ADVERTISEMENT

ಅವಳು ಅವನು ಆದಾಗ...

ಕೆ.ಓಂಕಾರ ಮೂರ್ತಿ
Published 29 ಜೂನ್ 2012, 19:30 IST
Last Updated 29 ಜೂನ್ 2012, 19:30 IST

`ಅವಳು ನಿಜವಾಗಿಯೂ ಅವಳಲ್ಲ. ಆಕೆ ಪುರುಷ. ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮದುವೆ ಆಗುವುದಾಗಿ ಭರವಸೆ ನೀಡಿ ವಂಚಿಸಿದ್ದಾನೆ~


-ಖ್ಯಾತ ಅಥ್ಲೀಟ್ ಪಿಂಕಿ ಪ್ರಾಮಾಣಿಕ್ ವಿರುದ್ಧ, ಅವರ ಜೊತೆಯಲ್ಲಿಯೇ ವಾಸಿಸುತ್ತಿದ್ದ ಮಹಿಳೆಯೊಬ್ಬಳು ಈ ರೀತಿ ಆರೋಪ ಮಾಡಿದಾಗ ಅದೆಷ್ಟೋ ಮಂದಿ ಅಚ್ಚರಿ ಹಾಗೂ ಆಘಾತಕ್ಕೆ ಒಳಗಾಗಿದ್ದು ನಿಜ. ಅದರಲ್ಲೂ `ಪಿಂಕಿ ಮಹಿಳೆಯಲ್ಲ; ಪುರುಷ~ ಎಂಬುದು ಪ್ರಾಥಮಿಕ ವೈದ್ಯಕೀಯ ಪರೀಕ್ಷೆಯಿಂದ ಮೇಲ್ನೋಟಕ್ಕೆ ತಿಳಿದು ಬಂದಾಗ ಮತ್ತಷ್ಟು ಅಚ್ಚರಿ.

ಏಕೆಂದರೆ ಹೆಸರಾಂತ ಅಥ್ಲೀಟ್ ಪಿಂಕಿ ಏಷ್ಯನ್ ಹಾಗೂ ಕಾಮನ್‌ವೆಲ್ತ್ ಕ್ರೀಡಾಕೂಟದ ಪದಕ ವಿಜೇತೆ. ಭಾರತದ ಮಹಿಳಾ ಅಥ್ಲೆಟಿಕ್ಸ್ ವಲಯದಲ್ಲಿ ಸಂಚಲನ ಮೂಡಿಸ್ದ್ದಿದ ಅವರ ಮೇಲೆ ಈ ಹಿಂದೆ ಯಾವುದೇ ಅನುಮಾನ ಬಂದಿರಲಿಲ್ಲ. `ಜೂನಿಯರ್ ಪಿ.ಟಿ.ಉಷಾ~ ಎಂದೇ ಹೆಸರು ಗಳಿಸಿದ್ದ ಅವರ ವಿರುದ್ಧ ಸ್ಪರ್ಧೆ ವೇಳೆ ಕೂಡ ಬೇರೆ ಯಾವ ಅಥ್ಲೀಟ್ ದೂರು ನೀಡಿರಲಿಲ್ಲ.

ಆದರೆ ಈಗ ಇದ್ದಕ್ಕಿದ್ದಂತೆ `ಪಿಂಕಿ ಪುರುಷ~ ಎಂಬ ಆರೋಪ ಕೇಳಿ ಬಂದಿದ್ದು ಅಚ್ಚರಿಗೆ ಕಾರಣವಾಗಿದೆ. ಅತ್ಯಾಚಾರದ ದೂರಿನ ಮೇರೆಗೆ ಅವರನ್ನು ಬಂಧಿಸಲಾಗಿದೆ. ಆದರೆ ಪಿಂಕಿ ಲಿಂಗ ಯಾವುದು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅವರನ್ನು ಇನ್ನೂ ಹೆಚ್ಚಿನ ಪರೀಕ್ಷೆಗೆ ಒಳಪಡಿಸಲಾಗಿದೆ.

ಆದರೆ ಪಿಂಕಿ ಪ್ರಕರಣ ಈಗ ಹಲವು ಅನುಮಾನ, ಪ್ರಶ್ನೆ ಹಾಗೂ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ. ಆ ಮಹಿಳೆ ಮಾಡಿರುವ ಆರೋಪ ನಿಜವಾದಲ್ಲಿ ಪಿಂಕಿ ಅವರಲ್ಲಿ ಈ ಬದಲಾವಣೆ ಏಕಾಯಿತು? ಹುಟ್ಟಿನಿಂದಲೇ ಈ ಸಮಸ್ಯೆ ಇದೆಯೇ ಅಥವಾ ನಂತರ ಅವರ ದೇಹದಲ್ಲಿ ಈ ಅಸಮರ್ಪಕ ಬೆಳವಣಿಗೆ ನಡೆದಿದೆಯೇ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ.

