ADVERTISEMENT

Artificial intelligence: ಚುನಾವಣೆಗೂ ಬಂತು ಕೃತಕ ಬುದ್ಧಿಮತ್ತೆ..

ಕ್ಷಮಾ. ವಿ. ಭಾನುಪ್ರಕಾಶ್ ಲೇಖನ

ಪ್ರಜಾವಾಣಿ ವಿಶೇಷ
Published 10 ಮೇ 2023, 0:35 IST
Last Updated 10 ಮೇ 2023, 0:35 IST
Artificial intelligence
Artificial intelligence   

ಇದು ತಂತ್ರಜ್ಞಾನದ ಕಾಲ; ಸದ್ಯಕ್ಕೆ ಎಲೆಕ್ಷನ್‌ ಕಾಲವೂ ಹೌದು! ಪ್ರಚಾರದ ರ್‍ಯಾಲಿಗಳು, ರೋಡ್‌ಶೋಗಳು ಅನೂಚಾನಾಗಿ ನಡೆದಿದ್ದರೂ ಈಗಿನ ಚುನಾವಣೆಯ ಜುಟ್ಟು ತಂತ್ರಜ್ಞಾನದ ಕೈಲಿದೆ ಎಂಬುದನ್ನು ಎಲ್ಲರೂ ಬಲ್ಲರು. ಅದಕ್ಕಾಗಿಯೇ ಪ್ರತಿ ಪಕ್ಷವೂ ತನ್ನ ಕಡೆಯಿಂದ ಅಧಿಕೃತವಾಗಿ, ಅನಧಿಕೃತವಾಗಿ ‘ಕೀಬೋರ್ಡ್‌ ವಾರಿಯರ್ಸ್‌’ ಎಂದೇ ಕರೆಯಲಾಗುವ ಪಡೆಗಳನ್ನು ನೇಮಿಸಿರುತ್ತದೆ.

ಅವರು ತಮ್ಮ ಪ್ರೀತಿಪಾತ್ರ ಪಕ್ಷ ಅಥವಾ ವ್ಯಕ್ತಿಯ ಪರವಾಗಿ ಹಾಗೂ ವಿರೋಧಿಗಳ ವಿರುದ್ಧವಾಗಿ ಪುಂಖಾನುಪುಂಖವಾಗಿ ಬರಹ, ಆಡಿಯೊ, ವಿಡಿಯೊ, ಮೀಮ್‌, ಪಾಡ್‌ಕಾಸ್ಟ್‌ – ಹೀಗೆ ತಂತ್ರಜ್ಞಾನದ ವಿವಿಧ ಮಾಧ್ಯಮಗಳ ಮೂಲಕ ವಿಷಯವನ್ನು ಹರಿಬಿಡುತ್ತಾರೆ; ವೈರಲ್‌ ಮಾಡುತ್ತಾರೆ. ಈಗ ತರಕಾರಿ ಮಾರುವವನಿಂದ ಮೊದಲ್ಗೊಂಡು ಬಸ್‌ ಕಂಡಕ್ಟರ್‌, ಧೋಬಿ, ಸಾಫ್ಟ್‌ವೇರ್‌ ಇಂಜಿನಿಯರ್‌, ಮನೆಕೆಲಸದವರು – ಹೀಗೆ ಎಲ್ಲರ ಕೈಲೂ ಸ್ಮಾರ್ಟ್‌ಫೋನ್‌.

