ADVERTISEMENT

ಮಗುವಿನ ಫೋಟೊ ಶೇರ್ ಮಾಡುವ ಮುನ್ನ ಗಮನಿಸಿ

ರಶ್ಮಿ ಕಾಸರಗೋಡು
Published 17 ಅಕ್ಟೋಬರ್ 2018, 19:31 IST
Last Updated 17 ಅಕ್ಟೋಬರ್ 2018, 19:31 IST

ತಮ್ಮ ಮಕ್ಕಳ ಫೋಟೊಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಲು ಇಚ್ಛಿಸದೇ ಇರುವ ಹೆತ್ತವರ ಸಂಖ್ಯೆ ಕಡಿಮೆಯೇ. ಮಗುವಿನ ನಗು, ತುಂಟಾಟ, ಆಟ ಪಾಠಗಳ ಫೋಟೊಗಳೆಲ್ಲವೂ ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡುವುದು ಸಹಜ. ಆದರೂ ಇಂಥ ಫೋಟೊಗಳನ್ನು ಶೇರ್ ಮಾಡುವ ಮುನ್ನ ಯಾವ ಫೋಟೊ ಶೇರ್ ಮಾಡಬೇಕು, ಮಾಡುವುದು ಬೇಡ ಎಂಬ ವಿವೇಚನೆ ಇದ್ದರೆ ಒಳ್ಳೆಯದು.

ಈ ಅಂಶಗಳನ್ನು ಗಮನಿಸಿ:

*ಮಗುವಿನ ತುಂಟಾಟದ ಫೋಟೊಗಳನ್ನು ಶೇರ್ ಮಾಡಿ, ತಪ್ಪಿಲ್ಲ. ಆದರೆ ಮಗು ನಗ್ನವಾಗಿರುವ, ಸ್ನಾನ ಮಾಡುತ್ತಿರುವ ಫೋಟೊ ಅಪ್‌‍ಲೋಡ್ ಮಾಡಬೇಡಿ.

ADVERTISEMENT

* ಅಪಾಯಕಾರಿ ಎಂದೆನಿಸಬಹುದಾದ ಚಟುವಟಿಕೆಗಳನ್ನು ಮಾಡುತ್ತಿರುವ ಫೋಟೊ ಅಥವಾ ವಿಡಿಯೊ ಬೇಡವೇ ಬೇಡ. ತೊಟ್ಟಿಲಿನಿಂದ ಮಗು ಜಂಪ್ ಮಾಡುತ್ತಿರುವ ವಿಡಿಯೊ ಅಥವಾ ವಾಹನದಡಿಯಲ್ಲಿ ಮಗು ನುಸುಳುತ್ತಿರುವ ವಿಡಿಯೊ ಹೀಗೆ ನಿಮ್ಮ ಕಣ್ಗಾವಲಿನಲ್ಲಿಯೇ ಇಂಥಾ ಚಟುವಟಿಕೆ ನಡೆದಿದ್ದರೂ ಇಂಥ ವಿಡಿಯೊಗಳನ್ನು ಅಪ್‍ಲೋಡ್ ಮಾಡುವುದು ಬೇಡ.

* ಮಗುವಿನ ಫೋಟೊ ಜತೆಗೆ ಮನೆಯ ವಿಳಾಸವಾಗಲೀ, ಪ್ಲೇ ಸ್ಕೂಲ್ ವಿಳಾಸವಾಗಲೀ ಬಹಿರಂಗಪಡಿಸಬೇಡಿ

* ಮಗುವಿಗೆ ಮುಜುಗರ ಎನಿಸುವಂತ ಫೋಟೊ ಹಾಕಲೇ ಬೇಿ. ಬಾಲ್ಯದಲ್ಲಿ ಎಲ್ಲ ಫೋಟೊಗಳು ಮುದ್ದು ಮುದ್ದಾಗಿ ಕಾಣುತ್ತಿರಬಹುದು. ಆದರೆ ಆ ಮಗು ದೊಡ್ಡದಾದಾಗ ಹಾಸ್ಯಾಕ್ಕೀಡಾಗುವಂತ ಫೋಟೊಗಳು ಇದ್ದರೆ,ಅದನ್ನು ಡಿಲೀಟ್ ಮಾಡಿ.

* ಮಗು ಕಾಯಿಲೆ ಬಿದ್ದಿರುವಾಗ ಇರುವ ಫೋಟೊ ವನ್ನು ಯಾವುದೇ ಕಾರಣಕ್ಕೂ ಶೇರ್ ಮಾಡಬೇಡಿ

* ಒಂದು ವೇಳೆ ನಿಮ್ಮ ಮಗುವಿನ ಜತೆ ಬೇರೆ ಮಕ್ಕಳ ಫೋಟೊ ಇದ್ದರೆ ಅದನ್ನು ಅಪ್‍ಲೋಡ್ ಮಾಡುವ ಮುನ್ನ ಆ ಮಕ್ಕಳ ಹೆತ್ತವರಲ್ಲಿ ಅನುಮತಿ ಪಡೆದ ನಂತರವೇ ಫೋಟೊ ಅಪ್‍ಲೋಡ್ ಮಾಡಿ.

* ಮಕ್ಕಳ ಫೋಟೊ ಅಪ್‍ಲೋಡ್ ಮಾಡುವಾಗ ಪಬ್ಲಿಕ್ ಪೋಸ್ಟ್ ಹಾಕುವುದು ಬೇಡ. ನಿಮ್ಮ ಮಕ್ಕಳ ಫೋಟೊವನ್ನು ಬೇರೆಯವರು ಶೇರ್ ಮಾಡಲು, ಟ್ಯಾಗ್ ಮಾಡಲು ಅವಕಾಶ ನೀಡಬೇಡಿ.

* ಒಂದು ವೇಳೆ ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಮಗುವಿನ ಫೋಟೊ ಕಳಿಸಬೇಕೆಂದಿದ್ದರೆ ಗೂಗಲ್ ಡ್ರೈವ್ ಅಥವಾ ಡ್ರಾಪ್ ಬಾಕ್ಸ್ ಗೆ ಫೋಟೊ ಅಪ್‍ಲೋಡ್ ಮಾಡಿ ಲಿಂಕ್ ಶೇರ್ ಮಾಡಿ.

* ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೊ ಅಪ್‍ಲೋಡ್ ಮಾಡಿದಾಗ ಜಿಯೊ ಟ್ಯಾಗಿಂಗ್ ಡಿಸೇಬಲ್ ಮಾಡಿ, ನಿಮ್ಮ ಸ್ಥಳದ ಮಾಹಿತಿ ಬಹಿರಂಗ ಪಡಿಸುವುದು ಬೇಡ.

* ಮಗುವಿನ ಫೋಟೊ ಜತೆ ವೈಯಕ್ತಿಕ ವಿವರಗಳನ್ನು ನೀಡಬೇಡಿ, ಫೋಟೊ ಶೇರ್ ಮಾಡುವಾಗ ವಾಟರ್ ಮಾರ್ಕ್ ಬಳಸಿದರೆ ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.