ADVERTISEMENT

ರೋಬೊ ಸ್ವಂತ ಚಿಂತನೆಯ ಸೋಜಿಗ

ರವಿಚಂದ್ರ ಎಂ.
Published 27 ಅಕ್ಟೋಬರ್ 2018, 19:32 IST
Last Updated 27 ಅಕ್ಟೋಬರ್ 2018, 19:32 IST
   

ಎಂಬತ್ತರ ದಶಕದವರೆಗೂ ಭಾರತೀಯರು ಅವಿಭಕ್ತ ಕುಟುಂಬ ವ್ಯವಸ್ಥೆ ಕಂಡಿದ್ದರು. ತೊಂಬತ್ತರ ದಶಕದ ನಂತರ ಮುಕ್ತ ಆರ್ಥಿಕ ವ್ಯವಸ್ಥೆಗೆ ತೆರೆದುಕೊಂಡಂತೆ ನ್ಯೂಕ್ಲಿಯಸ್ ಫ್ಯಾಮಿಲಿಗೆ ಒಗ್ಗಿಕೊಂಡಿದ್ದು ಈಗ ಹಳೆಯ ಕಥೆ. ಇವುಗಳ ಮಧ್ಯೆ ‘ನನ್ನ ಮಕ್ಕಳು, ನಿನ್ನ ಮಕ್ಕಳು, ನಮ್ಮ ಮಕ್ಕಳ ಜೊತೆ ಆಡ್ತಾ ಇದ್ದಾರೆ’ ಎಂಬ ವಿಷ್ಣುವರ್ಧನರ ‘ಮಕ್ಕಳ ಸೈನ್ಯ’ ಸಿನಿಮಾದ ಡೈಲಾಗ್‍ನಂತೆ, ಸೆಕೆಂಡ್‌ ಇನ್ನಿಂಗ್ಸ್ ಆರಂಭಿಸಿದ ಸಂಸಾರಗಳೂ ಸಾಕಷ್ಟು ಬಾಳಿ ಬದುಕಿವೆ. ಈಗ ‘ನಾವಿಬ್ಬರು ನಮಗೊಬ್ಬರು’ ಎಂಬ ಕುಟುಂಬಗಳ ಕಾಲ.

ಆ ಮಕ್ಕಳ ಒಡನಾಡಿ ಒಂದೋ ‘ಪೆಟ್’ ಎಂಬ ಸಾಕುಪ್ರಾಣಿಗಳು ಅಥವಾ ‘ಸ್ಮಾರ್ಟ್‌ಫೋನ್’ ಎಂಬ ಮಾಯಾ ಶಾಲೆಯಲ್ಲಿರುವ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ , ವಾಟ್ಸ್‌ಆ್ಯಪ್ ಎಂಬ ಸ್ನೇಹಿತರು. ಈ ಸೆಂಟೆನಿಯಲ್‍ನಲ್ಲಿ (ಡಿಜಿಟಲ್ ಫೋನ್‍ನೊಂದಿಗೆ) ಜನಿಸಿದ ಮಕ್ಕಳು ದಾರಿಹೋಕರ ಜೊತೆ ಯಾವುದೋ ಅಜ್ಞಾತ ಸ್ಥಳದ ವಿಳಾಸ ಕೇಳುವ ಗೋಜಿಗೂ ಹೋಗುವುದಿಲ್ಲ. ಏಕೆಂದರೆ ಅವರ ಕೈಹಿಡಿದು ನಡೆಸಲು ಗೂಗಲ್ ಆಂಟಿ ಮತ್ತು ಸಿರಿ ಆಂಟಿ ಸದಾ ಸಿದ್ಧರಿರುತ್ತಾರೆ!

