭಾರತದ ಎಲೆಕ್ಟ್ರಾನಿಕ್ಸ್‌ ಮತ್ತು ಐ.ಟಿ. ಸಚಿವಾಲಯವೂ ವಾಟ್ಸ್‌ಆ್ಯಪ್‌ಗೆ ಪತ್ರ ಬರೆದಿದೆ. ಬಳಕೆದಾರರ ಖಾಸಗಿ ಹಕ್ಕನ್ನು ಉಲ್ಲಂಘಿಸಲಾಗುತ್ತಿದೆ ಎಂದು ಆರೋಪಿಸಿ ವಕೀಲರೊಬ್ಬರು ವಾಟ್ಸ್ಆ್ಯಪ್‌ನ ಹೊಸ ನೀತಿಯ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಈ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು ವಾಟ್ಸ್‌ಆ್ಯಪ್‌ನಿಂದ ಸ್ಪಷ್ಟನೆ ಪಡೆಯಲು ಕೇಂದ್ರ ಸರ್ಕಾರಕ್ಕೆ ಮೂರುವಾರಗಳ ಕಾಲಾವಕಾಶ ನೀಡಿದೆ. ವಾಟ್ಸ್‌ಆ್ಯಪ್‌ನ ಹೊಸ ನೀತಿಯ ಕುರಿತು ಉನ್ನತ ಮಟ್ಟದ ಪರಿಶೀಲನೆ ನಡೆಸುವುದಾಗಿ ಕೇಂದ್ರವು ಹೈಕೋರ್ಟ್‌ಗೆ ತಿಳಿಸಿದೆ.

ADVERTISEMENT

ಮೇ 15ರಂದು ಹೊಸ ನೀತಿಗೆ ಒಪ್ಪಿಗೆ ನೀಡದೇ ಇರುವ ಬಳಕೆದಾರರ ಖಾತೆ ಡಿಲೀಟ್‌ ಮಾಡುವುದಿಲ್ಲ. ಆದರೆ, ಹೊಸ ನೀತಿ ಒಪ್ಪಿಕೊಳ್ಳದ ಹೊರತು ವಾಟ್ಸ್‌ಆ್ಯಪ್‌ ಸಂಪೂರ್ಣವಾಗಿ ಕಾರ್ಯನಿರ್ವಹಿಸುದಿಲ್ಲ. ಅಂದರೆ, ಹೊಸ ನೀತಿಯನ್ನು ಒಪ್ಪಿಕೊಳ್ಳಲಿ ಎನ್ನುವ ಕಾರಣಕ್ಕೆ ಅಲ್ಪಾವಧಿಗೆ ಮಾತ್ರ ವಾಟ್ಸ್‌ಆ್ಯಪ್‌ ಕರೆಗಳು, ನೋಟಿಫಿಕೇಷನ್‌ ಬರುತ್ತವೆ. ಆದರೆ, ಮೆಸೇಜ್‌ ಓದಲು ಅಥವಾ ಕಳುಹಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದೆ.

ಅಲ್ಪಾವಧಿಗೆ ವಾಟ್ಸ್‌ಆ್ಯಪ್‌ ಕಾಲ್‌ ಮತ್ತು ನೋಟಿಫಿಕೇಷನ್‌ ವೈಶಿಷ್ಟ್ಯಗಳು ಇರಲಿವೆ ಎಂದು ಕಂಪನಿ ತಿಳಿಸಿದೆಯಾದರೂ ಎಲ್ಲಿಯವರೆಗೆ ಎನ್ನುವುದನ್ನು ಇನ್ನಷ್ಟೇ ನಿಖರವಾಗಿ ತಿಳಿಸಬೇಕಿದೆ. ಮೆಸೇಜ್‌ ಕಳುಹಿಸಲು, ಓದಲು ಸಾಧ್ಯವಾಗದೇ ಇದ್ದರೆ ವಾಟ್ಸ್‌ಆ್ಯಪ್‌ ಇದ್ದೂ ಇಲ್ಲದಂತೆಯೇ ಸರಿ. ಏಕೆಂದರೆ ಬಹುಪಾಲು ಬಳಕೆದಾರರು ವಾಟ್ಸ್‌ಆ್ಯಪ್ ಬಳಸುತ್ತಿರುವುದೇ ಮೆಸೇಜ್‌ ಮೂಲಕ ಸಂವಹನ ನಡೆಸಲು. ಹೀಗಿರುವಾಗ ಆ ಆಯ್ಕೆಯೇ ಇಲ್ಲದೇ ಇದ್ದರೆ? ಒಟ್ಟಾರೆಯಾಗಿ ಗಮನಿಸಿದರೆ, ಕಂಪನಿಯು ಏನೆಲ್ಲಾ ಭರವಸೆ, ಸ್ಪಷ್ಟನೆ ನೀಡಿದರೂ ನಿಯಮದಲ್ಲಿ ಪರಿಷ್ಕರಣೆ ಮಾಡಿದರೂ ವಾಟ್ಸ್‌ಆ್ಯಪ್‌ ಬಳಸಬೇಕು ಎಂದರೆ ಹೊಸ ನಿಯಮ ಒಪ್ಪಿಕೊಳ್ಳದೇ ಬೇರೆ ದಾರಿ ಇಲ್ಲ ಎನ್ನುವುದಂತೂ ಸ್ಪಷ್ಟವಾಗುತ್ತದೆ.

ಬಳಕೆದಾರರಿಗೆ ಇರುವ ಆಯ್ಕೆಗಳೇನು?

ಮೇ 15ರ ಬಳಿಕವೂ ಹೊಸ ನಿಯಮಕ್ಕೆ ಒಪ್ಪಿಗೆ ನೀಡಬಹುದು.

ಮೇ 15ಕ್ಕೂ ಮುನ್ನ ಚಾಟ್‌ ಹಿಸ್ಟರಿಯನ್ನು ಎಕ್ಸ್‌ಪೊರ್ಟ್‌ ಮಾಡಿಕೊಳ್ಳಬಹುದು. ನಿಮ್ಮ ಖಾತೆಯ ರಿಪೋರ್ಟ್‌ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಖಾತೆಯನ್ನು ಡಿಲೀಟ್‌ ಮಾಡುವ ಮುನ್ನ ಮತ್ತೊಮ್ಮೆ ಆಲೋಚಿಸಿ. ಏಕೆಂದರೆ ಒಮ್ಮೆ ಡಿಲೀಟ್‌ ಮಾಡಿದರೆ ಮತ್ತೆ ಮರು ಸ್ಥಾಪನೆ ಸಾಧ್ಯವಿಲ್ಲ. ಮೆಸೇಜ್‌ ಹಿಸ್ಟರಿ ಅಳಿಸಿಹೋಗುತ್ತದೆ. ಎಲ್ಲಾ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಿಂದ ನೀವು ಹೊರಬರಬೇಕಾಗುತ್ತದೆ. ಅಷ್ಟೇ ಅಲ್ಲ ವಾಟ್ಸ್‌ಆ್ಯಪ್‌ ಬ್ಯಾಕಪ್‌ ಸಹ ಡಿಲೀಟ್‌ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.