ತಂತ್ರಜ್ಞಾನ: ಈಗ ಇ–ಪಾಸ್‌ಪೋರ್ಟ್ ಸಮಯ!
ಪಾಸ್‌ಪೋರ್ಟು ಎಂದರೆ ಎಲ್ಲರಿಗೂ ತಿಳಿದಿರುವಂತೆ ಯಾವುದೇ ವ್ಯಕ್ತಿಯು ವಿದೇಶಗಳಿಗೆ ಪ್ರಯಾಣಿಸುವಾಗ ಆತನ ಗುರುತು ಮತ್ತು ನಾಗರಿಕತ್ವದ ಬಗ್ಗೆ ತಿಳಿಸಲು ಸರ್ಕಾರವು ನೀಡುವ ಒಂದು ಅಧಿಕೃತವಾದ ಗುರುತಿನ ದಾಖಲೆ. ಈವರೆಗೆ ಇದು ಇತರೆ ದಾಖಲೆಪತ್ರಗಳಂತೆ ವ್ಯಕ್ತಿಯ ವೈಯಕ್ತಿಕ ಮಾಹಿತಿಗಳನ್ನೊಗೊಂಡ ಒಂದು ಕಾಗದ ಪತ್ರದಂತಿತ್ತು. ಆದರೆ ಈಗ ಅದನ್ನು ನವೀಕರಿಸಿ ಎಲೆಕ್ಟ್ರಾನಿಕ್ ರೂಪಕ್ಕೆ ತರಲಾಗಿದೆ.
ಇ-ಮೇಲ್, ಇ-ಬುಕ್, ಇ-ಕಾರ್ಟ್, ಇ-ಗವರ್ನೆನ್ಸ್, ಇತ್ಯಾದಿಗಳಂತೆ ಈಗ ಇ-ಪಾಸ್‌ಪೋರ್ಟ್ ಕೂಡ ಬಂದಾಯ್ತು. ಇ-ಪಾಸ್‌ಪೋರ್ಟ್ ನೋಡಲು ಹೆಚ್ಚೇನು ಭಿನ್ನವಾಗಿರದೆ ಅದರ ಹಿಂಭಾಗದ ಹೊದಿಕೆಯೊಳಗೆ ಆರ್‌ಎಫ್‌ಐಡಿ (ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್) ಚಿಪ್ ಅನ್ನು ಅಳವಡಿಸಲಾಗಿದೆ. ಇದು ವ್ಯಕ್ತಿಯ ಹೆಸರು, ವಿಳಾಸಗಳಂಥ ಮಾಹಿತಿಗಳನ್ನಷ್ಟೆ ಹೊಂದಿರದೆ, ಆತನ ಕೈಬೆರಳುಗಳ ಡಿಜಿಟಲ್ ಗುರುತು ಮತ್ತು ಡಿಜಿಟಲ್ ಭಾವಚಿತ್ರಗಳಂತಹ ಬಯೋಮೆಟ್ರಿಕ್ ಮಾಹಿತಿಗಳನ್ನೂ ಒಳಗೊಡಿರುತ್ತದೆ.