ಕ್ರೀಡಾ ಕ್ಷೇತ್ರದಲ್ಲಿ ಈ ರೀತಿಯ ಪ್ರಕರಣ ಹೊಸದೇನಲ್ಲ. ಪದಕ ಗೆಲ್ಲುವ ಆಸೆಯಿಂದ 1960ರ ದಶಕದಲ್ಲಿಯೇ ಕೆಲ ಪುರುಷರು ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ಬಗ್ಗೆ ಅನುಮಾನ ಶುರುವಾಗಿತ್ತು. ಪುರುಷರಲ್ಲಿ ಆ್ಯಂಡ್ರೊಜನ್ (ಸ್ಟಿರಾಯ್ಡ ಹಾರ್ಮೋನ್) ಅಂಶ ಹೆಚ್ಚು ಇರುವುದರಿಂದ ಅಸಮಾನರ ನಡುವಿನ ಸ್ಪರ್ಧೆಗೆ ಕಾರಣವಾಗುತ್ತಿತ್ತು. ಹಾಗೇ, ಉಭಯ ಲಿಂಗ ಹೊಂದಿದವರು ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದರು. ಕೆಲ ವರ್ಷಗಳ ಹಿಂದೆ ತಮಿಳುನಾಡಿನ ಶಾಂತಿ ಸೌಂದರರಾಜನ್ ಹಾಗೂ ದಕ್ಷಿಣ ಆಫ್ರಿಕಾದ ಕೆಸ್ಟರ್ ಸೆಮೆನ್ಯಾ ಕೂಡ ಇಂತಹ ಆರೋಪಕ್ಕೆ ಒಳಗಾಗಿದ್ದರು.

ಆದರೆ ಪ್ರತಿಯೊಬ್ಬ ವ್ಯಕ್ತಿ, ಪ್ರತಿಯೊಬ್ಬ ಅಥ್ಲೀಟ್ ಆನುವಂಶಿಕವಾಗಿ ವಿಭಿನ್ನವಾಗಿರುತ್ತಾರೆ. ಒಬ್ಬ ಮಹಿಳೆ ಪುರುಷನಂತೆ ವರ್ತಿಸಲು ಹಲವು ಕಾರಣಗಳಿರುತ್ತವೆ. ಹಾಗೇ, ಒಬ್ಬ ಮಹಿಳೆಯು ಪುರುಷನಾಗಿ ಪರಿವರ್ತನೆ ಆಗಲು ನಾನಾ ಕಾರಣಗಳಿರುತ್ತವೆ.

ಅದರಲ್ಲೂ ಹೆಸರಾಂತ ಕ್ರೀಡಾಪಟುವಿಗೆ ಹಲವು ಲಾಭಗಳಿರುತ್ತವೆ. ಏಕೆಂದರೆ ಸತತ ತರಬೇತಿ, ದೈಹಿಕ ಕಸರತ್ತು, ಪೌಷ್ಟಿಕ ಆಹಾರ ಸೇವನೆ ಹಾಗೂ ಭೌಗೋಳಿಕ ಹಿನ್ನೆಲೆಯಿಂದ ಈ ರೀತಿ ಆಗಿರುತ್ತದೆ. ಆದರೆ ಹಿಂದಿನ ಘಟನೆಗಳನ್ನು ಪರಿಗಣಿಸಿದರೆ ಸುದೀರ್ಘ ಪರೀಕ್ಷೆಯಿಂದಲೂ ಒಬ್ಬ ಮಹಿಳೆಯು ಪುರುಷ ಎಂದು ನಿಖರವಾಗಿ ಗುರುತಿಸುವುದು ಕಷ್ಟ.

ಹಾಗೇ, ಹೆಚ್ಚು ಟೆಸ್ಟಾಸ್ಟಿರೋನ್ (ಲೈಂಗಿಕ ಹಾರ್ಮೋನ್) ಹೊಂದಿರುವ ಮಹಿಳೆಯರು ಉತ್ತಮ ಸಾಮರ್ಥ್ಯ ತೋರುತ್ತಾರೆ. ಇದನ್ನೇ ತಪ್ಪಾಗಿ ಅರ್ಥ ಮಾಡಿಕೊಂಡು ಆಕೆ ಮಹಿಳೆಯಲ್ಲ, ಪುರುಷ ಎಂಬ ಆರೋಪ ಎದುರಾಗಿದ್ದೂ ಇದೆ. ಹಾಗಾಗಿ ಕ್ರೀಡಾ ಕ್ಷೇತ್ರದಲ್ಲಿ ಲಿಂಗ ಪರಿಶೀಲನೆ ಹಲವು ವಿವಾದಗಳಿಗೆ ದಾರಿ ಮಾಡಿಕೊಟ್ಟಿದೆ.

