ADVERTISEMENT

ಮಕ್ಕಳ ಸುರಕ್ಷತೆಗೆ ಕಿಡ್ಡೊಶೀಲ್ಡ್‌

ಪ್ರಜಾವಾಣಿ ವಿಶೇಷ
Published 30 ಅಕ್ಟೋಬರ್ 2018, 19:45 IST
Last Updated 30 ಅಕ್ಟೋಬರ್ 2018, 19:45 IST
kiddo shield
kiddo shield   

ನಿತ್ಯವೂ ಮನೆ ಸಮೀಪ ಓಡಾಡಿಕೊಂಡಿದ್ದ ಪುಟ್ಟಿ, ಅಂದು ಮಧ್ಯಾಹ್ನ ಹಾಲು ತರಲೆಂದು ಬೇಕರಿಗೆ ಬರುತ್ತಾಳೆ. ಆಗ ಬೈಕ್‌ ಏರಿ ಬರುವ ಒಬ್ಬ ವ್ಯಕ್ತಿ ಚಾಕಲೇಟ್‌ ಕೊಡುವುದಾಗಿ ಕರೆದು ಬೈಕ್‌ನಲ್ಲಿ ಕೂರಿಸಿಕೊಂಡು ಪರಾರಿಯಾಗುತ್ತಾನೆ. ಎಲ್ಲರೊಂದಿಗೂ ಬಹಳ ಬೇಗ ಬೆರೆಯುತ್ತಿದ್ದರಿಂದ ಆಕೆಯನ್ನು ಅಪಹರಿಸಲಾಗುತ್ತಿದೆ ಎನ್ನುವುದು ಅಲ್ಲಿದ್ದ ಯಾರಿಗೂ ಹೊಳೆಯಲೇ ಇಲ್ಲ. ಆದ್ರೆ ಪುಟ್ಟಿ ಜೋರಾಗಿ ಕಿರುಚಿ, ಒದರಾಡಿದ ಮೇಲೆ, ಹೆದರಿದ ಆ ವ್ಯಕ್ತಿ ಆಕೆಯನ್ನು ಪುನಃ ಅಲ್ಲಿಗೇ ತಂದು ಬಿಟ್ಟು ಹೋಗುತ್ತಾನೆ..... ಇದು ಬೆಂಗಳೂರಿನ ಕೃಷ್ಣರಾಜಪುರದ ದೇವಸಂದ್ರ ಬಳಿ ನಡೆದ ಘಟನೆ.

ಪುಟ್ಟಿ ಗಲಾಟೆ ಮಾಡಿದ್ದರಿಂದಲೋ ಅಥವಾ ಆ ವ್ಯಕ್ತಿಯೇ ಹೆದರಿದ್ದರಿಂದಲೋ ಒಟ್ಟಿನಲ್ಲಿ ಆಕೆ ಸುರಕ್ಷಿತವಾಗಿ ಮನೆ ಸೇರಿದಳು. ಆದರೆ ಎಲ್ಲಾ ಪ್ರಕರಣಗಳೂ ಹೀಗೆಯೇ ಮುಗಿಯುವುದಿಲ್ಲ. ಮಕ್ಕಳನ್ನು ಮನೆಯಿಂದ ಹೊರಗೆ ಕಳುಹಿಸುವಾಗ ಅವರ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯ ಇದೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಇರುವ ಕೆಲವು ಜಿಪಿಎಸ್‌ ಸಾಧನಗಳ ನೆರವು ಪಡೆಯಬಹುದು.

ಯುನಿಜಿಪಿಎಸ್‌ ಕಂಪನಿಯು ನಗರದಲ್ಲಿ ಅಪರಾಧ ಪ್ರಕರಣಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ‘ಕಿಡ್ಡೊ ಶೀಲ್ಡ್‌’ ಎನ್ನುವ ಜಿಪಿಎಸ್‌ ಆಧಾರಿತ ಸ್ಮಾರ್ಟ್‌ವಾಚ್‌ ಬಿಡುಗಡೆ ಮಾಡಿದೆ.