ದತ್ತಾಂಶಗಳನ್ನು ಸಂಗ್ರಹಿಸುವ ಸಲುವಾಗಿ ಸ್ಮಾರ್ಟ್‌ಕಾರ್ಡ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಆರ್‌ಎಫ್‌ಐಡಿ ತಂತ್ರಜ್ಞಾನ ಎಂದರೆ ರೇಡಿಯೊ ತರಂಗಗಳನ್ನು ಬಳಸಿಕೊಂಡು ಯಾವುದೇ ವಸ್ತುವಿಗೆ ಜೋಡಿಸಿರುವ ಟ್ಯಾಗ್‌ಗಳನ್ನು ಓದಿ ಅದರಲ್ಲಿರುವ ಮಾಹಿತಿಯನ್ನು ತಿಳಿಸುವ ಒಂದು ವಿಧಾನ. ಇದೇ ತಂತ್ರಜ್ಞಾನವನ್ನೇ ಪಾಸ್‌ಪೋರ್ಟನ್ನು ಡಿಜಿಟಲೀಕರಣಗೊಳಿಸಲು ಬಳಸಿಕೊಳ್ಳಲಾಗಿದೆ. ಇದು ಪಾಸ್‌ಪೋರ್ಟಿನಲ್ಲಿರುವ ಸಂಕೇತಗಳ ರೂಪದಲ್ಲಿರುವ ಮಾಹಿತಿಯನ್ನು ಸ್ಕ್ಯಾನ್ ಮಾಡಿದಾಗ ಬಳಕೆದಾರನ ಮಾಹಿತಿಯನ್ನೆಲ್ಲಾ ಹೊರಹಾಕುತ್ತದೆ. ಪಾಸ್‌ಪೋರ್ಟಿನ ಮುಂಭಾಗದಲ್ಲಿರುವ ಚಿನ್ನದ ಬಣ್ಣದ ಆಯತಾಕೃತಿಯು ಈ ಅಪ್‌ಗ್ರೇಡೇಷನ್ ಅನ್ನು ತಿಳಿಸುತ್ತದೆ. ಸಾಮಾನ್ಯ ಪಾಸ್‌ಪೋರ್ಟಿನಲ್ಲಿ ಇದುವರೆಗೂ ಇರದ ಒಂದು ವಿಶಿಷ್ಟ ವ್ಯವಸ್ಥೆಯನ್ನು ಅಳವಡಿಸಿರುವುದು ಭಾರತೀಯರ ಸುರಕ್ಷತೆಯನ್ನು ಖಾತರಿಪಡಿಸಿ, ಜಾಗತಿಕ ಪ್ರಯಾಣವನ್ನು ಆಧುನೀಕರಣಗೊಳಿಸಲು ಭಾರತ ದೇಶ ತೆಗೆದುಕೊಂಡಿರುವ ಮಹತ್ವದ ಹೆಜ್ಜೆಯಾಗಿದೆ.
ಇದೇ ಮೊದಲೇನಲ್ಲ:
ಈ ತಂತ್ರಜ್ಞಾನವನ್ನು ಬಳಕೆಗೆ ತಂದಿರುವುದು ನಾವೇ ಮೊದಲೇನಲ್ಲ. ಮುಂಚೆ ಅಮೆರಿಕದಂಥ ದೇಶಗಳು ಈ ತಂತ್ರಜ್ಞಾನವನ್ನು ಅಳವಡಿಸಿದ್ದರೂ ಭಾರತಕ್ಕೆ ಸಾಧ್ಯವಾಗಿರುವುದು 2024ರಿಂದಷ್ಟೆ. 2025ರ ವೇಳೆಗೆ ಇ-ಪಾಸ್‌ಪೋರ್ಟ್ ವಿತರಣೆಯನ್ನು ಪೂರ್ಣಗೊಳಿಸಬೇಕೆನ್ನುವ ಯೋಜನೆ ಭಾರತದ್ದಾಗಿದೆ. ಸುರಕ್ಷತೆ, ವೇಗ ಹಾಗೂ ಜಾಗತಿಕ ಮನ್ನಣೆಗಳೇ ಮುಖ್ಯವಾಗಿರುವ ಇಂದಿನ ದಿನಗಳಲ್ಲಿ ಪಾಸ್‌ಪೋರ್ಟ್, ಗುರುತನ್ನು ದೃಢೀಕರಿಸುವ ಒಂದು ಪತ್ರಕ್ಕಿಂತಲೂ ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತಿದೆ. ಡಿಜಿಟಲ್ ಗುರುತಿನ ಸಾಧನವಾಗಿದೆ. ತನ್ಮೂಲಕ ಒಂದು ಸುವ್ಯಸ್ಥಿತವಾದ ಜಾಗತಿಕ ಪ್ರಯಾಣವನ್ನು ಅನುಭವಿಸಬಹುದು. ತಮ್ಮ ಗುರುತನ್ನು ವಂಚಿಸಿ, ಸುಳ್ಳು ದಾಖಲೆಪತ್ರಗಳನ್ನು ಸೃಷ್ಟಿಸಿಕೊಂಡು ದೇಶದೊಳಗೆ ನುಗ್ಗುವುದನ್ನು ತಪ್ಪಿಸಲು, ರಾಷ್ಟ್ರೀಯ ಹಾಗೂ ಗಡಿ ಸುರಕ್ಷತೆಯನ್ನು ಕಾಯ್ದುಕೊಳ್ಳಲು, ಪಾಸ್‌ಪೋರ್ಟಿನಲ್ಲಿ ತಂತ್ರಜ್ಞಾನವನ್ನು ಭಾರತ ಅಳವಡಿಸಿದೆ. ಜೊತೆಗೆ, ಕೋವಿಡ್ ನಂತರದ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ನಿರ್ವಹಿಸಲು ಸುರಕ್ಷತಾ ವಿಧಾನಗಳ ಅನಿವಾರ್ಯತೆಯಿದ್ದು, ಬಯೋಮೆಟ್ರಿಕ್ ಪಾಸ್‌ಪೋರ್ಟುಗಳ ಅಳವಡಿಕೆ ಈ ಅವಶ್ಯಕತೆಯನ್ನು ಪೂರೈಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ.