ಈ ಸಮಸ್ಯೆಗೆ ಕಾರಣವೇನು?
`ಇಂಥ ಘಟನೆಗಳು ಸಾಮಾನ್ಯ. ಹಾರ್ಮೋನ್ ಅಸಮತೋಲನದಿಂದ ಕೆಲ ಮಹಿಳೆಯರಲ್ಲಿ ಈ ಸಮಸ್ಯೆ ಉದ್ಭವಿಸಬಹುದು. ಆನುವಂಶಿಕ ಅಂಶಗಳ ಕಾರಣದಿಂದ ಕೆಲ ಮಹಿಳೆಯರಲ್ಲಿ ಪುರುಷರ ಲಕ್ಷಣಗಳು ಕಂಡುಬರುತ್ತವೆ~ ಎಂದು ಸ್ತ್ರೀರೋಗ ತಜ್ಞ ಡಾ. ಬಾಬುಎಸ್.ಹುಣಗೂಡ್ ಹೇಳುತ್ತಾರೆ.

`ಪಿಂಕಿ ಸಾಮಾನ್ಯ ಮಹಿಳೆಯರಿಗಿಂತ ಹೆಚ್ಚಿನ ಪುರುಷ ಹಾರ್ಮೋನ್ ಹೊಂದಿದ್ದುದು ಹಿಂದೆಯೇ ಪತ್ತೆಯಾಗಿತ್ತು. ಆದರೂ ಅವರು ಏಷ್ಯನ್ ಕೂಟದಲ್ಲಿ ಸ್ಪರ್ಧಿಸಿದ್ದರು. ಆ ಬಳಿಕ ಅವರು ಅಂತರ ರಾಷ್ಟ್ರೀಯ ಕೂಟದಲ್ಲಿ ಪಾಲ್ಗೊಂಡಿಲ್ಲ. ಆದರೆ ತಿದ್ದುಪಡಿ ಆಗಿರುವ ನಿಯಮಗಳ ಪ್ರಕಾರ, ಸಾಮಾನ್ಯರಿಗಿಂತ ಹೆಚ್ಚಿನ ಪುರುಷ ಹಾರ್ಮೋನ್ ಹೊಂದಿದ್ದರೆ ಅಂತಹ ಮಹಿಳಾ ಅಥ್ಲೀಟ್ ಅನ್ನು ಸ್ಪರ್ಧೆಯಿಂದ ಹೊರಹಾಕುವಂತಿಲ್ಲ~ ಎನ್ನುತ್ತಾರೆ ಅಥ್ಲೆಟಿಕ್ ಫೆಡರೇಷನ್‌ನ ಅಧಿಕಾರಿಗಳು.

`ಸಾಮಾನ್ಯವಾಗಿ ಹುಟ್ಟಿನಿಂದಲೇ ಈ ಸಮಸ್ಯೆ ಇರುತ್ತದೆ. ಕ್ರಮೇಣ ಅದು ಹೆಚ್ಚಾಗುತ್ತಾ ಹೋಗುತ್ತದೆ. ಪುರುಷ ಹಾರ್ಮೋನ್ ಸಪ್ಲಿಮೆಂಟ್ಸ್ ತೆಗೆದುಕೊಳ್ಳುವುದರಿಂದ ಈ ರೀತಿ ಆಗುತ್ತದೆ. ಜೊತೆಗೆ ಕೆಲ ಮಹಿಳೆಯರ ಜೀವನ ಶೈಲಿಯೂ ಇದಕ್ಕೆ ಕಾರಣ.

ಆನುವಂಶಿಕವಾಗಿಯೇ ಇಂತಹ ಸಮಸ್ಯೆ ಸೃಷ್ಟಿಯಾಗುತ್ತದೆ. ಕೆಲ ಕ್ರೀಡಾಪಟುಗಳು ಕಠಿಣ ತರಬೇತಿ ಪಡೆಯುವುದರಿಂದ ಅವರಿಗೆ ಋತುಚಕ್ರದಲ್ಲಿ ಸಮಸ್ಯೆ ಉಂಟಾಗುತ್ತದೆ~ ಎನ್ನುತ್ತಾರೆ ಬೆಂಗಳೂರಿನ ಜಯನಗರದ ಆಸ್ಪತ್ರೆಯೊಂದರ ಸ್ತ್ರೀರೋಗ ತಜ್ಞೆ ಡಾ. ಎಸ್.ನಾಗಲಕ್ಷ್ಮಿ.

