ADVERTISEMENT

ಕಷ್ಟಗಳ ಕುಲುಮೆಯಲ್ಲಿ...

ಅಂತರ್ಯುದ್ಧ

ವಿ.ಬಾಲಕೃಷ್ಣನ್
Published 24 ಜನವರಿ 2014, 19:30 IST
Last Updated 24 ಜನವರಿ 2014, 19:30 IST
ಕಷ್ಟಗಳ ಕುಲುಮೆಯಲ್ಲಿ...
ಕಷ್ಟಗಳ ಕುಲುಮೆಯಲ್ಲಿ...   

ಇಬ್ಬರು ಮಹಿಳೆಯರು ಬೈಬಲ್‌ ಓದುತ್ತಿದ್ದರು. ಅವರಲ್ಲಿ ಒಂದು ವಾಕ್ಯ ‘ಅಕ್ಕಸಾಲಿಗ ಲೋಹವನ್ನು ಕುಲುಮೆ ಯಲ್ಲಿ ಇಟ್ಟು ಕಾಯ್ತಾನೆ’ ಅಂತ ಇತ್ತು.  ಅವರಿಗದು ಅರ್ಥವೇ ಆಗಲಿಲ್ಲ. 

ಸ್ವಲ್ಪ ದಿನಗಳ ನಂತರ ಅಕ್ಕಸಾಲಿಗನ ಹತ್ತಿರ ಹೋಗುವ ಸಂದರ್ಭ ಬರುತ್ತದೆ. ಇವರಿಗೆಲ್ಲ ಬೈಬಲ್‌ನಲ್ಲಿರುವ ವಾಕ್ಯದ ನೆನಪಾಗುತ್ತದೆ. ಅವನ ಬಳಿ ಆ ವಾಕ್ಯದ ಅರ್ಥ ತಿಳಿಸಲು ಕೇಳಿಕೊಂಡರು. 

ಅದಕ್ಕೆ ಅವನು ಇಡೀ ಪ್ರಕ್ರಿಯೆಯನ್ನು ತೋರಿಸುವುದಾಗಿ ಹೇಳಿದ.  ‘ನಾನು ಆ ಲೋಹವನ್ನು ಬೆಂಕಿಯಲ್ಲಿ ಇಟ್ಟು ಕಾಯಿಸುತ್ತೇನೆ. ಅದಕ್ಕೆ ಮೌಲ್ಯ ಸಿಗಬೇಕು ಅಂದ್ರೆ ಅದರಲ್ಲಿ ಬೇಡದೆ ಇರುವ  ವಸ್ತು ನಾಶವಾಗಬೇಕು. ಅದು ಹೊಳೆಯಲಿ ಎಂದು ಬೆಂಕಿಯಲ್ಲಿ ಇಡಬೇಕು’ ಎಂದು ಹೇಳುತ್ತಲೇ ಬೆಳ್ಳಿಯನ್ನು ಕಾಯಿಸುವುದನ್ನು ತೋರಿಸಿದ.

ಬೆಂಕಿಯ ನಡುವೆಯೇ ಯಾಕಿಡಬೇಕು?  ಹೊರಗಡೆ ಇಟ್ಟರೆ ನಿನಗೂ ಕಷ್ಟವಾಗುವುದಿಲ್ಲ ಎಂದು ಅವರು ಮತ್ತೆ ಪ್ರಶ್ನಿಸಿದರು. ಬೆಂಕಿಯ ನಡುವೆ ಇಟ್ಟರೆ ಹೆಚ್ಚು ತಾಪ ದೊರೆಯುತ್ತದೆ. ಈ ಬೆಂಕಿಯಲ್ಲಿ ಮಾತ್ರ ಬೇಡದ ವಸ್ತುಗಳು ಸುಟ್ಟು, ನಿಜವಾದ ಲೋಹ ಮಾತ್ರ ಉಳಿಯುತ್ತದೆ. ಅದರ ನಿಜಗುಣ ಹೊಳೆಯುತ್ತದೆ’ ಎಂದುತ್ತರಿಸುತ್ತಾನೆ. ಹಾಗಿದ್ದಲ್ಲಿ ಕುಲುಮೆಯ ನಡುವೆ ಇಟ್ಟು, ನೀನೂ ಯಾಕೆ ಕಾಯುವೆ? ಅದು ಸುಡುವವರೆಗೂ ನೀನು ಇತರ ಕೆಲಸಗಳನ್ನು ಮಾಡಬಹುದಲ್ಲ ಎಂದು ಪ್ರಶ್ನಿಸುತ್ತಾರೆ.

ಹಾಗೆ ಅದನ್ನು ಗಮನವಿಟ್ಟು ನೋಡದಿದ್ದರೆ, ಕೇವಲ ಬೇಯಲು ಮಾತ್ರ ಬಿಟ್ಟರೆ ಆ ಲೋಹವೂ ಸುಡುವ ಸಾಧ್ಯತೆ ಇರುತ್ತದೆ. ತಾಪ ಹೆಚ್ಚಾದಾಗ ಬೆಂಕಿಯಿಂದ ತೆಗೆಯುತ್ತೇನೆ. ತಣಿಸುತ್ತೇನೆ. ಮತ್ತೆ ಬೆಂಕಿಗೆ ಇಡುತ್ತೇನೆ. 

