ADVERTISEMENT

ಕ್ರೋಮ್ 69: ಹೊಸತೇನಿದೆ?

ಪೃಥ್ವಿರಾಜ್ ಎಂ ಎಚ್
Published 23 ಅಕ್ಟೋಬರ್ 2018, 19:30 IST
Last Updated 23 ಅಕ್ಟೋಬರ್ 2018, 19:30 IST
chrome
chrome   

ಇದು ನಮ್ಮ ಸಾಧನಗಳಲ್ಲಿ ಹೆಚ್ಚು ಸ್ಥಳ ಬೇಡುವುದಿಲ್ಲ. ಬಳಸುವುದು ಕೂಡ ಸುಲಭ. ವೆಬ್ ತಾಣಗಳಲ್ಲಿ ವಿಹಾರ ಮಾಡಲು ಇಚ್ಛಿಸುವ ಹಲವರ ನೆಚ್ಚಿನ ಬ್ರೌಸರ್. ಹೊಸ ಸೌಲಭ್ಯಗಳೊಂದಿಗೆ ಹೊಸ ರೂಪದಲ್ಲಿ ಬಂದಿರುವ ‘ಗೂಗಲ್ ಕ್ರೋಮ್ 69’ರ ಪ್ರಯೋಜನಗಳು ಹಲವು ಇವೆ.

ನೀವು ಕ್ರೋಮ್ ಬ್ರೌಸರ್ ಬಳಸುತ್ತಿದ್ದರೆ, ಹೊಸ ವರ್ಷನ್ ಬಂದಿರುವ ವಿಷಯವನ್ನು ನೋಟಿಫಿಕೇಷನ್ ಮೂಲಕ ತಿಳಿಯಬಹುದು. ಒಂದು ವೇಳೆ ಕ್ರೋಮ್ ಅಪ್‌ಡೇಟ್ ಆಗಿರದಿದ್ದರೆ, ಬ್ರೌಸರ್ ಓಪನ್ ಮಾಡಿ ‘ಮೋರ್’ (ಪ್ರೊಫೈಲ್ ಪಿಕ್ ಪಕ್ಕದಲ್ಲಿ ಕಾಣಿಸುವ ಮೂರು ಚುಕ್ಕಿಗಳು) ಮೇಲೆ ಕ್ಲಿಕ್ ಮಾಡಿ. ಅಲ್ಲಿ ‘ಅಪ್‌ ಡೇಟ್ ಗೂಗಲ್ ಕ್ರೋಮ್’ ಎಂಬ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ಕಿಸಿ. ಈಗಾಗಲೇ ಅಪ್‌ಡೇಟ್ ಆಗಿದ್ದರೆ ಈ ಆಯ್ಕೆ ಕಾಣಿಸುವುದಿಲ್ಲ.

ಸೆಟ್ಟಿಂಗ್ಸ್ ಗಮನಿಸಿ: ಹೊಸ ಕ್ರೋಮ್‌ನಲ್ಲಿ ನಿಮಗೆ ಬೇಕೆನಿಸಿದಾಗ ಹಾಗೆ ಸೆಟ್ಟಿಂಗ್ಸ್ ಮಾಡಿಕೊಳ್ಳುವ ಹಾಗೆ ಅಪ್‌ಡೇಟ್ ಮಾಡಲಾಗಿದೆ. ಕ್ರೋಮ್ ವೆಬ್ ಸ್ಟೋರ್‌ಗೆ ಹೋಗಿ ಬ್ರೌಸರ್ ಥೀಮ್ಸ್ ಬದಲಿಸಿಕೊಳ್ಳಬಹುದು. ಬ್ರೌಸರ್ ತೆರೆಯುತ್ತಿದ್ದಂತೇ ಡಿಫಾಲ್ಟ್ ಆಗಿ ಹೊಸ ಟ್ಯಾಬ್‌ನಲ್ಲಿ ಬೇಕಿರುವ ವೆಬ್ ಸೇವೆ, ಕ್ರೋಮ್ ಮೇಲೆ ಕ್ಲಿಕ್ಕಿಸುತ್ತಿದ್ದಂತೆಯೇ ತೆರೆದುಕೊಳ್ಳುವ ಹಾಗೆ ಮಾಡಿಕೊಳ್ಳಬಹುದು. ಬ್ರೌಸರ್ ಟೂಲ್ ಸಹಾಯದಿಂದ ಕಂಪ್ಯೂಟರ್‌ನಲ್ಲಿ ಯಾವುದಾದರೂ ಹಾನಿಕಾರಕ ಕುತಂತ್ರಾಂಶಗಳು ಇದ್ದರೆ ಟ್ರ್ಯಾಕ್ ಮಾಡಬಹುದು. ಇದಕ್ಕಾಗಿ ಸೆಟ್ಟಿಂಗ್ಸ್‌ನಲ್ಲಿ ‘ಕ್ಲೀನ್ ಅಪ್ ಕಂಪ್ಯೂಟರ್’ ಎಂಬ ಆಯ್ಕೆಯೂ ಇದೆ.

