ADVERTISEMENT

ನಿಮ್ಮ ಖಾಸಗಿ ಫೋಟೊ ಕದಿಯುವ ಆ್ಯಪ್‌ಗಳು!

ವಿಶ್ವನಾಥ ಎಸ್.
Published 1 ಮೇ 2019, 19:30 IST
Last Updated 1 ಮೇ 2019, 19:30 IST
   

ಮೊಬೈಲ್‌ನಲ್ಲಿ ಸೆರೆಹಿಡಿದ ಚಿತ್ರಗಳನ್ನು ಇನ್ನಷ್ಟು ಅಂದಗೊಳಿಸಲು ಫೋಟೊ ಎಡಿಟಿಂಗ್‌ ಆ್ಯಪ್‌ಗಳನ್ನು ಬಳಸುವುದು ಒಂದು ಕ್ರೇಜ್ ಆಗಿದೆ. ಇದರಿಂದಾಗಿ ಇಂತಹ ಆ್ಯಪ್‌ಗಳ ಸಂಖ್ಯೆಯೂ ಹೆಚ್ಚುತ್ತಿದೆ. ಪ್ಲೇ ಸ್ಟೋರ್‌ನಲ್ಲಿ ಒಮ್ಮೆ ಕಣ್ಣುಹಾಯಿಸಿದರೆ, ನಿಮ್ಮ ನಿತ್ಯದ ಫೋಟೊಗಳನ್ನು ಉತ್ತಮಪಡಿಸಲು ಲೆಕ್ಕವಿಲ್ಲದಷ್ಟು ಆ್ಯಪ್‌ಗಳು ಕಾಣಿಸುತ್ತವೆ. ಮೈಬಣ್ಣದ ಬದಲಾವಣೆ, ಫೋಟೊದ ಬ್ಯಾಗ್ರೌಂಡ್‌ ಬದಲಿಸುವುದು, ಹೆಸರು, ಚಿಹ್ನೆ, ಫ್ರೇಮ್‌ ಸೇರಿಸುವುದು ಹೀಗೆ ನಾನಾ ರೀತಿಯಲ್ಲಿ ಫೋಟೊದ ಅಂದ ಹೆಚ್ಚಿಸಿ ಅದನ್ನು ಫೇಸ್‌ಬುಕ್, ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಳ್ಳಲು ಆ್ಯಪ್‌ಗಳನ್ನು ಬಳಸಲಾಗುತ್ತಿದೆ.

ಇಂತಹ ಆ್ಯಪ್‌ಗಳಲ್ಲಿ ಕೆಲವು ನಿಮ್ಮ ಮೊಬೈಲ್‌ ಚಟುವಟಿಕೆಗಳ ಮೇಲೆ ನಿಗಾ ಇಡುತ್ತಿವೆ. ನಿರಂತರವಾಗಿ ನಿಮ್ಮ ಖಾಸಗಿ ಫೋಟೊಗಳನ್ನೂ ಕದಿಯುತ್ತಿವೆ.

‘ಅನಗತ್ಯವಾಗಿ ಜಾಹೀರಾತುಗಳನ್ನು ಬಿತ್ತರಿಸುವು ದರ ಜತೆಗೆ ಖಾಸಗಿ ಫೋಟೊಗಳಷ್ಟೇ ಅಲ್ಲದೆ ಫೋನ್‌ ನಲ್ಲಿರುವ ಮಾಹಿತಿಗಳನ್ನೂ ಕದಿಯುತ್ತಿವೆ’ ಎಂದು ಸುರಕ್ಷತಾ ಸಂಸ್ಥೆ ‘ಟ್ರೆಂಡ್‌ ಮೈಕ್ರೊ’ ಖಚಿತಪಡಿಸಿದ ಬಳಿಕ ಗೂಗಲ್‌ 29 ಬ್ಯೂಟಿ ಆ್ಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದೆ. ಇಂತಹ ಆ್ಯಪ್‌ಗಳು ಭಾರತದಲ್ಲಿ ಭಾರಿ ಸಂಖ್ಯೆಯಲ್ಲಿ ಡೌನ್‌ಲೋಡ್‌ ಆಗಿವೆ ಎಂದೂ ಸಂಸ್ಥೆ ಹೇಳಿದೆ.