ಬಿಲ್‌ಗೇಟ್ಸ್ ಹೇಳಿರುವ ಮಾತೊಂದು ಅಂತರ್ಜಾಲದಲ್ಲಿ ಬಹಳ ವರ್ಷಗಳಿಂದ ಚಾಲ್ತಿಯಲ್ಲಿದೆ. ಅದೇನೆಂದರೆ ‘ನನ್ನ ಕಂಪನಿಯ ಬಹಳ ಸೋಮಾರಿ ಉದ್ಯೋಗಿಯ ಸಲಹೆ ಪಡೆದಾಗ ಮಾತ್ರ ಕ್ಷಣಾರ್ಧದಲ್ಲಿ ಕಾರ್ಯ ಮುಗಿಸಬಲ್ಲ ಆವಿಷ್ಕಾರಗಳು ಹುಟ್ಟಿಕೊಳ್ಳುತ್ತವೆ’. ಈ ಮಾತು ಬಿಲ್‌ಗೇಟ್ಸ್ ನಿಜವಾಗಿ ಹೇಳಿರುವುದೋ, ಅಲ್ಲವೋ ಎಂಬ ಪರಾಮರ್ಶೆಗಿಂತ ನಮ್ಮ ಜನತೆ ತಂತ್ರಜ್ಞಾನದಿಂದ ಮತ್ತು ತಂತ್ರಜ್ಞರಿಂದ ಬಯಸುತ್ತಿರುವುದು ಇದನ್ನೇ ಅನ್ನುವುದು ಸತ್ಯ ತಾನೇ?

ADVERTISEMENT

ಮೊದಲು ಕಂಪ್ಯೂಟರ್ ಬಳಸಿ ಅಂತರ್ಜಾಲವನ್ನು ಶೋಧಿಸುವುದಕ್ಕಿಂತ ಅಂಗೈಯಲ್ಲಿರುವ ಸ್ಮಾರ್ಟ್‍ಫೋನ್‌ ಬಳಕೆಗೆ ಹಾತೊರೆದ ನಾವು, ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದೇವೆ. ಆ್ಯಪ್‌ಗಳನ್ನು ನಮ್ಮ ಫೋನ್‌ಗೆ ಅಳವಡಿಸುವುದಕ್ಕೂ ಸೋಮಾರಿತನ ತೋರಿದ ಪರಿಣಾಮವೇ ‘ಬೋಟ್ಸ್’ ಎಂಬ ಯಂತ್ರಮಾನವರು ನಮ್ಮ, ನಿಮ್ಮ ನಡುವೆ ಬದುಕು ರೂಢಿಸಿಕೊಳ್ಳತೊಡಗಿದ್ದಾರೆ.

ಸೂಕ್ಷ್ಮವಾಗಿ ಹೇಳಬೇಕೆಂದರೆ ಆ್ಯಪ್‍ನಿಂದ ನಮಗೆ ಬೇಕಾದ ಮಾಹಿತಿ ಪಡೆಯಲು ಕೈಬೆರಳಿಗೆ ಕೆಲಸ ಕೊಡಬೇಕು. ಅದರ ಬದಲು ‘ಗೂಗಲ್, ಭಾರತದ ಪ್ರಧಾನಿ ಯಾರು? ಅಂತಲೋ, ‘ಸಿರಿ, ಭಾರತದ ರಾಜಧಾನಿ ಯಾವುದು? ಅಂತಲೋ, ಸ್ನೇಹಿತರ ಜೊತೆ ಸಂಭಾಷಣೆ ಮಾಡಿದ ರೀತಿ, ಮಾತಿನಲ್ಲೇ ಆದೇಶ ನೀಡಿದರೆ ಥಟ್ಟನೆ ಉತ್ತರ ಕೊಡುವ ತಂತ್ರಾಂಶವೇ ಡಿಜಿಟಲ್ ಅಸಿಸ್ಟೆಂಟ್. ಅದೇ ರೀತಿ, ಶೈಕ್ಷಣಿಕ ಸಂಸ್ಥೆ, ಬ್ಯಾಂಕ್‌ಗಳ ಜಾಲತಾಣಕ್ಕೆ ಭೇಟಿ ಕೊಟ್ಟರೆ, ಮಾಹಿತಿ ನೀಡಲು ಚಾಟ್-ಬೋಟ್ಸ್ ಎಂಬ ಯಂತ್ರಮಾನವರು ಸ್ವಾಗತಿಸುತ್ತಾರೆ. ಈಗಾಗಲೇ, ಅನೇಕ ಸಂಸ್ಥೆಗಳ ಕಾಲ್‍ಸೆಂಟರ್ ಉದ್ಯೋಗಿಗಳ ಸ್ಥಳವನ್ನು ಈ ಚಾಟ್‍ಬೋಟ್‍ಗಳು ಅಲಂಕರಿಸುತ್ತಿವೆ.

