ADVERTISEMENT

ಕೊಟ್ಟ ಹೆಣ್ಣಿನ ಕಣ್ಣೀರ ಧಾರೆ...

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 19:30 IST
Last Updated 16 ಸೆಪ್ಟೆಂಬರ್ 2011, 19:30 IST

ಆಕೆ ಅನುಭವಿಸಿದ್ದು ಬರೋಬ್ಬರಿ ಇಪ್ಪತ್ತು ವರ್ಷಗಳ ನಿರಂತರ ಹಿಂಸೆ, ದೌರ್ಜನ್ಯ! ಅವಳ ತಪ್ಪಾದರೂ ಏನು? ಹಿಂಸಿಸುವುದನ್ನೇ ಆನಂದಿಸಿದ ಆತನಿಗೂ ಗೊತ್ತಿಲ್ಲ. ಗಂಡನೆನಿಸಿಕೊಂಡ ಪುರುಷಮೃಗ ಅಷ್ಟೂ ವರ್ಷಗಳೂ ಹಗಲು ರಾತ್ರಿಯೆನ್ನದೆ ಕೈಗೆ ಸಿಕ್ಕಿದ ವಸ್ತುಗಳಲ್ಲಿ ಹೆಂಡತಿಯನ್ನು ಚಚ್ಚುತ್ತಿದ್ದ! ಹೆತ್ತವರಿಗೆ ಮಗನ ವರ್ತನೆಯಲ್ಲಿ ತಪ್ಪೇನೂ ಕಾಣಿಸಲಿಲ್ಲ. ಕೈಯಿಟ್ಟರೇ ಕಚಗುಳಿಯಾಗುವಂತಹ ಸೂಕ್ಷ್ಮ ಜಾಗಗಳನ್ನು ಸಿಗರೇಟಿನಿಂದ ಸುಟ್ಟಾಗ ತಾನಿಟ್ಟ ಆರ್ತಮೊರೆಗೆ ಹೆತ್ತ ಕರುಳಾದರೂ ಅಯ್ಯೋ ಅನ್ನುತ್ತದೋ ಎಂದು ಆ ಎರಡು ದಶಕ ಕಾದಳು ಆ ಸಹನಶೀಲೆ. ಊಹೂಂ...

~ಗಂಡ ಏನೇ ಮಾಡಿದರೂ ಸಹಿಸಿಕೋ, ನಾನೂ ಹಾಗೇ ಬಾಳಿದೋಳು ನನ್ನ ಗಂಡ ನನಗೆ ನಿತ್ಯ ಹೊಡೆಯುತ್ತಿದ್ದ ಆದರೂ ನಾನು ನಿದ್ದೆ ಹೋಗುವ ಮುನ್ನ ಅವನ ಪಾದ ಮುಟ್ಟಿ ನಮಸ್ಕರಿಸಿ ಕಣ್ಣಿಗೆ ಒತ್ತಿಕೊಳ್ಳುತ್ತಿದ್ದೆ. ನನಗೇನಾಗಿದೆ? ಗಂಡ, ಹೆಂಡತಿಗೆ ಹೊಡೆಯದೆ ಹೆಂಡತಿ ಗಂಡನಿಗೆ ಹೊಡೆಯಕ್ಕಾಗುತ್ತಾ?... ಗಂಡನನ್ನು ಬಿಟ್ಟು ಬಂದರೆ ಮನೆಯಿಂದಷ್ಟೇ ಅಲ್ಲ ಕುಟುಂಬದಿಂದಲೇ ಹೊರಹಾಕುತ್ತೇವೆ ಹುಷಾರ್‌~ ಎಂದು ಅಬ್ಬರಿಸಿದಳು ಆ ಮಹಾತಾಯಿ. ಅದೊಂದು ದಿನ `ಅಳಿಯದೇವರು~ ಕಬ್ಬಿಣದ ಸರಳಿನಿಂದ ಮಗಳನ್ನು ತನ್ನ ಕಣ್ಣೆದುರೇ ಬಡಿಯುತ್ತಿದ್ದರೂ ಆಕೆಯ ಮನಸ್ಸು ಕರಗಲಿಲ್ಲ! ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ!

 ಆದರೆ ಈ ಎಲ್ಲಾ ಅನ್ಯಾಯಗಳನ್ನು ಕಂಡು ಪುಟ್ಟ ಹೃದಯವೊಂದು ಮಮ್ಮಲ ಮರುಗುತ್ತಿತ್ತು. ಹದಿನೈದು ವರ್ಷ ಅಸಹಾಯಕತೆಯ ಕಣ್ಣೀರು ಹರಿಸಿದ ಆ ಕರುಳಕುಡಿ ಹದಿನಾರರ ಹೊಸಲು ತುಳಿಯುತ್ತಿದ್ದಂತೆ ತಾಯಿಯ ದೌರ್ಜನ್ಯಕ್ಕೆ ಇತಿಶ್ರೀ ಹಾಡಲು ಮುಂದಾಯಿತು. ಪತ್ನೀಪೀಡಕ ಈಗ ಕಂಬಿ ಹಿಂದೆ ಬಂದಿ.

