ADVERTISEMENT

ಕ್ರೋಮ್ ಬ್ರೌಸರ್ ಬಳಸುತ್ತಿದ್ದೀರಾ? ಪ್ಲಗ್-ಇನ್ ಬಗ್ಗೆ ಎಚ್ಚರ!

ಅವಿನಾಶ್ ಬಿ.
Published 26 ಜೂನ್ 2020, 8:40 IST
Last Updated 26 ಜೂನ್ 2020, 8:40 IST
ಕ್ರೋಮ್ ಸ್ಟೋರ್‌ನಲ್ಲಿರುವ ಉಪಯುಕ್ತ ಎಕ್ಸ್‌ಟೆನ್ಷನ್‌ಗಳು
ಕ್ರೋಮ್ ಸ್ಟೋರ್‌ನಲ್ಲಿರುವ ಉಪಯುಕ್ತ ಎಕ್ಸ್‌ಟೆನ್ಷನ್‌ಗಳು   

ಗೂಗಲ್ ಕ್ರೋಮ್ ಬ್ರೌಸರ್‌ನ ಎಕ್ಸ್‌ಟೆನ್ಷನ್‌ಗಳು ಅಥವಾ ಪ್ಲಗ್-ಇನ್‌ಗಳಿಂದ ಸ್ಪೈವೇರ್‌ನಂತಹಾ ಮಾಲ್‌ವೇರ್‌ಗಳು (ಕುತಂತ್ರಾಂಶಗಳು) ಬಳಕೆದಾರರ ಮಾಹಿತಿಗೆ ಕನ್ನ ಹಾಕಿವೆ ಎಂಬ ವಿಚಾರ ಕಳೆದ ವಾರ ಆತಂಕ ಮೂಡಿಸಿತು. ಇಂತಹಾ ಪ್ಲಗ್-ಇನ್‌ಗಳೆಂಬ ಒಟ್ಟು 111 ಕಿರು ತಂತ್ರಾಂಶಗಳನ್ನು ಜಾಗತಿಕವಾಗಿ 3.2 ಕೋಟಿಗೂ ಹೆಚ್ಚು ಮಂದಿ ಡೌನ್‌ಲೋಡ್ ಮಾಡಿ ಅಳವಡಿಸಿಕೊಂಡಿದ್ದಾರೆ ಎಂದು 'ಅವೇಕ್ ಸೆಕ್ಯುರಿಟಿ' ವರದಿ ಮಾಡಿತ್ತು. ಈಗ ಅವನ್ನು ಗೂಗಲ್ ತನ್ನ ಕ್ರೋಮ್ ಸ್ಟೋರ್‌ನಿಂದ ತೆಗೆದುಹಾಕಿದೆಯಾದರೂ, ನಮ್ಮ ಎಚ್ಚರಿಕೆಯಲ್ಲಿ ನಾವಿರಲೇಬೇಕಾದ ಅಗತ್ಯವನ್ನು ಇದು ಸಾರಿ ಹೇಳಿದಂತಾಗಿದೆ.

ಏನಿದು ಪ್ಲಗ್-ಇನ್ ಅಥವಾ ಎಕ್ಸ್‌ಟೆನ್ಷನ್?
ನಾವೆಲ್ಲರೂ ನಮ್ಮ ಕಂಪ್ಯೂಟರಿನಲ್ಲೋ, ಫೋನ್‌ನಲ್ಲೋ ಅಂತರಜಾಲ ಪುಟಗಳನ್ನು ಜಾಲಾಡಲು ಅಂದರೆ ಬ್ರೌಸ್ ಮಾಡಲು ಇರುವ ತಂತ್ರಾಂಶವೇ ಬ್ರೌಸರ್. ಈಗ ಹೆಚ್ಚು ಚಾಲ್ತಿಯಲ್ಲಿರುವುದು ಗೂಗಲ್‌ನ ಕ್ರೋಮ್ ಬ್ರೌಸರ್. ಜೊತೆಗೆ, ಸಫಾರಿ, ಎಡ್ಜ್, ಫೈರ್‌ಫಾಕ್ಸ್, ಒಪೆರಾ ಮುಂತಾದ ಇತರ ಬ್ರೌಸರುಗಳನ್ನೂ ಕೆಲವರು ಬಳಸುತ್ತಾರೆ. ಬ್ರೌಸರ್‌ಗಳ ಮೂಲಕವೇ ಭಾಷಾಂತರ ಮಾಡಲು, ಪಿಡಿಎಫ್ ಮಾಡಲು, ವಿಡಿಯೊ ಡೌನ್‌ಲೋಡ್ ಮಾಡಲು, ಕನ್ನಡ ಟೈಪ್ ಮಾಡಲು - ಹೀಗೆ ವಿಭಿನ್ನ ಕೆಲಸಗಳಿಗಾಗಿ ಇರುವ ಪೂರಕ ಕಿರುತಂತ್ರಾಂಶಗಳೇ ಪ್ಲಗ್-ಇನ್ ಅಥವಾ ಎಕ್ಸ್‌ಟೆನ್ಷನ್‌ಗಳು. ಇವೆಲ್ಲವೂ ಕ್ರೋಮ್ ಬ್ರೌಸರ್‌ನ ಕ್ರೋಮ್ ಸ್ಟೋರ್ ಎಂಬ, ಕಿರು ತಂತ್ರಾಂಶಗಳ ಸಂಗ್ರಹಾಗಾರದಲ್ಲಿರುತ್ತವೆ. (ಆ್ಯಪ್‌ಗಳನ್ನು ಅಧಿಕೃತವಾಗಿ ಒದಗಿಸುವ ಗೂಗಲ್ ಪ್ಲೇ ಸ್ಟೋರ್‌ನಂತೆ). ಅಲ್ಲಿ ಡೆವಲಪರ್‌ಗಳು ತಮ್ಮ ಉತ್ಪನ್ನಗಳನ್ನು ಕ್ರೋಮ್‌ನ ಅನುಮತಿ ಪಡೆದು ಬಿಡುಗಡೆ ಮಾಡಬಹುದು. ಬೇರೆ ಬೇರೆ ಬ್ರೌಸರ್‌ಗಳಿಗೂ ಆಯಾ ಸ್ಟೋರ್‌ಗಳಿರುತ್ತವೆ. ಅವುಗಳಿಂದಲೇ ಈ ಕಿರು ತಂತ್ರಾಂಶಗಳನ್ನು ಅಳವಡಿಸಿಕೊಳ್ಳಬಹುದಾಗಿದೆ.

