ADVERTISEMENT

ಕೊರೊನಾ ಅಲ್ಲ, ಗೂಗಲ್‌ ಇಂಡಿಯಾದಲ್ಲಿ ಈ ವರ್ಷ ಅತಿಹೆಚ್ಚು ಸರ್ಚ್‌ ಆಗಿದ್ದೇನು?

ರಾಯಿಟರ್ಸ್
Published 9 ಡಿಸೆಂಬರ್ 2020, 13:38 IST
Last Updated 9 ಡಿಸೆಂಬರ್ 2020, 13:38 IST
ಗೂಗಲ್ (ಎಎಫ್‌ಪಿ ಚಿತ್ರ)
ಗೂಗಲ್ (ಎಎಫ್‌ಪಿ ಚಿತ್ರ)   

ನವದೆಹಲಿ: ಈ ವರ್ಷ (2020) ದೇಶದ ಜನ ಗೂಗಲ್‌ನಲ್ಲಿ ಅತಿಹೆಚ್ಚು ಹುಡುಕಾಡಿದ ವಿಷಯ ಏನಿರಬಹುದು? ಕೊರೊನಾ ಬಗ್ಗೆಯೇ? ಅಲ್ಲ!

‘ಗೂಗಲ್ ಇಂಡಿಯಾ’ವು 2020ರ ‘ವರ್ಷದ ಹುಡುಕಾಟ (Year In Search 2020)’ದ ಬಗ್ಗೆ ಮಾಹಿತಿ ನೀಡಿದ್ದು, ಅತಿಹೆಚ್ಚು ಹುಡುಕಾಟ ನಡೆದ ವಿಷಯ ‘ಐಪಿಎಲ್‌ (ಇಂಡಿಯನ್ ಪ್ರೀಮಿಯರ್ ಲೀಗ್)’ ಎಂಬುದು ಬಹಿರಂಗವಾಗಿದೆ.

ಕಳೆದ ವರ್ಷ ‘ಐಸಿಸಿ ಕ್ರಿಕೆಟ್ ವರ್ಲ್ಡ್‌ ಕಪ್’ ಟಾಪ್ ಟ್ರೆಂಡಿಂಗ್ ಆಗಿತ್ತು.

ADVERTISEMENT

ಈ ವರ್ಷ ಕ್ರೀಡಾ ವಿಭಾಗದಲ್ಲಿ ಅತಿಹೆಚ್ಚು ಸರ್ಚ್‌ ಮಾಡಲಾದ ವಿಷಯವೂ ಐಪಿಎಲ್‌ ಆಗಿದೆ. ಒಟ್ಟಾರೆ ಅತಿಹೆಚ್ಚು ಸರ್ಚ್ ಆಗಿರುವ ವಿಷಯಗಳ ಸಾಲಿನಲ್ಲಿ ‘ಕೊರೊನಾ ವೈರಸ್’ ಎರಡನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಅಮೆರಿಕ ಚುನಾವಣೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಬಿಹಾರ ಚುನಾವಣೆ ಹಾಗೂ ದೆಹಲಿ ಚುನಾವಣೆ ವಿಷಯಗಳಿವೆ.

ಕೋವಿಡ್–19 ಕಾರಣದಿಂದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಈ ವರ್ಷ ಯುಎಇಯಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರ ವರೆಗೂ ನಡೆಸಲಾಗಿತ್ತು.

ಬೇರೆ ಏನೇನು ಸರ್ಚ್ ಆಗಿವೆ?: ನಿರ್ಭಯಾ ಪ್ರಕರಣ, ಲಾಕ್‌ಡೌನ್, ಭಾರತ–ಚೀನಾ ಚಕಮಕಿಗಳು, ರಾಮ ಮಂದಿರ ವಿಷಯಗಳು ಭಾರತದಲ್ಲಿ ಅತಿಹೆಚ್ಚು ಹುಡುಕಾಡಿದ ಅಗ್ರ 10ರಲ್ಲಿ ಸೇರಿವೆ. ಯುಇಎಫ್‌ಎ ಚಾಂಪಿಯನ್ ಲೀಗ್, ಇಂಗ್ಲಿಷ್ ಪ್ರೀಮಿಯರ್ ಲೀಗ್, ಫ್ರೆಂಚ್ ಓಪನ್ ಟೆನ್ನಿಸ್ ಅತಿಹೆಚ್ಚು ಹುಡುಕಾಟವಾದ ಕ್ರೀಡಾ ವಿಷಯಗಳಾಗಿವೆ.