ADVERTISEMENT

ಇನ್‌ಸ್ಟಾಲ್‌ ಮಾಡುವಾಗ ಯಾವುದೇ ರೀತಿಯ ಸಮಸ್ಯೆ ಕಾಣಿಸುವುದಿಲ್ಲ. ಆದರೆ, ಡಿಲೀಟ್‌ ಮಾಡಲು ಹೋದಾಗ ವಿಚಿತ್ರ ವರ್ತನೆ ಕಂಡುಬರುತ್ತದೆ. ಇನ್‌ಸ್ಟಾಲ್‌ ಆದಾಗ ಒಂದು ಶಾರ್ಟ್‌ಕಟ್‌ ಕ್ರಿಯೇಟ್‌ ಆಗುತ್ತದೆ. ಇದು ಆ್ಯಪ್‌ಗಳ ಪಟ್ಟಿಯಿಂದ ಹೈಡ್‌ ಆಗಿ, ಅನ್ಇನ್‌ಸ್ಟಾಲ್‌ ಮಾಡುವುದು ಕಷ್ಟವಾಗುತ್ತದೆ.

ಕೆಲವು ಆ್ಯಪ್‌ಗಳು ಬಳಕೆದಾರನ ಬ್ರೌಸರ್‌ ಮೂಲಕ ವಂಚಕ ಮಾಹಿತಿ ಗಳನ್ನು ನೀಡಿದರೆ, ಕೆಲವು ಅಶ್ಲೀಲ ಚಿತ್ರಗಳನ್ನು ಕಾಣುವಂತೆ ಮಾಡುತ್ತವೆ. ಆ್ಯಪ್ ತೆರೆಯುತ್ತಿದ್ದಂತೆಯೇ ನಕಲಿ ಜಾಲತಾಣ ತನ್ನಷ್ಟಕ್ಕೇ ತೆರೆದುಕೊಂಡು ವಿಳಾಸ, ಫೋನ್‌ ನಂಬರ್‌ನಂತಹ ಖಾಸಗಿ ವಿವರಗಳನ್ನು ನೀಡುವಂತೆ ಕೇಳುತ್ತವೆ. ಪಾಪ್‌ಅಪ್‌ ಮೇಲೆ ಕ್ಲಿಕ್‌ ಮಾಡಿದಾಗ, ಹಣ ಪಾವತಿಸುವ ಆನ್‌ಲೈನ್‌ ಪೊರ್ನೊಗ್ರಫಿ ಜಾಲತಾಣ ಡೌನ್‌ಲೋಡ್‌ ಆಗುತ್ತದೆ.

ಕೆಲವು ಆ್ಯಪ್‌ಗಳು ಬಳಕೆದಾರರ ಫೋಟೊಗಳನ್ನು ಕದಿಯುತ್ತಿವೆ. ಡೆಸಿಗ್ನೇಟೆಡ್‌ ಸರ್ವರ್‌ಗೆ ಬಳಕೆದಾರನ ಫೋಟೊ ಅಪ್‌ಲೊಡ್‌ ಮಾಡುವುದಕ್ಕೆ ಬದಲಾಗಿ ಖಾಸಗಿ ಸರ್ವರ್‌ಗೆ ಅಪ್‌ಲೋಡ್‌ ಮಾಡುತ್ತಿವೆ. ಮಾತ್ರವಲ್ಲ ಅದನ್ನು ಕೆಟ್ಟ ಉದ್ದೇಶಕ್ಕೆ ಬಳಸಿಕೊಳ್ಳುತ್ತಿವೆ. ಉದಾಹರಣೆಗೆ ನಕಲಿ ಸಾಮಾಜಿಕ ಮಾಧ್ಯಮ ಖಾತೆ ಅಥವಾ ಪೊರ್ನೊಗ್ರಫಿಗೆ ಬಳಸಲಾಗುತ್ತದೆ.