ಅಪಾಯ ಹೇಗೆ?
ಈ ಎಕ್ಸ್‌ಟೆನ್ಷನ್‌ಗಳನ್ನು ಕ್ರೋಮ್ ಸ್ಟೋರ್‌ಗೆ ಸೇರಿಸಲು ಕೆಲವೊಂದು ಸುರಕ್ಷತೆಯ ಮಾನದಂಡಗಳಿರುತ್ತವೆ. ಆದರೆ, ಹ್ಯಾಕರ್‌ಗಳು ಆರಂಭದಲ್ಲಿ ಒಳ್ಳೆಯ ಸೇವೆ ಒದಗಿಸುವ ಪ್ಲಗ್-ಇನ್‌ಗಳನ್ನು ನೀಡಿ, ತಾವು ಸಾಚಾ ಎಂದು ಬಿಂಬಿಸಿ, ನಂತರ ಅದಕ್ಕೆ ಅಪ್‌ಡೇಟ್ ರೂಪದಲ್ಲಿ ಮಾಲ್‌ವೇರ್‌ಗಳನ್ನು ಅಳವಡಿಸಬಲ್ಲರು. ಮತ್ತೊಂದು ವಿಧಾನವಿದೆ. ನಾವು ತಿಳಿದೋ-ತಿಳಿಯದೆಯೋ ಕ್ಲಿಕ್ ಮಾಡಿ 'ಕ್ರೋಮಿಯಂ' ಎಂಬ ಇನ್ನೊಂದು ಬ್ರೌಸರನ್ನು ಇನ್‌ಸ್ಟಾಲ್ ಮಾಡಿಕೊಂಡು, ಅದನ್ನೇ ಡೀಫಾಲ್ಟ್ ಬ್ರೌಸರ್ ಆಗಿಸುವಂತೆ ಬರುವ ಸಂದೇಶಕ್ಕೂ 'OK' ಕ್ಲಿಕ್ ಮಾಡಿರುತ್ತೇವೆ. ಅಲ್ಲಿ ಹೇಳಹೆಸರಿಲ್ಲದ ಆದರೆ ಸಾಚಾ ಎಂಬಂತೆ ಕಾಣಿಸುವ ಸೈಬರ್ ಕಂಪನಿಗಳು ಪ್ಲಗ್-ಇನ್ ಅಥವಾ ಎಕ್ಸ್‌ಟೆನ್ಷನ್‌ಗಳನ್ನು ಸೇರಿಸಬಲ್ಲವು. ಅವನ್ನು ನಂಬಿ ಕ್ಲಿಕ್ ಮಾಡಿದರೆ ಕೆಟ್ಟೆವು.

