ADVERTISEMENT

ಎಚ್ಚರ, ನಿಮ್ಮ ಫೋನ್ ನಿಮ್ಮ ಮಾತು ಕೇಳಿಸಿಕೊಳ್ಳುತ್ತದೆ!

ಅವಿನಾಶ್ ಬಿ.
Published 16 ಏಪ್ರಿಲ್ 2025, 0:34 IST
Last Updated 16 ಏಪ್ರಿಲ್ 2025, 0:34 IST
ಓದದೆಯೇ ಎಲ್ಲದಕ್ಕೂ ಪ್ರವೇಶಾನುಮತಿ ನೀಡಬಾರದು. (ಫೈಲ್ ಚಿತ್ರ).
ಓದದೆಯೇ ಎಲ್ಲದಕ್ಕೂ ಪ್ರವೇಶಾನುಮತಿ ನೀಡಬಾರದು. (ಫೈಲ್ ಚಿತ್ರ).   

ಅವಿನಾಶ್ ಬಿ.

ಮದುವೆ, ಪುಸ್ತಕ ಬಿಡುಗಡೆ ಅಥವಾ ಇನ್ಯಾವುದೋ ಕಾರ್ಯಕ್ರಮಕ್ಕೆ ಹೋಗಿರುತ್ತೇವೆ. ಅಲ್ಲಿ ಕೆಲವರನ್ನು ಭೇಟಿಯಾಗಿ ಮಾತನಾಡಿಸಿಯೂ ಆಯಿತು. ಮನೆಗೆ ಬಂದ ಮೇಲೆ ಫೇಸ್‌ಬುಕ್ ಜಾಲಾಡುವಾಗ ಅಚ್ಚರಿಯಾಗುತ್ತದೆ ನಮಗೆ! ಅರೆ, ಈಗಷ್ಟೇ ಮಾತನಾಡಿದ ವ್ಯಕ್ತಿಯ ಪ್ರೊಫೈಲ್ ನಮ್ಮ ಫೀಡ್‌ನಲ್ಲಿ 'ಫ್ರೆಂಡ್ ಸಜೆಶನ್ (ಸ್ನೇಹಹಸ್ತದ ಸಲಹೆ)' ಅಂತ ಕಾಣಿಸಿಕೊಳ್ಳುತ್ತದೆ.

ಇನ್ನೊಂದು ಸಂದರ್ಭ - ಹೆಚ್ಚಿನವರು ಗಮನಿಸಿರಬಹುದು. ಸ್ನೇಹಿತರು ಮಾತನಾಡುವಾಗ, ಇಂಥಾ ಬೈಕ್ ತಗೊಳ್ಳಬೇಕು, ಚೆನ್ನಾಗಿದೆ ಅನಿಸುತ್ತದೆ ಅಂತೆಲ್ಲ ಚರ್ಚೆ ಮಾಡಿರುತ್ತೇವೆ. ಮನೆಗೆ ಹೋಗಿ ಫೇಸ್‌ಬುಕ್ ಅಥವಾ ಬೇರಾವುದೇ ಅಂತರ್ಜಾಲ ತಾಣಗಳನ್ನು ಜಾಲಾಡುವ ಸಂದರ್ಭದಲ್ಲಿ, ನಾವು ಆಗಷ್ಟೇ ಮಾತನಾಡಿದ ಬ್ರ್ಯಾಂಡ್ ಇಲ್ಲವೇ ಅನ್ಯ ಬ್ರ್ಯಾಂಡ್‌ನ ಬೈಕ್‌ಗಳ ಜಾಹೀರಾತುಗಳೇ ನಮಗೆ ಕಾಣಿಸತೊಡಗುತ್ತವೆ.

