ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯ ಅಂಕಿ ಅಂಶಗಳ ಪ್ರಕಾರ ಭಾರತದಲ್ಲಿ ಪ್ರತಿ ನಿತ್ಯ 96 ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ. ನೂರು ಪ್ರಕರಣಗಳ ಪೈಕಿ ತೊಂಬತ್ತುನಾಲ್ಕು ಪ್ರಕರಣಗಳಲ್ಲಿ ಅತ್ಯಾಚಾರ ನಡೆಯುವುದು ಪರಿಚಯವಿರುವವರಿಂದ! ನೆರೆಯವರು, ಪರಿಚಿತರು, ತಂದೆ ಮತ್ತು ಬಂಧುಗಳಿಂದ.
ಆದರೆ ಶಿಕ್ಷೆಗೆ ಗುರಿಯಾಗುತ್ತಿರುವ ಅತ್ಯಾಚಾರಿಗಳ ಸಂಖ್ಯೆ ಅತ್ಯಲ್ಪ. ಶೇಕಡಾ 94 ರಷ್ಟು ಪ್ರಕರಣಗಳಲ್ಲಿ ಅತ್ಯಾಚಾರಿಗಳ ಅಪರಾಧ ಸಾಬೀತಾಗದೆ ಬಿಡುಗಡೆಯಾಗುತ್ತಿದೆ. ವರದಿಯಾಗುವ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚಾದರೂ ಶಿಕ್ಷೆಗೊಳಗಾಗುವವರ ಸಂಖ್ಯೆ ಹೆಚ್ಚಾಗಿಲ್ಲ. ಇದಕ್ಕೆ ಕಾರಣ ಅತ್ಯಾಚಾರಕ್ಕೆ ಒಳಗಾದ ಕೂಡಲೇ, ಅತ್ಯಾಚಾರಕ್ಕೆ ಒಳಗಾದವರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅರಿವು ಇಲ್ಲದೆ ಇರುವುದು. ಇದರಿಂದ, ಅಪರಾಧ ಸಾಬೀತು ಪಡಿಸಲು ಅಗತ್ಯವಾದ ಮುಖ್ಯ ಸಾಕ್ಷ್ಯಗಳು ನಾಶವಾಗಿಬಿಡುತ್ತವೆ. ಅತ್ಯಾಚಾರಕ್ಕೆ ಒಳಗಾದ ವ್ಯಕ್ತಿಗೆ ತನಗಿರುವ ಹಕ್ಕುಗಳ ಬಗ್ಗೆ ತಿಳಿದಿರುವುದಿಲ್ಲವಾದ ಕಾರಣ ಅನೇಕ ಬಾರಿ ಕಾನೂನು ಪ್ರಕ್ರಿಯೆಗೆ ಹೆದರಿ ಸಮ್ಮನಾಗುವುದೂ ಒಂದು ಕಾರಣ.
ಅತ್ಯಾಚಾರ ನಡೆದ ಕೂಡಲೇ ಮುಖ್ಯವಾಗಿ ಕೈಗೊಳ್ಳಬೇಕಾದ ಕ್ರಮಗಳು
**ಕೂಡಲೇ ಹತ್ತಿರದ ಪೊಲೀಸು ಠಾಣೆಯಲ್ಲಿ ದೂರು ದಾಖಲಿಸಬೇಕು.
**ವೈದ್ಯಕೀಯ ಪರೀಕ್ಷೆಗೆ ಒಳಪಡುವವರೆಗೂ ಸ್ನಾನ ಮಾಡಬಾರದು, ಅತ್ಯಾಚಾರ ನಡೆದಾಗ ತೊಟ್ಟಿದ್ದ ಒಳ ಉಡುಪುಗಳನ್ನು ಬದಲಿಸಬಾರದು ಮತ್ತು ನಾಶ ಪಡಿಸಬಾರದು.