ಸ್ಪರ್ಧಿಸುತ್ತಿದ್ದ ಅವಧಿಯಲ್ಲಿ ಪಿಂಕಿ ವಿರುದ್ಧ ಯಾರೊಬ್ಬರೂ ದೂರು ನೀಡಿರಲಿಲ್ಲ. `ನಾವು ಹಲವು ಕ್ಯಾಂಪ್‌ಗಳಲ್ಲಿ ಒಟ್ಟಿಗೇ ಇದ್ದೆವು. ಉಳಿದ ಅಥ್ಲೀಟ್‌ಗಳಂತೆ ಪಿಂಕಿ ಕಠಿಣ ಪ್ರಯತ್ನ ಹಾಕಿ ಅಭ್ಯಾಸ ನಡೆಸುತ್ತಿದ್ದಳು. ಆಗ ಯಾವುದೇ ಅನುಮಾನ ಇರಲಿಲ್ಲ~ ಎನ್ನುತ್ತಾರೆ ಮಾಜಿ ಅಥ್ಲೀಟ್ ರಾಜ್ವೀಂದರ್ ಕೌರ್.

ಆದರೆ ಪಿಂಕಿ ಅಥ್ಲೆಟಿಕ್ಸ್‌ನಿಂದ ದೂರವಾದ ಮೇಲೆ ಲಿಂಗ ಪರಿವರ್ತನೆ ಮಾಡಿಕೊಂಡಿರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. `ಪಿಂಕಿ ಸ್ಪರ್ಧೆ ತ್ಯಜಿಸಿ ನಾಲ್ಕೈದು ವರ್ಷಗಳಾದ ಮೇಲೆ ಇಂತಹ ಆರೋಪ ಕೇಳಿಬಂದಿದೆ. ನನ್ನ ಪ್ರಕಾರ ಅವರು ಅಥ್ಲೆಟಿಕ್ಸ್‌ನಿಂದ ದೂರವಾದ ಮೇಲೆ ಲಿಂಗ ಪರಿವರ್ತನೆಗೆ ಒಳಗಾಗಿರಬಹುದು.

ಆದರೆ ಲಿಂಗ ಪರಿವರ್ತನೆ ಸಾಮಾನ್ಯ~ ಎನ್ನುತ್ತಾರೆ ಬೆಂಗಳೂರಿನ ಹೆಸರಾಂತ ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಶಾಂತಲಾ ಅರಸ್.

ಲಿಂಗ ನಿರ್ಧರಿಸುವ ಪರೀಕ್ಷೆ ಶುರುವಾಗಿದ್ದು...
1960ರ ದಶಕದಲ್ಲಿ ಕೆಲ ಪುರುಷ ಅಥ್ಲೀಟ್‌ಗಳು ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದ ಬಗ್ಗೆ ಅನುಮಾನ ಮೂಡಿತ್ತು. 1968ರ ಮೆಕ್ಸಿಕೊ ಸಿಟಿಯಲ್ಲಿ ನಡೆದ ಒಲಿಂಪಿಕ್ಸ್ ವೇಳೆ ಒಲಿಂಪಿಕ್ ಸಮಿತಿ ಈ ಪರೀಕ್ಷೆಯನ್ನು ಜಾರಿಗೆ ತಂದಿತ್ತು. ಅನಾಬೊಲಿಕ್ ಸ್ಟಿರಾಯ್ಡ ಸೇವನೆಯಿಂದ ಕೆಲ ಮಹಿಳಾ ಅಥ್ಲೀಟ್‌ಗಳ ಸ್ನಾಯುಗಳು ದಪ್ಪಗಾಗಿದ್ದವು. ಇದು ಅನುಮಾನಕ್ಕೆ ಕಾರಣವಾಗಿತ್ತು.

ಈ ಪರೀಕ್ಷೆ ವಿವಾದಕ್ಕೂ ಕಾರಣವಾಗಿದೆ. ಕ್ರೀಡೆಯಲ್ಲಿ ಲಿಂಗ ನಿರ್ಧರಿಸುವ ಸಂಬಂಧ ಅಂತರ ರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಸ್ಪಷ್ಟ ನಿಯಮ ರೂಪಿಸಿಲ್ಲ. ಜೊತೆಗೆ ಈ ಪರೀಕ್ಷೆ ಹಲವು ಪ್ರಕ್ರಿಯೆಗಳನ್ನು ಹೊಂದಿರುವುದು ಹಾಗೂ ದುಬಾರಿ ವೆಚ್ಚ ಎನ್ನುವುದು ಮತ್ತೊಂದು ಕಾರಣ.

ಇಷ್ಟು ಇದ್ದರೂ ಸ್ಪಷ್ಟ ತೀರ್ಪು ಬರುತ್ತಿರಲಿಲ್ಲ. ಹುಟ್ಟುವಾಗಲೇ ಮಹಿಳೆ ಸಮಸ್ಯೆ ಹೊಂದಿದ್ದರೆ ಅಥವಾ ದ್ವಿಲಿಂಗ ಸ್ವರೂಪ ಹೊಂದಿದ್ದರೆ ಏನು ಮಾಡುವುದು ಎಂಬುದಕ್ಕೆ ನಿಖರ ಉತ್ತರವಿರಲಿಲ್ಲ. ಸಾವಿರಕ್ಕೆ ಒಂದು ಮಗು ದ್ವಿಲಿಂಗ ಹೊಂದಿರುತ್ತದೆ ಎನ್ನಲಾಗುತ್ತದೆ.