ADVERTISEMENT

‘ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ತಯಾರಿಸಲಾಗಿದೆ.ಸಾರ್ವಜನಿಕ ಸ್ಥಳಗಳಲ್ಲಿ, ಕ್ಯಾಬ್‌ನಲ್ಲಿ ಓಡಾಡುವಾಗ ಈ ಸಾಧನ ನೆರವಿಗೆ ಬರುತ್ತದೆ. ಸಾಧನದಲ್ಲಿರುವ ‘ಎಸ್‌ಒಎಸ್‌’ ಕೀ ಪ್ರೆಸ್‌ ಮಾಡುವ ಮೂಲಕ ತಾವು ಅಪಾಯದಲ್ಲಿರುವ ಸಂದೇಶವನ್ನು ಈಗಾಗಲೇ ಸೇವ್ ಮಾಡಿರುವ ಮೊಬೈಲ್‌ ಸಂಖ್ಯೆಗೆ ಕಳುಹಿಸಬಹುದು’ ಎಂದು ಕಾರ್ಯವೈಖರಿಯ ಬಗ್ಗೆ ಯೂನಿಜಿಪಿಎಸ್‌ ಕಂಪನಿಯ ಸ್ಥಾಪಕಿ ದೀಪ್ತಿ ಕೋಹ್ಲಿ ವಿವರಿಸಿದರು.

ಇದನ್ನು ಮಕ್ಕಳ ಕೈಗೆ ಕಟ್ಟಿದರೆ ಅವರ ಪ್ರತಿ ಹೆಜ್ಜೆಯನ್ನೂ ನಿಖರವಾಗಿ ಗಮನಿಸಬಹುದು. ಮೊಬೈಲ್‌, ಲ್ಯಾಪ್‌ಟ್ಯಾಪ್‌ ಅಥವಾ ಕಂಪ್ಯೂಟರ್‌ನಲ್ಲಿ ಮ್ಯಾಪ್‌ ಮಾಡುವ ಮೂಲಕ ಅವರ ಚಲನವಲನದ ಮೇಲೆ ನಿಗಾ ಇರಿಸಬಹುದು. ಇದರಿಂದ ಮಕ್ಕಳನ್ನು ಅಪಹರಿಸಿದವರ ವಾಹನ ಚಲಿಸುತ್ತಿರುವ ದಿಕ್ಕು, ವೇಗ ಮತ್ತು ಸ್ಥಳದ ಬಗ್ಗೆ ನಿಖರವಾದ ಮಾಹಿತಿ ಸಿಗುತ್ತದೆ.

ಹೇಗೆ ಕೆಲಸ ಮಾಡುತ್ತದೆ?
ಇದು ಕೆಲಸ ಮಾಡಲು ವಾಯ್ಸ್‌ ಕಾಲ್‌ ಆಯ್ಕೆ ಇರುವ ಸಿಮ್‌ ಬೇಕು. ತಿಂಗಳಿಗೆ ₹ 100 ರೀಚಾರ್ಜ್‌ ಮಾಡಿಸಬೇಕು. 10ಕ್ಕೂ ಅಧಿಕ ದಿನಗಳವರೆಗೆ ಬ್ಯಾಟರಿ ಬ್ಯಾಕಪ್‌ ಸಾಮರ್ಥ್ಯ ಹೊಂದಿದೆ.

10 ಬೇರೆ ಬೇರೆ ಮೊಬೈಲ್‌ ಸಂಖ್ಯೆಗಳನ್ನು ಸೇವ್‌ ಮಾಡುವ ಸೌಲಭ್ಯವೂ ಇದರಲ್ಲಿದೆ. ಆದರೆ ತುರ್ತು ಸಂದರ್ಭದಲ್ಲಿ ಕೇವಲ ಒಬ್ಬರಿಗೆ ಮಾತ್ರವೇ ಎಸ್‌ಒಎಸ್‌ ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಆ ಮೊಬೈಲ್‌ ಸಂಖ್ಯೆ ಅಪ್ಪ ಅಥವಾ ಅಮ್ಮನದ್ದಾಗಿರುವಂತೆ ಆಯ್ಕೆ ಮಾಡುವುದು ಹೆಚ್ಚು ಸೂಕ್ತ.