ADVERTISEMENT

ಪಾಸ್‌ವರ್ಡ್‌ ಮ್ಯಾನೇಜರ್: ಯಾವುದಾದರೂ ಖಾತೆಯ ಲಾಗಿನ್ ವಿವರಗಳನ್ನು ನಿರ್ವಹಣೆ ಮಾಡುವುದಕ್ಕೆ ಥರ್ಡ್ ಪಾರ್ಟಿ ಪಾಸ್‌ವರ್ಡ್ ಮ್ಯಾನೇಜರ್‌ಗಳನ್ನೇ ಅವಲಂಬಿಸಬೇಕಾದ ಅವಶ್ಯಕತೆ ಇಲ್ಲ. ನೀವು ಬಳಸುತ್ತಿರುವ ಜಿ-ಮೇಲ್ ಅಕೌಂಟ್‌ನಲ್ಲಿ ಪಾಸ್‌ವರ್ಡ್‌ಗಳನ್ನು ಸುರಕ್ಷಿತವಾಗಿ ಬಚ್ಚಿಟ್ಟುಕೊಂಡು ಬೇಕೆನಿಸಿದಾಗ ಬಳಸಿಕೊಳ್ಳಬಹುದು. ಹಾಗೆಯೇ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳ ಪಿನ್‌ಗಳನ್ನೂ ಜಿ-ಮೇಲ್ ಖಾತೆಗೆ ಜೋಡಿಸಬಹುದು.

ಪಾಸ್‌ವರ್ಡ್ ಮ್ಯಾನೇಜರ್ ಸಹಾಯದಿಂದ ಆಗಾಗ್ಗೆ ಹೊಸ ಪಾಸ್‌ವರ್ಡ್‌ಗಳನ್ನು ಜನರೇಟ್ ಕೂಡ ಮಾಡಿಕೊಳ್ಳಬಹುದು. ಯಾವುದಾದರೂ ಹೊಸ ವೆಬ್‌ಸೈಟ್‌ ಅಥವಾ ಮಾಧ್ಯಮದಲ್ಲಿ ಖಾತೆ ತೆರೆಯಲು ಕ್ಲಿಷ್ಟಕರವಾದ ಪಾಸ್‌ವರ್ಡ್ ಜೋಡಿಸುವ ಅನಿವಾರ್ಯತೆ ಇದ್ದರೆ ಜನರೇಟ್ ಕೂಡ ಮಾಡಿಕೊಳ್ಳಬಹುದು.

ಖಾಸಗಿತನಕ್ಕೆ ರಕ್ಷೆ: ಅಂತರ್ಜಾಲವನ್ನು ಸುರಕ್ಷಿತವಾಗಿ ಬಳಕೆ ಮಾಡಲು ‘ಪ್ರೈವಸಿ ಚೆಕ್ ಅಪ್’ ಆಯ್ಕೆ ನೀಡಲಾಗಿದೆ. ಅನುಮಾನ ಬಂದ ಕೂಡಲೇ ಬಳಸುತ್ತಿರುವ ಖಾತೆ ಮೂಲಕ ಸೈನ್ ಇನ್ ಆಗಿ ಪರಿಶೀಲಿಸಬಹುದು.

