ADVERTISEMENT

ಉಚಿತ ವೈಫೈ ಸೇವೆ ನೀಡುವ 'ಸ್ಟೇಷನ್‌' ಯೋಜನೆ ನಿಲ್ಲಿಸಲು ಗೂಗಲ್‌ ನಿರ್ಧಾರ

ಏಜೆನ್ಸೀಸ್
Published 17 ಫೆಬ್ರುವರಿ 2020, 13:16 IST
Last Updated 17 ಫೆಬ್ರುವರಿ 2020, 13:16 IST
ಗೂಗಲ್‌ ಸ್ಟೇಷನ್‌
ಗೂಗಲ್‌ ಸ್ಟೇಷನ್‌   

ನವದೆಹಲಿ:ಭಾರತ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳಲ್ಲಿ 'ಸ್ಟೇಷನ್‌' ಯೋಜನೆ ಮೂಲಕ ಉಚಿತ ಮತ್ತು ವೇಗವಾದ ವೈಫೈ ಸೌಲ್ಯಭ್ಯ ನೀಡುತ್ತಿರುವ ತಂತ್ರಜ್ಞಾನ ದಿಗ್ಗಜ 'ಗೂಗಲ್‌', 2020ರಿಂದ ಯೋಜನೆಯ ಕಾರ್ಯಾಚರಣೆ ನಿಲ್ಲಿಸಲು ನಿರ್ಧರಿಸಿದೆ.

ಗೂಗಲ್‌ ಭಾರತೀಯ ರೈಲ್ವೆ ಮತ್ತು ರೈಲ್‌ಟೆಲ್‌ ಸಹಯೋಗದೊಂದಿಗೆ ಭಾರತದಲ್ಲಿ 2015ರಲ್ಲಿ 'ಸ್ಟೇಷನ್‌' ಯೋಜನೆ ಆರಂಭಿಸಿತು. 2020ರ ವೇಳೆಗೆ ದೇಶದ 400 ರೈಲ್ವೆ ನಿಲ್ದಾಣಗಳಲ್ಲಿ ಸಾರ್ವಜನಿಕರಿಗೆ ವೇಗದ ಹಾಗೂ ಉಚಿತ ವೈಫೈ ಒದಗಿಸುವ ಯೋಜನೆ ನಡೆಸಿದೆ. ಕಳೆದ ಐದು ವರ್ಷಗಳಲ್ಲಿ ಸುಲಭವಾಗಿ ಮತ್ತು ಅಗ್ಗದ ದರದಲ್ಲಿಇಂಟರ್‌ನೆಟ್‌ ಸೌಲಭ್ಯ ದೊರೆತಿರುವುದರಿಂದ ಸ್ಟೇಷನ್‌ ಯೋಜನೆ ಮುಂದುವರಿಸುವುದಿಲ್ಲ ಎಂದು ಗೂಗಲ್‌ ಹೇಳಿದೆ.

ಈಗಾಗಲೇ ಸ್ಥಾಪಿಸಲಾಗಿರುವ ವೈಫೈ ವ್ಯವಸ್ಥೆ ಸೌಲಭ್ಯ, ಸಂಪನ್ಮೂಲದ ನಿರ್ವಹಣೆ ಕುರಿತು ರೈಲ್ವೆ ಇಲಾಖೆಯೊಂದಿಗೆ ಕಾರ್ಯತಂತ್ರ ರೂಪಿಸಲಾಗುತ್ತಿದೆ ಎಂದು ಗೂಗಲ್‌ ತಿಳಿಸಿದೆ.

