ADVERTISEMENT

ವೈರಲ್ ವಿಡಿಯೊ | ಅಪ್ಪನ ಕಾಳಜಿ, ಪುಟ್ಟಿಯ ಸುಳ್ಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ನವೆಂಬರ್ 2019, 6:45 IST
Last Updated 6 ನವೆಂಬರ್ 2019, 6:45 IST
ಮಗಳ ಕಥೆ ಕೇಳುತ್ತಿರುವ ಅಪ್ಪ.
ಮಗಳ ಕಥೆ ಕೇಳುತ್ತಿರುವ ಅಪ್ಪ.   

ಇಷ್ಟವಾಯಿತೆಂದು ಶಾಲೆಯಿಂದ ಮನೆಗೆ ಬರುವಾಗಗೆಳೆತಿಯ ಜಾಕೆಟ್ ಧರಿಸಿ ಮನೆಗೆ ಬಂದ ಮಗಳನ್ನು ಅಪ್ಪ ಪ್ರೀತಿಯಿಂದ ವಿಚಾರಿಸುವ ರೀತಿ, ಇಷ್ಟದ ಜಾಕೆಟ್ ಬಿಟ್ಟುಕೊಡಲು ಒಲ್ಲದ ಮಗಳು ಹೆಣೆಯುವ ಮುಗ್ಧ ಸುಳ್ಳುಗಳ ಸರಮಾಲೆಗೆ ವೆಬ್ ಜಗತ್ತು ಭಾವುಕವಾಗಿದೆ.

ತನ್ನಲ್ಲದ ಜಾಕೆಟ್‌ ಬಗ್ಗೆ ಸುಳ್ಳು ಹೇಳಿದ 2 ವರ್ಷದ ಮಗು ಮಿಲಾನೆಟ್ಟಿಗರ ಅಪಾರ ಪ್ರೀತಿ ಗೆದ್ದುಕೊಂಡಿದ್ದಾಳೆ. ಇಂಥ ಪರಿಸ್ಥಿತಿಯನ್ನು ನಾಜೂಕಾಗಿ ನಿರ್ವಹಿಸಿದ ತಂದೆಯತ್ತಲೂ ನೆಟ್ಟಿಗರ ಪ್ರೀತಿ ಹರಿದಿದೆ.

ಕೆನಡಾ ಮೂಲದ ರನ್ಯಾ ಸಮರಾ ಮತ್ತು ಇಹಾಬ್‌ ರೆಹಮಾನ್‌ ದಂಪತಿಯ ಎರಡು ವರ್ಷದ ಮಗಳು ಮಿಲಾ.ಶಾಲೆಯಿಂದ ಬರುವಾಗ ತನ್ನಲ್ಲದ, ಆದರೆ ತಾನು ಇಷ್ಟಪಟ್ಟ ಜಾಕೆಟ್‌ ತೊಟ್ಟಿರುತ್ತಾಳೆ.ಇದನ್ನು ಗಮನಿಸಿದ ತಂದೆ ಇಹಾಬ್‌,‘ಇದು ಯಾವಜಾಕೆಟ್‌? ಎಲ್ಲಿಂದ ತಂದೆ?’ಎಂದು ಪ್ರಶ್ನಿಸುತ್ತಾನೆ.

ADVERTISEMENT

ತಂದೆಯ ಪ್ರಶ್ನೆಗೆ ಕಂಪನಿ ಪಿಆರ್‌ಒಗಳಂತೆ ನಿಖರವಾಗಿ ಉತ್ತರಿಸುವ ಮಿಲಾ... ತಾನು ಧರಿಸಿರುವ ಜಾಕೆಟ್‌ ಅನ್ನು 5 ಮನೀಸ್‌ (ಹಣ)ಗೆ ಖರೀದಿ ಮಾಡಿದೆ. ಇದು ಸೀಮಿತ ಆವೃತ್ತಿಯಾಗಿದ್ದು, ನನಗೆ ಸರಿಯಾಗಿ ಹೊಂದುತ್ತದೆ ಎಂದು ಹೇಳುತ್ತಾಳೆ.

ಆಗ ತಂದೆ ಜಾಕೆಟ್‌ ಕಲರ್‌ ಮತ್ತು ಬ್ರ್ಯಾಂಡ್‌ ಹೆಸರು ಕೇಳುತ್ತಾನೆ. ಅದಕ್ಕೂಅವಳು ಉತ್ತರ ನೀಡುತ್ತಾಳೆ. ತಂದೆ ಮತ್ತೆ ಪ್ರಶ್ನಿಸುತ್ತಾನೆ, ‘ಈ ತರಹದ ಜಾಕೆಟ್‌ ಅನ್ನು ನಿನ್ನ ಶಾಲೆಯಲ್ಲಿ ಯಾರಾದರೂ ಧರಿಸಿದ್ದರಾ?’

ತನ್ನ ಇಷ್ಟದ ಜಾಕೆಟ್‌ ಅನ್ನು ಬಿಡಲೊಲ್ಲದ ಮಿಲಾ ತೀವ್ರ ಅಮಾಯಕತೆಯಿಂದ ಕೂಡಿದ ಸುಳ್ಳನ್ನು ಹೇಳುತ್ತಾಳೆ, ’ಯಾರೂ ಧರಿಸಿರಲಿಲ್ಲ...’

ಆಗ ಮಿಲಾಳ ತಂದೆ, ‘ಈ ಜಾಕೆಟ್‌ ನಮ್ಮದಲ್ಲ. ಇದು ಯಾರಿಗೆ ಸೇರಿದೆಯೋ ಅವರಿಗೆ ಮರಳಿಸೋಣ,’ ಎನ್ನುತ್ತಾನೆ. ವಿಡಿಯೊ ಅಷ್ಟಕ್ಕೆ ಮುಗಿಯುತ್ತದೆ. ಆದರೆ ನಮ್ಮ ಮನಸ್ಸಿನಲ್ಲಿ ಏಳುವ ಭಾವನೆಗಳ ತರಂಗಗಳು ಅಲ್ಲ.

ಈ ವಿಡಿಯೊ ತುಣುಕನ್ನು ಮಿಲಾಳ ತಾಯಿಯ ತಂಗಿ ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಮಗುವಿನ ಮುಗ್ದ ಸುಳ್ಳುಗಳು ಜನರಿಗೆ ಪ್ರೀತಿಗೆ ಪಾತ್ರವಾಗಿವೆ. ಮಿಲಾಳ ಇಷ್ಟದ ಜಾಕೆಟ್‌ ಅನ್ನು ಅವಳಿಗೆ ಕೊಟ್ಟುಬಿಡಿ ಎಂದು ಟ್ವಿಟರ್‌ನಲ್ಲಿ ಸಾವಿರಾರು ಜನ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.