ವೆಬ್, ಆ್ಯಪ್ಸ್, ಲೋಕೆಷನ್… ಹೀಗೆ ಎಲ್ಲವನ್ನೂ ರಿವ್ಯೂ ಮಾಡಿ ನೋಡಬಹುದು. ಖಾಸಗೀತನಕ್ಕೆ ಧಕ್ಕೆ ತರುವಂತಹ ತಂತ್ರಾಂಶಗಳು ಏನಾದರೂ ಇದ್ದರೆ ಕೂಡಲೇ ತೊಲಗಿಸಬಹುದು. ಉದಾಹರಣೆಗೆ ಲೋಕೆಷನ್ ಹಿಸ್ಟರಿಗೆ ಹೋಗಿ, ನೀವು ಎಲ್ಲಿ, ಹೇಗೆ, ಯಾವ ಸ್ಥಳಗಳಲ್ಲಿ ಸುತ್ತಾಡಿದ್ದೀರಿ ಎಂಬುದನ್ನು ರಿವ್ಯೂ ಮಾಡಿ, ಅಗತ್ಯವಿಲ್ಲದನ್ನು ಅಳಿಸಬಹುದು. ಅದೇ ರೀತಿ ಯೂಟ್ಯೂಬ್, ಫೇಸ್‌ಬುಕ್‌ಗೆ ಸಂಬಂಧಿಸಿದ ವಿವರಗಳನ್ನೂ ಎಕ್ಸ್‌ಪ್ಲೋರ್ ಮಾಡಿ ನೋಡಬಹುದು.

ಗೆಸ್ಟ್ ವಿಂಡೊ ಬಂದಿದೆ: ನೀವು ನೆಟ್ ಬಳಸುತ್ತಿದ್ದಾಗಲೇ, ಇತರ ಖಾತೆಗಳಿಗೆ ಲಾಗಿನ್ ಆಗಬೇಕಾದ ಅನಿವಾರ್ಯತೆ ಬಂದರೆ, ನಿಮ್ಮ ಖಾತೆಯನ್ನು ಸೈನ್ ಔಟ್ ಮಾಡಬೇಕಾದ ಅಗತ್ಯವಿಲ್ಲ. ಉದಾಹರಣೆಗೆ ನಿಮ್ಮ ಜಿ-ಮೇಲ್ ಖಾತೆ ಸಕ್ರಿಯವಾಗಿದ್ದರೂ ಪ್ರೊಫೈಲ್ ಪಿಕ್ ಮೇಲೆ ಕ್ಲಿಕ್ಕಿಸಿ ‘ಓಪನ್ ಗೆಸ್ಟ್ ವಿಂಡೊ’ ಅಥವಾ ‘ನ್ಯೂ ಇನ್‌ಕಾಗ್ನಿಟೊ ವಿಂಡೊ’ ತೆರೆದರೆ ಪ್ರತ್ಯೇಕ ಬ್ರೌಸರ್ ತೆರೆದುಕೊಳ್ಳುತ್ತದೆ. ಆಗ ಮತ್ತೊಂದು ಖಾತೆಯನ್ನು ತೆರೆದು ನೋಡಬಹುದು. ಇದು ಬ್ರೌಸರ್ ಹಿಸ್ಟರಿಯಲ್ಲೂ ದಾಖಲಾಗುವುದಿಲ್ಲ.

ಪ್ರತ್ಯೇಕ ಖಾತೆ: ಮನೆಯಲ್ಲಿ ಒಂದೇ ಕಂಪ್ಯೂಟರ್ ಇದ್ದರೆ, ಎಲ್ಲರೂ ಅದನ್ನು ಬಳಸುತ್ತಿರುತ್ತಾರೆ. ಒಬ್ಬೊಬ್ಬರಿಗೂ ಒಂದೊಂದು ಯೂಸರ್ ನೇಮ್ ಮೂಲಕ ಪ್ರತ್ಯೇಕ ಖಾತೆಗಳನ್ನು ತೆರೆಯಬಹುದು. ಇದಕ್ಕೆ ಪ್ರೊಫೈಲ್ ಪಿಕ್ ಮೇಲೆ ಕ್ಲಿಕ್ ಮಾಡಿ ‘ಮ್ಯಾನೇಜ್ ಪೀಪಲ್’ ಆಯ್ಕೆ ಕ್ಲಿಕ್ಕಿಸಿ, ಅಲ್ಲಿ ಕಾಣಿಸುವ ಆ್ಯಡ್ ಪರ್ಸನ್ ಆಯ್ಕೆ ಸಹಾಯದಿಂದ ಪ್ರತ್ಯೇಕ ಖಾತೆಗಳನ್ನು ತೆರೆಯಬಹುದು. ಇದರಿಂದ ಇತರರ ಖಾಸಗಿತನಕ್ಕೆ ಧಕ್ಕೆಯಾಗುವುದಿಲ್ಲ.

**

ಪಾಸ್‌ವರ್ಡ್‌ ಮರೆತರೂ ಸಿಗುತ್ತದೆ!

