ಮೊಬೈಲ್‌ಗೆ ಕರೆ ಮಾಡುವವರು ಯಾರು ಎಂದು ತಿಳಿದುಕೊಳ್ಳುವ ಉದ್ದೇಶಕ್ಕೆ ಮಾತ್ರ ಸೀಮಿತಗೊಂಡು ಅಭಿವೃದ್ಧಿಪಡಿಸಲಾಗಿದ್ದ ಟ್ರೂಕಾಲರ್ (True caller) ಆ್ಯಪ್, ಈಗ ವಂಚಕರ ಮತ್ತು ಬೇಡವಾದವರ ಕರೆ ಮತ್ತು ಎಸ್‌ಎಂಎಸ್‌ಗಳನ್ನು ನಿರ್ಬಂಧಿಸಲೂ ನೆರವಾಗುತ್ತಿದೆ. ಮೊಬೈಲ್ ಕರೆಗಳ ದಕ್ಷ ನಿರ್ವಹಣೆ ಮತ್ತು ಹಣ ಪಾವತಿ ಸೇವೆಗೂ ನೆರವಾಗುತ್ತಿದೆ. ಈ ಮೌಲ್ಯವರ್ಧಿತ ಸೇವೆಗಳ ಮೂಲಕ ಬಳಕೆದಾರರಲ್ಲಿ ಸುರಕ್ಷತೆಯ ಭಾವ ಹೆಚ್ಚಿಸುತ್ತಿದೆ.
ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಹೆಚ್ಚಿದ ಅನಾಮಧೇಯ ಕರೆಗಳನ್ನು ನಿರ್ಬಂಧಿಸಲೂ ಇದು ಹೆಚ್ಚು ಪ್ರಯೋಜನಕ್ಕೆ ಬರುತ್ತಿದೆ. ದೇಶಿ ಗ್ರಾಹಕರು ಬಳಸುತ್ತಿರುವ ಆ್ಯಪ್‌ಗಳ ಪೈಕಿ ಇದು 3ನೇ ಅತಿದೊಡ್ಡದಾಗಿದೆ. ಬೇಡವಾದ ಕರೆಗಳನ್ನು ನಿರ್ಬಂಧಿಸಲು ಇದು ಬಳಕೆದಾರರಿಗೆ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಹೆಚ್ಚು ಪ್ರಯೋಜನಕ್ಕೆ ಬರುತ್ತಿದೆ.
ಪಿಡುಗಿನ ಕಾರಣಕ್ಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ವೇತನ ವರ್ಗದವರು ಮತ್ತು ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ (ಎಸ್‌ಎಂಇ) ₹ 5 ಲಕ್ಷದವರೆಗೆ ಸಾಲ ವಿತರಿಸುವ ಸೌಲಭ್ಯವನ್ನೂ ಈ ಆ್ಯಪ್ ಈಗ ಪರಿಚಯಿಸಿದೆ. ಈ ಮೂಲಕ ಪೂರ್ಣ ಪ್ರಮಾಣದ ಹಣಕಾಸು – ತಂತ್ರಜ್ಞಾನ ಕಂಪನಿಯಾಗಿ ರೂಪಾಂತರಗೊಂಡಿದೆ. ಬಳಕೆದಾರರಿಗೆ ಸಮಗ್ರ ಸ್ವರೂಪದ ಡಿಜಿಟಲ್ ಅನುಭವ ನೀಡುತ್ತಿದೆ.
‘ಗ್ರಾಹಕರ ಫೋನ್ ಬುಕ್ ಅಪ್‌ಲೋಡ್ ಮಾಡಲಾಗುತ್ತದೆ. ಇದೊಂದು ಚೀನಾ ಮೂಲದ ಆ್ಯಪ್ ಎನ್ನುವ ಅಭಿಪ್ರಾಯಗಳು ಸಂಪೂರ್ಣ ಆಧಾರರಹಿತ’ ಎಂದು ಟ್ರೂಕಾಲರ್‌ನ ಉಪಾಧ್ಯಕ್ಷ ಕರಿ ಕೃಷ್ಣಮೂರ್ತಿ ಅವರು ಸ್ಪಷ್ಟಪಡಿಸುತ್ತಾರೆ.