ಆಂಡ್ರಾಯ್ಡ್‌, ಐಒಎಸ್‌ ಯಾವುದು ಸುರಕ್ಷಿತ?
ಆಂಡ್ರಾಯ್ಡ್‌, ಐಒಎಸ್‌ ಇದರಲ್ಲಿ ಯಾವುದು ಉತ್ತಮ ಎನ್ನುವ ಚರ್ಚೆಯನ್ನು ತಾರ್ಕಿಕ ಅಂತ್ಯಕ್ಕೆ ಒಯ್ಯುವುದು ಕಷ್ಟವಾದೀತು. ಆದರೆ, ಐಒಎಸ್‌ಗೆ ಹೋಲಿಸಿದರೆ, ಆಂಡ್ರಾಯ್ಡ್‌ ಬಹು ಬೇಗ ಬಗ್‌ ಮತ್ತು ಮಾಲ್‌ವೇರ್‌ಗಳ ದಾಳಿಗೆ ಒಳಗಾಗುತ್ತದೆ. ಏಕೆಂದರೆ ಆಂಡ್ರಾಯ್ಡ್‌ ಓಪನ್‌ ಸೋರ್ಸ್‌ ವ್ಯವಸ್ಥೆ ಹೊಂದಿದೆ. ಅಂದರೆ, ಆಂಡ್ರಾಯ್ಡ್‌ ಫೋನ್‌ಗಳಿಗೆ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸುವ ಸೋರ್ಸ್‌ ಕೋಡ್‌ ಅನ್ನು ಗೂಗಲ್‌ ಕಂಪನಿ ನೀಡುತ್ತದೆ. ಇದರಿಂದ ಮೊಬೈಲ್‌ನ ಸುರಕ್ಷತೆ ದುರ್ಬಲಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಆ್ಯಪಲ್‌ನ ಐಒಎಸ್‌ ಹಾಗಿಲ್ಲ. ಈ ಕಾರ್ಯಾಚರಣೆ ವ್ಯವಸ್ಥೆಯು ಒಂದು ಕ್ಲೋಸ್ಡ್‌ ಸೋರ್ಸ್‌ ಕೋಡ್‌ ಹೊಂದಿದೆ. ಆ್ಯಪ್‌ ಅಭಿವೃದ್ಧಿಪಡಿಸುವವರಿಗೆ ಯಾವುದೇ ಸೋರ್ಸ್‌ ಕೋಡ್‌ ನೀಡುವುದಿಲ್ಲ. ಐಫೋನ್‌ ಮತ್ತು ಐಪ್ಯಾಡ್‌ ಬಳಸುವವರು ಕೋಡ್‌ ಬದಲಾಯಿಸಲು ಸಾಧ್ಯವಿಲ್ಲ.

ಐಫೋನ್‌ ದುಬಾರಿ ಎನ್ನುವ ಕಾರಣಕ್ಕಾಗಿ ಬಳಕೆದಾರರ ಸಂಖ್ಯೆ ಸೀಮೀತವಾಗಿದೆ. ಆದರೆ, ಆಂಡ್ರಾಯ್ಡ್‌ ಫೋನ್‌ ಹಾಗಿಲ್ಲ. ಕಡಿಮೆ ಬೆಲೆಯಲ್ಲಿ ಸಿಗುತ್ತಿದೆ. ಹೀಗಾಗಿ ಇಂದು ಜಗತ್ತಿನಾದ್ಯಂತ ಆಂಡ್ರಾಯ್ಡ್‌ ಫೋನ್‌ಗಳ ಬಳಕೆಯೇ ಹೆಚ್ಚಿದೆ. ಹೀಗಾಗಿ ಸುಲಭವಾಗಿ ಸೈಬರ್‌ದಾಳಿಗೆ ತುತ್ತಾಗುತ್ತಿದೆ ಎನ್ನುವುದು ತಜ್ಞರ ಅಭಿಪ್ರಾಯ.

ಥರ್ಡ್‌ ಪಾರ್ಟಿ ಆ್ಯಪ್‌ ಸ್ಟೋರ್‌ಗಳಿಂದ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಡಿ. ನಂಬಲರ್ಹವಾದ ಗೂಗಲ್‌ ಪ್ಲೇಸ್ಟೋರ್‌ ಮತ್ತು ಆ್ಯಪಲ್‌ ಆ್ಯಪ್‌ ಸ್ಟೋರ್‌ನಿಂದ ಮಾತ್ರವೇ ಡೌನ್‌ಲೋಡ್‌ ಮಾಡಿಕೊಳ್ಳಿ ಎನ್ನುವುದು ತಜ್ಞರ ಸಲಹೆ.

ಆದರೆ, ಅಧಿಕೃತ ಪ್ಲೇ ಸ್ಟೋರ್‌ಗೂ ಸೈಬರ್‌ದಾಳಿ ನಡೆಯಲಾರಂಭಿಸಿದ್ದು, ಬಳಕೆದಾರನ ವೈಯಕ್ತಿಕ ಮಾಹಿತಿಗಳನ್ನು ಕದ್ದು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ. ಹಾಗಾದರೆ ರಕ್ಷಣೆ ಹೇಗೆ ಎನ್ನುವ ಪ್ರಶ್ನೆ ಎದುರಾಗುತ್ತದೆ.