ಅದು ಬೆಂದಿದೆ ಎಂದು ಹೇಗೆ ಗೊತ್ತಾಗುತ್ತದೆ? ಹೇಗೆ ತೀರ್ಮಾನಕ್ಕೆ ಬರುವೆ? ಈ ಕೆಲಸ ಎಲ್ಲಿಯವರೆಗೆ ಹೀಗೇ ಮುಂದುವರಿಯುತ್ತದೆ? ಎಂದು ಕೇಳಿದರು.

ಅತಿ ಬಿಸಿಯಾಗಿ, ಅದರಲ್ಲಿ ಮಿಶ್ರಣವಾದ ಕೃತಕ ಧಾತುಗಳೆಲ್ಲ ಸುಟ್ಟು, ಲೋಹಕ್ಕೆ ಕಾವು ತಾಕಿತು ಎನ್ನುವಾಗ, ಕುಲುಮೆಯಿಂದ ಅದನ್ನು ತೆಗೆಯುತ್ತೇನೆ. ತಣಿಯಲು ಬಿಡುತ್ತೇನೆ. ತಂಪಾದ ನಂತರ ಮತ್ತೆ ಕುಲುಮೆಗೆ ಒಡ್ಡುತ್ತೇನೆ. 

ಹೀಗೆ ಅದೆಷ್ಟು ಸಲು ಅಂತ ಮಾಡ್ತೀಯ? ಎಷ್ಟು ಬಾರಿ ಸುಟ್ಟರೆ ನಿಜವಾದ ಲೋಹ ದೊರೆಯುತ್ತದೆ? ಎಣಿಕೆ ಮಾಡಿ, ಪರಿಶುದ್ಧ ಲೋಹ ಪಡೆಯುವುದು ಅಸಾಧ್ಯ. ಆ ಲೋಹದಲ್ಲಿ ನನ್ನ ಪ್ರತಿಬಿಂಬ ಕಾಣುವವರೆಗೂ ಸುಡುವುದು, ತಣಿಸುವುದು ನಡೆದೇ ಇರುತ್ತದೆ. ನನ್ನ ಪ್ರತಿಬಿಂಬ ಕಂಡಾಗ ಅದರಲ್ಲಿರುವ ಎಲ್ಲ ಗುಣಗಳೂ ಕಳೆದು, ಲೋಹ ಪರಿಶುದ್ಧವಾಗಿದೆ ಎಂದರ್ಥವಾಗುತ್ತದೆ.

ಅಕ್ಕಸಾಲಿಗ ಅವನು, ಲೋಹ ನಾವು, ಕಠಿಣ ಪರೀಕ್ಷೆಗೆ ಒಡ್ಡುತ್ತಾನೆ. ಕಷ್ಟಗಳನ್ನು ಕೊಡ್ತಾನೆ. ಪ್ರತಿಸಲವೂ ಕಷ್ಟಗಳ ಬೆಂಕಿಮಳೆಗೆ ಇನ್ನೇನು ಸಾವಿಗೆ ಶರಣಾಗಬೇಕು ಎನ್ನಿಸುತ್ತದೆ. ಆದರೆ ಅಷ್ಟರಲ್ಲಿ ದೇವರು ಒಂದು ಸಣ್ಣ ನಿರಾಳತನವನ್ನೂ ದಯಪಾಲಿಸುತ್ತಾನೆ. ನಂತರ ಮತ್ತೆ ಕಷ್ಟಗಳು ಬಂದೆರಗುತ್ತವೆ. ಒಮ್ಮೆ ಎದುರಿಸಿದ ಧೈರ್ಯ ಎದ್ದರೂ, ಇನ್ನು ತಡೆಯಲಾಗದು ಎಂದು ಮತ್ತೆ ದೇವರ ಶರಣು ಹೋಗುತ್ತೇವೆ. ಆಗ ಮತ್ತೆ ಪರಿಹಾರ ದೊರೆತಿರುತ್ತದೆ.  ಪ್ರತಿ ಸಲ ಕಷ್ಟ ಬಂದಾಗಲೂ ಅದನ್ನು ಎದುರಿಸುವ ಸಾಮರ್ಥ್ಯವೂ ಇದ್ದೇ ಇರುತ್ತದೆ. ಪ್ರತಿಸಲವೂ ಹೊಸ ಚೇತನ ನೀಡುತ್ತಾನೆ.

