ADVERTISEMENT

ಕಾರಿನೊಳಗೆ ಸಿಲುಕಿದ ಮಕ್ಕಳು, ಪ್ರಾಣಿಗಳ ರಕ್ಷಣೆಗೆ ಅಗ್ಗದ ದರದ ಎಐ ಸೆನ್ಸರ್‌

ವಾಟರ್‌ಲೂ ವಿಶ್ವವಿದ್ಯಾಲಯದ ಸಂಶೋಧನೆ

ಪಿಟಿಐ
Published 11 ನವೆಂಬರ್ 2019, 9:40 IST
Last Updated 11 ನವೆಂಬರ್ 2019, 9:40 IST
ಉಪಕರಣದ ಪರೀಕ್ಷೆಯಲ್ಲಿ ತೊಡಗಿರುವ ಸಂಶೋಧಕರು– ಚಿತ್ರ ಕೃಪೆ: www.eurekalert.org
ಉಪಕರಣದ ಪರೀಕ್ಷೆಯಲ್ಲಿ ತೊಡಗಿರುವ ಸಂಶೋಧಕರು– ಚಿತ್ರ ಕೃಪೆ: www.eurekalert.org   

ಟೊರೊಂಟೊ:ಆಟ ಆಡುತ್ತ ಕಾರಿನೊಳಗೆ ಸೇರಿಕೊಳ್ಳುವ ಮಕ್ಕಳು ಬಾಗಿಲು ತೆರೆದು ಹೊರ ಬರಲಾರದೆ ಸಂಕಷ್ಟಕ್ಕೆ ಸಿಲುಕುವ ಸನ್ನಿವೇಶಗಳಿಗೆ ವಿಜ್ಞಾನಿಗಳು ಸುಲಭದ ಪರಿಹಾರವೊಂದನ್ನು ಮುಂದಿಟ್ಟಿದ್ದಾರೆ. ಕಡಿಮೆ ಬೆಲೆಯ ಕೃತಕ ಬುದ್ಧಿಮತ್ತೆ(ಎಐ) ಒಳಗೊಂಡ ಸೆನ್ಸರ್‌ ಬಳಕೆಯು ಪ್ರೀತಿಯ ಮಕ್ಕಳು ಮತ್ತು ಮುದ್ದಿನ ಸಾಕು ಪ್ರಾಣಿಗಳ ಜೀವ ರಕ್ಷಕವಾಗಲಿದೆ.

ಒಂಟಿಯಾಗಿ ಸಿಲುಕುವ ಮಕ್ಕಳು ಅಥವಾ ಪ್ರಾಣಿಗಳ ಬಗ್ಗೆ ಎಚ್ಚರಿಕೆ ರವಾನಿಸುವ ಮೂಲಕ ಎಐ ಸೆನ್ಸರ್‌ಗಳು ರಕ್ಷಕನಾಗಿ ಕಾರ್ಯನಿರ್ವಹಿಸಲಿದೆ. ರಡಾರ್‌ ತಂತ್ರಜ್ಞಾನವನ್ನೂ ಒಳಗೊಂಡಿರುವ ಈ ಹೊಸ ಸಾಧನವು ಶೇ 100ರಷ್ಟು ನಿಖರವಾಗಿ ಪತ್ತೆಕಾರ್ಯ ಮಾಡುತ್ತದೆ ಎಂದು ಕೆನಡಾದ ವಾಟರ್‌ಲೂ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿಕೊಂಡಿದ್ದಾರೆ.

ಕೇವಲ 3 ಸೆಂ.ಮೀ. ಅಗಲದ ಪುಟ್ಟ ಸಾಧನವು ವಾಹನದ ಹಿಂಬದಿ ವೀಕ್ಷಣೆ ಕನ್ನಡಿಯೊಂದಿಗೆ ಸೇರಿಸಲು ಅಥವಾ ವಾಹನದ ಮೇಲ್ಭಾಗದಲ್ಲಿ ಅಳವಡಿಸಲು ಅನುಕೂಲವಾಗುವಂತೆ ರೂಪಿಸಲಾಗಿದೆ. ವಾಹನದ ಒಳಗಿರುವ ಮನುಷ್ಯ, ಪ್ರಾಣಿಗಳ ಅಥವಾ ವಸ್ತುಗಳ ಇರುವಿಕೆ ಸೂಚನೆಗಳನ್ನು ರಡಾರ್‌ ಸಂಕೇತಗಳ ಮೂಲಕ ರವಾನಿಸಲಾಗುತ್ತದೆ.