~ಕೌಟುಂಬಿಕ ದೌರ್ಜನ್ಯವೆನ್ನುವುದೇ ಒಂದು ನರಕಯಾತನೆ. ಅದರ ವಿರುದ್ಧ ಕಾನೂನಿನ ಮೊರೆ ಹೋಗುವುದಿದೆಯಲ್ಲ ಅದು ಅದಕ್ಕಿಂತ ದೊಡ್ಡ ಯಾತನೆ. ಹೋರಾಟದ ಹೆಜ್ಜೆ ಹೆಜ್ಜೆಗೂ ದೌರ್ಜನ್ಯ, ಮಾನಸಿಕ ಯಾತನೆ, ಲಂಚಾವತಾರ, ಹೊಲ ಮೇಯುವ ಬೇಲಿಗಳೆಷ್ಟೋ?! ದುಡ್ಡೂ ಕಳಕೊಂಡು ನ್ಯಾಯವೂ ಸಿಗದೇ ಭ್ರಮನಿರಸನಗೊಂಡು ಬದುಕಿ ಉಳಿಯುವುದೇ ಸವಾಲು~ ಎನ್ನುತ್ತಾರೆ ಬೆಂಗಳೂರಿನ ಪ್ರತೀಕ್ಷಾ (ಹೆಸರು ಬದಲಿಸಲಾಗಿದೆ).

2001ರಲ್ಲಿ ಮದುವೆಯಾಗಿ ಒಂದು ವರ್ಷಕ್ಕೇ ತಾಯಿಯಾದ ಪ್ರತೀಕ್ಷಾ ಗಂಡನೊಂದಿಗೆ ಉದ್ಯೋಗ ನಿಮಿತ್ತ ಮಲೇಷ್ಯಾಕ್ಕೆ ಹೋದ ಕೆಲವೇ ತಿಂಗಳಲ್ಲಿ ಪತಿಯ ನಿಜರೂಪ ಬಯಲಾಯಿತು. ಕಂಡ ಕಂಡವರ ಜತೆ ಹಾಸಿಗೆ ಹಂಚಿಕೊಳ್ಳುವ ಗಂಡ, ಮಗು ಶಾಲೆಗೆ ಸೇರುವವರೆಗೂ ಉದ್ಯೋಗ ಬೇಡ ಎಂಬ ನಿಲುವಿನಿಂದಾಗಿ ಆರ್ಥಿಕ ಪರಾವಲಂಬನೆ, ಕೈಯಲ್ಲಿ ಪುಟ್ಟ ಮಗು... ಮುಖ್ಯವಾಗಿ ಅದು ಪರಕೀಯ ನೆಲ! ಮನೆ ಆಯಾಳನ್ನು ಗಂಡನ ತೆಕ್ಕೆಯಿಂದ ಬಿಡಿಸಿ ಭಾರತಕ್ಕೆ ಕಳುಹಿಸಿಕೊಡುವಷ್ಟರಲ್ಲಿ ಗಂಡನ ನಿತ್ಯ ಕೃಷ್ಣಲೀಲೆಗಳು ನೆರೆಮನೆಯ ಬೆಡ್‌ರೂಮಿನಲ್ಲಿ ಮುಂದುವರಿದವು. ಅವಳ ಗಂಡ `ಬರಬಾರದ~ ಸಮಯದಲ್ಲಿ ಬಂದು ಇಬ್ಬರೂ ಸಿಕ್ಕಿಬಿದ್ದಾಗ `ಹೌದು ನನಗೂ ಆತನಿಗೂ ಸಂಬಂಧವಿತ್ತು. ಇನ್ನು ಮುಂದೆ `ಹೀಗೆಲ್ಲ~ ನಡೆಯುವುದಿಲ್ಲ~ ಎಂದು ಮಲೇಷ್ಯಾ ಪೊಲೀಸರಿಗೆ ಬರೆದುಕೊಟ್ಟ ಮುಚ್ಚಳಿಕೆ ಪ್ರತೀಕ್ಷಾಳ ಕೈಗೆ ಸಿಕ್ಕಿತು.

