ADVERTISEMENT

ಹವಾಮಾನ ಮುನ್ಸೂಚನೆಗೆ ಕೃತಕ ಬುದ್ಧಿಮತ್ತೆ ಬಳಕೆ: ಭಾರತೀಯ ಹವಾಮಾನ ಇಲಾಖೆ ಪ್ರಯೋಗ

ಪಿಟಿಐ
Published 2 ಆಗಸ್ಟ್ 2020, 9:13 IST
Last Updated 2 ಆಗಸ್ಟ್ 2020, 9:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಹವಾಮಾನ ಮುನ್ಸೂಚನೆಯ ಮಾಹಿತಿ ಪಡೆಯಲು ಕೃತಕ ಬುದ್ಧಿಮತ್ತೆ (ಎಐ) ಬಳಸಲು ಭಾರತೀಯ ಹವಾಮಾನ ಇಲಾಖೆ ಉದ್ದೇಶಿಸಿದೆ.

‘ಮುಖ್ಯವಾಗಿ 3ರಿಂದ 6 ಗಂಟೆಗಳ ಮುಂಚಿತವಾಗಿ ಪ್ರತಿಕೂಲ ಹವಾಮಾನದ ವಿವರ ಪಡೆಯುವುದು ಈ ಯೋಜನೆಯ ಉದ್ದೇಶವಾಗಿದೆ’ ಎಂದು ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ ಮೊಹಪಾತ್ರಾ ತಿಳಿಸಿದ್ದಾರೆ.

‘ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಕೃತಕ ಬುದ್ಧಿಮತ್ತೆ ಬಳಸಲಾಗುತ್ತಿದೆ. ಅದರೆ, ಹವಾಮಾನ ಮುನ್ಸೂಚನೆಗೆ ಹೊಸದಾಗಿ ಬಳಕೆಯಾಗುತ್ತಿದೆ. ಹವಾಮಾನದ ಮಾಹಿತಿಯನ್ನು ಮತ್ತಷ್ಟು ಖಚಿತವಾಗಿ ಪಡೆಯಲು ಕೃತಕ ಬುದ್ಧಿಮತ್ತೆಯನ್ನು ಯಾವ ರೀತಿ ಬಳಸಬಹುದು ಎನ್ನುವ ಬಗ್ಗೆ ಅಧ್ಯಯನ ನಡೆಸಲು ಸಂಶೋಧನಾ ತಂಡಗಳಿಂದ ಪ್ರಸ್ತಾವಗಳನ್ನು ಆಹ್ವಾನಿಸಲಾಗಿದೆ. ಭೂ ವಿಜ್ಞಾನ ಸಚಿವಾಲಯ ಈ ಪ್ರಸ್ತಾವಗಳನ್ನು ಪರಿಶೀಲಿಸುತ್ತಿದೆ’ ಎಂದು ವಿವರಿಸಿದ್ದಾರೆ.

ADVERTISEMENT

‘ಕೃತಕ ಬುದ್ಧಿಮತ್ತೆಯಿಂದ ಹಿಂದಿನ ಹವಾಮಾನ ಮಾದರಿಗಳನ್ನು ಅರಿತುಕೊಳ್ಳಲು ಸಹ ನೆರವಾಗುತ್ತದೆ. ಇದರಿಂದ ತ್ವರಿತಗತಿಯಲ್ಲಿ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ. ಇತರ ಸಂಸ್ಥೆಗಳ ಜತೆ ಜಂಟಿಯಾಗಿ ಈ ಬಗ್ಗೆ ಅಧ್ಯಯನ ನಡೆಸುವ ಉದ್ದೇಶವೂ ಇದೆ’ ಎಂದು ಅವರು ತಿಳಿಸಿದ್ದಾರೆ.

ಮುಂದಿನ 3ರಿಂದ 6ಗಂಟೆಗಳಲ್ಲಿ ಸಂಭವಿಸುವ ಪ್ರತಿಕೂಲ ಹವಾಮಾನದ ಬಗ್ಗೆ ಮಾಹಿತಿ ಪಡೆಯಲು ಹವಾಮಾನ ಇಲಾಖೆ ಸದ್ಯಕ್ಕೆ ರೇಡಾರ್‌ಗಳು, ಉಪಗ್ರಹ ಚಿತ್ರ ಸೇರಿದಂತೆ ವಿವಿಧ ಸಾಧನಗಳನ್ನು ಬಳಸಿಕೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.