ವ್ಯಕ್ತಿಗಳು ಯಾರ್‍ಯಾರು?: ಅತಿಹೆಚ್ಚು ಹುಡುಕಾಟ ನಡೆದ ವ್ಯಕ್ತಿಗಳ ಯಾದಿಯಲ್ಲಿ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಜೋ ಬೈಡನ್, ಪತ್ರಪರ್ತ ಅರ್ನಬ್ ಗೋಸ್ವಾಮಿ ಮುಂಚೂಣಿಯಲ್ಲಿದ್ದಾರೆ.

ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್, ಖ್ಯಾತ ನಟ ಅಮಿತಾಭ್ ಬಚ್ಚನ್ ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ. ಕಂಗನಾ ರನೌತ್, ರಿಯಾ ಚಕ್ರವರ್ತಿ ಹಾಗೂ ಅಂಕಿತಾ ಲೋಖಂಡೆಯೂ ಪಟ್ಟಿಯಲ್ಲಿದ್ದಾರೆ.

ಸಿನಿಮಾ ಯಾವುದು?: ಸುಶಾಂತ್ ಸಿಂಗ್ ರಜಪೂತ್ ನಟನೆಯ ‘ದಿಲ್ ಬೆಚಾರ’ ಸಿನಿಮಾ ಅತಿಹೆಚ್ಚು ಸರ್ಚ್ ಆಗಿದೆ. ಟಿವಿ/ವೆಬ್ ಸೀರೀಸ್‌ ವಿಭಾಗದಲ್ಲಿ ಸ್ಪ್ಯಾನಿಶ್ ಕ್ರೈಂ ಡ್ರಾಮಾ ‘ಮನಿ ಹೀಸ್ಟ್’ ಅಗ್ರ ಸ್ಥಾನದಲ್ಲಿದೆ.

‘ಪನೀರ್ ಮಾಡೋದ್ಹೇಗೆ?’: ‘ಹೌ ಟು’ ವಿಭಾಗದಲ್ಲಿ ಪನೀರ್ ಮಾಡೋದು ಹೇಗೆ (ಹೌ ಟು ಮೇಕ್ ಪನೀರ್) ಮೊದಲ ಸ್ಥಾನದಲ್ಲಿದೆ. ರೋಗನಿರೋಧಕ ಶಕ್ತಿ ಹೆಚ್ಚಿಸುವುದು ಹೇಗೆ (ಹೌ ಟು ಇನ್‌ಕ್ರೀಸ್ ಇಮ್ಯೂನಿಟಿ) ಎರಡನೇ ಸ್ಥಾನದಲ್ಲಿದೆ. ‘ಹೌ ಟು ಮೇಕ್ ದಿಲ್ಗೊನಾ ಕಾಫಿ’, ‘ಹೌ ಟು ಲಿಂಕ್ ಪಾನ್ ಕಾರ್ಡ್ ವಿದ್ ಆಧಾರದ ಕಾರ್ಡ್‘, ‘ಹೌ ಟು ಮೇಕ್ ಸ್ಯಾನಿಟೈಸರ್ ಎಟ್ ಹೋಮ್’ ನಂತರದ ಸ್ಥಾನಗಳಲ್ಲಿವೆ.

‘ಕೋವಿಡ್–19 ಎಂದರೇನು’, ‘ಪ್ಲಾಸ್ಮಾ ಥೆರಪಿ ಎಂದರೇನು’, ‘ಸಿಎಎ ಎಂದರೇನು’ ಎಂಬ ಬಗ್ಗೆಯೂ ಅತಿಹೆಚ್ಚು ಹುಡುಕಾಟ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.