ಒಂದು ಕ್ಷಣ ಬಿಡುವು ಸಿಕ್ಕರೂ ಯೂಟ್ಯೂಬ್‌, ವಾಟ್ಸಾಪ್‌ ತೆರೆದು ದಣಿವಾರಿಸಿಕೊಳ್ಳುತ್ತಾರೆ; ಮೈಮರೆತು ಜಗತ್ತಿನ ಎಲ್ಲಾ ಮೂಲೆಗಳಿಂದ ಬರುವ ಮಾಹಿತಿಗೆ ತೆರೆದುಕೊಳ್ಳುತ್ತಾರೆ. ಇಲ್ಲಿ ಲೇಖನಗಳನ್ನು ಓದಿಯೇ ತಿಳಿದುಕೊಳ್ಳಬೇಕಿಲ್ಲವಲ್ಲ. ಅನಕ್ಷರಸ್ಥರೂ ಕೂಡ ವಿಡಿಯೊಗಳ ಮೂಲಕ ಜಗತ್ತಿನ ಆಗುಹೋಗುಗಳನ್ನು ಗಮನಿಸುತ್ತಿರುತ್ತಾರೆ; ಅದರ ಭಾಗವಾಗುತ್ತಿರುತ್ತಾರೆ. ಹಾಗಾಗಿ, ವಿಷಯಗಳನ್ನು ಜನರಿಗೆ ತಲುಪಿಸುವುದು ಎಷ್ಟು ಸುಲಭವೋ, ಅಷ್ಟೇ ಸುಲಭ ಸುಳ್ಳುಸುದ್ದಿಗಳನ್ನು ಸತ್ಯ ಎಂಬಂತೆ ಬಿಂಬಿಸುವುದು ಕೂಡ.