1996ರ ಅಟ್ಲಾಂಟಾ ಒಲಿಂಪಿಕ್ಸ್‌ನಲ್ಲಿ ಎಂಟು ಮಂದಿ ಸಿಕ್ಕಿಬಿದ್ದಿದ್ದರು. ಆದರೆ ಬಳಿಕ ಅವರು ಆರೋಪ ಮುಕ್ತರಾದರು. ಕಾರಣ ಇವರೆಲ್ಲಾ ದ್ವಿಲಿಂಗ ಸ್ವರೂಪ ಹೊಂದಿದ್ದರು. ಒಬ್ಬ ಮಹಿಳೆ ಸಾಮಾನ್ಯ ಮಹಿಳೆಗಿಂತ ಹೆಚ್ಚು ಟೆಸ್ಟಾಸ್ಟಿರೋನ್ (ಲೈಂಗಿಕ ಹಾರ್ಮೋನ್) ಹೊಂದಿದ್ದರೆ ಅದರಿಂದ ಹೆಚ್ಚು ಲಾಭವಿದೆ. ಆದರೆ ಈ ಕಾರಣ ಸ್ಪರ್ಧೆಯಲ್ಲಿ ಪಾಲ್ಗೊಳ್ಳದಂತೆ ತಡೆಯೊಡ್ಡಬಹುದೇ ಎಂಬ ಪ್ರಶ್ನೆಯೂ ಎದುರಾಗಿತ್ತು.
 
ಪುರುಷರ ಟೆಸ್ಟಾಸ್ಟಿರೋನ್‌ಗಿಂತ ಹೆಚ್ಚಾದಲ್ಲಿ ಮಾತ್ರ ತಡೆಯೊಡ್ಡಬಹುದು ಎಂಬ ನಿರ್ಧಾರಕ್ಕೆ ಬರಲಾಗಿತ್ತು. ಹಾಗೇ, ಮಹಿಳೆಯರನ್ನು ಮಾತ್ರ ಪರೀಕ್ಷೆಗೆ ಒಳಪಡಿಸಲಾಗುತ್ತಿತ್ತು. ಈ ಎಲ್ಲಾ ಕಾರಣಗಳಿಂದ, 2000ರಲ್ಲಿ ನಡೆದ ಸಿಡ್ನಿ ಒಲಿಂಪಿಕ್ಸ್ ವೇಳೆಗೆ ಪರೀಕ್ಷೆಯನ್ನು ಒಲಿಂಪಿಕ್ಸ್ ಸಮಿತಿ ರದ್ದುಪಡಿಸಿತು. 

ಹಾಗಾಗಿ ಈಗ ಎಲ್ಲಾ ಮಹಿಳಾ ಅಥ್ಲೀಟ್‌ಗಳನ್ನೂ ಈ ಪರೀಕ್ಷೆಗೆ ಒಳಪಡಿಸುವುದಿಲ್ಲ. ಆದರೆ ಅನುಮಾನ ಬಂದಾಗ ಹಾಗೂ ಎದುರಾಳಿ ಕ್ರೀಡಾಪಟು ದೂರು ನೀಡಿದಾಗ ಪರೀಕ್ಷೆ ಮಾಡಬಹುದು.
 
ಒಲಿಂಪಿಕ್ಸ್ ನಿಯಮದ ಪ್ರಕಾರ, ಮಹಿಳೆಯಾಗಿ ಲಿಂಗ ಪರಿವರ್ತನೆ ಮಾಡಿಕೊಳ್ಳುವವರು ಸ್ಪರ್ಧಿಸಬಹುದು. ಶಸ್ತ್ರಚಿಕಿತ್ಸೆ ನಡೆದು ಎರಡು ವರ್ಷ ಆಗಿರಬೇಕು ಅಷ್ಟೆ. ಜೊತೆಗೆ ದೈಹಿಕ ಅಸಮತೋಲನ ಹೊಂದಿದ್ದರೆ ಅದಕ್ಕೆ ಚಿಕಿತ್ಸೆ ಪಡೆದು ಮಹಿಳೆಯರ ವಿಭಾಗದಲ್ಲಿ ಪಾಲ್ಗೊಳ್ಳಬಹುದು.

ಲಿಂಗ ನಿರ್ಧರಿಸುವ ಪರೀಕ್ಷೆ ಹೇಗೆ?