ಬ್ರೌಸಿಂಗ್ ಮಾಡುತ್ತಿರಬೇಕಾದರೆ, ಹಲವು ವೆಬ್‌ಸೈಟ್‌ಗಳಿಗೆ ಭೇಟಿ ನೀಡುತ್ತೇವೆ. ಕೆಲವು ಸೈಟ್‌ಗಳ ಲಾಗಿನ್ ವಿವರಗಳನ್ನು ಬ್ರೌಸರ್‌ನಲ್ಲಿ ಸೇವ್ ಮಾಡುತ್ತಿರುತ್ತೇವೆ. ಅಂತಹ ವಿವಿಧ ತಾಣಗಳ ಪಾಸ್‌ವರ್ಡ್‌ಗಳನ್ನು ಕ್ರೋಮ್‌ನಲ್ಲಿ ನಿರ್ವಹಿಸುವುದು ಸುಲಭ. ಅಡ್ರಸ್‌ಬಾರ್ ಪಕ್ಕದಲ್ಲಿರುವ ಪ್ರೊಫೈಲ್ ಪಿಕ್ ಮೇಲೆ ಕ್ಲಿಕ್ಕಿಸಿದರೆ, ಪಾಸ್‌ವರ್ಡ್ ವಿಭಾಗ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಸೇವ್ ಮಾಡಿದ ಪಾಸ್‌ವರ್ಡ್ ವಿವರಗಳನ್ನು ಸುಲಭವಾಗಿ ಪಡೆಯಬಹುದು.

ಹಿಂದೆ ಯಾವುದೋ ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಲು ಬಳಸಿರಿವ ಪಾಸ್‌ವರ್ಡ್ ಕೂಡ ನೋಡಬಹುದು. ಆದರೆ ಜಿ–ಮೇಲ್‌ ಖಾತೆ ಜೋಡಣೆಯಾಗಿರಬೇಕು.

**

ಸುಲಭ ಪಾವತಿಗೂ ನೆರವು

ಡಿಜಿಟಲ್ ವಹಿವಾಟು ಹೆಚ್ಚಾದಂತೆಲ್ಲಾ, ಬಹುತೇಕ ಬಿಲ್‌ಗಳನ್ನೂ ಆನ್‌ಲೈನ್‌ನಲ್ಲೇ ಪಾವತಿಸುತ್ತಿದ್ದೇವೆ. ಪಾವತಿ ಮಾಡಬೇಕಾದ ಪ್ರತಿ ಬಾರಿ ಕ್ರೆಡಿಟ್, ಡೆಬಿಟ್ ಕಾರ್ಡ್‌ಗೆ ಸಂಬಂಧಿಸಿದ ವಿವರಗಳನ್ನು ಎಂಟರ್ ಮಾಡಬೇಕು ಎಂದು ಬೇಸರಪಡುವವರು, ಜಿ-ಮೇಲ್ ಅಕೌಂಟ್‌ನಲ್ಲಿ ಸೇವ್ ಮಾಡಿ ಇಟ್ಟುಕೊಳ್ಳಬಹುದು. ಇದಕ್ಕಾಗಿ ಪ್ರೊಫೈಲ್ ಪಿಕ್ ಮೇಲೆ ಕ್ಲಿಕ್ಕಿಸಿ ಪೇಮೆಂಟ್ ಮೆಥಡ್ಸ್ ಆಯ್ಕೆ ಮಾಡಿಕೊಂಡು, ಆ್ಯಡ್ ಆಪ್ಷನ್ ಮೇಲೆ ಕ್ಲಿಕ್ಕಿಸಿದರೆ, ಕ್ರೆಡಿಟ್, ಡೆಬಿಟ್ ಕಾರ್ಡ್‌ಗಳ ವಿವರಗಳನ್ನು ಅಡಗಿಸಿ ಇಡಬಹುದು.

ಕಾರ್ಡ್‌ಗಳ ವಿವರಗಳನ್ನು ಟೈಪ್ ಮಾಡಬೇಕಾದರೆ, ಬಾಕ್ಸ್‌ನಲ್ಲಿ ಕರ್ಸರ್ ಇಟ್ಟರೆ ಸಾಕು, ಡ್ರಾಪ್‌ಡೌನ್ ಮೆನುವಿನಲ್ಲಿ ಆ್ಯಡ್‌ ಮಾಡಿದ ಎಲ್ಲ ಬಗೆಯ ಕಾರ್ಡ್‌ಗಳ ವಿವರಗಳೂ ಕಾಣಿಸಿಕೊಳ್ಳುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.