ADVERTISEMENT

ಅಂತರ್ಜಾಲದಲ್ಲಿ ಪ್ರೈವೆಸಿ, ಖಾಸಗಿತನ, ಗೋಪ್ಯತೆ ಮುಂತಾದವುಗಳ ಉಲ್ಲಂಘನೆ ಅಂತ ಢಾಳಾಗಿ ಚರ್ಚೆಯಾಗುತ್ತಿರುವುದು ಈ ವಿಷಯದಲ್ಲೇ. ನಿಮಗೆ ಗೊತ್ತೇ? ವಾಸ್ತವವಾಗಿ ಇದು ಖಾಸಗಿತನದ 'ಉಲ್ಲಂಘನೆ' ಅಲ್ಲ; ನಾವಾಗಿ ನಮ್ಮ ಖಾಸಗಿ ಮಾಹಿತಿಯನ್ನು ತಿಳಿದುಕೊಳ್ಳದೆಯೇ ಈ ತಾಣಗಳಿಗೆ ಧಾರೆ ಎರೆದುಕೊಟ್ಟಿರುತ್ತೇವೆ. ಮತ್ತು ಇಂಥ ಕೆಲವು ಮಾಹಿತಿಗಳೇ ಸೈಬರ್ ವಂಚಕರ ಕೈಗೆ ಹೋಗಿ, ಲಕ್ಷಾಂತರ ಹಣ ಕಳೆದುಕೊಳ್ಳುವುದು, ಡಿಜಿಟಲ್ ಅರೆಸ್ಟ್ ಆಗುವುದು... ಹೀಗೆಲ್ಲ ನಡೆಯುವುದು ಕೂಡ.

ಗೊತ್ತಿದ್ದೂ ಮಾಡುವ ತಪ್ಪು, ಏನದು?
ಸ್ಮಾರ್ಟ್‌ಫೋನ್‌ಗಳು ಯಾವಾಗ ನಮ್ಮ ಕೈಗೆ ಬಂತೋ, ಆ ಯಂತ್ರದ ಕೈಗೆ ನಮ್ಮ ಬುದ್ಧಿಯನ್ನೆಲ್ಲ ಕೊಟ್ಟಿರುತ್ತೇವೆ. ಹಾಗಾಗಕೂಡದು, ನಾವೂ ಸ್ಮಾರ್ಟ್ ಆಗಿಯೇ ಅದನ್ನು ಬಳಸಬೇಕಾಗುತ್ತದೆ ಎಂಬ ಅರಿವು ಅತ್ಯವಶ್ಯ. ಇದಕ್ಕೆಲ್ಲ ಕಾರಣ ನಮ್ಮದೇ ಉದಾಸೀನ ಅಥವಾ ನಿರ್ಲಕ್ಷ್ಯ. ಏನೇ ಬೇಕಿದ್ದರೂ ಮಾಡಿಕೊಡುವ, ಸಹಾಯ ಮಾಡುವ ಅಪ್ಲಿಕೇಶನ್‌ಗಳು (ಆ್ಯಪ್) ಸಾಕಷ್ಟು ಲಭ್ಯ ಇರುತ್ತವೆ. ನಮಗೆ ಬೇಕಾದುದನ್ನು ನಾವು ಡೌನ್‌ಲೋಡ್ ಮಾಡಿಕೊಂಡು ಅಳವಡಿಸಿಕೊಂಡಿರುತ್ತೇವೆ. ಆ್ಯಪ್ ಕುರಿತಾದ ವಿವರಣೆಯಲ್ಲಿ, ‘ಷರತ್ತುಗಳು ಮತ್ತು ನಿಯಮಗಳು’ ಎಂಬ ವಿಭಾಗದಲ್ಲಿ ಎಲ್ಲವನ್ನೂ ವಿವರಿಸಿರುತ್ತಾರೆ. ಆದರೆ ಜನಸಾಮಾನ್ಯರಿಗೆ ಅರ್ಥವಾಗದ ಕಾನೂನಿನ ಭಾಷೆಯಲ್ಲಿ ಅದು ಇರುತ್ತದೆ. ಹಾಗಾಗಿ ನಾವು ಅದನ್ನು ಓದದೇ ಇದ್ದರೂ ‘ಓದಿದ್ದೇನೆ ಮತ್ತು ಸಮ್ಮತಿಸುತ್ತೇನೆ’ ಅಂತ ಒಂದು ಚೆಕ್ ಬಾಕ್ಸ್‌ಗೆ ಟಿಕ್ (✔) ಗುರುತು ಹಾಕಿ, ಇನ್‌ಸ್ಟಾಲ್ ಮಾಡಿಕೊಂಡಿರುತ್ತೇವೆ.