ADVERTISEMENT

'ವಾಹನದೊಳಗೆ ಸಿಲುಕಿಕೊಳ್ಳುವ ಸನ್ನಿವೇಶಗಳು ಜಾಗತಿಕವಾಗಿ ಕಾಣಸಿಗುವ ಸಮಸ್ಯೆಯಾಗಿದ್ದು, ಅಭಿವೃದ್ಧಿಪಡಿಸಲಾಗಿರುವ ಹೊಸ ಸಾಧನವು ಎಲ್ಲ ವಾಹನಗಳಲ್ಲಿ ಅಗತ್ಯ ಉಪಕರಣವಾಗಿ ಅಳವಡಿಸಿಕೊಳ್ಳಬಹುದಾಗಿದೆ. ರಡಾರ್‌ ಸಂಕೇತಗಳನ್ನು ಎಐ ತಂತ್ರಜ್ಞಾನವು ವಿಶ್ಲೇಷಿಸುತ್ತದೆ' ಎಂದು ವಿಶ್ವವಿದ್ಯಾಲಯದ ಪ್ರೊಫೆಸರ್‌ ಜಾರ್ಜ್‌ ಶೇಕರ್‌ ತಿಳಿಸಿದ್ದಾರೆ.

ಅಭಿವೃದ್ಧಿ ಪಡಿಸಲಾಗುತ್ತಿರುವ ವಯರ್‌ಲೆಸ್‌ ಮತ್ತು ತಟ್ಟೆ ಆಕಾರದ ಸೆನ್ಸರ್‌ಗಳು 2020ರ ಕೊನೆಗೆ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆ ಇರುವುದಾಗಿ ಸಂಶೋಧಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಏನೆಲ್ಲ ಗ್ರಹಿಸುತ್ತೆ...

ವಾಹನದ ಒಳಗಿರುವ ವ್ಯಕ್ತಿ, ವಸ್ತು ಅಥವಾ ಪ್ರಾಣಿಗಳ ಸಂಖ್ಯೆಯನ್ನು ಸಾಧನವು ಗ್ರಹಿಸುತ್ತದೆ. ಸೀಟಿನ ಹಿಂಭಾಗದಲ್ಲಿ ಅವಿತಿದ್ದರೂ ರಡಾರ್‌ ಸಂಕೇತಗಳು ಇರುವ ಸ್ಥಳವನ್ನು ಪತ್ತೆ ಮಾಡುತ್ತದೆ. ಯಾರೇ ಒಬ್ಬರು ವಾಹನದೊಳಗೆ ಇದ್ದಾಗಲೇ ಬಾಗಿಲು ಲಾಕ್‌ ಆಗದಂತೆ ಎಚ್ಚರಿಕೆ ರವಾನಿಸುತ್ತದೆ. ಸದ್ದು ಮಾಡುವ ಮೂಲಕ ಸುತ್ತಲಿನ ಜನರಿಗೆ ಸಮಸ್ಯೆ ಇರುವುದನ್ನು ಗಮನಕ್ಕೆ ತರುತ್ತದೆ.

ವಾಹನದ ಬ್ಯಾಟರಿ ಶಕ್ತಿ ಬಳಸಿಕೊಂಡು ಈ ಸಾಧನ ಕಾರ್ಯನಿರ್ವಹಿಸುತ್ತದೆ. ಉಸಿರಾಟ ಕ್ರಿಯೆಯನ್ನು ಗಮನಿಸಿ ಸಜೀವ ಮತ್ತು ನಿರ್ಜೀವ ವಸ್ತುಗಳ ವ್ಯತ್ಯಾಸ ಗುರುತಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.