ಈ ‘ಬೋಟ್’ ಅಥವಾ ‘ರೋಬೊ’ ಎಂಬ ತಂತ್ರಾಂಶ ಮತ್ತು ಯಂತ್ರಮಾನವ ಸಾಕಾರಗೊಳ್ಳಲು ಕಾರಣವಾಗಿರುವ ವಿಜ್ಞಾನ ಕ್ಷೇತ್ರವೇ ‘ಕೃತಕ ಬುದ್ಧಿಮತ್ತೆ’. ಇದರ ಮುಖ್ಯ ಧ್ಯೇಯವೆಂದರೆ ಯಂತ್ರಗಳು ಮಾನವನಂತೆ ಅಥವಾ ಮಾನವನ ಬುದ್ಧಿಶಕ್ತಿಗೆ ಮೀರಿ ಯೋಚಿಸುವಂತೆ ಮಾಡುವುದೇ ಆಗಿದೆ.

1950ರಲ್ಲೇ A.I ಕುರಿತು ವಿಜ್ಞಾನಿಗಳು ಸಂಶೋಧನೆ ಪ್ರಾರಂಭಿಸಿದರಾದರೂ, ಅನೇಕ ಏಳುಬೀಳುಗಳನ್ನು ಕಂಡ ಈ ಕ್ಷೇತ್ರ ಕೆಲವು ಕಾಲಘಟ್ಟದಲ್ಲಿ ವಸಂತಕಾಲದ ರೀತಿ ವಿಜೃಂಭಿಸಿ ಇನ್ನು ಕೆಲವು ಕಾಲ ಚಳಿಗಾಲದ ರೀತಿ ನಿದ್ರಿಸಿತು. ಇತ್ತೀಚೆಗೆ ‘ಎ.ಐ ಸುವರ್ಣಯುಗ’ಕ್ಕೆ ಕಾಲಿಟ್ಟಿದೆ ಎಂಬುದು ಅನೇಕ ತಂತ್ರಜ್ಞರ, ವಿಶ್ಲೇಷಕರ ನಂಬಿಕೆ.

ಕೃತಕ ಬುದ್ಧಿಮತ್ತೆ (ಎ.ಐ) ನಿನ್ನೆ, ಇಂದು ಮತ್ತು ನಾಳೆ ಹೇಗಿತ್ತು? ಹೇಗಿದೆ? ಹೇಗಿರಬಹುದು? ಎಂಬುದರ ಅವಲೋಕನ ಮಾಡುವ ಪ್ರಯತ್ನ ಇಲ್ಲಿದೆ.

ಅಂದು: ಕಂಪ್ಯೂಟರ್ ಮೆದುಳಿನ ಜನನ ಮತ್ತು ವಿಕಾಸ ಅಲೆನ್ ಟ್ಯೂರಿಂಗ್ ಎಂಬ ಗಣಿತಜ್ಞ 1950ರಲ್ಲಿ ಪರಿಚಿಯಿಸಿದ ಪರೀಕ್ಷೆ ‘ಟ್ಯೂರಿಂಗ್ ಟೆಸ್ಟ್‌’. ಇದು ಕಂಪ್ಯೂಟರ್‌ಗೂ ಮಾನವನ ರೀತಿ ಯೋಚಿಸುವ ಮೆದುಳಿದೆ ಎಂದು ಸಾಬೀತು ಮಾಡಲು ನಡೆಸಿದ ಮೊಟ್ಟಮೊದಲ ಪ್ರಯೋಗ. ಎಮತ್ತು ಬಿ ಎಂಬ ಎರಡು ಕಂಪ್ಯೂಟರ್‌ಗಳು ಪರೀಕ್ಷೆಗೆ ಕುಳಿತಿವೆ ಎಂದು ಊಹಿಸಿಕೊಳ್ಳಿ. ಅ ಎಂಬ ಮಾನವ ಮೇಷ್ಟ್ರು, ಅನೇಕ ಪ್ರಶ್ನೆಗಳ ಮೂಲಕ ಅವರಿಬ್ಬರನ್ನು ಪರೀಕ್ಷಿಸುವನು. ಎ ಮತ್ತು ಬಿ ಎರಡರಲ್ಲಿ ಒಂದು ಮಾನವನ ಸಹಾಯ ಪಡೆದು ಉತ್ತರವನ್ನು ಟೈಪಿಸಿದರೆ, ಮತ್ತೊಂದು ತಾನೆ ಸ್ವಯಂ ಉತ್ತರ ನೀಡುತ್ತದೆ. ಅನೇಕ ಪ್ರಶ್ನೆಗಳ ಸುರಿಮಳೆಗೈದ ಬಳಿಕ ಅ ಮೇಷ್ಟ್ರಿಗೆ, ಎ ಮತ್ತು ಬಿ ಇಬ್ಬರಲ್ಲಿ ಯಾರು ಯಂತ್ರ, ಯಾರು ಮಾನವ? ಎಂಬುದನ್ನು ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲವಾದರೆ, ಯಂತ್ರ ಪರೀಕ್ಷೆಯಲ್ಲಿ ಪಾಸ್! ಏಕೆಂದರೆ ಅದು ಮಾನವನ ಸರಿಸಮಾನವಾಗಿ ಯೋಚಿಸುವ ಶಕ್ತಿ ಹೊಂದಿದೆ ಎಂಬುದು ಸಾಬೀತಾದಂತೆ. ಇದರ ಮುಂದುವರಿದ ಭಾಗವೇ ಐಬಿಎಂ ಸಂಸ್ಥೆ ಹುಟ್ಟುಹಾಕಿದ ಡೀಪ್-ಬ್ಲೂ ಮತ್ತು ವಾಟ್ಸನ್ ಎಂಬ ಇಬ್ಬರು ಯಂತ್ರ ಮಾನವರು.

