ADVERTISEMENT

ಸೈನ್ಯ ಸೇರುವ ಆಕಾಂಕ್ಷಿಗಳಿಗೆ ಮಾಹಿತಿಗಾಗಿ ‘ಡಿಫೆನ್ಸ್ ಭರ್ತಿ’ ಮೊಬೈಲ್ ಆ್ಯಪ್

ಆ್ಯ‍ಪ್‌ ಅಭಿವೃದ್ಧಿಪಡಿಸಿದ ಪರ್ವೇಜ್ ಹವಾಲ್ದಾರ್

ಪ್ರದೀಪ ಮೇಲಿನಮನಿ
Published 14 ಸೆಪ್ಟೆಂಬರ್ 2020, 12:58 IST
Last Updated 14 ಸೆಪ್ಟೆಂಬರ್ 2020, 12:58 IST
ಆ್ಯಪ್‌ನೊಂದಿಗೆ ಪರ್ವೇಜ್ ಹವಾಲ್ದಾರ್
ಆ್ಯಪ್‌ನೊಂದಿಗೆ ಪರ್ವೇಜ್ ಹವಾಲ್ದಾರ್   

ಚನ್ನಮ್ಮನ ಕಿತ್ತೂರು: ಸೈನ್ಯ ಸೇರುವ ಆಕಾಂಕ್ಷೆ ಇರುವವರ ನೆರವಿಗಾಗಿ ಇಲ್ಲಿನ ನಿವೃತ್ತ ಸೇನಾಧಿಕಾರಿ ಪರ್ವೇಜ್ ಹವಾಲ್ದಾರ್ ಹಾಗೂ ಉಪನ್ಯಾಸಕ ಜಗದೀಶ ಮಾಳಗಿ ಅವರು ‘ಡಿಫೆನ್ಸ್ ಭರ್ತಿ’ ಮೊಬೈಲ್ ಫೋನ್‌ ಆ್ಯಪ್ಸಿದ್ಧಪಡಿಸಿದ್ದಾರೆ.

‘ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಆ್ಯಪ್‌ ಲಭ್ಯವಿದೆ. ಸೇನೆ ಭರ್ತಿಗೆ ಸಂಬಂಧಿಸಿದಂತೆ ಮಹತ್ವದ ಅಂಶಗಳನ್ನು ಇದು ತಿಳಿಸಿಕೊಡುತ್ತದೆ. ಕೇಂದ್ರ ಸರ್ಕಾರ ಸೇನೆಗೆ ಸೇರಲು ಯುವತಿಯರಿಗೂ ಅವಕಾಶ ಕಲ್ಪಿಸಿರುವುದರಿಂದ ಅವರೂ ಈ ಆ್ಯಪ್ ಉಪಯೋಗ ಮಾಡಿಕೊಳ್ಳಬಹುದು’ ಎಂದು ಪರ್ವೇಜ್ ಮತ್ತು ಜಗದೀಶ ತಿಳಿಸಿದರು.

‘ಕಾರ್ಗಿಲ್ ವಿಜಯ ದಿನದಂದು ಈ ಡಿಫೆನ್ಸ್ ಭರ್ತಿ ಮೊಬೈಲ್ ಫೋನ್‌ ಆ್ಯಪ್ ಬಿಡುಗಡೆ ಮಾಡಲಾಯಿತು. ತಿಂಗಳ ಅವಧಿಯಲ್ಲಿ 2ಸಾವಿರಕ್ಕೂ ಹೆಚ್ಚು ಮಂದಿ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಕರ್ನಾಟಕ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ, ಅಸ್ಸಾಂ, ಒಡಿಸಾ ಮೊದಲಾದ ರಾಜ್ಯಗಳವರು ಈ ಆ್ಯಪ್ ಬಳಸುತ್ತಿದ್ದಾರೆ’ ಎಂದು ತಿಳಿಸಿದರು.

ADVERTISEMENT

ಆ್ಯಪ್ ವಿಶೇಷತೆ

‘ದೇಶದಾದ್ಯಂತ ನಡೆಯುವ ಸೇನಾ ಭರ್ತಿ ರ‍್ಯಾಲಿಗಳ ಬಗ್ಗೆ ಸಂಪೂರ್ಣ ವಿವರ ಇದರಲ್ಲಿದೆ. ಸೇನೆಯ ವಿವಿಧ ಟ್ರೇಡ್‌್ಗಳ ಪರಿಚಯವಿದೆ. ಪ್ರಚಲಿತ ವಿದ್ಯಮಾನಗಳನ್ನು ಇಲ್ಲಿ ಚರ್ಚಿಸಲಾಗುತ್ತದೆ. ಪ್ರತಿ ನಿತ್ಯ ಪ್ರಶ್ನೆಗಳನ್ನು ನೀಡಲಾಗುತ್ತದೆ. ಉಚಿತವಾಗಿ ಕಿರು ಪರೀಕ್ಷೆ ನಡೆಸಲಾಗುತ್ತದೆ. ಪರೀಕ್ಷೆ ಮುಗಿದ ಬಳಿಕ ಫಲಿತಾಂಶವನ್ನು ಆ್ಯಪ್‌ನಲ್ಲಿಯೇ ಪ್ರಕಟಿಸಲಾಗುತ್ತದೆ. ಆ್ಯಪ್ ಬಳಸುವ ಎಲ್ಲರೂ ಈ ಸೌಲಭ್ಯಗಳನ್ನು ಉಚಿತವಾಗಿ ಪಡೆಯಬಹುದಾಗಿದೆ’ ಎಂದು ಪರ್ವೇಜ್ ಮಾಹಿತಿ ನೀಡಿದರು.

‘ಸೇನೆ ನಡೆಸುವ ಮಾದರಿಯಲ್ಲಿಯೇ ವಾರಕ್ಕೊಂದು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಇ) ಏರ್ಪಡಿಸಲಾಗುತ್ತದೆ. ನಿತ್ಯ ಅಭ್ಯಸಿಸಲು ವಿಷಯವಾರು ಬಹು ಆಯ್ಕೆ ಪ್ರಶ್ನೆಗಳು ಇಲ್ಲಿ ಲಭ್ಯವಿರುತ್ತವೆ. ಹಣ ಪಾವತಿಸಿದ ಚಂದಾದಾರರಿಗೆ ಮಾತ್ರ ಸಿಇಇಗೆ ಅವಕಾಶವಿದೆ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.