ಎಲ್ಲೀ ತನಕ ಅವನ ಪ್ರತಿಬಿಂಬ ನಮ್ಮಲ್ಲಿ ಕಾಣಿಸಲ್ವೋ ಅಲ್ಲೀವರೆಗೂ ಸವಾಲುಗಳೆಲ್ಲವೂ ಸಮಸ್ಯೆಗಳಾಗಿಯೇ ಕಾಣುತ್ತವೆ. 
ದೇವರು ಮನುಷ್ಯ ಯಾಕೆ ಆದ ಅಂದ್ರೆ ವಾಪಸ್‌ ಮನುಷ್ಯ ದೇವರು ಆಗೋಕೆ ಒಂದು ಅವಕಾಶ. ಅಲ್ಲೀತನಕ ನಮಗೆ ಕಷ್ಟ ಇರುತ್ತೆ. ನೀವು ಎಷ್ಟು ಜಾಸ್ತಿ ಅಳುತ್ತೀರೋ ಅಷ್ಟು ಹೊತ್ತು ನೀವು ಒಲೆಯಲ್ಲೇ ಇರಬೇಕಾಗುತ್ತೆ. ತಾತ್ಕಾಲಿಕವಾಗಿ ತೆಗೀತಾನೆ ಮತ್ತೆ ‘ಅಬ್ಬಾ’ ಅಂತ ಉಸಿರು ತಗೋಳೋ ಅಷ್ಟರಲ್ಲಿ ಮತ್ತೆ ಇಡ್ತಾನೆ.  ನಮ್ಮಲ್ಲಿ ಸಂಪೂರ್ಣ ಪರಿವರ್ತನೆ ಬರುವವರೆಗೂ ಸುಡುತ್ತಲೇ ಇರುತ್ತಾನೆ.

ಎಲ್ಲೀತನಕ ಹತ್ತನೆ ತರಗತಿ ಪಾಸು ಆಗಲ್ವೋ ಅಲ್ಲೀತನಕ ಪರೀಕ್ಷೆ ಬರೀತಾನೇ ಇರಬೇಕು. ಒಂದು ಸಲ ಪಾಸು ಆದ ಮೇಲೆ  ಶಿಕ್ಷಣ ಮತ್ತೆ ಮುಂದುವರಿಯುತ್ತದೆ. ಒಂದೊಂದೇ ಹಂತಗಳನ್ನು ಪಾಸಾಗುತ್ತ ಬಂದ ಮೇಲೆ, ಬದುಕು ಎದುರಿಸುವುದನ್ನು ಕಲಿತಿರುತ್ತೀರಿ. ದೇವರು ಕೊಡುವ ಕಷ್ಟಗಳೆಲ್ಲವೂ ನಮ್ಮ ಒಳಿತಿಗೆ ಅಂತ ಅರ್ಥ ಮಾಡಿಕೊಂಡು ಅವನ್ನು ಅನುಭವಿಸಬೇಕು. 

ಕಷ್ಟದಿಂದ ಶಾಶ್ವತವಾಗಿ ಆಚೆ ಬರಬೇಕು ಅಂತಿದ್ರೆ ಅವನೇನು ಕೊಡ್ತಾನೋ ಸಂತೋಷದಿಂದ ಸ್ವೀಕರಿಸಲು ಸಿದ್ಧರಾಗಬೇಕು. ಒಂದಂತೂ ನಮಗೆಲ್ಲಾ ಗೊತ್ತೇ ಇದೆ. ಆಗುವುದೆಲ್ಲವೂ ನಮ್ಮ ಒಳಿತಿಗೆ. ಆಗುತ್ತಿರುವುದೆಲ್ಲವೂ ನಮ್ಮ ಒಳಿತಿಗೆ.  ಆಗಲಿರುವುದೂ ನಮ್ಮ ಒಳಿತಿಗಾಗಿಯೇ ಎಂದು.

ಬಲುಬೇಗ ದೇವರ ಅಂಶ ನಮ್ಮಲ್ಲಿ ಪ್ರತಿಬಿಂಬಿಸುವಂತಾಗಬೇಕು. ಆಗ ಮಾತ್ರ  ಕಷ್ಟಗಳು ಕಷ್ಟಗಳೆನಿಸುವುದಿಲ್ಲ. ಇಲ್ಲದಿದ್ದರೆ ಕಷ್ಟಗಳಲ್ಲಿ ಬೇಯುವುದು, ತಣಿಯುವುದು... ಬೇಯುವುದು ತಣಿಯುವುದು... ಪರಿವರ್ತನೆಯ ಈ ಚಕ್ರ ಸುತ್ತತ್ತಲೇ ಇರುತ್ತದೆ.
ಎಲ್ಲದಕ್ಕೂ ಯಾವಾಗಲೂ ನಾವು ಸಿದ್ಧ ಇರಬೇಕು. ಎಲ್ಲರಿಗೂ ಯಾವುದೋ ಒಂದು ರೀತಿ ಕಷ್ಟ ಇರುತ್ತೆ ನಮ್ಮನ್ನು ಬೆಳೆಸಬೇಕು, ನಮ್ಮ ಸಾಮರ್ಥ್ಯದ ಅರಿವು ನಮಗಾಗಲಿ ಎಂದೇ ಕಷ್ಟಗಳನ್ನು ಕೊಡುತ್ತಾನೆ. ಅದನ್ನು ಸಂತೋಷವಾಗಿ ಸ್ವೀಕರಿಸುವ ಮನಃಸ್ಥಿತಿ ಬರುವವರೆಗೂ ಈ ಕಷ್ಟಗಳು ಬಂದೆರಗುತ್ತಲೇ ಇರುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.