ಪಾಸ್‌ಪೋರ್ಟಿನಲ್ಲಿ ಎಲೆಕ್ಟ್ರಾನಿಕ್ ಚಿಪ್ ಅನ್ನು ಅಳವಡಿಸುವುದರೊಂದಿಗೆ ಭಾರತ ಸರ್ಕಾರ ಇನ್ನೂ ಅನೇಕ ಬದಲಾವಣೆಗಳನ್ನು ತಂದಿದ್ದು ಅವುಗಳು ಇಂತಿವೆ. ಅಕ್ಟೋಬರ್ 1, 2023ರಿಂದೀಚೆಗೆ ಹುಟ್ಟಿರುವ ಅರ್ಜಿದಾರರಿಗೆ ಪಾಸ್‌ಪೋರ್ಟ್ ನೀಡಲು ಸರ್ಕಾರದಿಂದ ನೀಡಿದ ಜನನ ಪ್ರಮಾಣ ಪತ್ರವನ್ನಷ್ಟೆ ಅಂಗೀಕರಿಸುವುದು, ದಕ್ಷತೆ, ಗೌಪ್ಯತೆ ಹಾಗೂ ಸ್ಥಿರತೆಯನ್ನು ಸುಧಾರಿಸುವ ಸಲುವಾಗಿ ಪೋಷಕರ ಹೆಸರು ಸೇರಿಸುವುದನ್ನೂ ಕೈಬಿಟ್ಟಿರುವುದು ಹಾಗೂ ಮುಖ್ಯವಾಗಿ ಮನೆಯ ವಿಳಾಸಗಳನ್ನು ಪಾಸ್‌ಪೋರ್ಟಿನ ಹಿಂಭಾಗದಲ್ಲಿ ಮುಂದ್ರಿಸದೆ ಡಿಜಿಟಲ್ ಸಂಕೇತಗಳ ರೂಪದಲ್ಲಿ ಎನ್‌ಕ್ರಿಪ್ಟ್ ಮಾಡಲಾಗಿದೆ. ಈ ಮಾಹಿತಿಗಳನ್ನು ಅಧಿಕೃತ ಸಿಬ್ಬಂದಿಗಳನ್ನು ಹೊರತುಪಡಿಸಿ ಬೇರಾರೂ ಪಡೆಯಲು ಸಾಧ್ಯವಿಲ್ಲ. ಈ ತಂತ್ರಜ್ಞಾನದ ಮೂಲಕ ಭಾರತೀಯರಿಗೆ ಡಿಜಿಟಲ್ ಗುರುತು ಎನ್ನುವುದು ಕೇವಲ ಸುರಕ್ಷತೆ ಹಾಗೂ ಸ್ಮಾರ್ಟ್ ಜೀವನಶೈಲಿಯನ್ನು ಪರಿಚಯಿಸದೆ ಜಾಗತಿಕ ಮನ್ನಣೆಯನ್ನೂ ಸಾಧ್ಯಮಾಡಿಸಿದೆ!
