ADVERTISEMENT

2021ರಲ್ಲಿ ಐ.ಟಿ. ಕಂಪನಿಗಳಿಗೆ ಉತ್ತಮ ಪ್ರಗತಿ: ಬಾಲಕೃಷ್ಣನ್

ಪಿಟಿಐ
Published 17 ಜನವರಿ 2021, 13:40 IST
Last Updated 17 ಜನವರಿ 2021, 13:40 IST
ಬಾಲಕೃಷ್ಣನ್
ಬಾಲಕೃಷ್ಣನ್   

ಬೆಂಗಳೂರು: ‘ದೇಶದ ಮಾಹಿತಿ ತಂತ್ರಜ್ಞಾನ ವಲಯಕ್ಕೆ 2021ನೇ ವರ್ಷವು ಉತ್ತಮವಾಗಿರಲಿದ್ದು ಬಹುತೇಕ ಕಂಪನಿಗಳು ಒಂದಂಕಿ ಪ್ರಗತಿ ಸಾಧಿಸಲಿವೆ’ ಎಂದು ಇನ್ಫೊಸಿಸ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ವಿ. ಬಾಲಕೃಷ್ಣನ್‌ ಹೇಳಿದ್ದಾರೆ.

‘ದೇಶದ ಐ.ಟಿ. ಕಂಪನಿಗಳು ಕೋವಿಡ್‌–19 ಸಾಂಕ್ರಾಮಿಕದ ಪರಿಸ್ಥಿತಿಯನ್ನು ಬಹಳ ಉತ್ತಮವಾಗಿ ನಿಭಾಯಿಸಿವೆ. ಅದರಲ್ಲಿಯೂ ಮುಖ್ಯವಾಗಿ ಮನೆಯಿಂದ ಕೆಲಸ ಮಾಡುವ ವ್ಯವಸ್ಥೆ ಮತ್ತು ಹೊಸ ವಾಣಿಜ್ಯ ಅವಕಾಶಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡಿವೆ. ಪ್ರಮುಖ ಜಾಗತಿಕ ಕಂಪನಿಗಳು ಕ್ಲೌಡ್‌ ವ್ಯವಸ್ಥೆಗೆ ಬದಲಾಗಲು ಮತ್ತು ವೆಚ್ಚ ತಗ್ಗಿಸಲು ಬಯಸಿವೆ. ಈ ಕಾರಣಕ್ಕಾಗಿಯೇ ದೊಡ್ಡ ಮಟ್ಟದ ಒಪ್ಪಂದಗಳು ಬರುತ್ತಿದ್ದು, ಭಾರತದ ಕಂಪನಿಗಳು ಅದರಲ್ಲಿ ಉತ್ತಮ ಪಾಲು ಪಡೆಯುತ್ತಿವೆ’ ಎಂದು ಹೇಳಿದ್ದಾರೆ.

‘ಪ್ರತಿ ಮೂರರಿಂದ ನಾಲ್ಕು ವರ್ಷಗಳಲ್ಲಿ ಒಮ್ಮೆ ಆರ್ಥಿಕವಾಗಿ ಅಥವಾ ತಂತ್ರಜ್ಞಾನದ ದೃಷ್ಟಿಯಿಂದ ದೊಡ್ಡ ಮಟ್ಟದ ಬದಲಾವಣೆ ಆಗುತ್ತಿದೆ. ದೇಶದ ಐ.ಟಿ. ಕಂಪನಿಗಳು ಎಲ್ಲ ಕಾಲಕ್ಕೂ ಪ್ರಸ್ತುತವಾಗಿರುವ ಅಗತ್ಯವಿದೆ. ಹೊಸ ತಂತ್ರಜ್ಞಾನದಲ್ಲಿ ಹೂಡಿಕೆ ಮುಂದುವರಿಸಬೇಕು. ಹೊಸ ಆವಿಷ್ಕಾರಗಳಿಗೆ ಕಾರಣವಾಗುತ್ತಿರುವ ನವೋದ್ಯಮಗಳೊಂದಿಗೆ ಕೆಲಸ ಮಾಡಬೇಕು’ ಎಂದು ಅವರು ಸಲಹೆ ನೀಡಿದ್ದಾರೆ.

ADVERTISEMENT

ದೇಶದ ಬಹುತೇಕ ತಂತ್ರಜ್ಞಾನ ನವೋದ್ಯಮಗಳು ಕೋವಿಡ್‌–19 ಸಾಂಕ್ರಾಮಿಕದ ಪರಿಸ್ಥಿತಿಯನ್ನು ನಿಭಾಯಿಸಿವೆ. ನವೋದ್ಯಮಗಳಿಗೆ ಲಭ್ಯವಿರುವ ಬಂಡವಾಳದಲ್ಲಿಯೂ ಸುಧಾರಣೆ ಕಂಡುಬಂದಿದೆ. ನವೋದ್ಯಮಗಳು ಭಾರತ ಮಾರುಕಟ್ಟೆಗಷ್ಟೇ ಗಮನ ನೀಡದೆ, ಜಾಗತಿಕ ಮಾರುಕಟ್ಟೆಯ ಮೇಲೆಯೂ ಗಮನ ಕೇಂದ್ರೀಕರಿಸಬೇಕು. ಆಗ ಹಣಕ್ಕೆ ತಕ್ಕ ಮೌಲ್ಯ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.