ADVERTISEMENT

ಮಹಿಳೆಯರ ದೇಹ ರಚನೆ, ದೇಹದ ಹೊರಗಿನ ರೂಪದಲ್ಲಿ ಅನುಮಾನ ಬಂದಾಗ ಹಾಗೂ ಬೇರೆ ಅಥ್ಲೀಟ್‌ಗಳು ದೂರು ನೀಡಿದಾಗ ಲಿಂಗ ನಿರ್ಧರಿಸುವ ಪರೀಕ್ಷೆ ಮಾಡಲಾಗುತ್ತದೆ.

ಇದರಲ್ಲಿ ಎರಡು ಹಂತದ ಪರೀಕ್ಷೆ ಇರುತ್ತದೆ. ಒಂದು ಪ್ರಾಥಮಿಕ ಹಾಗೂ ಎರಡನೇ ಹಂತದ ಉನ್ನತ ಪರೀಕ್ಷೆ. ಪ್ರಾಥಮಿಕ ಪರೀಕ್ಷೆಯಲ್ಲಿ ಬಾಹ್ಯ ರೂಪದ ಮೇಲೆ ಲಿಂಗ ನಿರ್ಧರಿಸಲಾಗುತ್ತದೆ. ಉದ್ದೀಪನ ಮದ್ದು ಸೇವನೆ ಪರೀಕ್ಷೆಗೆ ಮಾದರಿ ಸಂಗ್ರಹಿಸುವಾಗಲೂ ಕೆಲವು ಪರೀಕ್ಷೆಗಳನ್ನು ಮಾಡುತ್ತಾರೆ.

ಎರಡನೇ ಹಂತದಲ್ಲಿ ಅಥ್ಲೀಟ್‌ನ ಈಸ್ಟ್ರೊಜನ್ (ಮಹಿಳೆಯರಲ್ಲಿರುವ ಲೈಂಗಿಕ ಹಾರ್ಮೋನ್) ಹಾಗೂ ಹಾರ್ಮೋನ್ ಮಟ್ಟದ ಪರೀಕ್ಷೆ ನಡೆಸಲಾಗುತ್ತದೆ. ರಕ್ತ ಪರೀಕ್ಷೆ, ಎಂಆರ್‌ಐ ಸ್ಕ್ಯಾನ್, ಅಲ್ಟ್ರಾಸೊನೊಗ್ರಫಿ  ಹಾಗೂ ಆನುವಂಶಿಕ ಪರೀಕ್ಷೆ ಮಾಡಲಾಗುತ್ತದೆ. ವರ್ಣತಂತುಗಳಿಗೆ ಸಂಬಂಧಿಸಿದ ಕಾರಿಯೊಟೈಪ್ ಪರೀಕ್ಷೆ ಕೂಡ ಮಾಡಿಸಲಾಗುತ್ತದೆ. ಆದರೆ ಶೇಕಡಾ 100ರಷ್ಟು ಫಲಿತಾಂಶ ಕಂಡುಕೊಳ್ಳುವುದು ಕಷ್ಟ ಎಂಬುದು ಹಿಂದಿನ ಪರೀಕ್ಷೆಗಳಿಂದ ಸಾಬೀತಾಗಿದೆ.

ಆರಂಭದಲ್ಲಿ ಬಾಹ್ಯ ರಚನೆ ಹಾಗೂ ವರ್ಣತಂತು ಆಧಾರದ ಮೇಲೆ ಪರೀಕ್ಷೆ ನಡೆಸಲಾಗುತ್ತಿತ್ತು. ದೇಹದ ಕಣದಲ್ಲಿ ಲಿಂಗ ಸಂಬಂಧ ಎರಡು `ಎಕ್ಸ್~ ವರ್ಣತಂತುಗಳು ಇದ್ದರೆ ಮಹಿಳೆಯರು ಹಾಗೂ ಒಂದು `ಎಕ್ಸ್~ ಮತ್ತು ಒಂದು `ವೈ~ ವರ್ಣತಂತು ಇದ್ದರೆ ಪುರುಷ ಎಂದು ಗೊತ್ತಾಗುತ್ತಿತ್ತು. `ವೈ~ ವರ್ಣತಂತು ಇದ್ದ ಕೆಲವರ ದೇಹ ರಚನೆ ಮಹಿಳೆಯರಂತೆ ಇರುತ್ತದೆ. ಆದರೆ ಇದರಲ್ಲಿ ನಿಖರತೆ ಇರಲಿಲ್ಲ.
 