ಮೊದಲ ಬಾರಿಗೆ ಎಡವಿದ್ದು ಇಲ್ಲೇ. ನಂತರ ಆ್ಯಪ್ ಇನ್‌ಸ್ಟಾಲ್ ಮಾಡುವಾಗಲೂ, ನಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಸಾಧನದ ಕೆಲವೊಂದು ವೈಶಿಷ್ಟ್ಯಗಳು ಮತ್ತು ಹಾರ್ಡ್‌ವೇರ್‌ಗೆ ಅವು ನಮ್ಮಿಂದ ಪ್ರವೇಶಾನುಮತಿ (ಆ್ಯಕ್ಸೆಸ್) ಕೋರುತ್ತವೆ. ಇಲ್ಲಾದರೂ ನಾವು ಒಂದಿಷ್ಟು ಗಮನ ಹರಿಸಿದ್ದಿದ್ದರೆ ಸಾಕಾಗುತ್ತಿತ್ತು. ವಿಭಿನ್ನ ಆ್ಯಪ್‌ಗಳು ಅವುಗಳನ್ನು ಅಳವಡಿಸುವ ಹಂತದಲ್ಲಿ ಅಗತ್ಯವಿದ್ದರೂ, ಅಗತ್ಯವಿಲ್ಲದಿದ್ದರೂ ನಮ್ಮ ಕ್ಯಾಮೆರಾ, ಸಂಪರ್ಕಗಳು (ಕಾಂಟ್ಯಾಕ್ಟ್ಸ್), ಮೈಕ್ರೋಫೋನ್, ಲೊಕೇಶನ್ ಮುಂತಾದವುಗಳಿಗೆ ಪ್ರವೇಶಾನುಮತಿ ಕೋರುತ್ತವೆ. ಅಷ್ಟೇ ಅಲ್ಲ, ಬೇರೆ ಜಾಲತಾಣಗಳ ಜಾಲಾಟದ ಚರಿತ್ರೆಯನ್ನು ಕೂಡ ತಿಳಿದುಕೊಳ್ಳಬಹುದೇ ಅಂತ ನಮ್ಮಲ್ಲಿ ಕೇಳಿರುತ್ತವೆ. ವಿಶೇಷವಾಗಿ ಐಒಎಸ್ (ಐಫೋನ್) ಆ್ಯಪ್‌ಗಳು ಇದನ್ನು ನಿರ್ದಿಷ್ಟವಾಗಿ (Permission to track) ಕೇಳುತ್ತವೆ ಮತ್ತು ಬೇಡ ಎಂದಾದರೆ 'No' ಅಂತ ಅನುಮತಿ ನಿರಾಕರಿಸುವ ಆಯ್ಕೆಯನ್ನೂ ನೀಡುತ್ತದೆ. ಆದರೆ ನಾವು ಧಾವಂತದಲ್ಲಿ ಎಲ್ಲದಕ್ಕೂ 'Yes, Yes' ಅಂತ ಹಸಿರುನಿಶಾನೆ ಕೊಡುತ್ತಾ ಹೋಗುತ್ತೇವೆ. ಅಲ್ಲಿಗೆ ನಮ್ಮ ಖಾಸಗಿತನದ ವಿಚಾರಗಳನ್ನು ತಿಳಿದುಕೊಳ್ಳಲು ಈ ಆ್ಯಪ್‌ಗಳಿಗೆ ನಾವು ಅನುಮತಿ ಕೊಟ್ಟಂತಾಯಿತು.

ಇದರಿಂದ ಏನಾಗುತ್ತದೆ?
ಮುಖ್ಯವಾಗಿ ನಾವು ನಮ್ಮ ಕಾಂಟ್ಯಾಕ್ಟ್ಸ್ ಆ್ಯಪ್‌ಗೆ ಪ್ರವೇಶಾನುಮತಿ ಕೊಟ್ಟರೆ, ನಿಮ್ಮ ಆಪ್ತರು, ಸ್ನೇಹಿತರು, ಸಹೋದ್ಯೋಗಿಗಳು ಯಾರು ಎಂಬುದು ನಿರ್ದಿಷ್ಟ ಆ್ಯಪ್‌ಗಳಿಗೆ ಅವರ ಮೊಬೈಲ್ ಸಂಖ್ಯೆ ಸಮೇತ ತಿಳಿದುಬಿಡುತ್ತದೆ. ಇದೇ ಕಾರಣದಿಂದಾಗಿಯೇ, ಟ್ರೂಕಾಲರ್‌ನಂಥ ಕಾಲರ್ ಐಡಿ ಆ್ಯಪ್‌ಗಳನ್ನು ಅಳವಡಿಸಿದರೆ, ನಮ್ಮಲ್ಲಿ ನಂಬರ್ ಸೇವ್ ಆಗಿಲ್ಲದಿದ್ದರೂ, ಯಾರಿಂದ ಕರೆ ಬರುತ್ತಿದೆ ಎಂಬುದನ್ನು ತಿಳಿಯುವುದು ಸಾಧ್ಯ.

