ಬ್ಲಿಂಕಿಟ್ ಕಾರ್ಮಿಕನನ್ನು ಭೇಟಿಯಾದ ಎಎಪಿ ನಾಯಕ ರಾಘವ್ ಚಡ್ಡಾ
ನವದೆಹಲಿ: ಕ್ವಿಕ್ ಕಾಮರ್ಸ್ ಕಂಪನಿಗಳ ‘10 ನಿಮಿಷಗಳ ವಿತರಣಾ ಸೇವೆ’ಯನ್ನು ರದ್ದುಗೊಳಿಸುವ ಮೂಲಕ ಗಿಗ್ ಕಾರ್ಮಿಕರ ಜೀವ ರಕ್ಷಿಸಬೇಕು ಎಂದು ಸಂಸತ್ ಅಧಿವೇಶನದ ವೇಳೆ ಸರ್ಕಾರವನ್ನು ಒತ್ತಾಯಿಸಿದ್ದ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ರಾಘವ್ ಚಡ್ಡಾ, ಇದೀಗ ಬ್ಲಿಂಕಿಟ್ ಕಂಪನಿಯಲ್ಲಿ ವಿತರಣಾ ಕೆಲಸ ಮಾಡುತ್ತಿದ್ದ ಯುವಕನನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಯುವಕನೊಬ್ಬ 15 ಗಂಟೆ ಕೆಲಸ ಮಾಡಿ 28 ವಿತರಣೆಯನ್ನು ಪೂರೈಸಿದರೂ ಒಂದು ದಿನದಲ್ಲಿ ₹763 ಹಣ ಗಳಿಸಿರುವುದಾಗಿ ‘ತಪ್ಲಿಯಾಲ್ ಜಿ ವ್ಲಾಗ್’ ಎನ್ನುವ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿತ್ತು.
ಇದರ ಬೆನ್ನಲ್ಲೇ ಯುವಕನನ್ನು ಭೇಟಿಯಾಗಿ ಊಟದ ಜತೆ, ಚಡ್ಡಾ ಸಂವಾದ ನಡೆಸಿದ್ದಾರೆ. ಈ ಬಗ್ಗೆ ಯುವಕ ವಿಡಿಯೊ ಮತ್ತು ಫೋಟೊಗಳನ್ನು ಹಂಚಿಕೊಂಡಿದ್ದಾರೆ.
‘ರಾಘವ್ ಚಡ್ಡಾ ಅವರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು. ಆನ್‌ಲೈನ್ ಡೆಲಿವರಿ ರೈಡರ್‌ಗಳ ಕೆಲಸ, ಅವರ ಕಷ್ಟದ ಕುರಿತು ಮಾತುಕತೆ ನಡೆಸಿದೆವು. ಸಾಮಾನ್ಯ ವ್ಯಕ್ತಿಯಂತೆ ಮಾತನಾಡಿದರು. ಒಟ್ಟಿಗೆ ಊಟ ಮಾಡಿದೆವು. ಒಬ್ಬ ಡೆಲಿವೆರಿ ಹುಡುಗನಿಗೆ ಇದು ಕೇವಲ ಭೇಟಿಯಾಗಿರಲಿಲ್ಲ, ಬದಲಾಗಿ ದೊಡ್ಡ ಅವಕಾಶವಾಗಿತ್ತು. ಗಿಗ್ ಕಾರ್ಮಿಕರ ಕಷ್ಟಕ್ಕೆ ಧನಿಯಾಗಿದ್ದಕ್ಕೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.
ರಾಜ್ಯಸಭೆಯಲ್ಲಿ ಗಿಗ್ ಕಾರ್ಮಿಕರ ಪರ ಧ್ವನಿಯೆತ್ತಿದ್ದ ಚಡ್ಡಾ, ‘ಡೆಲಿವರಿ ಸಿಬ್ಬಂದಿ ರೊಬೊಗಳಲ್ಲ. ಅವರು ಯಾರಿಗೋ ತಂದೆಯೋ, ಮಗನೋ, ಸಹೋದರನೋ, ಪತಿಯೋ ಆಗಿರುತ್ತಾರೆ. ಸದನವು ಇವರ ಬಗ್ಗೆಯೂ ಯೋಚಿಸಬೇಕು. ಹತ್ತು ನಿಮಿಷಗಳ ವಿತರಣಾ ಸೇವೆ ಕೊನೆಗೊಳ್ಳಬೇಕು’ ಎಂದಿದ್ದ ಅವರು, 'ತೀವ್ರ ಒತ್ತಡದಿಂದಾಗಿ ಗಿಗ್ ಕಾರ್ಮಿಕರು ತಮ್ಮ ಪ್ರಾಣವನ್ನೇ ಪಣಕ್ಕಿಡುವಂತೆ ಮಾಡುವುದು 'ಕ್ರೌರ್ಯ' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.