‘ಬಳಕೆದಾರರಿಂದಲೇ ಇಲ್ಲಿ ದತ್ತಾಂಶ ಸಂಚಯವಾಗುತ್ತದೆ. ಕರೆಗಳನ್ನು ಅನಪೇಕ್ಷಿತ ಎಂದು ವಿಂಗಡಿಸುವ, ಹೆಸರುಗಳನ್ನು ಸರಿಪಡಿಸುವ ಮತ್ತು ಹೊಸ ಸೂಕ್ತ ಹೆಸರುಗಳನ್ನು ಗ್ರಾಹಕರೇ ಸೂಚಿಸುತ್ತಾರೆ. ಹೀಗಾಗಿ ಹೊಸ, ಹೊಸ ಕರೆಗಳು ಬಂದಾಗ ಕರೆ ಮಾಡಿದವರನ್ನು ಗುರುತಿಸುವುದು ಸುಲಭವಾಗುತ್ತಿದೆ.
‘ಪರಿಚಿತರಲ್ಲದವರಿಂದ ಬರುವ ಕರೆಗಳನ್ನು ನೀಲಿ, ಉದ್ದಿಮೆ ವಹಿವಾಟಿನ ಆದ್ಯತಾ ಕರೆಗಳು ನೇರಳೆ, ಗೊತ್ತಿರುವ ಅನಪೇಕ್ಷಿತ ಕರೆಗಳು ಕೆಂಪು ಬಣ್ಣದಲ್ಲಿ ಕಾಣುವ ಸೌಲಭ್ಯ ಇದರಲ್ಲಿ ಇದೆ. ಎಸ್‌ಎಂಎಸ್‌ಗಳನ್ನು ವೈಯಕ್ತಿಕ, ಮಹತ್ವದ, ಇತರ ಮತ್ತು ಬೇಡವಾದ ಸಂದೇಶಗಳೆಂದು ನಾಲ್ಕು ವಿಧದಲ್ಲಿ ವಿಂಗಡಿಸಲಿದೆ. ಹಣಕಾಸು ಮತ್ತು ಪಾವತಿ ವಿವರಗಳು ‘ಮಹತ್ವದ’ ಸಂದೇಶ ವಿಭಾಗದಲ್ಲಿ ಇರುತ್ತವೆ. ಇವೆಲ್ಲವು ಗ್ರಾಹಕರಿಗೆ ಹಲವು ಬಗೆಯಲ್ಲಿ ಪ್ರಯೋಜನಕ್ಕೆ ಬರುತ್ತವೆ’ ಎಂದೂ ಕೃಷ್ಣಮೂರ್ತಿ ಹೇಳುತ್ತಾರೆ.
2019ರಲ್ಲಿ ವಿಶ್ವದಾದ್ಯಂತ ವಂಚನೆ ಉದ್ದೇಶದ 850 ಕೋಟಿ ಎಸ್‌ಎಂಎಸ್ ಮತ್ತು 2,970 ಕೋಟಿ ಅನಪೇಕ್ಷಿತ ಕರೆಗಳನ್ನು ಈ ಆ್ಯಪ್ ನೆರವಿನಿಂದ ನಿರ್ಬಂಧಿಸಲಾಗಿದೆ. ಭಾರತದಲ್ಲಿ 238 ಕೋಟಿ ಬೇಡವಾದ ಕರೆಗಳನ್ನು ನಿರ್ಬಂಧಿಸಲಾಗಿದೆ. ದೇಶದಲ್ಲಿ ಪ್ರತಿಯೊಬ್ಬ ಗ್ರಾಹಕ, ತಿಂಗಳಲ್ಲಿ ಕನಿಷ್ಠ 25 ಅನಪೇಕ್ಷಿತ ಕರೆಗಳನ್ನು ಸ್ವೀಕರಿಸುತ್ತಾನೆ. ಇತ್ತೀಚಿನ ದಿನಗಳಲ್ಲಿ ಇದು ಶೇಕಡ 15ರಷ್ಟು ಹೆಚ್ಚಳಗೊಂಡಿದೆ. ಇಂತಹ ಸಂದರ್ಭದಲ್ಲಿ ಬಳಕೆದಾರರ ಸಮಯ ಉಳಿಸಲು, ಕಿರಿಕಿರಿಯಿಂದ ಮುಕ್ತವಾಗಲು ಟ್ರೂಕಾಲರ್ ನೆರವಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.