ADVERTISEMENT

ಜಡತ್ವ ಓಡಿಸಿ

ಸ್ವಸ್ಥ ಬದುಕು

ಪ್ರಜಾವಾಣಿ ವಿಶೇಷ
Published 2 ಆಗಸ್ಟ್ 2013, 19:59 IST
Last Updated 2 ಆಗಸ್ಟ್ 2013, 19:59 IST

ಜ್ಞಾನಿಗಳು ಸಾವನ್ನು ಸುಂದರವಾಗಿ ಬಣ್ಣಿಸುತ್ತಾರೆ. ಸಾವು ಎಂಬುದು ಜೀವನವನ್ನು ಮತ್ತಷ್ಟು ಉನ್ನತಿಗೆ ತೆಗೆದುಕೊಂಡು ಹೋಗಲು ನಿಸರ್ಗ ನೀಡುವ ಚಾಟಿ ಏಟಾಗಿರುತ್ತದೆ. ಸಾವಿನ ಆತಂಕ ಇಲ್ಲದಿದ್ದಲ್ಲಿ ಎಲ್ಲ ಜೀವಿಗಳೂ ನಾಳೆ, ನಾಳೆ ಎನ್ನುತ್ತ ಆಲಸ್ಯದಲ್ಲಿ ಕಾಲ ಕಳೆಯುತ್ತಿದ್ದವು. ಕೆಲವರು ಹಾಗೆಯೇ ವರ್ತಿಸುತ್ತಾರೆ ಎನ್ನುವುದು ಬೇರೆ ಮಾತು.

ನಮ್ಮ ವಿಶ್ವ (ಬ್ರಹ್ಮಾಂಡ) ನಿರಂತರವಾಗಿ ವಿಸ್ತರಣೆಯಾಗುತ್ತಾ ಪ್ರಗತಿಯ ಪಥದಲ್ಲಿ ಸಾಗುತ್ತಿದೆ ಎಂದು ವಿಜ್ಞಾನ ಹೇಳುತ್ತದೆ. ನಮ್ಮ ಅಂತಃಪ್ರಜ್ಞೆ ಹಾಗೂ ದೇಹ ಸಹ ಅದೇ ಸೂತ್ರಕ್ಕೆ ಬದ್ಧವಾಗಿವೆ. ನಿರಂತರ ಪ್ರಗತಿ, ವಿಕಸನ ನಮ್ಮ ಮೂಲ ಗುಣ.

ಇದರರ್ಥ ಜಡತ್ವದ ಸಂಕೋಲೆ ಕಿತ್ತೊಗೆಯುವುದು. ಒಂದೇ ರೀತಿಯ ಅಭಿಪ್ರಾಯಗಳಿಗೆ ಬದ್ಧರಾಗಿ, ಬದಲಾವಣೆಗೆ ತೆರೆದುಕೊಳ್ಳದೇ ಜಡತ್ವದಲ್ಲಿ ಮುಳುಗಿರುವುದರಿಂದಲೇ ಸಾವು ನಮ್ಮನ್ನು ಅರಸಿಕೊಂಡು ಬರುತ್ತದೆ. ಸಾವು ಬದುಕನ್ನು ಭವಿಷ್ಯಮುಖಿ ಆಗಿಸುತ್ತದೆ, ನಮ್ಮಲ್ಲಿ ಬುದ್ಧಿವಂತಿಕೆಗೆ ಕಾರಣವಾಗುತ್ತದೆ. ಬದಲಾವಣೆಗೆ ಹೊಂದಿಕೊಳ್ಳುವ ಗುಣವನ್ನು ಉದ್ದೀಪಿಸುತ್ತದೆ. ಸಾವು ಎಂಬುದು ನಿಸರ್ಗದ ಕೊನೆಯ ಅಸ್ತ್ರ. ಸಾವಿಗೂ ಮೊದಲಿನ ಹಂತದಲ್ಲಿ ಅಸ್ವಸ್ಥತೆ ನಮ್ಮನ್ನು ಆವರಿಸುತ್ತದೆ. ಬದಲಾವಣೆ, ಪ್ರಗತಿಗೆ ಪ್ರೇರೇಪಿಸುತ್ತದೆ. ನಾವು ಮತ್ತಷ್ಟು ಪಾರದರ್ಶಕ ಮನೋಭಾವ ಬೆಳೆಸಿಕೊಳ್ಳಲಿ, ಮತ್ತಷ್ಟು ಜೀವಂತಿಕೆಯಿಂದ ಪುಟಿಯಲಿ ಎಂದು ನಿಸರ್ಗವೇ ನಮ್ಮನ್ನು ರೋಗಪೀಡಿತರನ್ನಾಗಿಸುತ್ತದೆ.