ಡಿಲಿಟ್‌ ಆಗಿರುವ ಆ್ಯಪ್‌ಗಳು
Pro Camera Beauty, Cartoon Art Photo, Emoji Camera, Artistic effect Filter, Art Editor, Beauty Camera, Selfie Camera Pro, Horizon Beauty Camera, Super Camera, Art Effects for Photo, Awesome Cartoon Art, Art Filter Photo, Art Filter Photo Effcts, Cartoon Effect, Art Effect, Photo Editor, Wallpapers HD, Magic Art Filter Photo Editor, Fill Art Photo Editor, ArtFlipPhotoEditing, Art Filter, Cartoon Art Photo, Prizma Photo Effect, Cartoon Art Photo Filter, Art Filter Photo Editor, Pixture, Art Effect, Photo Art Effect, Cartoon Photo Filter

ಸುರಕ್ಷತಾ ಮಾರ್ಗಗಳು
ಮೊದಲನೆಯದಾಗಿ ಅಗತ್ಯವಿಲ್ಲದ ಆ್ಯಪ್‌ ಡೌನ್‌ಲೋಡ್ ಮಾಡದೇ ಇರುವುದು. ಉದಾಹರಣೆಗೆ ಕ್ಯಾಷ್‌ಬ್ಯಾಕ್‌ ಸಿಗುತ್ತದೆ ಎನ್ನುವ ಕಾರಣಕ್ಕಾಗಿ ಬೇರೆ ಬೇರೆ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡುವುದು ಸರಿಯಲ್ಲ. ಈಗಂತೂ ಹಣ ಪಾವತಿ ಮತ್ತು ವರ್ಗಾವಣೆಗೆ ಹಲವು ಆ್ಯಪ್‌ಗಳಿವೆ. ಕಂಪನಿಗಳು ಎಷ್ಟೇ ಭರವಸೆ ನೀಡಿದರೂ ಅಧಿಕೃತವಾಗಿ ಬ್ಯಾಂಕ್‌ಗಳು ನೀಡುವ ಆ್ಯಪ್‌ ಬಳಸುವುದರಿಂದ ನಮ್ಮ ಹಣ ನಷ್ಟವಾಗುವ ಸಾಧ್ಯತೆ ಕಡಿಮೆ ಇರುತ್ತದೆ.

ಪ್ಲೇ ಸ್ಟೋರ್‌ನಿಂದಲೇ ಡೌನ್‌ಲೋಡ್‌ ಮಾಡುವುದಾದರೂ ನಿರ್ದಿಷ್ಟ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿರುವ ಕಂಪನಿ ಯಾವುದು ಎನ್ನುವುದನ್ನು ಗಮನಿಸಿ. ಏಕೆಂದರೆ ದಾಳಿಕೋರರು ಆಕರ್ಷಕವಾದ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿ ಮೊಬೈಲ್‌ ಮಾಹಿತಿ ಕದಿಯುತ್ತಾರೆ.

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಆ್ಯಪ್‌ಗಳ ಪರಿಶೀಲನಾ ವ್ಯವಸ್ಥೆ ಇದೆಯಾದರೂ ಆ್ಯಪ್‌ ಅಭಿವೃದ್ಧಿಕಾರ ಆ್ಯಪಲ್‌ ಆ್ಯಪ್‌ ಸ್ಟೋರ್‌ಗೆ ಆ್ಯಪ್‌ ಸೇರಿಸುವಾಗ ಇರುವಷ್ಟು ಕಟ್ಟುನಿಟ್ಟಿನದ್ದಾಗಿಲ್ಲ. ಹೀಗಾಗಿ ಸುಲಭವಾಗಿ ವಂಚಕ ಆ್ಯಪ್‌ಗಳನ್ನು ಗೂಗಲ್‌ ಪ್ಲೇ ಸ್ಟೋರ್‌ಗೆ ಸೇರಿಸಬಹುದಾಗಿದ್ದು, ಅಚಾತುರ್ಯದಿಂದ ಅವುಗಳನ್ನು ಇನ್‌ಸ್ಟಾಲ್‌ ಮಾಡುವಂತೆ ಮಾಡಲಾಗುತ್ತಿದೆ.