ಅಂತೆಯೇ, ಮೈಕ್ರೋಫೋನ್‌ಗೆ ಪ್ರವೇಶಾನುಮತಿ ಕೊಟ್ಟರೆ, ನಾವು ಮಾತನಾಡಿದ್ದೆಲ್ಲವನ್ನೂ ಆ ಆ್ಯಪ್ 'ಕೇಳಿಸಿ'ಕೊಳ್ಳುತ್ತದೆ. ಹೊಸ ಬೈಕ್ ಬಗ್ಗೆ ಚರ್ಚೆ ನಡೆಸಿದ ಬಳಿಕ, ಅಂತರ್ಜಾಲದಲ್ಲಿ ಅದರದ್ದೇ ಜಾಹೀರಾತು ಕಾಣಿಸಿಕೊಳ್ಳಲು ಇದುವೇ ಕಾರಣ.

ಜಿಪಿಎಸ್ ವ್ಯವಸ್ಥೆ ಮೂಲಕ ಲೊಕೇಶನ್ (ಸ್ಥಳ) ತಿಳಿಯುವ ಅನುಮತಿ ವಾಸ್ತವವಾಗಿ ಬೇಕಾಗಿರುವುದು ಮುಖ್ಯವಾಗಿ ನಕ್ಷೆ (ಮ್ಯಾಪ್) ಬಳಸುವಾಗ ಅಥವಾ ವಾಟ್ಸ್ಆ್ಯಪ್‌ನಲ್ಲಿ ಲೊಕೇಶನ್ ಹಂಚಿಕೊಳ್ಳುವಾಗ. ಈ ಆ್ಯಪ್‌ಗಳಿಗೆ ತೀರಾ ಅಗತ್ಯವಿದ್ದಾಗ ಮಾತ್ರವೇ ಅನುಮತಿ ಕೊಡುವ ವ್ಯವಸ್ಥೆ ಇರುತ್ತದೆ. ಉಳಿದಂತೆ ಜಿಪಿಎಸ್ ಆಫ್ ಮಾಡಿಟ್ಟರೆ ಸುರಕ್ಷಿತ. ಇಲ್ಲವಾದರೆ, ಫೇಸ್‌ಬುಕ್‌ಗೆ ಲಾಗಿನ್ ಆಗಿರುತ್ತಾ, ನಾವು ಯಾವುದೇ ಕಾರ್ಯಕ್ರಮಗಳಿಗೆ ಹೋದಾಗ, ಅಲ್ಲಿ ಭೇಟಿಯಾದವರ ಲೊಕೇಶನ್ ಆನ್ ಇದ್ದರೆ, ಇಬ್ಬರೂ ಸಂಧಿಸಿದ ವಿಷಯ ಫೇಸ್‌ಬುಕ್‌ಗೆ, ಗೂಗಲ್‌ಗೆ ತಿಳಿಯುತ್ತದೆ. ಅವರು ನಿಮ್ಮ ಸ್ನೇಹಿತರ ಪಟ್ಟಿಯಲ್ಲಿ ಇಲ್ಲದಿದ್ದರೆ, 'People You may Know' ಎಂಬ ಪಟ್ಟಿ ಫೀಡ್‌ನಲ್ಲಿ ಪದೇ ಪದೇ ಕಾಣಿಸತೊಡಗುತ್ತದೆ.

ಇನ್ನು, ಕ್ಯಾಮೆರಾ ಪ್ರವೇಶಾನುಮತಿ ಬಗ್ಗೆ ಹೇಳುವುದಾದರೆ, ಒಂದು ಬ್ರೌಸರ್ ಅಥವಾ ಮ್ಯೂಸಿಕ್ ಆ್ಯಪ್‌ಗೆ ಕ್ಯಾಮೆರಾ ಅನುಮತಿ ಯಾಕೆ ಬೇಕು ಅಂತ ನಮಗೆ ನಾವೇ ಪ್ರಶ್ನಿಸಿಕೊಳ್ಳಬೇಕು. ಇದು ಸ್ವಯಂಜಾಗೃತಿ. ಕ್ಯಾಮೆರಾ ಅಥವಾ ಗ್ಯಾಲರಿಗೆ, ಸ್ಟೋರೇಜ್‌ಗೆ ಪ್ರವೇಶಾನುಮತಿ ಕೊಟ್ಟರೆ, ನಾವು ತೆಗೆದ ಚಿತ್ರಗಳು, ಅದರ ಬಯೋಮೆಟ್ರಿಕ್ ವಿವರಗಳು ಎಲ್ಲವೂ ಆ ಆ್ಯಪ್‌ನ ವಶವಾಗುತ್ತದೆ.

