ADVERTISEMENT

ರಸ್ತೆಯಲ್ಲಿ ಸಿಂಹಗಳ ಪರೇಡ್‌; ಪ್ರಯಾಣಿಕರು ಗಪ್‌ಚುಪ್‌!

ಏಜೆನ್ಸೀಸ್
Published 14 ಜನವರಿ 2019, 13:22 IST
Last Updated 14 ಜನವರಿ 2019, 13:22 IST
   

ಕಾಡಿನ ರಾಜ ಸಿಂಹ, ವಾಹನ ಸಂಚರಿಸುವ ರಸ್ತೆಗಳಿಗೆ ಇಳಿದರೆ– ರೋಡ್‌ ಕಿಂಗ್‌?!

ಬಲಿಷ್ಟವಾಗಿ ಬೆಳೆದಿರುವ ನಾಲ್ಕು ಸಿಂಹಗಳು ಕಾರು, ಟ್ರಕ್‌, ಮನುಷ್ಯರತ್ತ ಮುಖವನ್ನೇ ತಿರುಗಿಸದೆ ಗತ್ತಿನಲ್ಲಿ ತಮ್ಮ ಪಾಡಿಗೆ ತಾವು ಗಂಭೀರ ನಡಿಗೆಯನ್ನು ಹಾಕುತ್ತ ಸಾಗುತ್ತಿದ್ದರೆ; ಕಾರಿನ ಕಿಟಕಿ ಗಾಜುಗಳನ್ನು ಪೂರ್ತಿ ಮೇಲೇರಿಸಿ ಮೊಬೈಲ್‌ ಕ್ಯಾಮೆರಾಗಳನ್ನು ತೆರೆದು ಕೈನಡುಗಿಸುತ್ತಲೇ ಪೋಟೊ–ವಿಡಿಯೊ ಮಾಡುವುದಷ್ಟೆ ಪ್ರಯಾಣಿಕರಿಗೆ ಇದ್ದ ಅವಕಾಶ.

ಸಿಂಹಗಳು ಮುನ್ನಡೆದಂತೆ ಕಾರುಗಳು ನಿಧಾನಕ್ಕೆ ಹಿಂದೆಯೇ ಸಾಗುತ್ತಿರುವ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ’ಲಯನ್ಸ್ ಆಫ್‌ ಕ್ರೂಗರ್‌ ಪಾರ್ಕ್‌ ಆ್ಯಂಡ್‌ ಸ್ಯಾಬಿ ಸ್ಯಾಂಡ್‌’ ಫೇಸ್‌ಬುಕ್ ಪುಟ ಕಳೆದ ಡಿ.28ರಂದು ಈ ವಿಡಿಯೊ ಅನ್ನು ಪ್ರಕಟಿಸಿಕೊಂಡಿದ್ದು, ಈವರೆಗೂ 22 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.

ADVERTISEMENT

ದಕ್ಷಿಣ ಆಫ್ರಿಕಾದ ಕ್ರೂಗರ್‌ ನ್ಯಾಷನಲ್‌ ಪಾರ್ಕ್‌ನಲ್ಲಿ 34 ಸೆಕೆಂಡ್‌ಗಳ ಈ ವಿಡಿಯೊ ಸೆರೆಹಿಡಿಲಾಗಿದೆ. 34 ಸಾವಿರಕ್ಕೂ ಹೆಚ್ಚುಶೇರ್‌ ಆಗಿರುವ ವಿಡಿಯೊ ಸಾವಿರಾರು ಕಮೆಂಟ್‌ಗಳನ್ನು ಪಡೆದಿದೆ. ’ಅದ್ಭುತ ದೃಶ್ಯ’, ’ಮಾತು ಹೊರಡಿಸದೆ ನೋಟ’,..ಹೀಗೆ ವೀಕ್ಷಕರು ಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಮನುಷ್ಯನಿಗೆ ಮೃಗಗಳನ್ನು ಕಂಡರ ಅಚ್ಚರಿ, ನಡುಕ ಮತ್ತು ಪ್ರೀತಿ ಎಲ್ಲವೂ ಒಮ್ಮಿಂದೊಮ್ಮೆಗೆ ಆಗುತ್ತದೆ. ವಿಡಿಯೊದಲ್ಲಿ ಕಾಣುವಂತೆ ಹತ್ತಿರವಿದ್ದೂ ಅವುಗಳ ಪಾಡಿಗೆ ಬಿಟ್ಟು ದೂರ ನಿಂತರೆ– ಕಾಡು, ಅಲ್ಲಿನ ಜೀವಿಗಳು ಸುರಕ್ಷಿತವೇ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.