ADVERTISEMENT

'ದೂರಸಂಪರ್ಕ ಕಂಪನಿಗಳು, ಸ್ಥಳೀಯ ಆಡಳಿತ ಹಾಗೂ ಅಂತರ್ಜಾಲ ಸೇವಾದಾರರ ಸಹಯೋಗದಲ್ಲಿ 2018ರ ಜೂನ್‌ ವೇಳೆಗಾಗಲೇ ದೇಶದ ಸಾವಿರಾರು ಸ್ಥಳಗಳಲ್ಲಿ ಉಚಿತ ವೈಫೈ ವ್ಯವಸ್ಥೆ ಅಳವಡಿಸಲಾಯಿತು. ಇತರೆ ರಾಷ್ಟ್ರಗಳಿಂದಲೂ ಸ್ಟೇಷನ್‌ ಯೋಜನೆಗೆ ಮನವಿ ಬಂದವು...' ಎಂದು ಗೂಗಲ್‌ ಉಪಾಧ್ಯಕ್ಷ ಸೀಸರ್‌ ಸೇನ್‌ಗುಪ್ತ ಬ್ಲಾಗ್‌ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಭಾರತ ಸೇರಿದಂತೆ 'ಸ್ಟೇಷನ್' ಯೋಜನೆಯು ನೈಜೀರಿಯಾ, ಥಾಯ್ಲೆಂಡ್‌, ಫಿಲಿಪ್ಪೀನ್ಸ್‌, ಮೆಕ್ಸಿಕೊ, ಇಂಡೊನೇಷ್ಯಾ, ಬ್ರೆಜಿಲ್‌ ಹಾಗೂ ದಕ್ಷಿಣ ಆಫ್ರಿಕಾದಲ್ಲೂ ಅನುಷ್ಠಾನಗೊಂಡಿದೆ.

ಜಗತ್ತಿನಲ್ಲೇ ಭಾರತದಲ್ಲಿ ಮೊಬೈಲ್‌ ಡೇಟಾ ಅಗ್ಗದ ದರದಲ್ಲಿ ದೊರೆಯುತ್ತಿದೆ. ಕಳೆದ ಐದು ವರ್ಷಗಳಲ್ಲಿ ಮೊಬೈಲ್‌ ಡೇಟಾ ದರ ಶೇ 95ರಷ್ಟು ಇಳಿಕೆಯಾಗಿದೆ. ಭಾರತದ ಮೊಬೈಲ್‌ ಫೋನ್‌ ಬಳಕೆದಾರರು ತಿಂಗಳಿಗೆ ಸರಾಸರಿ 10 ಜಿಬಿ ಡಾಟಾ ಉಪಯೋಗಿಸುತ್ತಿದ್ದಾರೆ. ಇತರೆ ರಾಷ್ಟ್ರಗಳಲ್ಲಿಯೂ ಸರ್ಕಾರ ಹಾಗೂ ಸಂಸ್ಥೆಗಳು ಸುಲಭವಾಗಿ ಇಂಟರ್‌ನೆಟ್‌ ಸೇವೆ ಸಿಗುವಂತೆ ಮಾಡಲು ಹಲವು ಕ್ರಮಗಳನ್ನು ಕೈಗೊಂಡಿವೆ ಎಂದು ಸೇನ್‌ಗುಪ್ತ ವಿವರಿಸಿದ್ದಾರೆ.

2020ರಲ್ಲಿ ಜಾಗತಿವಾಗಿ ಸ್ಟೇಷನ್‌ ಯೋಜನೆಯನ್ನು ಕ್ರಮೇಣ ನಿಲ್ಲಿಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.

ನೆಕ್ಸ್ಟ್‌ ಬಿಲಿಯನ್‌ ಯೂಸರ್ಸ್‌ ಕಾರ್ಯಕ್ರಮದಡಿ ಗೂಗಲ್‌ ಕಡಿಮೆ ಸಂಗ್ರಹ ಸಾಮರ್ಥ್ಯ ಬಳಸಿಕೊಳ್ಳುವ ಲೈಟ್‌ ಆ್ಯಪ್‌ಗಳನ್ನು ಅಭಿವೃದ್ಧಿ ಪಡಿಸಿದೆ. ಯೂಟ್ಯೂಬ್‌ ಗೊ, ಗೂಗಲ್‌ ಗೊ ಹಾಗೂ ಆಫ್‌ಲೈನ್‌ ಬಳಸಬಹುದಾದ ಯುಟ್ಯೂಬ್‌ ಮತ್ತು ಮ್ಯಾಪ್‌ ಅಪ್ಲಿಕೇಷನ್‌ ಹಾಗೂ ರಾಷ್ಟ್ರಕ್ಕೆ ನಿರ್ದಿಷ್ಟವಾದ ಪಾವತಿ ವ್ಯವಸ್ಥೆ (ಗೂಗಲ್‌ ಪೇ), ಉಪಕರಣಗಳ ಬೆಲೆ ಕಡಿಮೆ ಮಾಡಲು 'ಆ್ಯಂಡ್ರಾಯ್ಡ್‌ ಗೊ' ವ್ಯವಸ್ಥೆ ಅಭಿವೃದ್ಧಿ ಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.