ಡೀಪ್–ಬ್ಲೂ ಎಂಬ ಐಬಿಎಂ ಕಂಪನಿಯ ಯಂತ್ರಮಾನವ 1997ರಲ್ಲಿ ನಡೆದ ಚೆಸ್ ಪಂದ್ಯದಲ್ಲಿ ಅಂದಿನ ಚೆಸ್ ವಿಶ್ವ ಚಾಂಪಿಯನ್ ಗ್ಯಾರಿ ಕ್ಯಾಸ್‍ಪ್ರೋವ್ ಅವರನ್ನು ಸೋಲಿಸಿ ಮಾನವನ ಮಣಿಸುವ ಯಂತ್ರದ ಜನನವನ್ನು ಜಗಕ್ಕೆ ಖಾತರಿ ಮಾಡಿತು. ಆದರೆ, ಇದು A.Iನ ಬೆಳವಣಿಗೆಯಲ್ಲಿ ಒಂದು ಸಣ್ಣ ಹೆಜ್ಜೆ ಮಾತ್ರ ಎಂಬುದು ತಂತ್ರಜ್ಞರ ಅಭಿಪ್ರಾಯವಾಗಿತ್ತು. ಏಕೆಂದರೆ ಮಾನವನ ಮೆದುಳಿನ ಎಲ್ಲಾ ಕಾರ್ಯಾಚರಣೆಗಳನ್ನು ಸಾಧಿಸಿ ತೋರಿಸುವ ಸಾಮರ್ಥ್ಯ ಡೀಪ್-ಬ್ಲೂಗೆ ಇರಲಿಲ್ಲ.

ಮುಂದೆ ಇದೇ ಐಬಿಎಂ ಕಂಪನಿಯು ವಾಟ್ಸನ್ ಎಂಬ ಮತ್ತೊಬ್ಬ ಯಂತ್ರಮಾನವನಿಗೆ ಜನ್ಮ ನೀಡಿತು. ಈ ವಾಟ್ಸನ್, ಅಮೆರಿಕದ ಟಿ.ವಿಯ ರಸಪ್ರಶ್ನೆ ಕಾರ್ಯಕ್ರಮ ‘ಜಿಯೋಪಾರ್ಡಿ’ಯಲ್ಲಿ 74 ಬಾರಿ ಚಾಂಪಿಯನ್ ಆಗಿದ್ದ ಕೆನ್ ಜೆನಿಂಗ್ಸ್ ಹಾಗೂ ಬ್ರಾಡ್ ರಟರ್ ಎಂಬ ಮತ್ತೊಬ್ಬ ಚಾಂಪಿಯನ್ ಅನ್ನು 2011ರಲ್ಲಿ ನಡೆದ ಪಂದ್ಯಾವಳಿಯಲ್ಲಿ ಸೋಲಿಸಿತು. ಆ ಮೂಲಕ ಮೆಷಿನ್ ಸಹ ವಿಕಾಸ ಹೊಂದಬಲ್ಲದು ಎಂದು ಸಾಬೀತು ಮಾಡಿದ್ದು ಈಗ ಇತಿಹಾಸ.