ADVERTISEMENT

ಯಾರಾದರೂ ರಾಜಕಾರಣಿಯೋ ಉದ್ಯಮಿಯೋ ಏನೋ ತಪ್ಪು ಮಾಡಿ ಸಿಕ್ಕಿಬಿದ್ದಾಗ, ಅಲ್ಲಿರುವ ಫೋಟೋವನ್ನು, ಆಡಿಯೋವನ್ನು ನಕಲಿ ಎನ್ನುವುದು, ತನಗೂ ಇದಕ್ಕೂ ಸಂಬಂಧವೇ ಇಲ್ಲವೆನ್ನುವುದು ಸರ್ವೇಸಾಮಾನ್ಯವಾಗಿಬಿಟ್ಟಿದೆ. ಮೊಬೈಲ್‌ಗಳಲ್ಲಿ ಲಭ್ಯವಿರುವ ವಾಯ್ಸ್‌ ಆ್ಯಪ್‌ಗಳ ಮೂಲಕ, ಒಬ್ಬರ ಧ್ವನಿಯನ್ನು ಮತ್ತೊಬ್ಬರ ಧ್ವನಿಯಂತೆ ಮಾರ್ಪಡಿಸುವುದು ಕೆಲವು ಕ್ಷಣಗಳಲ್ಲಿಯೇ ಸಾಧ್ಯ. ಇನ್ನು, ಫೋಟೊ ಅಥವಾ ವಿಡಿಯೋದಲ್ಲಿಒಬ್ಬರ ಮುಖದ ಬದಲು ಮತ್ತೊಬ್ಬರದ್ದು ಅಂಟಿಸುವುದೂ ಕಷ್ಟದ ಕೆಲಸವೇನಲ್ಲ. ದಿನದಿನಕ್ಕೂ ಸುಧಾರಣೆ ಕಾಣುತ್ತಿರುವ ಮೊಬೈಲ್‌ ಆ್ಯಪ್‌ಗಳು ಇದನ್ನೆಲ್ಲ ಸುಲಭಸಾಧ್ಯವಾಗಿಸಿವೆ. ಇನ್ನು, ತಂತ್ರಜ್ಞಾನ ಜಗತ್ತಿನ ಪ್ರಬಲ ಅಸ್ತ್ರ ಎಂದರೆ ಆರ್ಟಿಫಿಷಿಯಲ್‌ ಇಂಟೆಲಿಜೆನ್ಸ್‌ (ಎ.ಐ.). ಅನೇಕ ಬಾರಿ ಮನುಷ್ಯರ ಹಸ್ತಕ್ಷೇಪವೂ ಇಲ್ಲದಂತೆ ಕಾರ್ಯನಿರ್ವಹಿಸಬಲ್ಲ ಎ.ಐ. ತಂತ್ರಜ್ಞಾನವು ಬಳಕೆಯಾಗುವ ಎಲ್ಲಾ ಕ್ಷೇತ್ರಗಳಲ್ಲಿ ಸಂಚಲನ ಸೃಷ್ಟಿಸಿದಂತೆ ಚುನಾವಣೆಗೆ ಸಂಬಂಧಿಸಿದಂತೆಯೂ ತನ್ನ ವೈಶಿಷ್ಟ್ಯವನ್ನು ತೋರಿದೆ.
ಎ.ಐ. ಆಟೋಬಾಟ್‌ಗಳು, ಚ್ಯಾಟ್‌ಜಿಪಿಟಿಯಂತಹ ತಂತ್ರಜ್ಞಾನಗಳ ಮೂಲಕ ತ್ವರಿತ ಪ್ರತಿಕ್ರಿಯೆ ನೀಡಲು, ಭಾರತವೂ ಸೇರಿದಂತೆ ಅನೇಕ ದೇಶಗಳ ರಾಜಕೀಯ ಪಕ್ಷಗಳ ಸೈಬರ್‌ಸೆಲ್‌ಗಳು ಈಗಾಗಲೇ ಪ್ರಾರಂಭಿಸಿವೆಯಂತೆ. ಒಬ್ಬರ ಪ್ರಣಾಳಿಕೆಗೋ, ಪ್ರಚಾರದ ಪರಿಗೋ ನೀಡುವ ಪ್ರತಿಕ್ರಿಯೆಗೆ ತಗಲುವ ಸಮಯ ಕಡಿಮೆಯಾಗಿದ್ದು, ಒಂದು ಪ್ರತಿಕ್ರಿಯೆಯು ಮತ್ತೊಂದು ಕ್ರಿಯೆಯನ್ನು ತತ್‌ಕ್ಷಣವೇ ಹುಟ್ಟುಹಾಕುತ್ತಿದೆ. ಇದರ ಪರಿಣಾಮವಾಗಿ ರಾಜಕೀಯ ಕ್ಷೇತ್ರದಲ್ಲಿ ಹೊಸ ಬೆಳವಣಿಗೆಗಳ ವೇಗ ಏರುತ್ತಲೇ ಸಾಗಿದೆ. ರಾಜಕಾರಣಿಗಳು ತಮ್ಮ ಭಾಷಣ ತಯಾರಿಗೂ ಕೂಡ ಯಾರ ಮೇಲೂ ಅವಲಂಬಿತರಾಗಬೇಕಿಲ್ಲ. ಎ.ಐ. ಇದೆಯಲ್ಲ? ಪ್ರಾದೇಶಿಕ ವಿಶೇಷತೆಗಳು, ಈ ಬಾರಿಯ ಸಾಧನೆ, ಮುಂದಿನ ಬಾರಿಗೆ ಬೇಕಿರುವ ಆಶ್ವಾಸನೆ, ಜೊತೆಗೊಂದಷ್ಟು ಕವನ, ಸೂಕ್ತಿ, ಹಾಸ್ಯಚಟಾಕಿ – ಹೀಗೆ ಎಲ್ಲವನ್ನೂ ಸೇರಿಸಿ ಭಾಷಣವನ್ನೂ ತಯಾರಿಸುತ್ತದೆ, ಈ ತಂತ್ರಜ್ಞಾನ. ವಿರೋಧಿಗಳ ಪ್ರಣಾಳಿಕೆಯನ್ನು ಎ.ಐ.ಗೆ ನೀಡಿದರೆ, ಅದನ್ನು ಕೂಲಂಕಷವಾಗಿ ವಿಶ್ಲೇಷಿಸಿ, ಬಿಡಿಬಿಡಿಯಾಗಿ ಅವಲೋಕಿಸಿ, ಅದರಲ್ಲಿರುವ ಸಮಸ್ಯೆಗಳನ್ನು, ಲೂಪ್‌ಹೋಲ್‌ಗಳನ್ನು ಕಂಡುಹಿಡಿದು ರಿಪೋರ್ಟ್‌ ಕೂಡ ಸಿದ್ಧಮಾಲು ಸಾಧ್ಯ. ಅದನ್ನು ಭಾಷಣದ ಭಾಗವಾಗಿಸಿಕೊಂಡರೆ, ಎದುರಾಳಿಗೆ ಮರ್ಮಾಘಾತವೇ ಸರಿ.

