ಬೆರಗುಗಣ್ಣಿನ ಆ ಹುಡುಗನಿಗೆ ಆಕಾಶದಲ್ಲಿ ಹಾರುವ ಹದ್ದು ಎಂದರೆ ಬಲು ಇಷ್ಟ. ಹದ್ದಿನಕಣ್ಣಿಗಿಂತಲೂ ಸೂಕ್ಷ್ಮವಾಗಿದ್ದ ಈತನ ದೃಷ್ಟಿ ಸದಾ ಆಗಸದತ್ತ ಹರಿಯುತ್ತಿತ್ತು. ಮನೆಮುಂದೆ ಕುಳಿತು ಆಕಾಶ ನೋಡುವುದು ನಿತ್ಯದ ಕಾಯಕವಾಗಿತ್ತು. ವಿಮಾನ ಬಂದರೆ ಮನಸ್ಸೂ ಅದರ ಜೊತೆ ಹಾರುತ್ತಿತ್ತು. ಸಣ್ಣ ವಯಸ್ಸಿನಲ್ಲೇ ಆಕಾಶಕಾಯಗಳ ಮೇಲೆ ಕೂತೂಹಲ ಬೆಳೆಸಿಕೊಂಡಿದ್ದ. ಆತನ ಕುತೂಹಲಕ್ಕೆ ಶಾಲೆಯ ವಿಜ್ಞಾನ ವಸ್ತುಪ್ರದರ್ಶನಗಳು ವೇದಿಕೆಯಾಗಿದ್ದವು. ಕೈಗೆ ಸಿಕ್ಕ ವಸ್ತುಗಳಿಂದ ಮಾದರಿ ರೂಪಿಸುತ್ತಿದ್ದ, ಕಸದಿಂದ ರಸ ಸೃಷ್ಟಿಸುತ್ತಿದ್ದ. ಪ್ರೌಢಶಾಲೆಯಲ್ಲಿ ನಡೆದ ವಸ್ತುಪ್ರದರ್ಶನದಲ್ಲಿ ಮೊದಲ ಬಹುಮಾನ ಬಂದಿತ್ತು. ಕ್ರಮೇಣ ಹುಡುಗನ ಚಿತ್ತ ಡ್ರೋನ್‌ಗಳತ್ತ ಹರಿಯಿತು. ದೇಶಕ್ಕೆ ಉಪಯುಕ್ತವಾಗುವ ಡ್ರೋನ್ ಸೃಷ್ಟಿಸಬೇಕೆಂಬ ಅದಮ್ಯ ಆಸೆ ಚಿಗುರಿತು. ದೇಶಕ್ಕೆ ಕೊಡುಗೆ ನೀಡಬೇಕೆಂಬ ಗುರಿ ಕಣ್ಣೆದುರು ಬಂತು. ಕಡುಬಡತನದ ನಡುವೆಯೂ ಕಲ್ಪನೆಗಳಿಗೆ ಬಣ್ಣ ತುಂಬುತ್ತಾ ಹೋದ ಆ ಹುಡುಗ ಈಗ ಜಗತ್ಪ್ರಸಿದ್ಧ ಯುವ ವಿಜ್ಞಾನಿ.
ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕು ನೆಟ್ಕಲ್ ಗ್ರಾಮದ ಎನ್.ಎಂ. ಪ್ರತಾಪ್ ಹೆಸರು ಈಗ ಡ್ರೋನ್ ತಂತ್ರಜ್ಞಾನ ಕ್ಷೇತ್ರದಲ್ಲಿ ಸದ್ದು ಮಾಡುತ್ತಿದೆ. 22 ವರ್ಷ ವಯಸ್ಸಿನ ಪ್ರತಾಪ್ ಜಪಾನ್, ಜರ್ಮನಿ ಹಾಗೂ ಫ್ರಾನ್ಸ್ ವಿಜ್ಞಾನಿಗಳ ಮನಸೂರೆಗೊಂಡಿದ್ದಾರೆ. ಕೃಷಿ ಕ್ಷೇತ್ರಕ್ಕೆ ಸಹಾಯ ಮಾಡುವ ಸಾಧನವನ್ನು ಸೃಷ್ಟಿಸುವ ಮೂಲಕ ಇವರು ಕೃಷಿ ಪ್ರಧಾನ ಮಂಡ್ಯ ಜಿಲ್ಲೆ, ಕರ್ನಾಟಕ ಹಾಗೂ ಭಾರತ ದೇಶಕ್ಕೆ ಕೀರ್ತಿ ತಂದಿದ್ದಾರೆ. ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ಅವರು ಡ್ರೋನ್ ಹುಡುಕಾಟದಲ್ಲಿ ಕೃಷಿಯನ್ನೂ ಸೇರಿಸಿಕೊಂಡಿದ್ದಾರೆ. ಜೊತೆಗೆ ವಿಮಾನಯಾನ, ಮೀನುಗಾರಿಕೆ ಹಾಗೂ ರಕ್ಷಣಾ ಕ್ಷೇತ್ರಕ್ಕೆ ಆಸ್ತಿಯಾಗಬಲ್ಲ ಡ್ರೋನ್ ಸೃಷ್ಟಿಸಿದ್ದಾರೆ.
