ದೇಶದಾದ್ಯಂತ ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆ ಸರ್ಕಾರಿ ಇಲಾಖೆಗಳು ಹಾಗೂ ಬಹುತೇಕ ಖಾಸಗಿ ಕಂಪನಿಗಳು ವರ್ಕ್‌ಫ್ರಮ್‌ಹೋಂ (ಮನೆಯಿಂದಲೇ ಕಾರ್ಯನಿರ್ವಹಿಸುವ) ವ್ಯವಸ್ಥೆಗೆ ಮೊರೆ ಹೋದವು. ದಿನ ಕಳೆದಂತೆ ಅಂತರ್ಜಾಲ ಬಳಕೆದಾರರ ಪ್ರಮಾಣ ಏರಿಕೆಯಾಗುತ್ತಿದ್ದು, ಇಂಟರ್ನಟ್‌ವೇಗ ಕಡಿತಗೊಂಡಿದೆ.
ಸರ್ಕಾರ, ಕಾರ್ಪೊರೇಟ್ ಸಂಸ್ಥೆಗಳು ವಿಡಿಯೊ ಕಾನ್ಫರೆನ್ಸ್ ಮೂಲಕವೇ ನಿತ್ಯ ಸಭೆಗಳನ್ನು ನಡೆಸುತ್ತಿವೆ. ರಾಜಕೀಯ ಮುಖಂಡರು, ಅಧಿಕಾರಿಗಳು ಸಲಹೆ ಸೂಚನೆಗಳನ್ನು ರವಾನಿಸಲು, ಚರ್ಚೆಗಳನ್ನು ವಿಡಿಯೊ ಮೀಟಿಂಗ್‌ಗಳ ಮೂಲಕವೇ ನಡೆಸಲಾಗುತ್ತಿದೆ. ಹೀಗಾಗಿ, ದೂರ ಸಂಪರ್ಕ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚಿದ್ದು ಬ್ರಾಡ್‌ಬ್ಯಾಂಡ್ ಹಾಗೂ ಮೊಬೈಲ್ಡೇಟಾ ಸಂಪರ್ಕಗಳ ವೇಗ ಇಳಿಕೆಯಾಗಿದೆ.
ಕಳೆದ ವಾರದಿಂದ ಶಾಲೆ ಮತ್ತು ಕಾಲೇಜುಗಳು, ಇತರೆ ತರಬೇತಿ ಕೇಂದ್ರಗಳು ಆನ್‌ಲೈನ್ ತರಗತಿಗಳನ್ನು ಆರಂಭಿಸಿವೆ. ಜೂಮ್ ರೀತಿಯ ಹಲವು ಅಪ್ಲಿಕೇಷನ್‌ಗಳನ್ನು ಬಳಸಿ ಗರಿಷ್ಠ ನೂರು ಮಂದಿ ಒಂದೇ ಬಾರಿಗೆ ಪಾಠ ಕೇಳುತ್ತಿದ್ದಾರೆ. ಇಂಥ ವರ್ಚುವಲ್ ತರಗತಿಗಳಿಗೆ ಬಳಕೆಯಾಗುತ್ತಿರುವ ಡೇಟಾ ಪ್ರಮಾಣ ಸಹ ಹೆಚ್ಚಿದೆ. ಒಂದೇ ಗಂಟೆಯಲ್ಲಿ ಇಡೀ ಒಂದು ಜಿಬಿ ಮೊಬೈಲ್ ಡೇಟಾ ಕರಗುತ್ತಿದೆ.
ಇನ್ನೂ ಮನೆಯಲ್ಲೇ ದಿನ ರಾತ್ರಿ ಕಳೆಯಬೇಕಾಗಿರುವುದರಿಂದ ಬೇಸರ ಕಳೆಯಲು, ಮನರಂಜನೆ ಕಾರ್ಯಕ್ರಮಗಳ ವೀಕ್ಷಣೆಗೆ ಒಟಿಟಿ ವೇದಿಕೆಗಳನ್ನು ನೆಚ್ಚಿಕೊಳ್ಳಲಾಗುತ್ತಿದೆ. ಸಿನಿಮಾಗಳು, ಸೀರಿಯಲ್‌ಗಳು ಇನ್ನಿತರೆ ಕಾರ್ಯಕ್ರಮಗಳ ವೀಕ್ಷಣೆಗೆ ಡೇಟಾ ಹರಿವು ಎಷ್ಟಿದ್ದರೂ ಸಾಲದಂತಾಗಿದೆ. ಮಾರ್ಚ್ 25ರ ನಂತರದಲ್ಲಿ ಇಂಟರ್ನೆಟ್ ಬಳಕೆ ದಿಢೀರ್ ಹೆಚ್ಚಳಗೊಂಡು ದೂರಸಂಪರ್ಕ ವ್ಯವಸ್ಥೆಗಳ ಮೇಲೆ ಒತ್ತಡ ಸೃಷ್ಟಿಸಿದೆ.
ಓಕ್ಲಾಸ್ ಸ್ಪೀಡ್ ಟೆಸ್ಟ್ ಗ್ಲೋಬಲ್ ಇಂಡೆಕ್ಸ್ ವರದಿ ಪ್ರಕಾರ, ಬ್ರಾಡ್ ಬ್ಯಾಂಡ್ ಸಂಪರ್ಕ ವೇಗ 39.65 ಎಂಬಿಪಿಎಸ್ ನಿಂದ ಮಾರ್ಚ್‌ನಲ್ಲಿ 35.98 ಎಂಬಿಪಿಎಸ್‌ಗೆ ಇಳಿಕೆಯಾಗಿದೆ. ಜನವರಿಯಿಂದ ಮಾರ್ಚ್ ವರೆಗೂ 5.5 ಎಂಬಿಪಿಎಸ್ ನಷ್ಟು ವೇಗ ಕಡಿತಗೊಂಡಿದೆ.
ಮೊಬೈಲ್ ಡೇಟಾ ವೇಗದಲ್ಲಿಯೂ 2020 ಫೆಬ್ರುವರಿಯಿಂದ ಮಾರ್ಚ್‌ಗೆ ಇಳಿಕೆಯಾಗಿದೆ. ವೇಗ 11.83 ಎಂಬಿಪಿಎಸ್‌ನಿಂದ 10.15 ಎಂಬಿಪಿಎಸ್‌ಗೆ ಇಳಿದಿದೆ. ಮೊಬೈಲ್ ಇಂಟರ್ನೆಟ್ ವೇಗದ ಆಧಾರದಲ್ಲಿ ಜಾಗತಿಕ ಮಟ್ಟದಲ್ಲಿ ಭಾರತ 130ನೇ ಸ್ಥಾನದಲ್ಲಿದೆ. ಹಾಗೂ ಬ್ರಾಡ್‌ಬ್ಯಾಂಡ್ ವೇಗದ ಅನುಸಾರ 70ನೇ ಸ್ಥಾನದಲ್ಲಿದೆ.
ಅಮೆಜಾನ್, ನೆಟ್‌ಫ್ಲಿಕ್ಸ್, ಡಿಸ್ನಿ+ಹಾಟ್ ಸ್ಟಾರ್ ಸೇರಿದಂತೆ ಇತರೆ ಒಟಿಟಿಗಳು ವಿಡಿಯೊ ಸ್ಟ್ರೀಮಿಂಗ್ ಗುಣಮಟ್ಟವನ್ನು ಎಚ್‌ಡಿ ಯಿಂದ ಎಸ್‌ಡಿಗೆ ತಿಂಗಳವರೆಗೂ ಈಗಾಗಲೇ ಇಳಿಕೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.