ಕಾನೂನಿನ ಆಧಾರವೊಂದು ಸಿಕ್ಕಿದಾಗ ಪ್ರತೀಕ್ಷಾ ಕವಲು ದಾರಿಯಲ್ಲಿ ನಡೆದಳು. ದುಬೈನಲ್ಲಿ ಕೆಲಸ ಸಿಕ್ಕಿತು. ಈಗ ಆತ ಬದಲಾಗುವೆನೆಂದ. ಎಲ್ಲರೂ ನಂಬಿದರು. ಬೆಂಗಳೂರು, ಅಮೆರಿಕದಲ್ಲಿದ್ದ ಇವಳ ಕುಟುಂಬ ದುಬೈನಲ್ಲಿ ಕಲೆತು ಪರಸ್ತ್ರೀ ಸಂಗ ಮಾಡದಂತೆ, ಪತ್ನಿಯ ಮೇಲೆ ದೌರ್ಜನ್ಯ ಎಸಗದಂತೆ ಎಚ್ಚರಿಸಿ ಮರಳಿದರೂ ಆತನ ಚಾಳಿ ದುಬೈನ್ಲ್ಲಲೂ ಮುಂದುವರಿಯಿತು. ಕೊಲೆ ಬೆದರಿಕೆ ಒಡ್ಡುತ್ತಲೇ ಹೋದ. ಯಕಃಶ್ಚಿತ್ ಭಾರತೀಯ ನಾರಿಯಂತೆ ಈಕೆ ತಾಳ್ಮೆಯಿಂದ ಕಾದಳು. ಫಲಿತಾಂಶ ಶೂನ್ಯ. ಅನಿವಾರ್ಯವಾಗಿ ಕಾನೂನಿನ ಮೊರೆಹೋದಳು.

~ಅಲ್ಲಿವರೆಗೆ ಅನುಭವಿಸಿದ ಯಾತನೆಯೇ ಒಂದು ರೀತಿ. ಭಾರತಕ್ಕೆ ಬಂದು ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಕ್ಷಣದಿಂದ (2008ರಲ್ಲಿ) ಇಲ್ಲಿವರೆಗೂ ಅದೆಷ್ಟು ದುಡ್ಡು ಕಳಕೊಂಡೆನೋ ಅದರ ಸಾವಿರ ಪಟ್ಟು ಸಂಕಷ್ಟಗಳನ್ನು ಎದುರಿಸಿದೆ. ಪೊಲೀಸ್ ಸ್ಟೇಷನ್‌ನಲ್ಲಿ ದೂರು ದಾಖಲಿಸಿಕೊಳ್ಳಲು ಐದು ದಿನ ಅಂಡಲೆಸಿದರು. ಕಿತ್ತುಕೊಂಡ ಲಂಚಕ್ಕೆ ಲೆಕ್ಕವೇ ಇಲ್ಲ ಬಿಡಿ. ನನ್ನ ಗಂಡ ಮಾಡಿದ ಅಕ್ರಮ, ಕಾನೂನು ವಂಚನೆಗಳು, ದೈಹಿಕ, ಮಾನಸಿಕ ಮತ್ತು ಆರ್ಥಿಕವಾಗಿ ನನಗೆ ನೀಡಿದ ಹಿಂಸೆಗಳು ಪ್ರತಿಯೊಂದೂ ಪಿನ್ ಟು ಪಿನ್ ದಾಖಲೆಸಮೇತ ಒದಗಿಸಿದ್ದರೂ ನನಗಿನ್ನೂ ನ್ಯಾಯ ಸಿಕ್ಕಿಲ್ಲ. ಆತ ಈಗ ಆಸ್ಟ್ರೇಲಿಯಾದಲ್ಲಿ ಹಾಯಾಗಿದ್ದಾನೆ. ಬೆಂಗಳೂರಿನಲ್ಲಿ ಆತ ಖರೀದಿಸಿದ ಮನೆಯ ಸಾಲದ ಕಂತನ್ನು ನಾನು ಪ್ರತಿ ತಿಂಗಳು ಕಟ್ಟುತ್ತಾ ಬಂದೆ. ಕೋರ್ಟ್ ಹಿಯರಿಂಗ್‌ಗಾದರೂ ಆತ ಬಂದೇ ಬರುತ್ತಾನೆ ನನಗೆ ಬಿಡುಗಡೆ ಸಿಗುತ್ತದೆ ಎಂದು ಕಂತು ಕಟ್ಟುವುದನ್ನು ನಿಲ್ಲಿಸಿದೆ. ಬ್ಯಾಂಕ್‌ನವರು ಮನೆ ಸೀಜ್ ಮಾಡುವ ಬೆದರಿಕೆ ಹಾಕಿದರು. ಸಾಲ ಅವನದು ಕುಣಿಕೆ ನನಗೆ! ಕೊನೆಗೆ 22 ಲಕ್ಷ ಪಾವತಿಸಿ ಮನೆಯನ್ನು ನನ್ನ ಮತ್ತು ಮಗುವಿನ ಹೆಸರಿಗೆ ಮಾಡಿಕೊಂಡೆ. ನನಗೆ ಪ್ರತಿ ಹೆಜ್ಜೆಯಲ್ಲೂ ನನ್ನ ಕುಟುಂಬದ ಬೆಂಗಾವಲಿದೆ. ಇಂತಹ ನೈತಿಕ ಬೆಂಬಲ ಎಷ್ಟು ಹೆಣ್ಣು ಮಕ್ಕಳಿಗೆ ಸಿಗುತ್ತದೆ? ಭಾರತೀಯ ಸಮಾಜದಲ್ಲಿ ಒಂಟಿ ಹೆಣ್ಣಿನ ಬಾಳು ದುಃಸ್ವಪ್ನ. ಕಾನೂನು ಸಾಕಷ್ಟಿದೆ. ಆದರೆ ಅದನ್ನು ಶೋಷಿತರಿಗೆ ದಕ್ಕಿಸಿಕೊಡುವವರೇ ಕೈಕೊಟ್ಟರೆ? ಶೋಷಿತೆಯರ ಪಾಲಿಗೆ  ಸಾಮಾಜಿಕ ನ್ಯಾಯವೆನ್ನುವುದು ಮರೀಚಿಕೆ. ನನ್ನ ಹೋರಾಟ ನಿಲ್ಲುವುದಿಲ್ಲ. ಬೆದರಿಕೆ, ಮಾನಸಿಕ ಹಿಂಸೆ ಎಷ್ಟೇ ಎದುರಾದರೂ ಐ ಡೋಂಟ್ ಕೇರ್...!