ಕ್ರೀಡಾ ಔಷಧ ತಜ್ಞ ಡಾ. ಕಿರಣ ಕುಲಕರ್ಣಿ ಹೇಳುವುದೇನು?
ಹುಟ್ಟಿನಿಂದಲೇ ಕೆಲವರಿಗೆ ಲಿಂಗ ಸಮಸ್ಯೆ ಇರುತ್ತದೆ. ಅಕಸ್ಮಾತ್ ಲಿಂಗ ಪರಿವರ್ತನೆ ಮಾಡಿಕೊಳ್ಳಬೇಕು ಎಂದರೆ ಅದಕ್ಕೆ ಕನಿಷ್ಠ ಆರು ವರ್ಷ ಬೇಕು. ರಾತ್ರಿ ಬೆಳಗಾಗುವುದರಲ್ಲಿ ಮಹಿಳೆ ಪುರುಷನಾಗುವುದು ಅಥವಾ ಪುರುಷ ಮಹಿಳೆಯಾಗುವುದು ಅಸಾಧ್ಯ. ಕೆಲವರು ನೋಡಲು ಗಂಡಸಿನಂತೆ ಕಾಣಿಸಬಹುದು. ಆದರೆ ಅವರು ಪೂರ್ಣವಾಗಿ ಮಹಿಳಾ ಅಂಗಾಂಗ ಹೊಂದಿರುತ್ತಾರೆ.

ಈಗ ಪಿಂಕಿ ಪ್ರಕರಣವನ್ನೇ ತೆಗೆದುಕೊಳ್ಳೋಣ. ಕೇವಲ ಬಾಹ್ಯ ರೂಪ ಹಾಗೂ ಪ್ರಾಥಮಿಕ ಪರೀಕ್ಷೆಯಿಂದ ಮಾತ್ರ ಪಿಂಕಿ ಪುರುಷ ಎಂದು ಹೇಳುತ್ತಿದ್ದಾರೆ. ಆದರೆ ಅದು ಸ್ಪಷ್ಟವಾಗಿ ಗೊತ್ತಾಗುವುದು ಎರಡನೇ ಹಂತದ ಪರೀಕ್ಷೆಯಿಂದ ಮಾತ್ರ.

ಈ ಹಂತದಲ್ಲಿ ಎಂಆರ್‌ಐ ಸ್ಕ್ಯಾನ್, ಅಲ್ಟ್ರಾಸೊನೊಗ್ರಫಿ  ಸೇರಿದಂತೆ ಹಲವು ಪರೀಕ್ಷೆಗಳನ್ನು ಮಾಡುತ್ತಾರೆ. ಹಾಗಾಗಿ ಪಿಂಕಿ ಪುರುಷ ಎಂದು ಈಗಲೇ ನಿರ್ಧಾರಕ್ಕೆ ಬರುವುದು ತಪ್ಪು.

ಹಾಗೇ, ಅವರು ಏಳೆಂಟು ವರ್ಷ ಅಥ್ಲೆಟಿಕ್ಸ್‌ನಲ್ಲಿದ್ದರು. ಈ ಸಂದರ್ಭದಲ್ಲಿ ಹಲವು ಬಾರಿ ಉದ್ದೀಪನ ಮದ್ದು ಸೇವನೆ ಪರೀಕ್ಷೆಗೆ ಒಳಗಾಗಿರುತ್ತಾರೆ. ಮೂತ್ರ ಮಾದರಿ ಸಂಗ್ರಹಿಸುವ ವೇಳೆ ವೈದ್ಯರು ನಿಯಮದ ಪ್ರಕಾರ ಅವರ ಲಿಂಗವನ್ನೂ ಗಮನಿಸಿರುತ್ತಾರೆ. ಅಕಸ್ಮಾತ್ ಆಕೆ ಪುರುಷನಾಗಿದ್ದಿದ್ದರೆ ಆಗಲೇ ಕ್ರಮ ಕೈಗೊಳ್ಳುತ್ತಿದ್ದರು.

ಉದ್ದೀಪನ ಮದ್ದು ಸೇವಿಸುವುದರಿಂದ ಕೆಲವರ ದೇಹದಲ್ಲಿ ಬದಲಾವಣೆ ಆಗುತ್ತದೆ. ಮಹಿಳೆಯಾಗಿದ್ದರೆ ಆಕೆಯಲ್ಲಿ ಮೀಸೆ, ಗಡ್ಡ ಬರುತ್ತದೆ. ಧ್ವನಿಯಲ್ಲಿ ಬದಲಾವಣೆ ಆಗುತ್ತದೆ. ಚರ್ಮ ಗಡುಸಾಗುತ್ತದೆ. ಹಾಗೇ, ಪುರುಷರಲ್ಲಿಯೂ ಹಲವು ದೈಹಿಕ ಬದಲಾವಣೆಗಳನ್ನು ಕಾಣಬಹುದು. ಆದರೆ ಆ ಬದಲಾವಣೆ ಕಂಡ ತಕ್ಷಣ ಆಕೆ ಪುರುಷ, ಆತ ಮಹಿಳೆ ಎಂದು ಹೇಳಲು ಆಗದು.
 