ಇದರಿಂದ ಪ್ರಯಾಣಿಕರಿಗೆ ವಿಮಾನನಿಲ್ದಾಣಗಳಲ್ಲಿ ಆಟೋಮೇಟೆಡ್ ಎಲೆಕ್ಟ್ರಾನಿಕ್ ಗೇಟುಗಳ ಮೂಲಕ ಪ್ರವೇಶ ಪಡೆಯುವುದು ಸುಲಭವಾಗುತ್ತದೆ. ಆಗ ಪ್ರವೇಶಾತಿ ಪ್ರಕ್ರಿಯೆಗಳೂ ವೇಗವಾಗುತ್ತವೆ. ಸುರಕ್ಷತೆ ಸುಧಾರಿಸುತ್ತದೆ! ಬಯೋಮೆಟ್ರಿಕ್ ಇ-ಪಾಸ್‌ಪೋರ್ಟ್‌ನ ಮತ್ತೊಂದು ಉಪಯೋಗವೆಂದರೆ ದೇಶದ ಇಮ್ಮಿಗ್ರೇಶನ್ ತಾಣಗಳಲ್ಲಿ ವ್ಯಕ್ತಿಯ ಪಾಸ್‌ಪೋರ್ಟು ಹಾಗೂ ಅದನ್ನು ಪರಿಶೀಲಿಸುವ ಸಿಬ್ಬಂದಿಗಳ ಭೌತಿಕ ಉಪಸ್ಥಿತಿಯಿಲ್ಲದೇ ಪರಿಶೀಲನಾ ಪ್ರಕ್ರಿಯೆಯನ್ನು ನಡೆಸಬಹುದು. ಇದರಿಂದ ನಿರೀಕ್ಷಣಾ ಅವಧಿಯೂ ತಗ್ಗುತ್ತದೆ. ತಪಾಸಣೆಯೂ ಸ್ವಯಂಚಾಲಿತವಾಗುತ್ತದೆ. ಹೀಗೆ, ಬಯೋಮೆಟ್ರಿಕ್ ಇ-ಪಾಸ್‌ಪೋರ್ಟುಗಳನ್ನು ಬಳಸುವುದರಿಂದ ಭಾರತವೂ ಇಂಟರ್‌ನ್ಯಾಷನಲ್ ಸಿವಿಲ್ ಏವಿಯೇಷನ್ ಆರ್ಗನೈಷನ್‌ನ ನಿಯಮಗಳೊಂದಿಗೆ ಸಂಘಟಿತವಾಗುತ್ತದೆ. ಇದು ಭಾರತೀಯ ಪ್ರಯಾಣಿಕರ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ ಮತ್ತು ತಾಂತ್ರಿಕವಾಗಿ ಮುಂದುವರೆದ ದೇಶಗಳ ಸಾಲಿನಲ್ಲಿ ನಿಲ್ಲಲು ಭಾರತವೂ ಅರ್ಹವಾಗಿರುತ್ತದೆ.
ಇನ್ನು, ಈ ಬಯೋಮೆಟ್ರಿಕ್ ಪಾಸ್‌ಪೋರ್ಟುಗಳ ಭದ್ರತೆಗಾಗಿ ಮೊದಲಿಗೆ ಇವನ್ನು ದೀರ್ಘಕಾಲ ಬಾಳಿಕೆ ಬರುವ ಅಕ್ರಮವನ್ನು ತಡೆಹಿಡಿಯುವ ಪಾಲಿಕಾರ್ಬೋನೇಟು ವಸ್ತುಗಳಿಂದ ಮಾಡಲಾಗಿದೆ. ಹಾಗೂ ಚಿತ್ರಗಳನ್ನು ನಕಲಿಸಲಾಗದಂತೆ ಡಿಜಿಟಲ್ ಭಾವಚಿತ್ರದೊಳಗೆ ಡಿಜಿಟಲ್ ವಾಟರ್ ಮಾರ್ಕಿಂಗ್ ತಂತ್ರಜ್ಞಾನವನ್ನೂ ಹುದುಗಿಸಿದ್ದಾರೆ. ಇವುಗಳನ್ನು ಅಕ್ರಮವಾಗಿ ಬಳಸಿಕೊಳ್ಳಲಾಗದಂತೆ ಹೆಚ್ಚಿನ ರಕ್ಷಣೆಗಾಗಿ ಲೇಸರ್ ಜನರೇಟೆಡ್ ವಾಟರ್ಮಾರ್ಕ್‌ಗಳನ್ನೂ ಅಳವಡಿಸಿದ್ದಾರಂತೆ. ಮತ್ತು ಬರಿಗಣ್ಣಿನಿಂದ ಓದಲಾಗದಂತಹ, ದೊಡ್ಡದು ಮಾಡಿ ನೋಡಿದಾಗ ಮಾತ್ರ ಕಾಣುವ (ಮ್ಯಾಗ್ನಿಫಿಕೇಶನ್) ಮೈಕ್ರೋಪ್ರಿಂಟಿಂಗ್ ತಂತ್ರಗಳನ್ನೂ ಸೇರಿಸಿರುವುದರಿಂದ ನಕಲು ಮಾಡುವುದೂ ಸಾಧ್ಯವಿಲ್ಲ. ಹಾಗೂ ನಿರ್ಧಿಷ್ಟ ಬೆಳಕಿನ ಮಾಧ್ಯಮದೊಳಗೆ ಮಾತ್ರ ಇದನ್ನು ಪರಿಶೀಲಿಸಬಹುದಾಗಿದೆ. ಹೀಗೆ ಸಂಪೂರ್ಣವಾಗಿ ಸಂರಕ್ಷಿಸಲ್ಪಟ್ಟ ಡಿಜಿಟಲೀಕರಿಸಿದ ಪಾಸ್‌ಪೋರ್ಟನ್ನು ನಮ್ಮ ದೇಶ ಈಗ ಬಿಡುಗಡೆ ಮಾಡಿದೆ.
ಪಾಸ್‌ಪೋರ್ಟ್ ಸೇವಾ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿ ತಮ್ಮ ನವೀಕರಿಸಿದ ಬಯೋಮೆಟ್ರಿಕ್ ಇ-ಪಾಸ್ ಪೋರ್ಟುಗಳನ್ನು ಪಡೆಯಬಹುದು. ಪಾಸ್‌ಪೋರ್ಟ್ ಸೇವಾ ಪೋರ್ಟಲ್‌ನಲ್ಲಿ ಖಾತೆ ತೆರೆದು, ಅರ್ಜಿ ಸಲ್ಲಿಸಿ, ಹಣ ಪಾವತಿಸಿ, ಅಪಾಯಿಂಟ್ಮೆಂಟ್ ದಿನಾಂಕವನ್ನು ಬುಕ್ ಮಾಡಿದರೆ ಪ್ರಕ್ರಿಯೆ ಮುಗಿಯುತ್ತದೆ. ಭಾರತದಲ್ಲಿ ಬಯೋಮೆಟ್ರಿಕ್ ಪಾಸ್‌ಪೋರ್ಟು ಪ್ರಾರಂಭವಷ್ಟೆ. ಮುಂದೆ, ಮೊಬೈಲ್ ಪಾಸ್‌ಪೋರ್ಟ್ ವ್ಯಾಲೆಟ್, ಬ್ಲಾಕ್ ಚೈನ್ ತಂತ್ರಜ್ಞಾನಾಧಾರಿತ ಗುರುತು ಪರಿಶೀಲನಾ ವಿಧಾನಗಳನ್ನೂ ನಾವು ನಿರೀಕ್ಷಿಸಬಹುದು. ಆಧಾರ ಸಂಖ್ಯೆ ಹಾಗೂ ಡಿಜಿಲಾಕರ್ ವೇದಿಕೆಗಳೊಂದಿಗೆ ಬಯೋಮೆಟ್ರಿಕ್ ಪಾಸ್‌ಪೋರ್ಟ್ ಅನ್ನು ಸಂಯೋಜಿಸಲೂಬಹುದಾಗಿದೆ. ಹೀಗೆ, ನಾವು ಕಾಗದರೂಪದ ದಾಖಲೆಗಳನ್ನು ಕಡಿತಗೊಳಿಸಿ, ಎಲ್ಲೆಯಿಲ್ಲದ, ಆರೋಗ್ಯಕರ ಹಾಗೂ ಸುಗಮ ಪ್ರಯಾಣವನ್ನು ಅನುಭವಿಸಬಹುದು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.