ಈ ಸಾಧನ ಖರೀದಿಸಿದ ಬಳಿಕ ಕಂಪನಿಗೆ ಬಳಕೆದಾರರ ಮೊಬೈಲ್‌ ಸಂಖ್ಯೆ ಮತ್ತು ಇ–ಮೇಲ್‌ ಐಡಿ ನೀಡಬೇಕು. ಆಗ ವಾಚ್‌ನಲ್ಲಿರುವ ಸಿಮ್‌ ಜತೆಗೆ ಸಂಪರ್ಕ ಸಾಧಿಸುವ ಸೆಟ್ಟಿಂಗ್‌ಗಳು ಸಿಗುತ್ತವೆ. ಇ–ಮೇಲ್‌ಗೆ ಯೂಸರ್‌ ನೇಮ್ ಮತ್ತು ಪಾಸ್‌ವರ್ಡ್‌ ಬರುತ್ತದೆ. ಅದನ್ನು ಬಳಸಿ ಟ್ರ್ಯಾಕ್‌ ಆರಂಭಿಸಬಹುದು.

ಮೊಬೈಲ್‌ನಲ್ಲಾದರೆ unigps.in ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಲ್ಯಾಪ್‌ಟಾಪ್‌, ಪಿಸಿಯಲ್ಲಾದರೆ ಯುನಿಸುರಕ್ಷಾ ಜಾಲತಾಣಕ್ಕೆ ಭೇಟಿ ನೀಡಿ ಲಾಗಿನ್ ಆಗಬೇಕು. ಮಕ್ಕಳು ಹೊರಗೆ ಹೋಗುವಾಗ ವಾಚ್‌ ಕಟ್ಟಿದರೆ, ಅವರ ಪ್ರತಿಯೊಂದು ಹೆಜ್ಜೆಯನ್ನೂ ಅರಿಯಬಹುದು. ಪಾರ್ಕ್‌ನಲ್ಲಿ ಆಡಲು ಬಿಟ್ಟು ಅರ್ಧ ಗಂಟೆ ಸಮಯ ನಿಗದಿ ಮಾಡಿಟ್ಟರೆ ಸಾಕು. ಆ ಅವಧಿ ಮುಗಿಯುತ್ತಿದ್ದಂತೆಯೇ ಮಗ /ಮಗಳು ಮನೆಗೆ ಹಿಂದಿರುಗದೇ ಇದ್ದರೆ ಎಚ್ಚರಿಕೆ ಸಂದೇಶ ಬರುತ್ತದೆ. ಆಗ ಮ್ಯಾಪ್‌ ಮೂಲಕ ಅವರು ಎಲ್ಲಿದ್ದಾರೆ ಎನ್ನುವುದನ್ನು ಪತ್ತೆ ಮಾಡಬಹುದು.

ಬೆಲೆ ₹ 2,640 ರಿಂದ ಆರಂಭವಾಗಲಿದೆ.

***

ಹಿರಿಯರಿಗೆ ರೋಬೊಶೀಲ್ಡ್‌

ವಯಸ್ಸಾದವರನ್ನೂ ಮಕ್ಕಳಂತೆಯೇ ನೋಡಿಕೊಳ್ಳಬೇಕು. ನಮ್ಮ ಕೆಲಸಗಳಲ್ಲಿ ನಿರತರಾಗಿದ್ದರೂ, ಹಿರಿಯ ಚೇತನಗಳ ಮೇಲೆ ನಿಗಾ ಇಡಬೇಕು. ಸಾಮಾನ್ಯವಾಗಿ ಇಂತಹ ವಯಸ್ಸಿನಲ್ಲಿ ಅವರಿಗೆ ಮರೆವು ಹೆಚ್ಚಾಗುತ್ತಿರುತ್ತದೆ. ಜತೆಗೆ ವಿವಿಧ ರೀತಿಯ ರೋಗಗಳು, ಮಾನಸಿಕ ಸಮಸ್ಯೆಗಳೂ ಕಾಡುತ್ತಿರುತ್ತವೆ.

