ADVERTISEMENT

ಡಿಜಿಟಲ್ ಧ್ವನಿಗೆ ಬಲ ನೀಡಿದ ಕೋವಿಡ್‌

​ಪ್ರಜಾವಾಣಿ ವಾರ್ತೆ
Published 20 ಮೇ 2020, 6:03 IST
Last Updated 20 ಮೇ 2020, 6:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮನುಕುಲವನ್ನು ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ಸೋಂಕಿನಿಂದ ರಕ್ಷಿಸಿಕೊಳ್ಳಲು ನೆರವಾಗುವ ತಂತ್ರಜ್ಞಾನಗಳಿಗಾಗಿ ಆಗಲೇ ಹುಡುಕಾಟ ಆರಂಭವಾಗಿದೆ. ಸಾಮಾಜಿಕ ಸಂಪರ್ಕ ಇಲ್ಲದೆ ಸಂವಹನ ನಡೆಸಬಹುದಾದ ಮಾಧ್ಯಮಗಳು ಸಹಜವಾಗಿ ಮಹತ್ವ ಪಡೆದುಕೊಳ್ಳುತ್ತಿವೆ.

ಇಲ್ಲಿಯವರೆಗೆ ಅಷ್ಟೇನೂ ಗಮನ ಸೆಳೆಯದ ಡಿಜಿಟಲ್‌ ಧ್ವನಿ ತಂತ್ರಜ್ಞಾನ ಕ್ಷೇತ್ರ ಏಕಾಏಕಿ ಮುನ್ನೆಲೆಗೆ ಬಂದಿದ್ದು ಆಕರ್ಷಕ ಮಾಧ್ಯಮವಾಗಿ ಗೋಚರಿಸಲು ಆರಂಭಿಸಿದೆ. ಕೋವಿಡ್‌–19 ಪರೋಕ್ಷವಾಗಿ ಈ ಕ್ಷೇತ್ರದಲ್ಲಿ ಭರಪೂರ ಅವಕಾಶಗಳ ಬಾಗಿಲು ತೆರೆದಿಟ್ಟಿದೆ.

ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ಗೂಗಲ್‌ ಅಸಿಸ್ಟೆಂಟ್‌, ಅಮೆಜಾನ್‌ ಅಲೆಕ್ಸಾ ಮತ್ತು ಆ್ಯಪಲ್‌ ಸಿರಿ ಒಳಗೊಂಂಡಂತೆ ಹಲವಾರು ವಾಯ್ಸ್‌ ಆ್ಯಕ್ಟಿವೇಟೆಡ್‌ ವ್ಯವಸ್ಥೆಗಳ ಬಳಕೆ ಹೆಚ್ಚಾಗುತ್ತಿದ್ದು, ಭಾರಿ ಬೇಡಿಕೆ ಕುದುರುತ್ತಿದೆ.

ADVERTISEMENT

ಇಲ್ಲಿಯವರೆಗೆ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಮತ್ತು ಶಾಪಿಂಗ್‌ಗೆ ನೆರವು ಪಡೆಯಲ ಬಳಕೆಯಾಗುತ್ತಿದ್ದ ವಾಯ್ಸ್‌ ಅಸಿಸ್ಟೆಂಟ್‌ ವ್ಯಾಪ್ತಿ ಈಗ ಅದರಾಚೆಗೂ ಹಬ್ಬುತ್ತಿದೆ. ಕೊರೊನಾ ಸಾಂಕ್ರಾಮಿಕ ರೋಗದ ಹಾವಳಿಯಿಂದಾಗಿ ಜಗತ್ತಿನಾದ್ಯಂತ ಸ್ಮಾರ್ಟ್‌ ಹೋಮ್‌ ನಿಯಂತ್ರಣ, ವೈದ್ಯಕೀಯ ಅಪ್ಲಿಕೇಶನ್‌ ಒಳಗೊಂಡಂತೆ ಹಲವಾರು ವಹಿವಾಟು ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಈ ತಂತ್ರಜ್ಞಾನ ಬಳಕೆಗೆ ಹೇರಳ ಅವಕಾಶಗಳು ತೆರೆದುಕೊಂಡಿವೆ.

