ADVERTISEMENT

ಖಾಲಿ ಕ್ರೀಡಾಂಗಣದಲ್ಲಿ ರೋಬೊಗಳ ರಾಜ್ಯಭಾರ!

ಜಪಾನ್‌ ಬೇಸ್‌ಬಾಲ್‌ ಕ್ರೀಡೆಯಲ್ಲಿ ನೂತನ ಪ್ರಯೋಗ

ಪ್ರಜಾವಾಣಿ ವಿಶೇಷ
Published 28 ಜುಲೈ 2020, 20:00 IST
Last Updated 28 ಜುಲೈ 2020, 20:00 IST
ಸ್ಪಾಟ್‌ ಹೆಸರಿನ ರೋಬೊ
ಸ್ಪಾಟ್‌ ಹೆಸರಿನ ರೋಬೊ   

ಅತ್ತಿಂದಿತ್ತ ಪುಟಪುಟನೇ ನೆಗೆದಾಡುವ ‘ಸ್ಪಾಟ್‌‘ ಮತ್ತು ‘ಪೆಪ್ಪರ್‌‘ ಅವರಿಗೆ ಎಂದೂ ದಣಿವಾಗುವುದಿಲ್ಲ. ಇವರು ಗಾಯಕರೂ ಹೌದು, ನೃತ್ಯವನ್ನೂ ಮಾಡುತ್ತಾರೆ. ಪ್ರೇಕ್ಷಕರಿಲ್ಲದ ಖಾಲಿ ಕ್ರೀಡಾಂಗಣದಲ್ಲಿ ಇವರದ್ದೇ ದರಬಾರು.

ಹೌದು; ಸ್ಪಾಟ್ ಮತ್ತು ಪೆಪ್ಪರ್ ಎಂದರೆ ರೋಬೊಗಳು. ಜಪಾನಿನ ಬೇಸ್‌ಬಾಲ್‌ ತಂಡವೊಂದು ಪ್ರೇಕ್ಷಕರ ಸ್ಥಾನ ತುಂಬಲು ಮಾಡಿಕೊಂಡ ನೂತನ ಪ್ರಯೋಗವಿದು. ಕೊರೊನಾ ವೈರಾಣುವಿನ‌ ಉಪಟಳದಿಂದ ವಿಶ್ವವೇ ನಲುಗಿದೆ. ಸ್ಥಬ್ಧಗೊಂಡಿದ್ದ ಕ್ರೀಡಾ ಚಟುವಟಿಕೆಗಳು ಈಗ ನಿಧಾನವಾಗಿ ಗರಿಬಿಚ್ಚುತ್ತಿವೆ. ಸೋಂಕು ಹರಡುವುದನ್ನು ತಪ್ಪಿಸಲು ಬಹುತೇಕ ದೇಶಗಳು ಖಾಲಿ ಅಂಗಣಗಳಲ್ಲಿ ಕ್ರೀಡೆಗಳನ್ನು ನಡೆಸಲು ಅನುಮತಿ ನೀಡಿವೆ. ಜಪಾನಿನಲ್ಲಿ ಇತ್ತೀಚೆಗೆ ವೃತ್ತಿಪರ ಬೇಸ್‌ಬಾಲ್‌ ಕ್ರೀಡೆಗೆ ಸಮ್ಮತಿ ನೀಡಿದ್ದು, ಕಡಿಮೆ ಸಂಖ್ಯೆಯ ಪ್ರೇಕ್ಷಕರಿಗೆ ಅನುಮತಿ ನೀಡಿತ್ತು.