ಪ್ರತಾಪ್ ತಯಾರಿಸಿರುವ ಈ ಉಪಕರಣ ಕೃಷಿ ಭೂಮಿ ಅಳತೆ, ಮಣ್ಣು ಪರೀಕ್ಷೆ, ಹವಾಮಾನ ಮನ್ಸೂಚನೆ ನೀಡುತ್ತದೆ. ಮೀನುಗಾರರು ಸಮುದ್ರದ ನಡುವೆ ಅಪಾಯಕ್ಕೆ ಸಿಲುಕಿದರೆ ಜಿಪಿಆರ್‌ಎಸ್ ತಂತ್ರಜ್ಞಾನದ ಮೂಲಕ ಅವರನ್ನು ತಕ್ಷಣ ಗುರುತಿಸಿ ರಕ್ಷಣೆ ಮಾಡಬಹುದು. ರಸ್ತೆ ಅಪಘಾತ, ರೈಲು ಅಪಘಾತಗಳು ಸಂಭವಿಸಿದಾಗ ಘಟನಾ ಸ್ಥಳಕ್ಕೆ ಔಷಧಿ ಪೂರೈಸುವ, ರಕ್ಷಣಾ ಉಪಕರಣ, ಆಹಾರ ಪೂರೈಸಲು ಇದನ್ನು ಬಳಸಬಹುದು. ಪ್ರಕೃತಿ ವಿಕೋಪ ನಡೆದಾಗ ವಿಪತ್ತು ನಿರ್ವಹಣೆಗೆ ಸಹಾಯ ಮಾಡುವ ಈ ಸಾಧನ, ದೇಶದ ಭದ್ರತೆ ದೃಷ್ಟಿಯಿಂದಲೂ ಯೋಧರಿಗೆ ನೆರವಾಗುತ್ತದೆಯಂತೆ.
ನೆಟ್ಕಲ್ ಗ್ರಾಮದಲ್ಲಿ ಸಾಮಾನ್ಯ ರೈತರಾಗಿರುವ ಮರಿಮಾದಯ್ಯ– ಸವಿತಾ ದಂಪತಿಯ ಪುತ್ರನಾಗಿರುವ ಪ್ರತಾಪ್ ಎಸ್ಸೆಸ್ಸೆಲ್ಸಿವರೆಗೆ ಮಳವಳ್ಳಿ ಪಟ್ಟಣದ ರೋಟರಿ ಶಾಲೆಯಲ್ಲಿ ಓದಿದರು. ಪಿಯುಸಿಯನ್ನು ಭಾರತೀನಗರದ ಜಿ.ಮಾದೇಗೌಡ ಪದವಿಪೂರ್ವ ಕಾಲೇಜಿನಲ್ಲಿ ಪೂರೈಸಿದರು. ಮೈಸೂರಿನ ಜೆಎಸ್‌ಎಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್‌ಸಿ (ಸಿಬಿಜಡ್) ಕಲಿಯುತ್ತಿರುವ ಅವರು ಡ್ರೋನ್ ಕ್ಷೇತ್ರದಲ್ಲಿ ಗಂಭೀರ ಸಂಶೋಧನೆಯಲ್ಲಿ ತೊಡಗಿದ್ದಾರೆ. ರಾಜ್ಯ, ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಯುವ ವಿಜ್ಞಾನಿ ಕೀರ್ತಿಗೆ ಪಾತ್ರರಾಗಿದ್ದ ಅವರನ್ನು ಮೈಸೂರಿನ ಜೆಎಸ್‌ಎಸ್ ಕಾಲೇಜು ಬೋಧಕ ಸಿಬ್ಬಂದಿ, ಸುತ್ತೂರು ಶ್ರೀಗಳು ಅಪಾರ ಪ್ರೋತ್ಸಾಹ ನೀಡಿದ್ದಾರೆ.