ಅಲ್ಲೊಬ್ಬಳು ಕುಲಕ್ಕೆ ಹೊರಗಾದ ನತದೃಷ್ಟೆ, ಇಲ್ಲೊಬ್ಬಳು ಕುಟುಂಬದ ಕಣ್ಮಣಿ!
ನಮ್ಮ ಹೆಣ್ಣುಮಕ್ಕಳನ್ನು `ಭಾರತೀಯ ನಾರಿ~ ಎಂದು ಕರೆಯುವಲ್ಲೇ ಅವಳನ್ನು ಸಾಂಸ್ಕೃತಿಕ, ಸಾಮಾಜಿಕ ಕಟ್ಟುಪಾಡುಗಳ ಚೌಕಟ್ಟಿನಲ್ಲಿ ಬಂಧಿಸಿಡುತ್ತದೆ ಸಮಾಜ. ಸಮಾಜವೆಂದರೆ ಅಲ್ಲಿ ಪುರುಷರದ್ದೇ ಪ್ರಾಧಾನ್ಯ. ಮಹಿಳೆಯ ಪಾತ್ರ ಏನೇ ಇದ್ದರೂ ಆಟಕ್ಕುಂಟು ಲೆಕ್ಕಕ್ಕಿಲ್ಲ! `ಯತ್ರ ನಾರ‌್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ~ ಎಂಬಿತ್ಯಾದಿ `ಮೇಲೋಗರ~ ಗಳು ಕರ್ಣಾನಂದಕರ. ಆದರೆ ವಾಸ್ತವದಲ್ಲಿ ಅವು ಅವಳ ಕೈಬೇಡಿಗಳು.

“ನೀವು ಮದುವೆಯಾಗುವುದು ಒಂದೇ ಬಾರಿ; ಅದನ್ನು ಅವಿಸ್ಮರಣೀಯವಾಗಿಸಿರಿ” ಎಂಬುದು `ರೇಮಂಡ್ಸ್~ ಕಂಪನಿಯ ಜಾಹೀರಾತು ಒಕ್ಕಣೆ. ಆದರೆ ಮದುವೆಯಿಂದಾಗಿ ಎಷ್ಟೋ ಸಹೋದರಿಯರ ಬಾಳು `ಅವಿಸ್ಮರಣೀಯ~ವಾದ ಪರಿ ನೋಡಿದರೆ ಮದುವೆಯೆಂಬುದೇ ಕ್ಲೀಷೆ ಎನಿಸುತ್ತದೆ. `ಯತ್ರ ನಾರ್ಯಸ್ತು ಪೂಜ್ಯಂತೇ?~ ಎಂದು ಪ್ರಶ್ನಿಸಿಕೊಳ್ಳಬೇಕಾದುದು ವಾಸ್ತವ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.