ಐದು ತಿಂಗಳಿಂದ ಈಚೆಗೆ, ಕೊರೊನಾ ಸೋಂಕು ಕಾಣಿಸಿಕೊಂಡ ನಂತರ ಹೆಚ್ಚಿನ ಕ್ಷೇತ್ರಗಳು ಭಾರಿ ನಷ್ಟ ಅನುಭವಿಸಿದ್ದು ಕಳೆಗುಂದಿವೆ. ಆಶ್ಚರ್ಯವೆಂಬಂತೆ ಡಿಜಿಟಲ್‌ ಧ್ವನಿ ತಂತ್ರಜ್ಞಾನ ಮಾರುಕಟ್ಟೆ ವೇಗವಾಗಿ ಚೇತರಿಸಿಕೊಳ್ಳುತ್ತಿದೆ.

ಭವಿಷ್ಯದ ತಂತ್ರಜ್ಞಾನ

ಕೊರೊನಾ ಸೋಂಕು ಹರಡದಂತೆ ಸಾಮಾಜಿಕ ಅಂತರ ಮತ್ತು ದೈಹಿಕ ಅಂತರ ಕಾಪಾಡಿಕೊಳ್ಳುವುದು ಮುಂದಿನ ದಿನಗಳಲ್ಲಿ ಆದ್ಯತೆ ಮತ್ತು ಅಗತ್ಯವಾಗಲಿದೆ. ಕೋವಿಡ್‌–19 ನಿಯಂತ್ರಣಕ್ಕೆ ಬಂದ ನಂತರವೂ ಹಲವಾರು ತಿಂಗಳು, ವರ್ಷಗಳ ಕಾಲ ಸೋಂಕಿನ ಭೀತಿ ತಪ್ಪಿದ್ದಲ್ಲ.

ಸೋಂಕು ತಗುಲುವ ಭೀತಿಯಿಂದ ಮುಂದಿನ ದಿನಗಳಲ್ಲಿ ದೈಹಿಕ ಅಂತರ ಕಾಪಾಡುವುದು ಕಡ್ಡಾಯವಾಗಲಿದೆ.ಸಾಧ್ಯವಾದಷ್ಟು ಮುಖಾಮುಖಿಯಾಗಲು ಹಿಂಜರಿಯುವ ಜನರಿಗೆ ಸಹಜವಾಗಿ ವಾಯ್ಸ್‌ ಅಸಿಸ್ಟೆಂಟ್ ಪರ್ಯಾಯ‌ ಸಂಪರ್ಕ ಸಾಧನಗಳ ಮೊರೆ ಹೋಗಲಿದ್ದಾರೆ. ಹಾಗಾಗಿ ಈ ವ್ಯವಸ್ಥೆ ಭಾರಿ ಜನಪ್ರಿಯ ಮತ್ತು ಅನಿವಾರ್ಯ ಸಂವಹನ ಮಾಧ್ಯಮವಾಗಿ ಹೊರಹೊಮ್ಮಲಿದೆ. ಆರೋಗ್ಯ ಸೇವೆ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿ ವಾಯ್ಸ್‌ ಅಸಿಸ್ಟೆಂಟ್‌ ಬಳಕೆ ಮಹತ್ವ ಪಡೆದುಕೊಳ್ಳಲಿದೆ.

ನಿತ್ಯ ಜೀವನದೊಂದಿಗೆ ಬೆಸೆದು ಹೋಗಿರುವ ಟಿ.ವಿ. ರಿಮೋಟ್‌, ಲೈಟ್‌ ಸ್ವಿಚ್, ಮೊಬೈಲ್‌ ಫೋನ್‌, ಬಾಗಿಲು ಹ್ಯಾಂಡಲ್‌ ಮುಂತಾದವನ್ನು ಸ್ಪರ್ಶಿಸುವುದನ್ನು ವಾಯ್ಸ್‌ ಅಸಿಸ್ಟೆಂಟ್‌ ಬಳಸಿ ತಪ್ಪಿಸಬಹುದುದಾಗಿದೆ.