ಸಾಮಾಜಿಕ ಜಾಲತಾಣದಲ್ಲಿ ಯಾವುದಾದರೂ ವಿಷಯಕ್ಕೆ 'ಲೈಕ್' ಒತ್ತಿದರೆ, ಆ ಪ್ರೊಫೈಲ್ ಅಥವಾ ಪೇಜ್‌ನಿಂದ ಹಾಗೂ ಅದೇ ವಿಷಯಕ್ಕೆ ಸಂಬಂಧಿಸಿದ ವಿಚಾರಗಳೇ ನಮ್ಮ ಫೀಡ್‌ನಲ್ಲಿ ಹೆಚ್ಚು ಹೆಚ್ಚು ಕಾಣಿಸಿಕೊಳ್ಳಲಾರಂಭಿಸುತ್ತದೆ. ಇದಕ್ಕೆ ಬೇರೆ ಜಾಲತಾಣಗಳ ಚಟುವಟಿಕೆಗಳನ್ನು ತಿಳಿದುಕೊಳ್ಳಲು ನಾವು ಆ ಆ್ಯಪ್‌ಗೆ ನೀಡಿರುವ ಪ್ರವೇಶಾನುಮತಿಯೇ ಕಾರಣ. ಪ್ರವೇಶಾನುಮತಿ ಪಡೆದ ಆ್ಯಪ್‌ಗಳು ಅಲ್ಲೆಲ್ಲ ನಮ್ಮ ಚಟುವಟಿಕೆಗಳನ್ನು 'ಗಮನಿಸುತ್ತಾ' ಇರುತ್ತದೆ. ಇವೆಲ್ಲವೂ ಆಧುನಿಕ ತಂತ್ರಜ್ಞಾನದ ಫಲಗಳು.

ಹೀಗೆ, ಪ್ರಮುಖ ವಿಷಯವನ್ನೇ ನೋಡದೆ 'ಒಕೆ' ಒತ್ತುತ್ತಾ ಸಾಗುತ್ತೇವೆ ನಾವೆಂಬುದನ್ನು ಮನಗಂಡಿರುವ ಸೈಬರ್ ವಂಚಕರು, ತಮ್ಮದೇ ಆ್ಯಪ್‌ಗಳನ್ನು ಯಾವುದೋ ಲಿಂಕ್ ಮೂಲಕ, ಇನ್ಯಾವುದೋ ಆಮಿಷವೊಡ್ಡಿ ನಮ್ಮ ಫೋನ್‌ಗೆ ಸಂದೇಶಗಳಲ್ಲಿ, ಇಮೇಲ್‌ನಲ್ಲಿ, ವಾಟ್ಸ್ಆ್ಯಪ್ ಮುಂತಾದವುಗಳ ಮುಖಾಂತರ ಕಳುಹಿಸಿ, ಎಲ್ಲದಕ್ಕೂ ಪ್ರವೇಶಾನುಮತಿ ಕೇಳುತ್ತಾ, ನಮ್ಮನ್ನು ಸುಲಭವಾಗಿ ಡಿಜಿಟಲ್ ಅರೆಸ್ಟ್ ಮಾಡಲು, ನಮ್ಮ ಬ್ಯಾಂಕ್ ಖಾತೆ ಖಾಲಿ ಮಾಡಲು ವೇದಿಕೆ ಸಿದ್ಧಮಾಡಿಕೊಂಡಿರುತ್ತಾರೆ. ಅಥವಾ ನಮ್ಮ ಫೋನ್‌ನಲ್ಲಿ ನಾವು ಸಂಗ್ರಹಿಸಿಟ್ಟುಕೊಂಡಿರುವ ಅಮೂಲ್ಯವಾದ ನಮ್ಮ ಖಾಸಗಿ ಮಾಹಿತಿಯನ್ನು ಕದ್ದು, ವಂಚನೆಯ ಜಾಲಕ್ಕೆ ಉತ್ತಮ ಅಡಿಪಾಯ ಹಾಕಿಕೊಂಡಿರುತ್ತಾರೆ.