**ಕೃತ್ಯ ನಡೆದ ಸ್ಥಳವನ್ನು ಪೊಲೀಸರು ಬಂದು ಪರೀಕ್ಷಿಸುವವರೆಗೆ, ಸಾಧ್ಯವಾದಲ್ಲಿ ಹಾಗೆಯೇ ಕಾಪಾಡಬೇಕು.
**ದೂರು ದಾಖಲು ಮಾಡಿದ ನಂತರ ಸಹಿ ಮಾಡಿದ ಎಫ್‌ಐಆರ್‌ನ ಪ್ರತಿಯನ್ನು ತಪ್ಪದೆ ಕೇಳಿ ಪಡೆಯಬೇಕು.
**ಇವೆಲ್ಲ ವಿಚಾರಣೆಯ ವೇಳೆಯಲ್ಲಿ ಪ್ರಮುಖ ಸಾಕ್ಷ್ಯಗಳಾಗುತ್ತವೆ.
**ಅತ್ಯಾಚಾರಕ್ಕೆ ಒಳಗಾದ ವ್ಯಕ್ತಿಗೆ ಮತ್ತು ಅವಳ ಬಂಧುಗಳಿಗೆ ತಿಳಿದಿರಬೇಕಾದ ಕಾನೂನು ಅಂಶಗಳು: (ಭಾರತ ದಂಡ ಸಂಹಿತೆ, ದಂಡ ಪ್ರಕ್ರಿಯಾ ಸಂಹಿತೆ, ಭಾರತ ಸಾಕ್ಷ್ಯ ಅಧಿನಿಯಮ, ಪೋಕ್ಸೋ ಕಾಯಿದೆಗಳಲ್ಲಿ ಈ ವಿವರಗಳು ದೊರೆಯುತ್ತವೆ)
**ಅತ್ಯಾಚಾರಕ್ಕೆ ಒಳಗಾದ ವ್ಯಕ್ತಿಯ ಹೆಸರನ್ನು ಯಾರೂ ಬಹಿರಂಗಗೊಳಿಸುವಂತಿಲ್ಲ. ಹಾಗೆ ಬಹಿರಂಗಗೊಳಿಸಿದರೆ, ಎರಡು ವರ್ಷಗಳಿಗೆ ವಿಸ್ತರಿಸಬಹುದಾದ ಕಠಿಣ ಅಥವಾ ಸರಳ ಕಾರಾವಾಸ ಮತ್ತು ಜುಲ್ಮಾನೆಯ ಶಿಕ್ಷೆಗೆ ಗುರಿಪಡಿಸಲಾಗುತ್ತದೆ.
**ಯಾವುದೇ ಅತ್ಯಾಚಾರ ಪ್ರಕರಣದ ಬಗ್ಗೆ ನೀಡುವ ಮಾಹಿತಿ ಅಥವಾ ದೂರನ್ನು ದಾಖಲು ಮಾಡಿಕೊಳ್ಳಲು ಯಾರೇ ಪೊಲೀಸು ಅಧಿಕಾರಿಯೂ ನಿರಾಕರಿಸುವಂತಿಲ್ಲ ಮತ್ತು ದೂರನ್ನು ಮಹಿಳಾ ಪೊಲೀಸು ಅಧಿಕಾರಿಯೇ ದಾಖಲು ಮಾಡಿಕೊಳ್ಳಬೇಕು. ದೂರನ್ನು ದಾಖಲಿಸಿಕೊಳ್ಳಲು ನಿರಾಕರಿಸಿದರೆ ಅದನ್ನು ಹಿರಿಯ ಅಧಿಕಾರಿಯ ಗಮನಕ್ಕೆ ತರಬೇಕು. ದೂರನ್ನು ಸ್ವೀಕರಿಸಲು ನಿರಾಕರಿಸುವುದು ದಂಡನೀಯ ಅಪರಾಧ.
**ಅತ್ಯಾಚಾರಕ್ಕೆ ಒಳಗಾದ ವ್ಯಕ್ತಿಗೆ ಚಿಕಿತ್ಸೆ ನೀಡಲು ಯಾವುದೇ ಅಸ್ಪತ್ರೆಯ ವೈದ್ಯರೂ ನಿರಾಕರಿಸುವಂತಿಲ್ಲ. ಸರ್ಕಾರೀ ಹಾಗೂ ಖಾಸಗಿ ಆಸ್ಪತ್ರೆಗಳೆರಡೂ ಇದಕ್ಕೆ ಬದ್ಧ.
**ಅತ್ಯಾಚಾರಕ್ಕೆ ಒಳಗಾದ ಮಹಿಳೆಯ ವೈದ್ಯಕೀಯ ಪರೀಕ್ಷೆಯನ್ನು ಘಟನೆ ನಡೆದ 24 ಗಂಟೆಗಳೊಳಗಾಗಿ ನಡೆಸಬೇಕು. ವೈದ್ಯಕೀಯ ವರದಿ ಅತ್ಯಾಚಾರ ನಡೆದ ಬಗೆಗಿನ ಮಹತ್ವದ ಸಾಕ್ಷಿಯಾಗುತ್ತದೆ. ಆದರೆ ಇದಕ್ಕೆ ಮಹಿಳೆಯ ಒಪ್ಪಿಗೆ ಇರಬೇಕು. ಆದರೆ ಅತ್ಯಾಚಾರದ ಆರೋಪಿಯ ವೈದ್ಯಕೀಯ ಪರೀಕ್ಷೆಯನ್ನು ಅವನ ಒಪ್ಪಿಗೆಯಿಲ್ಲದಿದ್ದರೂ ನಡೆಸಲು ಅಧಿಕಾರವಿರುತ್ತದೆ.
**ದೂರು ನೀಡುವ ಮಹಿಳೆ ಲೈಂಗಿಕ ಕ್ರಿಯೆಗೆ ತನ್ನ ಒಪ್ಪಿಗೆ ಇರಲಿಲ್ಲವೆಂದು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದರೆ, ನ್ಯಾಯಾಲಯ ‘ಅವಳ ಒಪ್ಪಿಗೆ ಇರಲಿಲ್ಲ’ ಎಂದೇ ಭಾವಿಸುತ್ತದೆ. ಅದಕ್ಕೆ ಅವಳು ಸಾಕ್ಷ್ಯ ಒದಗಿಸಿ ರುಜುವಾತುಪಡಿಸಬೇಕಾಗಿಲ್ಲ.
