ಮುಂಬೈ: ‘ಭಾರತವು ಡಿಜಿಟಲ್ ಕಂಟೆಂಟ್ ಸೃಷ್ಟಿಕರ್ತರ ನೆಚ್ಚಿನ ತಾಣವಾಗಿದೆ. ಕಳೆದ ಮೂರು ವರ್ಷಗಳಲ್ಲಿ ಕಂಟೆಂಟ್ ಸೃಷ್ಟಿಕರ್ತರು, ಪಾಲುದಾರರು, ಮಾಧ್ಯಮ ಮತ್ತು ಮ್ಯೂಸಿಕ್ ಕಂಪನಿಗಳಿಗೆ ₹21 ಸಾವಿರ ಕೋಟಿ ಪಾವತಿಸಲಾಗಿದೆ’ ಎಂದು ಯೂಟ್ಯೂಬ್‌ನ ಏಷ್ಯಾ ಪೆಸಿಫಿಕ್ ವಿಭಾಗದ ಉಪಾಧ್ಯಕ್ಷ ಗೌತಮ್ ಆನಂದ್ ಹೇಳಿದ್ದಾರೆ.
ಇಲ್ಲಿ ನಡೆಯುತ್ತಿರುವ ಜಾಗತಿಕ ಶ್ರವಣ-ದೃಶ್ಯ ಮನರಂಜನೆ ಶೃಂಗ 2025ರಲ್ಲಿ (ವೇವ್ಸ್) ಪಿಟಿಐ ಸುದ್ದಿಸಂಸ್ಥೆ ಜೊತೆಗೆ ಮಾತನಾಡಿದ ಅವರು, ವಿಡಿಯೊಗಳನ್ನು ಸೃಷ್ಟಿಸಿ, ಅವುಗಳನ್ನು ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಿ ಹಣ ಗಳಿಸುವಂತಹ ಮಾರುಕಟ್ಟೆಯು ದೇಶದಲ್ಲಿ ವೇಗವಾಗಿ ಬೆಳೆಯುತ್ತಿದೆ ಎಂದು ಹೇಳಿದ್ದಾರೆ.
ಕಂಟೆಂಟ್ ಸೃಷ್ಟಿಕರ್ತರಿಗೆ ವಿಡಿಯೊಗಳ ಸೃಷ್ಟಿಗೆ ಅಗತ್ಯವಿರುವ ಎಲ್ಲಾ ನೆರವು ನೀಡಲು ಬದ್ಧ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ನೆರವು ಕೂಡ ಕಲ್ಪಿಸಲಾಗುವುದು. ಆ ಮೂಲಕ ಅವರ ಆದಾಯ ಸೃಷ್ಟಿಗೆ ಅಗತ್ಯವಿರುವ ಎಲ್ಲಾ ಸಹಕಾರ ನೀಡಲಾಗುವುದು ಎಂದು ಹೇಳಿದ್ದಾರೆ.
₹850 ಕೋಟಿ ಹೂಡಿಕೆ: ‘ಭಾರತದಲ್ಲಿರುವ ಕಂಟೆಂಟ್ ಸೃಷ್ಟಿಕರ್ತರು, ಕಲಾವಿದರು ಮತ್ತು ಮಾಧ್ಯಮ ಕಂಪನಿಗಳ ಬೆಳವಣಿಗೆಗೆ ಪೂರಕವಾಗಿ ಮುಂದಿನ ಎರಡು ವರ್ಷಗಳಲ್ಲಿ ₹850 ಕೋಟಿ ಬಂಡವಾಳ ಹೂಡಿಕೆಗೆ ನಿರ್ಧರಿಸಲಾಗಿದೆ’ ಎಂದು ಯೂಟ್ಯೂಬ್ ಸಿಇಒ ನೀಲ್ ಮೋಹನ್ ಹೇಳಿದ್ದಾರೆ.
ಭಾರತದಲ್ಲಿ ಕಳೆದ ವರ್ಷ ಯೂಟ್ಯೂಬ್‌ನಲ್ಲಿ 10 ಕೋಟಿಗೂ ಹೆಚ್ಚು ಚಾನಲ್‌ಗಳಿಂದ ಕಂಟೆಂಟ್ ಅಪ್‌ಲೋಡ್ ಮಾಡಲಾಗಿದೆ. ಈ ಪೈಕಿ 15 ಸಾವಿರ ಚಾಲನ್‌ಗಳು ಒಂದು ಕೋಟಿಗೂ ಹೆಚ್ಚು ಚಂದಾದಾರರನ್ನು ಹೊಂದಿವೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.