ಆಂಡ್ರಾಯ್ಡ್‌ನಲ್ಲಿ ಅನ್‌ನೋನ್‌ ಸೋರ್ಸ್‌ (Unknown Sources) ಮೂಲಕ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ನೀಡಿರುವುದೇ ಸಮಸ್ಯೆಗೆ ಮೂಲಕ ಕಾರಣ ಎನ್ನುವುದು ಕೆಲವು ತಜ್ಞರ ವಾದ. ಹೀಗಾಗಿ ಗೂಗಲ್‌ ‌ಪ್ಲೇ ಸ್ಟೋರ್‌ನಲ್ಲಿ ಇಲ್ಲದೇ ಇರುವ ಆ್ಯಪ್‌ಗಳನ್ನೂ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಹೀಗೆ ಡೌನ್‌ಲೋಡ್‌ ಮಾಡಿ ಇನ್‌ಸ್ಟಾಲ್‌ ಮಾಡುವ ಆ್ಯಪ್‌ಗಳು ಗೂಗಲ್‌ ಪ್ಲೇಸ್ಟೋರ್‌ನ ಪರಿಶೀಲನೆಗೆ ಒಳಗಾಗುವುದಿಲ್ಲ. ಇದರಿಂದ ಮಾಲ್‌ವೇರ್‌ಗಳು ಮೊಬೈಲ್‌ಗೆ ನುಸುಳಿ ಮೊಬೈಲ್‌ ಕಾರ್ಯಾಚರಣೆಯನ್ನೇ ನಿಯಂತ್ರಿಸುವ ಅಪಾಯ ಇರುತ್ತದೆ.

ಕೆಲವು ಮೊಬೈಲ್‌ಗಳಲ್ಲಿ ಇಂತಹ ಅನ್‌ನೋನ್‌ ಸೋರ್ಸ್‌ಗಳಿಂದ ಡೌನ್‌ಲೋಡ್‌ ಮಾಡುವಾಗ, ಇದು ನಿಮ್ಮ ಮೊಬೈಲ್‌ಗೆ ಹಾನಿಯುಂಟುಮಾಡಬಹುದು ಎನ್ನುವ ಎಚ್ಚರಿಕೆ ಬರುತ್ತದೆ. ಆದನ್ನು ಕಡೆಗಣಿಸಿ ಮುಂದುವರಿದರೆ ಮೊಬೈಲ್‌ನಲ್ಲಿರುವ ವೈಯಕ್ತಿಕ ಮಾಹಿತಿಯ ಕೀಲಿಕೈ ದಾಳಿಕೋರರಿಗೆ ಕೊಟ್ಟಂತೆಯೇ ಸರಿ.

ಪ್ಲೇ ಸ್ಟೋರ್‌ನಿಂದ ಈಗಾಗಲೇ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡಿರುವವರ ಪ್ರತಿಕ್ರಿಯೆಗಳನ್ನು ಓದಿ. ಆ್ಯಪ್‌ ಬಗ್ಗೆ ಹೆಚ್ಚು ನಕಾರಾತ್ಮಕ ಅಭಿಪ್ರಾಯಗಳು ಇದ್ದರೆ ಅಂತಹ ಆ್ಯಪ್‌ ಡೌನ್‌ಲೊಡ್‌ ಮಾಡದಿರುವುದೇ ಒಳಿತು.

ಗೂಗಲ್‌ ಗುರುತಿಸಿರುವ 2018ರ ಕೆಲವು ಕೆಟ್ಟ ಆ್ಯಪ್‌ಗಳು
Truck Cargo Simulator, Extreme Car Driving Racing, City Traffic Moto Racing, Moto Cross Extreme Racing, Hyper Car Driving Simulator, Extreme Car Driving City

***
* 2017ರಲ್ಲಿ ಪ್ಲೇ ಸ್ಟೋರ್‌ನಿಂದ ತೆಗೆದು ಹಾಕಿರುವ ಆ್ಯಪ್‌ಗಳ ಸಂಖ್ಯೆ7 ಲಕ್ಷ
* 2018ರಲ್ಲಿ ಗೂಗಲ್‌120 ಕ್ಕೂ ಅಧಿಕವುಗಳನ್ನು ಕೆಟ್ಟ ಆ್ಯಪ್‌ಗಳೆಂದು ಗುರುತಿಸಿದೆ
*2019ರ ಜನವರಿ, ಫೆಬ್ರುವರಿಯಲ್ಲಿ ಗೂಗಲ್‌ ಪ್ಲೇಸ್ಟೋರ್‌ನಿಂದ112 ಆ್ಯಪ್‌ಗಳನ್ನುಡಿಲೀಟ್‌ ಮಾಡಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.