ಕೃತಕ ಬುದ್ಧಿಮತ್ತೆ ಹೇಗೆ ಸಾಗಿದೆ?

ಐಬಿಎಂನ ಡೀಪ್- ಬ್ಲೂ ಮತ್ತು ವಾಟ್ಸನ್ ಎಂಬ ಯಂತ್ರಮಾನವರು, ರೋಬೊ ಮಾನವನ ರೀತಿ ಯೋಚಿಸಬಲ್ಲದು ಎಂಬುದಕ್ಕೆ ಪುರಾವೆ ಒದಗಿಸಿದರೂ ಅವು ಕೇವಲ ನಿರ್ದಿಷ್ಟ ಚಿಂತನಾಕ್ರಮದ ಕುರುಹುಗಳಾಗಿದ್ದವು. ಆದರೆ, ಗೂಗಲ್‌ನ ಡೀಪ್‍ಮೈಂಡ್‌ನ ಭಾಗವಾಗಿ ರೂಪಗೊಂಡ ರೋಬೊ ಚೀನಾದ ಬಹಳ ಪ್ರಸಿದ್ಧವಾದ ಗೋ ಎಂಬ (ಚೆಸ್‍ಗಿಂತಲೂ ಸಂಕೀರ್ಣವಾದ) ಆಟದಲ್ಲಿ 2017ರ ವಿಶ್ವಚಾಂಪಿಯನ್ ಕೀ ಜೇ ಅವರನ್ನು ಮಣಿಸಿ ಮಾನವನ ರೀತಿಯೇ ಪ್ರಕೃತಿದತ್ತವಾಗಿ ಕಲಿಯುವ ಕ್ರಿಯೆ ತನಗೂ ಸಿದ್ಧಿಸಿದೆ ಎಂದು ಸಾರಿ ಹೇಳಿತು. ಇಂದು ಯುವಪೀಳಿಗೆಯ ರೋಬೊಗಳು, ಪುಟ್ಟ ಮಗು ಕಂಪ್ಯೂಟರ್ ಗೇಮ್ ಹೇಗೆ ಕರಗತ ಮಾಡಿಕೊಳ್ಳುತ್ತದೆಯೋ, ಅದೇ ರೀತಿ ಶೂನ್ಯದಿಂದ-ದಿಗಂತದತ್ತ ಪ್ರಾರಂಭಿಸಿ ಮೇಧಾವಿಯಾಗುವವರೆಗೆ ಸ್ವಂತ ಪ್ರಯತ್ನದ ಮೂಲಕ ಕಲಿಯಬಲ್ಲ ತಾಕತ್ತು ಪ್ರದರ್ಶಿಸುತ್ತಿವೆ.

ಗೂಗಲ್, ಎ.ಐ ಕ್ಷೇತ್ರದಲ್ಲಿ ಮತ್ತಷ್ಟು ಅವಿಷ್ಕಾರಗಳಿಗೆ ತೆರೆದುಕೊಂಡ ಫಲವೇ ಡೀಪ್- ಡ್ರೀಮ್ ಎಂಬ ಕೃತಕ-ಮೆದುಳು ಇಂದು ನಮ್ಮ ಮುಂದಿದೆ. ಹೇಗೆ ಆಕಾಶದಲ್ಲಿ ಮೂಡುವ ಚಿತ್ರವಿಚಿತ್ರ ಮೋಡದ ದೃಶ್ಯಗಳಿಂದ ಅರ್ಥಪೂರ್ಣ ದೃಶ್ಯದ ಕಲ್ಪನೆಯನ್ನು ನಮ್ಮ ಮಾನವ ಮೆದುಳು ಮಾಡಬಲ್ಲದೋ ಅದೇ ರೀತಿ ಡೀಪ್- ಡ್ರೀಮ್ ಲಕ್ಷಾಂತರ ದೃಶ್ಯಗಳನ್ನು ತನ್ನ ಮೆದುಳಿನಲ್ಲಿ ಇರಿಸಿಕೊಂಡು, ಅದರ ಮೂಲಕ ನಾವು ಊಹಿಸಲೂ ಸಾಧ್ಯವಿಲ್ಲದಷ್ಟು ವಿವಿಧ ರೀತಿಯ ದೃಶ್ಯಾವಳಿಯನ್ನು ನಮ್ಮ ಕಣ್ಣಮುಂದೆ ಕನಸಿನ ರೀತಿ ಮೂಡಿಸಬಲ್ಲದು.