ಇನ್ನು ಪ್ರಣಾಳಿಕೆಯನ್ನು ಸಿದ್ಧಪಡಿಸಲು ಕೂಡ ಇಂತಹ ಎ.ಐ.ಗಳ ಸಹಾಯ ಪಡೆಯಬಹುದು. ಅದೂ, ಕೇವಲ ಆಶ್ವಾಸನೆಗಳ ಪಟ್ಟಿ ಸಿದ್ಧ ಮಾಡಲು ಮಾತ್ರವಲ್ಲ, ವಿನ್ಯಾಸರಚನೆ, ಪ್ರದರ್ಶನ ವಿಶೇಷತೆಗಳು ಇತ್ಯಾದಿ ಇತರ ಪ್ರಮುಖ ಅಂಶಗಳನ್ನೂ ಎ.ಐ.ನ ಮೂಲಕ ನಿರ್ವಹಿಸಬಹುದು. ಟ್ವಿಟರ್‌, ಫೇಸ್‌ಬುಕ್‌, ಇನ್ಸ್ಟಾಗ್ರಾಮ್‌ನಂತಹ ಸೋಷಿಯಲ್‌ ಮೀಡಿಯಾದಲ್ಲಿ ಯಾವ ರೀತಿಯ ವಿಷಯಗಳು ಟ್ರೆಂಡಿಂಗ್‌ನಲ್ಲಿವೆ, ಯಾವ ಬಗೆಯ ವಿಡಿಯೋಗಳನ್ನು ಜನರು ಸ್ಕಿಪ್‌ ಮಾಡದೆ ನೋಡುತ್ತಾರೆ, ಯಾರ ಮಾತುಗಳು ಹೆಚ್ಚು ವೈರಲ್‌ ಆದವು, ಯಾವ ಪಕ್ಷದ ಬಗ್ಗೆ, ಯಾವ ಧರ್ಮದ ಬಗ್ಗೆ, ಯಾವ ಸಿದ್ಧಾಂತದ ಬಗ್ಗೆ ಹೆಚ್ಚು ಜನರಿಗೆ ಒಲವಿದೆ ಎಂಬಂತಹ ಸೂಕ್ಷ್ಮ ವಿಷಯಗಳನ್ನು ಆಳವಾಗಿ ವಿಶ್ಲೇಷಣೆ ಮಾಡುತ್ತದೆ ಎ.ಐ. ತಂತ್ರಜ್ಞಾನ. ಅದು ಸಿದ್ಧಪಡಿಸುವ ರಿಪೋರ್ಟ್‌ಅನ್ನು ಆಧರಿಸಿ, ಅದು ತಮ್ಮ ರಾಜಕೀಯ ಪಕ್ಷದ ಪರವಾಗಿದೆಯೇ ಅಥವಾ ವಿರುದ್ಧವಾಗಿದೆಯೇ ಎಂಬುದನ್ನು ಅಂದಾಜಿಸಬಹುದು; ಅದರ ಆಧಾರದ ಮೇಲೆ, ಈಗ ಟ್ರೆಂಡಿಂಗ್‌ನಲ್ಲಿರುವಂತಹ ವಿಷಯವನ್ನು ಮತ್ತಷ್ಟು ಹಬ್ಬಿಸು ಅಂತಲೋ, ಅಥವಾ ಅದಕ್ಕೆ ವಿರೋಧವಾಗಿ ಕೆಲಸ ಮಾಡು ಅಂತಲೋ ಈ ತಂತ್ರಜ್ಞಾನದ ಅನೇಕ ವಿಭಾಗಗಳನ್ನು ಪ್ರೋಗ್ರಾಮ್‌ ಮಾಡಬಹುದು. ಇದು ಎಲ್ಲ ಪಕ್ಷಗಳೂ ಮಾಡುವುದರಿಂದ ಸೋಶಿಯಲ್‌ ಮೀಡಿಯಾ ಲೋಕದಲ್ಲಿ, ಜನಸಾಮಾನ್ಯರಿಗೆ ಅರ್ಥವಾಗದಂತೆ ಒಂದು ಸಂಚಲನ ಸೃಷ್ಟಿಯಾಗಿರುತ್ತದೆ.