ರೋಬೊಗಳನ್ನು ಪ್ರೇಕ್ಷಕರನ್ನಾಗಿ ಮತ್ತು ಚೀಯರ್‌ ಲೀಡರ್ಸ್‌ ಆಗಿ ಬಳಸಿಕೊಂಡಿದ್ದು ಅಲ್ಲಿಯ ಫುಕುವೊಕಾ ಸಾಫ್ಟ್‌ಬ್ಯಾಂಕ್‌ ಹಾಕ್ಸ್‌ ಎಂಬ ತಂಡ. ನಿಪ್ಪೋ ಬೇಸ್‌ಬಾಲ್‌ ಲೀಗ್‌ನಲ್ಲಿಇಂತಹ 20 ರೋಬೊಗಳನ್ನು ಆ ತಂಡ ಬಳಸಿಕೊಂಡಿತು. ರಾಕೆಟೆನ್‌ ಈಗಲ್ಸ್‌ ತಂಡದ ಎದುರು ನಡೆದ ಪಂದ್ಯವೊಂದರಲ್ಲಿ ರೋಬೋಟ್‌ಗಳ ಹುರಿದುಂಬಿಸುವಿಕೆಯಿಂದಹಾಕ್ಸ್‌ ತಂಡ ಗೆದ್ದಿತು. ಇಡೀ ಗ್ಯಾಲರಿಯನ್ನೇ ರೋಬೊಗಳಿಂದ ತುಂಬಿಸುವ ಸಾಹಸಕ್ಕಂತೂ ಸಂಘಟಕರು‌ ಮುಂದಾಗಿಲ್ಲ.

ADVERTISEMENT

ಜಪಾನ್‌ನಲ್ಲಿ ಬೇಸ್‌ಬಾಲ್‌ ಹಾಗೂ ಫುಟ್‌ಬಾಲ್‌ ಪಂದ್ಯಗಳನ್ನು ವೀಕ್ಷಿಸಲು 5,000 ಪ್ರೇಕ್ಷಕರಿಗೆ ಅವಕಾಶ ಮಾಡಿಕೊಡಲಾಗಿದೆ. ಆದರೆ ಶಿಳ್ಳೆ ಹೊಡೆಯುವುದು ಹಾಗೂ ಗಟ್ಟಿ ಧ್ವನಿಯಲ್ಲಿ ಕೂಗುವುದರ ಮೇಲೆ ನಿರ್ಬಂಧ ಹೇರಲಾಗಿದೆ. ಜಪಾನ್‌ನಲ್ಲಿ ಬೇಸ್‌ಬಾಲ್‌ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದು. ಲಕ್ಷಾಂತರ ಜನ ಇದರ ಅಭಿಮಾನಿಗಳು. ಜನಪ್ರಿಯತೆಯಲ್ಲಿ ಅಮೆರಿಕಾದ ಮೇಜರ್‌ ಬೇಸ್‌ಬಾಲ್‌ ಲೀಗ್‌ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನ ಜಪಾನ್‌ನದ್ದು ಎಂಬುದು ವಿಶೇಷ.

ಬೇಸ್‌ಬಾಲ್‌ ಲೀಗ್‌ನಲ್ಲಿ ರೋಬೊಗಳನ್ನು ಬಳಸಿಕೊಂಡ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೋಬೊಗಳ ಪ್ರದರ್ಶನವನ್ನು ಕೆಲವರು ಅತ್ಯಂತ ಮನಮೋಹಕ ಎಂದು ಬಣ್ಣಿಸಿದರೆ, ಇನ್ನೂ ಕೆಲವರು ಸಂಕಟಪಡುತ್ತಿರುವ ಕಾಲ್ಪನಿಕ ಸಮಾಜಕ್ಕೆ (ಡೈಸ್ಟೋಪಿಯಾ) ಇದು ಸಾಕ್ಷಿ ಎಂದು ಟೀಕಿಸಿದ್ದಾರೆ.

ದಕ್ಷಿಣ ಕೊರಿಯಾದ ಕೆಬಿಒ‌ ಬೇಸ್‌ಬಾಲ್‌ ಲೀಗ್‌ನಲ್ಲಿ ಪ್ರೇಕ್ಷಕರ ಸ್ಥಾನದಲ್ಲಿ ರಟ್ಟಿನ ಕಟೌಟ್‌ಗಳನ್ನು ಬಳಸುವ ಪ್ರಯತ್ನಗಳೂ ನಡೆದಿವೆ. ಸೆಪ್ಟೆಂಬರ್‌ನಲ್ಲಿ ಯುಎಇಯಲ್ಲಿ ನಡೆಸಲು ಉದ್ದೇಶಿಸಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಯಾವ ಪ್ರಯೋಗ ನಡೆಯಲಿದೆಯೆಂದು ಕಾದು ನೋಡಬೇಕಷ್ಟೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.