ಲಿಂಗ ತಾರತಮ್ಯದ ವಿವಾದ!

ವಾಟ್ಸನ್ ಎಂಬ ಐಬಿಎಂ ನಿರ್ಮಿತ ರೋಬೊ ಈ ಹೆಸರು ಪಡೆದಿದ್ದು ಐಬಿಎಂನ ಸ್ಥಾಪಕ ಅಧ್ಯಕ್ಷ ಥಾಮಸ್ ವಾಟ್ಸನ್ ಅವರ ನೆನಪಿಗಾಗಿ. ಆದರೆ ಅನೇಕ ಮಹಿಳಾವಾದಿಗಳು, ಪ್ರಪಂಚ ಗೆದ್ದ ಯಂತ್ರಮಾನವನಿಗೆ ಪುರುಷನ ಹೆಸರೇಕೆ? ಎಂಬ ತಗಾದೆ ತಗೆದಿರುವುದು ಈಗಾಗಲೇ ಸುದ್ದಿಯಾಗಿದೆ. ಅಲ್ಲದೆ ಜಪಾನ್‍ನಲ್ಲಿ ಜನಿಸಿರುವ ಪರಿಚಾರಕಿ ರೋಬೊಗಳಿಗೆ ಹೆಣ್ಣು ರೂಪವೇಕೇ? ಎಂಬ ಪ್ರಶ್ನೆ ಸಹ ಎದ್ದಿದೆ. ಇದರಿಂದ ರೋಬೊ ಜಗತ್ತಿಗೂ ಲಿಂಗ- ತಾರತಮ್ಯದ ವಾದ, ವಿವಾದವನ್ನು ಮಾನವ ಹಬ್ಬಿಸುತ್ತಿರುವುದು ನಿಜ.

ರೋಬೊಗಳ ಅಂತ್ಯಸಂಸ್ಕಾರ

ಈಗಾಗಲೇ ಜಪಾನ್‍ನ ಮಕ್ಕಳು, ಕೆಟ್ಟು-ಕೂತ ರೋಬೊ ನಾಯಿ ಮರಿಗೆ, ಅಂತ್ಯಸಂಸ್ಕಾರ ಮಾಡುವುದನ್ನು ರೂಢಿಸಿಕೊಂಡಿದ್ದಾರೆ. ಇದು ಭಾರತಕ್ಕೂ ಹಬ್ಬಿ ನಮ್ಮ ಮಕ್ಕಳೂ ರೋಬೊ ಅಂತ್ಯಸಂಸ್ಕಾರಕ್ಕೆ ರುದ್ರಭೂಮಿ ಬೇಕು ಎಂದು ಸರ್ಕಾರಕ್ಕೆ ಬೇಡಿಕೆ ಸಲ್ಲಿಸಬಹುದು. ನಗರ ಪಾಲಿಕೆಗಳು ರುದ್ರಭೂಮಿ ವಿವಾದ ತಣ್ಣಗಾಗುವ ಮೊದಲೇ ರೋಬೊ ರುದ್ರಭೂಮಿ ವಿವಾದ ಭುಗಿಲೆದ್ದದ್ದನ್ನು ಕಂಡು ಸ್ತಂಭಿಭೂತರಾದರೆ ಆಶ್ಚರ್ಯವೇನಿಲ್ಲ.