ಟಿವಿ ಮಾಧ್ಯಮವಾಗಲೀ, ಪತ್ರಿಕೆಗಳೇ ಆಗಲೀ, ಕೆಲವನ್ನು ಹೊರತು ಪಡಿಸಿ, ಹಲವು ಚಾನೆಲ್‌ಗಳೂ ಪತ್ರಿಕೆಗಳೂ ಪತ್ರಿಕೋದ್ಯಮದ ಮೂಲನಂಬಿಕೆಯಂತೆ ‘ನ್ಯೂಟ್ರಲ್‌’ ಆಗಿರುವುದನ್ನು ಬಿಟ್ಟು, ಒಂದು ಸಿದ್ದಾಂತ ಅಥವಾ ಪಕ್ಷದ ಕಡೆ ವಾಲುವುದನ್ನು ಅದರ ಸಂದರ್ಶನಗಳೂ ಲೇಖನಗಳೂ ಕಾರ್ಯಕ್ರಮಗಳೂ ಸಾರಿ ಸಾರಿ ಹೇಳುತ್ತವೆ. ಅವುಗಳ ಪ್ರತಿ ನಡೆಗೂ ಸೂಕ್ತ ಸಾಕ್ಷ್ಯಾಧಾರ ಇರಲಿಕ್ಕೂ ಸಾಕು. ಆದರೆ, ‘ಅದರಲ್ಲಿ ಸತ್ಯ,ಯಾವುದು, ತಂತ್ರಜ್ಞಾನವನ್ನು ಬಳಸಿ ತಿರುಚಲಾಗಿರುವುದು ಯಾವುದು ಎಂದು ಹೇಳುವುದು ಹೇಗೆ?’ ಅದೇ ಮಿಲಿಯನ್‌ ಡಾಲರ್‌ ಪ್ರಶ್ನೆ. ಇದಕ್ಕೆ ಉತ್ತರವನ್ನು ಕಂಡುಕೊಳ್ಳಲು ಕೆಲವು ವೆಬ್‌ಸೈಟ್‌ಗಳು ಸಹಾಯ ಮಾಡಬಲ್ಲವು; ಕೆಲವು ಸಾಫ್ಟವೇರ್‌ಗಳು ಕೂಡ. ಇಲ್ಲಿ ಕೂಡ ಆರ್ಟಿಫೀಶಿಯಲ್‌ ಇಂಟೆಲಿಜೆನ್ಸ್‌ ನಮ್ಮ ಸಹಾಯಕ್ಕೆ ಬರುತ್ತದೆ. ಅದರ ಮೂಲಕ ಫೇಕ್‌ನ್ಯೂಸ್‌ ಯಾವುದು, ಸತ್ಯ ಯಾವುದು ಎಂಬುದನ್ನು ಅರಿಯಬಹುದಾದರೂ, ಅದಕ್ಕೂ ಮುನ್ನವೇ ಫೇಕ್‌ನ್ಯೂಸ್‌ಗಳು ವಾಟ್ಸಾಪ್‌ ‘ವಿಶ್ವವಿದ್ಯಾಲಯ’ದ ಮೂಲಕ ಮನೆಮನೆಗೂ ತಲುಪಿಯಾಗಿರುತ್ತದೆ! ಅದು ‘ಫೇಕ್‌’ ಎಂಬ ಸತ್ಯ ಅಷ್ಟು ವೈರಲ್‌ ಆಗುವುದೇ ಇಲ್ಲ. ಹಾಗಾಗಿ, ಬದಲಾಗುತ್ತಿರುವ ರಾಜಕೀಯ ವಾತಾವರಣದಲ್ಲಿ, ನಮ್ಮ ವಿವೇಚನೆಯನ್ನು ಬಳಸಿ, ವಿವರಗಳನ್ನು ಆಳವಾಗಿ ವಿಮರ್ಶಿಸಿ, ಆ ಬಳಿಕವಷ್ಟೆ ನಿರ್ಧಾರಕ್ಕೆ ಬರುವ ಬುದ್ಧಿ ನಮ್ಮ ಕೈಲಿದ್ದರೆ ನಮಗೇ ಒಳಿತು.

ಲೇಖನ–ಕ್ಷಮಾ. ವಿ. ಭಾನುಪ್ರಕಾಶ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.