ಹಿರಿಯರ ಅನುಕೂಲಕ್ಕಾಗಿಯೇ‘ಯುನಿ ಸುರಕ್ಷಾ’ ಸಂಸ್ಥೆಯು ವಿಶೇಷ ಸಾಧನವನ್ನು ಬಳಕೆಗೆ ತಂದಿದೆ. ಇದರ ಹೆಸರು ರೋಬೊಶೀಲ್ಡ್‌. ಪುಟ್ಟ ಬೆಂಕಿಪೊಟ್ಟದಷ್ಟು ಗಾತ್ರವಿರುವ ಈ ಸಾಧನವನ್ನು ಕಿಸೆಯಲ್ಲಿ ಇಟ್ಟುಕೊಂಡು ಓಡಾಡಬಹುದು. ಹಿರಿಯರನ್ನು ದೃಷ್ಟಿಯಲ್ಲಿಟ್ಟಿಕೊಂಡು ಇದನ್ನು ತಯಾರಿಸಿರುವುದರಿಂದ ಬಳಸುವುದು ಕೂಡ ಸುಲಭ.

ಇದು ಕೂಡ ಸ್ಮಾರ್ಟ್‌ವಾಚ್‌ನಂತೆಯೇ ಕೆಲಸ ಮಾಡುತ್ತದೆ. ಆದರೆ ಮೇಲ್ನೋಟಕ್ಕೆ ಸಾಧನವೆಂಬಂತೆ ಗೊತ್ತಾಗುವುದಿಲ್ಲ. ಇದು ತುರ್ತು ಪರಿಸ್ಥಿತಿಗಳಲ್ಲಿ ಹಿರಿಯರಿಗೆ ರಕ್ಷಣೆಗೆ ನೆರವಾಗಲಿದೆ ಎಂಬುದು ಸಂಸ್ಥೆಯ ಅಭಿಪ್ರಾಯ.

ಏನಿದರ ವಿಶೇಷ

ಸಾಮಾನ್ಯವಾಗಿ ಇಂತಹ ಸಾಧನಗಳು ಹಲವು ಇವೆ. ಆದರೆ, ಇದರಲ್ಲಿ ಮೊಬೈಲ್‌ಫೋನ್‌ಗೆ ಬಳಸುವಂತಹ ಸಿಮ್‌ ಕೂಡ ಅಳವಡಿಸಬಹುದು. ಜತೆಗೆ ಇಯರ್‌ಫೋನ್‌ ಅಳವಡಿಸಿಕೊಳ್ಳುವ ಸೌಲಭ್ಯವನ್ನು ಒದಗಿಸಿರುವುದರಿಂದ ಮೊಬೈಲ್‌ಫೋನ್‌ಗೆ ಕರೆ ಮಾಡುವ ಹಾಗೆ ಕರೆ ಮಾಡಿ, ಮಾತನಾಡಿಸುವುದಕ್ಕೂ ಅವಕಾಶವಿದೆ.

ಕರೆ ಬಂದ ಕೂಡಲೇ ಎಚ್ಚರಿಸಲು ಅಲಾರಂ ಸದ್ದು ಬರುವಂತೆ ತಯಾರಿಸಲಾಗಿದೆ. ಚಾರ್ಜ್‌ ಮಾಡಿಕೊಳ್ಳಲು ಪಿನ್‌ ಅಳವಡಿಸಲಾಗಿದೆ. ಜಿಪಿಎಸ್‌ ಟ್ರ್ಯಾಕರ್‌ ಇರುವುದರಿಂದ ಅವರು ಇರುವಂತಹ ಸ್ಥಳವನ್ನೂ ಸುಲಭವಾಗಿ ಪತ್ತೆ ಮಾಡಬಹುದಾಗಿದೆ.

ಹಿರಿಯರಿಗಷ್ಟೇ ಅಲ್ಲ, ಚಾರ್ಜ್‌ ಮಾಡಿ ಮಕ್ಕಳ ಪಠ್ಯಚೀಲದೊಳಗೆ ಅವರಿಗೆ ಗೊತ್ತಿಲ್ಲದಂತೆ ಹಾಕಿದರೂ ಸಾಕು ಅವರ ಚಲನವಲನಗಳ ಮೇಲೆ ನಿಗಾ ಇಡಲು ನೆರವಾಗುತ್ತದೆ. ಮಕ್ಕಳು ಅಪಹರಣವಾದರೂ ಪತ್ತೆ ಮಾಡಬಹುದು.

ಬೆಲೆ ₹ 4,290 ರಿಂದ ಆರಂಭ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.