ಏನು ಮಾಡಬೇಕು?
ಆಂಡ್ರಾಯ್ಡ್ ಇರಲಿ, ಐಒಎಸ್ ಇರಲಿ, ಅಥವಾ ನಮ್ಮ ಕಂಪ್ಯೂಟರೇ ಇರಲಿ; ಯಾವುದೇ ಆ್ಯಪ್‌ಗೆ ನೀಡಿರುವ ಅನುಮತಿಗಳನ್ನು ಬದಲಾಯಿಸುವ ಆಯ್ಕೆ ಇರುತ್ತದೆ. ಅದನ್ನು ಒಂದಿಷ್ಟು ಸಮಯಾವಕಾಶ ಮಾಡಿಕೊಂಡು ಆಯಾ ಸಾಧನಗಳ ಸೆಟ್ಟಿಂಗ್ಸ್‌ನಲ್ಲಿರುವ ‘ಪ್ರೈವೆಸಿ & ಸೆಕ್ಯುರಿಟಿ’ ಎಂಬ ವಿಭಾಗದಲ್ಲಿ (ಗಮನಿಸಿ: ಒಂದೊಂದು ಸಾಧನದಲ್ಲಿ ಒಂದೊಂದು ರೀತಿ ಪದಗುಚ್ಛ ಇರುತ್ತದೆ) ಅಥವಾ ಅಂಥದ್ದನ್ನೇ ಧ್ವನಿಸುವ ವಿಭಾಗಕ್ಕೆ ಹೋಗಿ, ತಿದ್ದುಪಡಿ ಮಾಡಿಕೊಳ್ಳುವ, ಅಗತ್ಯವಿದ್ದಾಗಲಷ್ಟೇ ಅನುಮತಿಸುವ ಆಯ್ಕೆ ಇರುತ್ತದೆ. ಅಥವಾ ನಿರ್ದಿಷ್ಟ ಆ್ಯಪ್‌ಗಳ ಸೆಟ್ಟಿಂಗ್ಸ್‌ನಲ್ಲಿ ‘App info' ಎಂಬಲ್ಲಿ 'Permisson' ಅಂತ ಇರುವಲ್ಲಿ, ಈಗಾಗಲೇ ನೀಡಿರುವ ಅನುಮತಿಗಳನ್ನು ಅಗತ್ಯವಿಲ್ಲದಿದ್ದರೆ ಹಿಂಪಡೆಯುವ ಆಯ್ಕೆಯಿದೆ. ನಾವು ಹೇಳಿದ್ದನ್ನು ನಮ್ಮ ಫೋನ್ 'ಕೇಳಿಸಿ'ಕೊಳ್ಳದಂತಿರಲು, ಗೂಗಲ್ ಅಸಿಸ್ಟೆಂಟ್, ಸಿರಿ ಅಥವಾ ಅಲೆಕ್ಸಾ ಮುಂತಾದ ಧ್ವನಿ ಸಹಾಯಕ ಅಪ್ಲಿಕೇಶನ್‌ಗಳನ್ನು ನಿಷ್ಕ್ರಿಯವಾಗಿರುವಂತೆ ನೋಡಿಕೊಳ್ಳಬೇಕು.

ಹಾಗೂ, ಕನಿಷ್ಠ ವಾರಕ್ಕೊಮ್ಮೆಯಾದರೂ ಫೋನನ್ನು 'ರೀಬೂಟ್' (ಆಫ್ ಮಾಡಿ ಮರುಪ್ರಾರಂಭಿಸುವುದು) ಮಾಡುವುದುಚಿತ. ಇದರಿಂದ ಹಿನ್ನೆಲೆಯಲ್ಲಿ ನಮಗರಿವಿಲ್ಲದೆ ಚಲಾವಣೆಯಲ್ಲಿರುವ ಆ್ಯಪ್‌ಗಳು ಮತ್ತು ಸಕ್ರಿಯವಾಗಿರುವ ಕೆಲವೊಂದು ಕುತಂತ್ರಾಂಶಗಳು ಸ್ಥಗಿತಗೊಳ್ಳಬಹುದು. ಅಲ್ಲದೆ ಮೊಬೈಲ್‌ಫೋನ್‌ನ ಬಾಳಿಕೆಗೂ ಅನುಕೂಲಕರ.

ಆ್ಯಪ್‌ನಲ್ಲಿರುವ ಪ್ರೈವೆಸಿ ಸೆಟ್ಟಿಂಗ್ಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.