**ದೂರು ನೀಡುವ ಮಹಿಳೆಯ ನಡತೆ ಅಥವಾ ಈ ಹಿಂದೆ ಅವಳು ಇತರ ವ್ಯಕ್ತಿಯೊಡನೆ ಲೈಂಗಿಕ ಸಂಪರ್ಕವನ್ನು ಹೊಂದಿದ್ದಳು ಎಂಬ ಅಂಶ ಇಲ್ಲಿ ಪ್ರಸ್ತುತ ವಾಗುವುದಿಲ್ಲ.
**ದೂರಿನ ಬಗೆಗೆ ನಡೆಸಬೇಕಾದ ತನಿಖೆಗೆ ಸಂಬಂಧಪಟ್ಟ ವಿಚಾರಣೆಯನ್ನು ಮಹಿಳೆ ವಾಸಿಸುವ ಸ್ಥಳದಲ್ಲಿಯೇ ನಡೆಸಬೇಕೇ ವಿನಃ ಮಹಿಳೆಯನ್ನು ಪೊಲೀಸು ಠಾಣೆಗೆ ಅಥವಾ ಬೇರೆ ಯಾವುದೇ ಸ್ಥಳಕ್ಕೆ ಕರೆಸುವಂತಿಲ್ಲ.
**ಮಹಿಳೆಯ ಮೇಲೆ ದೌರ್ಜನ್ಯ ಎಸಗಿದ್ದಾನೆಂಬ ಆರೋಪಕ್ಕೆ ಗುರಿಯಾಗಿರುವ ಸರ್ಕಾರದ ಯಾರೇ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರದ ಪೂರ್ವ ಅನುಮತಿ ಪಡೆಯಬೇಕಾದ ಅಗತ್ಯವಿರುವುದಿಲ್ಲ.
**ಅತ್ಯಾಚಾರ ಮೊಕದ್ದಮೆಗಳ ವಿಚಾರಣೆಯನ್ನು ಗೌಪ್ಯವಾಗಿ ನಡೆಸಬೇಕೆಂದು ಕಾನೂನು ಕಡ್ಡಾಯಗೊಳಿಸುತ್ತದೆ ಮತ್ತು ವಿಚಾರಣೆಗೆ ಸಂಬಂಧಿಸಿದ ಯಾವುವೇ ವಿವರಣೆಗಳನ್ನು ನ್ಯಾಯಾಲಯದ ಅನುಮತಿಯಿಲ್ಲದೆ ಯಾರೂ ಪ್ರಕಟಿಸುವಂತಿಲ್ಲ.
**ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಸಂದರ್ಭದಲ್ಲಿ, ಹಾಗೆ ಅತ್ಯಾಚಾರ ಎಸಗಿದ ಪ್ರತಿಯೊಬ್ಬರನ್ನೂ ಸಾಮೂಹಿಕ ಅತ್ಯಾಚಾರವೆಸಗಿದ ದೋಷಿಗಳೆಂದು ಪರಿಗಣಿಸಲಾಗುತ್ತದೆ. ಮಹಿಳೆ ಎಲ್ಲರ ವಿರುದ್ಧ ಪ್ರತ್ಯೇಕ ದೂರುಗಳನ್ನು ನೀಡುವ ಅಗತ್ಯವಿಲ್ಲ.
**ಹದಿನೆಂಟು ವರ್ಷದೊಳಗಿನ ಮಕ್ಕಳ ವಿರುದ್ಧ ಎಸಗಲಾದ ಲೈಂಗಿಕ ದೌರ್ಜನ್ಯದ ಸಂಬಂಧದಲ್ಲಿ, 2012 ರಲ್ಲಿ ಜಾರಿಗೆ ಬಂದ ‘ಲೈಂಗಿಕ ದೌರ್ಜನ್ಯಗಳ ವಿರುದ್ಧ ಮಕ್ಕಳಿಗೆ ರಕ್ಷಣೆ ಅಧಿನಿಯಮ’ (ಪೋಕ್ಸೊ)ಅನ್ವಯವಾಗುತ್ತದೆ. ಆದರೆ ಒಂದು ಅಪರಾಧ, ಈ ಕಾನೂನು ಮತ್ತು ಭಾರತ ದಂಡ ಸಂಹಿತೆಗಳೆರಡರ ಅಡಿಯಲ್ಲಿಯೂ ಶಿಕ್ಷಿಸಬಹುದಾದ ಅಪರಾಧವಾಗಿದ್ದರೆ, ಆಗ, ಇಂಥ ಕೃತ್ಯಕ್ಕೆ ಹೆಚ್ಚಿನ ಶಿಕ್ಷೆ ವಿಧಿಸಲು ಅವಕಾಶವಿರುವ ಕಾನೂನನ್ನು ಅನ್ವಯಿಸಿ ಹೆಚ್ಚಿನ ಶಿಕ್ಷೆ ವಿಧಿಸಬಹುದಾಗಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.