ಜಪಾನ್‌ನಲ್ಲಿ ಈಗಲ್
2017, ನವೆಂಬರ್ 27ರಿಂದ ಡಿಸೆಂಬರ್ 2ರವರೆಗೆ ಜಪಾನ್‌ನ ಟೋಕಿಯೊದಲ್ಲಿ ನಡೆದ ಅಂತರಾಷ್ಟ್ರೀಯ ಡ್ರೋನ್ ಪ್ರದರ್ಶನದಲ್ಲಿ ಪ್ರತಾಪ್ ಅವರ ಶಕ್ತಿ ವಿಶ್ವಕ್ಕೆ ತಿಳಿಯಿತು. 100ಕ್ಕೂ ಹೆಚ್ಚು ದೇಶಗಳು ಭಾಗವಹಿಸಿದ್ದ ಈ ಪ್ರದರ್ಶನದಲ್ಲಿ ಅವರು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಅವರು ಸೃಷ್ಟಿಸಿದ್ದ ಡ್ರೋನ್ ಹೆಸರು ‘ಈಗಲ್’. ಅಪಘಾತದ ಸಂದರ್ಭದಲ್ಲಿ ಔಷಧಿ ಪೂರೈಸುವ, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಉದ್ದೇಶದಿಂದ ಸೃಷ್ಟಿಸಿದ್ದ ಈ ಸಾಧನ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಅವರ ಸಂಶೋಧನೆಯನ್ನು ಮೆಚ್ಚು ನೊಬೆಲ್ ಪುರಸ್ಕೃತ ಹಿಡೆಕಿ ಶಿರಕಾವಾ ಅವರು ತಮ್ಮ ಮನೆಗೆ ಆಹ್ವಾನಿಸಿ ಊಟ, ವಸತಿ ನೀಡಿದ್ದನ್ನು ಪ್ರತಾಪ್ ಪ್ರೀತಿಯಿಂದ ನೆನೆಯುತ್ತಾರೆ.
ಪ್ರತಾಪ್ ಅಪಾರ ಸಮಸ್ಯೆಗಳ ನಡುವೆ ಟೋಕಿಯೊ ತಲುಪಿದ್ದರು. 360 ಕೆ.ಜಿ ತೂಕದ ಪರಿಕರಗಳನ್ನು ಬುಲೆಟ್ ರೈಲಿನಲ್ಲಿ ಸಾಗಿಸಲು ಹಣ ಇಲ್ಲದೆ ಸಾಮಾನ್ಯ ರೈಲಿನಲ್ಲಿ ಎರಡು ದಿನ ಪ್ರಯಾಣ ಮಾಡಬೇಕಾಯಿತು. ಹಸಿವೂ ಕಾಡಿತ್ತು. ಬಾಕ್ಸ್‌ಗಳನ್ನು ಒಬ್ಬರೇ ಎತ್ತಿ ಕೊಂಡೊಯ್ಯವಾಗ ಕಣ್ಣಲ್ಲಿ ನೀರು ಬಂದಿತ್ತು. ‘ನನ್ನ ಮುಂದೆ ದೇಶ ಮಾತ್ರವೇ ಇತ್ತು. ಕೋಟ್ಯಂತರ ಭಾರತೀಯ ಪ್ರತಿನಿಧಿಯಾಗಿ ಜಪಾನ್‌ಗೆ ಹೋಗಿದ್ದೆ. ನನ್ನ ಕಷ್ಟ ಮುಖ್ಯವಲ್ಲ, ನನ್ನ ಸಾಧನೆ ಮುಖ್ಯವಾಗಿತ್ತು’ ಎನ್ನುತ್ತಾರೆ ಪ್ರತಾಪ್.
ಜರ್ಮನಿ, ಫ್ರಾನ್ಸ್‌ನಲ್ಲೂ ಬಹುಮಾನ
2018, ಜೂನ್‌ನಲ್ಲಿ ಜರ್ಮನಿಯಲ್ಲಿ ನಡೆದ ಅಂತರರಾಷ್ಟ್ರೀಯ ಪ್ರದರ್ಶನದಲ್ಲಿ ಪ್ರತಾಪ್ ಆಲ್ಬರ್ಟ್ ಐನ್‌ಸ್ಟಿನ್ ಇನೊವೇಷನ್ ಮೆಡಲ್‌ಗೆ ಕೊರಳೊಡ್ಡಿದರು. ಅಲ್ಲೇ ಇದ್ದು ಸಂಶೋಧನೆ ನಡೆಸಲು ಸ್ಕಾಲರ್‌ಶಿಪ್ ಕೂಡ ದೊರೆಯಿತು. ನಂತರ ಜುಲೈ, 2018ರಲ್ಲಿ ಜರ್ಮನಿಯಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಸಂಶೋಧನಾ ಪದಕ (ಸಿಇಬಿಐಟಿ–ಅವಾರ್ಡ್) ಪಡೆದರು.