ಪೊಲಿಟಿಕಲ್ ರೋಬೊ

ರಾಜಕಾರಣಿಗಳು, ಯಾವ ಕಂಪನಿ ರೋಬೊಟ್ ಹೆಚ್ಚು ಬಹುಪರಾಕ್ ಹಾಕಬಲ್ಲದು, ಯಾವುದು ಭಾಷಣವನ್ನು ಅಚ್ಚುಕಟ್ಟಾಗಿ ಬರೆದು ಕೊಡಬಹುದು, ಯಾವ ರೋಬೊಟ್ ಜಾತಿ- ಧರ್ಮಗಳ ನಡುವೆ ಕಂದಕ ನಿರ್ಮಿಸುವುದರಲ್ಲಿ ನಿಷ್ಣಾತ, ಯಾವ ರೋಬೊಟ್ ಹಣ, ಹೆಂಡವನ್ನು ಚುನಾವಣಾ ಆಯೋಗದ ಕಣ್ತಪಿಸಿ ಹಂಚಬಲ್ಲದು, ಯಾವ ರೋಬೊಟ್ ಸಾಮಾಜಿಕ ಜಾಲತಾಣದಲ್ಲಿ ಗದ್ದಲ ಎಬ್ಬಿಸಬಲ್ಲದೂ ಎಂಬ ಅಂಕಿಅಂಶ ಆಧರಿಸಿ ರೋಬೊಟ್‌ ಖರೀದಿ ಹಗರಣಕ್ಕೆ ಕೈ ಹಾಕಬಹುದು!

ಜ್ಯೋತಿಷ ರೋಬೊ ಗುರುಗಳು

ದಿನ ಭವಿಷ್ಯ, ರಾತ್ರಿ ಭವಿಷ್ಯ, ಮಧ್ಯಾಹ್ನ ಭವಿಷ್ಯ, ಮಧ್ಯರಾತ್ರಿ ಭವಿಷ್ಯ, ರಸ್ತೆ ಸಂಚಾರ ಭವಿಷ್ಯ, ಕಚೇರಿ ಭವಿಷ್ಯ ಮುಂತಾದ ಭವಿಷ್ಯವಾಣಿ ನುಡಿಯುವ ಶ್ರೀ ಶ್ರೀ ಶ್ರೀ ಯಂತ್ರ ಗುರೂಜಿಗಳ ಇ-ಯಜ್ಞ, ಇ-ಹೋಮ, ಇ-ಹವನಗಳು ಟಿ.ವಿ, ಮೊಬೈಲ್ ಪರದೆಗಳನ್ನು ಆವರಿಸಬಹುದು.

ರಾಜಕಾರಣ ಮಾಡುವ ರೋಬೊ ತಯಾರಿಸುವದು ನಮ್ಮ ಕೈಯಲ್ಲಿ ಸಾಧ್ಯವಿಲ್ಲ ಎಂದು ಎಂ.ಐ.ಟಿ ವಿಜ್ಞಾನಿಗಳು ಮತ್ತು ಅನೇಕ ಐ.ಟಿ ದೈತ್ಯ ಸಂಸ್ಥೆಗಳು ಕೈ ಚೆಲ್ಲಿ ಕುಳಿತಿವೆ ಎಂಬ ಬ್ರೇಕಿಂಗ್ ನ್ಯೂಸ್ ಸುದ್ದಿವಾಹಿನಿಗಳ ಪರದೆ ಮೇಲೆ ಮೂಡಿದ ಕೂಡಲೇ, ಭಾರತೀಯ ರಾಜಕಾರಣಿಗಳು, ತಮ್ಮ ನೌಕರಿ ಹೋಗುವ ಭಯವಿಲ್ಲ ಎಂದು ನಿಟ್ಟುಸಿರು ಬಿಡಬಹುದು. ಪಕ್ಷಾತೀತವಾಗಿ ವಿಜಯೋತ್ಸವ ಆಚರಿಸಿದ ಸುದ್ದಿ ರಾರಾಜಿಸಬಹುದು.ಭವಿಷ್ಯವನ್ನು ಕಂಡವರು ಯಾರು? ನಿಮ್ಮ ಕನಸಿಗೆ- ಊಹೆಗೆ ತಕ್ಕಂತೆ ರೋಬೊಟ್ ಜೊತೆಗಿನ ಜುಗಲ್‌ಬಂದಿಯನ್ನು ನೀವೇ ಊಹಿಸಿಕೊಳ್ಳಿ ಎಂಬುದು ನಮ್ಮ ಉಚಿತ ಉಪದೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.