ಹಿಂದಿನ ಘಟನೆಗಳು

ಶಾಂತಿ ಸೌಂದರರಾಜನ್
ತಮಿಳುನಾಡಿನ ಅಥ್ಲೀಟ್ ಶಾಂತಿ ಸೌಂದರರಾಜನ್ `ಮಹಿಳೆಯಲ್ಲ ಪುರುಷ~ ಎಂಬ ಆರೋಪಕ್ಕೆ ಒಳಗಾಗಿದ್ದರು. ಶಾಂತಿ 2006ರ ದೋಹಾ ಏಷ್ಯನ್ ಕ್ರೀಡಾಕೂಟದ 800 ಮೀಟರ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಲಿಂಗ ಪರಿಶೀಲನೆ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದ ಕಾರಣ ಆ ಪದಕ ಹಿಂಪಡೆಯಲಾಗಿತ್ತು. 

 ಅಂದರೆ ಅವರು ದ್ವಿಲಿಂಗ ಹೊಂದಿದ್ದಾರೆ ಎಂದು ಹೇಳಲಾಗಿತ್ತು. ಇದಕ್ಕೆ `ಆ್ಯಂಡ್ರೊಜನ್ ಇನ್‌ಸೆನ್ಸಿಟಿವಿಟಿ ಸಿಂಡ್ರೋಮ್~ ಕಾರಣ ಎನ್ನಲಾಗಿತ್ತು. ಇದರ ಪ್ರಕಾರ 31 ವರ್ಷ ವಯಸ್ಸಿನ ಈ ಅಥ್ಲೀಟ್ ಬಾಹ್ಯರೂಪದಲ್ಲಿ ಮಹಿಳೆಯಂತೆ ಇದ್ದರೂ ಪುರುಷರ ಕ್ರೋಮೊಜೋಮ್ಸ (ವರ್ಣತಂತು) ಹೊಂದಿದ್ದಾರೆ ಎಂಬುದು ತಿಳಿದು ಬಂದಿತ್ತು. ಬಳಿಕ ಅವರ ಕ್ರೀಡಾ ಜೀವನವೇ ಅಂತ್ಯಗೊಂಡಿತು. ಅವಮಾನ ತಾಳಲಾರದೇ ಅವರೊಮ್ಮೆ ಆತ್ಮಹತ್ಯೆಗೂ ಪ್ರಯತ್ನಿಸಿದ್ದರು.

ಕೆಸ್ಟರ್ ಸೆಮೆನ್ಯಾ
2009ರಲ್ಲಿ ಬರ್ಲಿನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಮಹಿಳೆಯರ 800 ಮೀಟರ್ ಓಟದಲ್ಲಿ ದಕ್ಷಿಣ ಆಫ್ರಿಕಾದ ಸೆಮೆನ್ಯಾ ಚಿನ್ನದ ಪದಕ ಜಯಿಸಿದ್ದರು. ಆದರೆ ದಷ್ಟಪುಷ್ಟರಾಗಿ ಪುರುಷರಂತೆ ಕಾಣಿಸುತ್ತಿದ್ದ ಅವರು ಉಭಯ ಲಿಂಗ ಹೊಂದಿದ್ದಾರೆ ಎಂಬ ಆರೋಪಕ್ಕೆ ಒಳಗಾಗಿದ್ದರು.  ಆದರೆ ಹಲವು ಬಾರಿ ನಡೆಸಿದ ಲಿಂಗ ಪರೀಕ್ಷೆ ಬಳಿಕ ವಿಶ್ವ ಅಥ್ಲೆಟಿಕ್ ಫೆಡರೇಷನ್ ಸೆಮೆನ್ಯಾ ಅವರಿಗೆ ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸಲು ಅನುಮತಿ ನೀಡಿತು. ಆದರೆ ಅವರ ಲಿಂಗ ಯಾವುದೆಂಬುದನ್ನು ಇನ್ನೂ ಬಹಿರಂಗಪಡಿಸಿಲ್ಲ. ಅವರೀಗ ಲಂಡನ್ ಒಲಿಂಪಿಕ್ಸ್‌ಗೂ ಅರ್ಹತೆ ಪಡೆದಿದ್ದಾರೆ.

ಪರೀಕ್ಷೆ ಮಾಡುವವರು ಯಾರು?
ಸ್ತ್ರೀರೋಗ ತಜ್ಞರು, ಎಂಡೊಕ್ರಿನೊಲಜಿಸ್ಟ್ (ಅಂತಃಸ್ರಾವಶಾಸ್ತ್ರ- ಹಾರ್ಮೋನ್ ಸಂಬಂಧಿ ರೋಗಗಳ ಬಗ್ಗೆ), ರೇಡಿಯಾಲಜಿಸ್ಟ್, ಮನಃಶಾಸ್ತ್ರಜ್ಞರು, ಕ್ರೀಡಾ ಔಷಧಿ ತಜ್ಞರು, ಜೆನೆಟಿಕ್ ಪರಿಣತರು ಹಾಗೂ ದೇಹ ರಚನಾ ಶಾಸ್ತ್ರಜ್ಞರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.