ADVERTISEMENT

ಬ್ರೌಸರ್‌ನ ಎಕ್ಸ್‌ಟೆನ್ಷನ್ ಮೂಲಕ ಹದ್ದಿನ ಕಣ್ಣಿಡುವ ಈ ಸ್ಪೈವೇರ್‌ಗಳು ಇಂಟರ್ನೆಟ್‌ನಲ್ಲಿ ನಾವೇನು ಜಾಲಾಡುತ್ತೇವೆ, ಯಾವ ಬ್ಯಾಂಕಿಂಗ್ ಸೈಟಿಗೆ ಹೋಗುತ್ತೇವೆ, ಅಲ್ಲಿ ಯಾವ ಯೂಸರ್‌ನೇಮ್-ಪಾಸ್‌ವರ್ಡ್ ಬಳಸುತ್ತೇವೆ ಎಂಬಿತ್ಯಾದಿ ಮಾಹಿತಿಯನ್ನು ದಾಖಲಿಸಿಕೊಂಡು, ತಮ್ಮ ಒಡೆಯರಿಗೆ ರವಾನಿಸಬಲ್ಲವು. ಬ್ರೌಸರ್‌ಗಳ ಮೂಲಕವೇ ನಾವು ಬ್ಯಾಂಕಿಂಗ್ ಸೈಟ್‌ಗಳಿಗೆ, ಸಾಮಾಜಿಕ ಮಾಧ್ಯಮಗಳ ಖಾತೆಗೆ ಲಾಗಿನ್ ಆಗುವುದರಿಂದ ನಮ್ಮ ಖಾಸಗಿ ಮಾಹಿತಿ ಸೋರಿಕೆ ಸಾಧ್ಯವಾಗುವುದು ಈ ರೀತಿಯ ಮಾಲ್‌ವೇರ್‌ಗಳಿಂದ.

ಪರಿಹಾರ ಏನು?
ಇಂಟರ್ನೆಟ್ ಎಂದರೆ ನಮಗೆ ಅವಜ್ಞೆ ಹೆಚ್ಚು. ಯಾವ್ಯಾವುದೋ ರೀತಿಯಲ್ಲಿ ಆಕರ್ಷಕವಾಗಿ ಧುತ್ತನೇ ಕಾಣಿಸುವ (ಪಾಪ್-ಅಪ್ ಆಗುವ) ವಿಂಡೋಗಳಲ್ಲಿ ಸರಿಯಾಗಿ ನೋಡದೆ, OK ಅಥವಾ 'ಡೌನ್‌ಲೋಡ್' ಅಂತ ಆಕರ್ಷಕವಾಗಿ ಕಾಣಿಸುವ ಬಟನ್ ಒತ್ತುತ್ತೇವೆ. ಯಾವುದೋ ಹಾಡು, ತಂತ್ರಾಂಶ ಅಥವಾ ವಿಡಿಯೊಗಳಿಗಾಗಿ ಸರ್ಚ್ ಮಾಡಿ, ಡೌನ್‌ಲೋಡ್ ಮಾಡುವಾಗಲೂ ಕೆಲವೊಂದು "Download Here" ಎಂದು ಕ್ಲಿಕ್ ಮಾಡಲು ಪ್ರೇರೇಪಿಸುವ ಬಟನ್‌ಗಳನ್ನು ಎರಡೆರಡು ಪರಿಶೀಲಿಸಿಕೊಳ್ಳಿ. ಅಗತ್ಯವಿಲ್ಲದ ಪ್ಲಗ್-ಇನ್ ಅಳವಡಿಸಿಕೊಳ್ಳದಿರುವುದೇ ಕಂಪ್ಯೂಟರ್ ಬಳಕೆ ವೇಳೆ ಸುರಕ್ಷಿತವಾಗಿರುವ ಅತ್ಯುತ್ತಮ ವಿಧಾನ. ಆದರೆ, ನಾವೆಲ್ಲರೂ ಹೆಚ್ಚಾಗಿ ಬಳಸುತ್ತಿರುವ ಸ್ಮಾರ್ಟ್ ಮೊಬೈಲ್ ಫೋನ್‌ಗಳಲ್ಲಿನ ಬ್ರೌಸರ್‌ಗೆ ಪ್ಲಗ್-ಇನ್‌ಗಳು ಲಭ್ಯ ಇಲ್ಲ ಎಂಬುದು ಸಮಾಧಾನದ ಸಂಗತಿ.

ಒಂದು ವೇಳೆ, ಉಪಯುಕ್ತವಾದ ಪ್ಲಗ್-ಇನ್‌ಗಳನ್ನು ಬಳಸಲೇಬೇಕೆಂದಿದ್ದರೆ, ಅದಕ್ಕಾಗಿ ಒಂದು ಬ್ರೌಸರ್;ನಮ್ಮ ಸೂಕ್ಷ್ಮ ಮಾಹಿತಿ ಇರಬಹುದಾದ ಯಾವುದೇ ವಹಿವಾಟಿಗೆ ಬೇರೆಯದೇ ಕಂಪನಿಯ ಬ್ರೌಸರ್ ಬಳಸುವುದು ಶ್ರೇಯಸ್ಕರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.