ಪ್ರತಾಪ್ ಸಾಧನೆಯ ಹಾದಿ ಕಲ್ಲುಮುಳ್ಳುಗಳಿಂದ ಕೂಡಿದೆ.ದೇಶಕ್ಕಾಗಿ ದುಡಿಯಬೇಕು ಎಂದು ಹೇಳುವ ಅವರ ಮಾತುಗಳು ಯುವಪೀಳಿಗೆಯಲ್ಲಿ ಸ್ಫೂರ್ತಿ ತುಂಬುತ್ತವೆ. ತ್ಯಾಜ್ಯ ವಸ್ತುಗಳಿಂದ ಡ್ರೋನ್ ಸೃಷ್ಟಿಸುತ್ತಿದ್ದ ಅವರ ಮುಂದೆ ಈಗ ವಿಶ್ವದ ಹಲವು ರಾಷ್ಟ್ರಗಳು ಅವಕಾಶಗಳ ಮಳೆ ಸುರಿಸಿವೆ.
**
ತಾಯಿ, ಮಾಂಗಲ್ಯ ಸರ ಕೊಟ್ಟರು
ಜಪಾನ್‌ಗೆ ತೆರಳುವಾಗ 360 ಕೆ.ಜಿ ಬ್ಯಾಗ್‌ಗೆ ಪ್ರತ್ಯೇಕ ವಿಮಾನ ದರ ಪಾವತಿಸುವ ಬಗ್ಗೆ ಪ್ರತಾಪ್‌ಗೆ ತಿಳಿದಿರಲಿಲ್ಲ. ಅವರ ಪ್ರಯಾಣಕ್ಕೆ ಸಾಕಾಗುವಷ್ಟು ಹಣ ಮಾತ್ರವೇ ಇತ್ತು. ಹಣದ ಕೊರತೆ ಎದುರಾದಾಗ ಅವರ ತಾಯಿ ಸವಿತಾ, ಕೊರಳಲ್ಲಿ ಇದ್ದ ಮಾಂಗಲ್ಯ ಸರವನ್ನು ಕೊಟ್ಟರು. ‘ಹಣ ಸಾಲುತ್ತಿಲ್ಲ ಎಂದಾಗ ನನ್ನ ತಾಯಿ ಹಿಂದೆ ಮುಂದೆ ನೋಡದೆ ಮಾಂಗಲ್ಯ ಸರ ಕೊಟ್ಟರು. ಅವರು ಹೆಚ್ಚು ತಿಳಿದವರಲ್ಲ, ಆದರೆ ಸದಾ ನನ್ನನ್ನು ಕೈ ಹಿಡಿದು ನಡೆಸಿದ್ದಾರೆ. ತಂದೆ, ತಾಯಿ, ತಂಗಿ, ನನ್ನ ಸ್ನೇಹಿತರು, ಉಪನ್ಯಾಸಕರ ಸಹಾಯವನ್ನು ಎಂದಿಗೂ ಮರೆಯಲಾರೆ’ ಎಂದು ಪ್ರತಾಪ್ ನೆನಪಿಸಿಕೊಳ್ಳುತ್ತಾರೆ.
**
ನನ್ನ ಸೇವೆ ಭಾರತಕ್ಕೆ ಮಾತ್ರ
ಡ್ರೋನ್ ತಂತ್ರಜ್ಞಾನಕ್ಕೆ ಹೊಸ ರೂಪ ಕೊಟ್ಟಿರುವ ಪ್ರತಾಪ್ ಸಾಧನೆಗೆ ಹಲವು ರಾಷ್ಟ್ರಗಳು ತಲೆದೂಗಿವೆ. ಲಕ್ಷ ಲಕ್ಷ ಸಂಬಳ ಕೊಟ್ಟು ಸೇವೆ ಪಡೆಯಲು ಮುಂದೆ ಬಂದಿವೆ. ಆದರೆ ಪ್ರತಾಪ್ ದೇಶಕ್ಕೆ ಮಾತ್ರ ತಮ್ಮ ಸೇವೆಯನ್ನು ಮುಡುಪಾಗಿಟ್ಟಿದ್ದಾರೆ.
‘ದೇಶಕ್ಕೆ ಕೊಡುಗೆ ನೀಡಬೇಕು ಎಂಬ ಗುರಿಯೊಂದಿಗೆ ಹೆಜ್ಜೆ ಇಟ್ಟೆ. ಈಗ ಇಲ್ಲಿಯವರೆಗೆ ಸಾಗಿ ಬಂದಿದ್ದೇನೆ. ಬೇರೆ ದೇಶಗಳ ಹಣಕ್ಕೆ ನನ್ನ ಸೇವೆಯನ್ನು ಮಾರಿಕೊಳ್ಳಲಾರೆ. ನನ್ನ ಸೇವೆ ನನ್ನ ಭಾರತಕ್ಕೆ ಮಾತ್ರ’ ಎಂದು ಪ್ರತಾಪ್ ಹೆಮ್ಮೆಯಿಂದ ಹೇಳಿದರು.
____
07-07-2020 Update: ಚಿತ್ರ ಬದಲಿಸಲಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.