ಮನೆ, ಕಚೇರಿಗಳಲ್ಲೂ ಪ್ರತಿಧ್ವನಿ

ಭವಿಷ್ಯದಲ್ಲಿ ಸ್ಮಾರ್ಟ್ ಹೋಂ ಮತ್ತು ಕಚೇರಿಯ ಮತ್ತಷ್ಟು ದಿನ ಬಳಕೆ ಸಾಧನಗಳನ್ನು ವಾಯ್ಸ್‌ ಅಸಿಸ್ಟೆಂಟ್‌ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ.

ಪ್ರಸಕ್ತ ವರ್ಷದ ಅಂತ್ಯದ ವೇಳೆಗೆ 420 ಕೋಟಿ ವಾಯ್ಸ್ ಅಸಿಸ್ಟೆಂಟ್‌ ಸಾಧನ ತಂತ್ರಜ್ಞಾನ ಬಳಕೆಗೆ ಬರಲಿವೆ. ಇನ್ನೂ ನಾಲ್ಕು ವರ್ಷಗಳಲ್ಲಿ (2024ರ ವೇಳೆಗೆ) ಇದು 840 ಕೋಟಿ ತಲುಪುವ ಸಾಧ್ಯತೆಗಳಿವೆಎಂದು ಜುನಿಪರ್‌ ಸಂಶೋಧನಾ ಸಂಸ್ಥೆ ಅಂದಾಜಿಸಿದೆ.

ವ್ಯಕ್ತಿಗತ ಸಂಪರ್ಕ ತಪ್ಪಿಸಲು ಸ್ಮಾರ್ಟ್ ಲಾಕ್ಸ್‌, ಸ್ಮಾಟ್ಸ್‌ ಡೋರ್‌ ಬೆಲ್ಸ್‌,ಸ್ಮಾರ್ಟ್‌ ಸ್ಪೀಕರ್‌ಗಳು ಸೇರಿದಂತೆ ಇನ್ನೂ ಅನೇಕ ಸ್ಮಾರ್ಟ್ ಹೋಂ ಸಾಧನಗಳ ಅಭಿವೃದ್ಧಿಗೆ ಕೋವಿಡ್‌–19 ಅವಕಾಶಗಳನ್ನುತೆರೆದಿಟ್ಟಿದೆ. ಅಷ್ಟೇ ಅಲ್ಲ ವಾಯ್ಸ್‌ ಅಸಿಸ್ಟೆಂಟ್‌ ಆಧಾರವಾಗಿಟ್ಟುಕೊಂಡು ಅನೇಕ ಅಪ್ಲಿಕೇಶನ್‌ ತಂತ್ರಜ್ಞಾನಗಳು ಅಭಿವೃದ್ಧಿಯಾಗಬಹುದುಎನ್ನುತ್ತಾರೆ ಅಮೆರಿಕದ ಎಬಿಐ ಸಂಶೋಧನಾ ಸಂಸ್ಥೆಯ ಜೋನಾಥನ್‌ ಕಾಲಿನ್ಸ್‌.

ಷೇರು ಮಾರುಕಟ್ಟೆ, ಉದ್ಯಮ, ಕೈಗಾರಿಕೆ, ವಾಣಿಜ್ಯ ವಹಿವಾಟು ಕುಸಿತಕ್ಕೆ ಕಾರಣವಾದ ಕೋವಿಡ್‌–19 ಅಷ್ಟೇನೂ ಜನಪ್ರಿಯವಲ್ಲದ ತಂತ್ರಜ್ಞಾನವೊಂದರ ಬೆಳವಣಿಗೆಗೆ ಮುನ್ನುಡಿ ಬರೆಯಲಿದೆ!

(ಮೂಲ: ಎಎಫ್‌ಪಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.