ADVERTISEMENT

ರಾಜಸ್ಥಾನ | ಮರುಭೂಮಿಯಲ್ಲಿ ಉಕ್ಕಿದ ನೀರು; ಸರಸ್ವತಿ ನದಿಯ ಉಗಮವೇ..? ನಡೆದ ಚರ್ಚೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 31 ಡಿಸೆಂಬರ್ 2024, 13:47 IST
Last Updated 31 ಡಿಸೆಂಬರ್ 2024, 13:47 IST
   

ಜೈಪುರ: ರಾಜಸ್ಥಾನದ ಜೈಸಲ್ಮೇರ್‌ ಬಳಿ ಕೊಳವೆಬಾವಿ ತೆರೆಯುವಾಗ ಉಕ್ಕಿದ ನೀರಿನಿಂದ ಮರುಭೂಮಿಯಲ್ಲಿ ಹೊಳೆ ಸೃಷ್ಟಿಯಾದ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ. ವೇದಗಳಲ್ಲಿ ಉಲ್ಲೇಖವಾಗಿರುವ ಸರಸ್ವತಿ ನದಿ ಮತ್ತೆ ಉಗಮವಾಗಿದೆ ಎಂಬುದರ ಕುರಿತು ಪರ ಹಾಗೂ ವಿರೋಧ ಚರ್ಚೆಗಳು ನಡೆಯುತ್ತಿವೆ. 

ಸಾವಿರಾರು ವರ್ಷಗಳ ಹಿಂದೆ ಇತ್ತು ಎನ್ನಲಾದ ಸರಸ್ವತಿ ನದಿ ಏಕಾಏಕಿ ಉಗಮವಾಗಿ, ಉಕ್ಕಿ ಹರಿದಿದ್ದು ಹೇಗೆ ಎಂಬ ಮಾತುಗಳನ್ನು ವಿಜ್ಞಾನ ಲೋಕ ಚರ್ಚಿಸುತ್ತಿದೆ. ಜತೆಗೆ ಅದನ್ನು ವೈಜ್ಞಾನಿಕ ನೆಲೆಯಲ್ಲಿ ವಾಸ್ತವಾಂಶದೊಂದಿಗೆ ಓರೆಗೆ ಹಚ್ಚುವ ಕೆಲಸವೂ ನಡೆಯುತ್ತಿದೆ.

ಜೈಸಲ್ಮೇರ್‌ ಬಳಿಯ ತಾರಾಘರ್‌ ಎಂಬ ಗ್ರಾಮದಲ್ಲಿ ಕೊಳವೆಬಾವಿ ಕೊರೆಯುವಾಗ ನೀರು ಮತ್ತು ಅನಿಲ ಉಕ್ಕಿದೆ. ಯಂತ್ರವು ಭೂಗರ್ಭವನ್ನು ಕೊರೆಯುತ್ತಾ 850 ಅಡಿ ಆಳಕ್ಕೆ ಇಳಿಯುತ್ತಿದ್ದಂತೆ, ದೊಡ್ಡದಾದ ಸದ್ದಿನೊಂದಿಗೆ ಒತ್ತಡದಲ್ಲಿದ್ದ ನೀರು ಉಕ್ಕಿ ಹರಿದಿದೆ. ಕೆಲ ಗಂಟೆಗಳಲ್ಲೇ ಆ ಪ್ರದೇಶದಲ್ಲಿ ಪ್ರವಾಹದಂತ ಪರಿಸ್ಥಿತಿ ಸೃಷ್ಟಿಯಾಗಿದೆ. ಒಂದು ಕೊಳವೂ ನಿರ್ಮಾಣಗೊಂಡಿದೆ. ಈ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ. 

ADVERTISEMENT

ಗ್ರಾಮದ ವಿಕ್ರಮ್ ಸಿಂಗ್‌ ಎಂಬುವವರ ಹೊಲದಲ್ಲಿ ಕೊಳವೆಬಾವಿ ಕೊರೆಯುವಾಗ ಈ ಘಟನೆ ನಡೆದಿದೆ. ಇವರು ವಿಶ್ವ ಹಿಂದೂ ಪರಿಷದ್‌ನ ಸದಸ್ಯ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ದೃಶ್ಯವನ್ನು ಹಂಚಿಕೊಂಡ ಹಲವರು ವೇದಗಳ ಸಾಕ್ಷಿ ನೀಡಿ, ಇದು ಸರಸ್ವತಿ ನದಿಯ ಮರು ಉಗಮ ಎಂದು ಬಣ್ಣಿಸಿದ್ದಾರೆ. ಋಗ್ವೇದದಲ್ಲಿ ಸರಸ್ವತಿ ನದಿಯ ಹೆಸರನ್ನು 80 ಬಾರಿ ಉಲ್ಲೇಖಿಸಲಾಗಿದೆ.. ಐದು ಸಾವಿರ ವರ್ಷಗಳ ಹಿಂದೆ ಕಣ್ಮರೆಯಾಗಿದ್ದ ಈ ನದಿ ಮತ್ತೆ ಹುಟ್ಟಿದೆ ಎಂದು ಹಲವರು ಬರೆದುಕೊಂಡಿದ್ದಾರೆ. ಹವಾಮಾನ ಬದಲಾವಣೆ ಮತ್ತು ಭೂಗರ್ಭದ ಪದರಗಳ ಸ್ಥಳಾಂತರ‌‌ ಸರಸ್ವತಿ ನದಿ ಕಣ್ಮರೆಗೆ ಕಾರಣ ಎಂದು ಹಲವರು ಹೇಳಿದ್ದಾರೆ.

ಭೂವಿಜ್ಞಾನಿಗಳ ಪ್ರಕಾರ ಭೂಗರ್ಭದಲ್ಲಿ ಕಲ್ಲು ಬಂಡೆಗಳ ನಡುವೆ ಒತ್ತಡದಲ್ಲಿ ಸಿಲುಕಿರುವ ನೀರು, ಹೊರಚಿಮ್ಮಿದಾಗ ಹೀಗೆ ರಭಸದಿಂದ ಹರಿಯುವುದು ಸಹಜ. ಜತೆಗೆ ನೀರು ಮರುಪೂರಣಗೊಂಡಿರುವ ಪ್ರದೇಶದಿಂದ ತಗ್ಗಿನ ಪ್ರದೇಶಕ್ಕೆ ಹರಿಯುವಾಗಲೂ ಹೆಚ್ಚಿನ ರಭಸ ಇರುತ್ತದೆ. ಬೆಣಚುಕಲ್ಲುಗಳ ಪದರಗಳ ನಡುವೆ ಸಿಲುಕಿದ್ದ ಅಪಾರ ಪ್ರಮಾಣದ ಅಂತರ್ಜಲವು, ಕೊಳವೆಬಾವಿ ಯಂತ್ರದ ಕೊರೆತದಿಂದ ಮುಕ್ತಿ ಸಿಕ್ಕಂತಾಗಿ ಹೊರಕ್ಕೆ ಚಿಮ್ಮಿದೆ. ಈ ಪರಿಸ್ಥಿತಿ ಇನ್ನೂ ಕೆಲ ದಿನ ಮುಂದುವರಿಯಬಹುದು’ ಎಂದಿದ್ದಾರೆ.

ಆದರೆ ಇದು ಸರಸ್ವತಿ ನದಿ ಹೌದೋ, ಅಲ್ಲವೋ ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.