ಹೌದು, ಜಡತ್ವ ಓಡಿಸಿ ಲವಲವಿಕೆ ಬೆಳೆಸಿಕೊಳ್ಳೋಣ. ಮನಸ್ಸನ್ನು ಮುಕ್ತವಾಗಿಸಿಕೊಂಡು ಜಾಗೃತರಾಗೋಣ. ರಾಷ್ಟ್ರೀಯತೆ, ಸಮುದಾಯ, ಜಾತಿ, ಕುಟುಂಬ, ಲಿಂಗ ಇತ್ಯಾದಿ ಸಣ್ಣತನಗಳಲ್ಲಿ ಕಳೆದುಹೋಗದೇ ನಮ್ಮ ಆತ್ಮದ ಅಸ್ತಿತ್ವವನ್ನು ಅರಿತುಕೊಳ್ಳೋಣ. ನಾವು ಬದಲಾವಣೆಗೆ ತೆರೆದುಕೊಂಡಷ್ಟೂ ಮತ್ತಷ್ಟು ಆರೋಗ್ಯವಂತರಾಗುತ್ತೇವೆ. ನಮ್ಮ ದೇಹದ ಬಗ್ಗೆ ಕಾಳಜಿ ವಹಿಸಿ, ನಮ್ಮ ಮನಸ್ಸನ್ನು ಎಲ್ಲವನ್ನೂ ಸ್ವೀಕರಿಸುವ ವಿಶ್ವ ಶಕ್ತಿಯ ಜತೆ ಸಮೀಕರಿಸಿಕೊಂಡಾಗ, ವಿಶ್ವದ ಪ್ರಗತಿಯ ಪಥದಲ್ಲಿ ನಾವೂ ಸಾಗುತ್ತೇವೆ. ಇಂತಹ ಮನೋಭಾವದಿಂದ ಆರೋಗ್ಯ ಸುಧಾರಿಸುತ್ತದೆ. ಹೊಸ ರೋಗ ಬರುವ ಸಾಧ್ಯತೆ ಕಡಿಮೆಯಾಗುತ್ತದೆ.

ಅಷ್ಟಕ್ಕೂ ಒತ್ತಡ (ಸ್ಟ್ರೆಸ್) ಅಂದರೆ ಏನು? ನಮ್ಮ ಸುತ್ತಲಿನ ಸನ್ನಿವೇಶಗಳಿಗೆ ನಾವು ತಪ್ಪಾಗಿ ಪ್ರತಿಕ್ರಿಯಿಸುವುದೇ ಒತ್ತಡ. ಬಹುತೇಕ ಸಂದರ್ಭಗಳಲ್ಲಿ ನಮ್ಮ ಜಡ ನಂಬಿಕೆಗಳು ಇಂತಹ ಒತ್ತಡಕ್ಕೆ ಕಾರಣವಾಗುತ್ತವೆ. ಉದಾ: ಎಲ್ಲರೂ ಸೀರೆಯನ್ನೇ ಉಡಬೇಕು ಎಂಬುದು ನನ್ನ ನಂಬಿಕೆಯಾದಲ್ಲಿ ಶಾರ್ಟ್ಸ್ ಧರಿಸಿದ ಮಹಿಳೆಯನ್ನು ಕಂಡಾಗ ನನ್ನಲ್ಲಿ ಒತ್ತಡ ಉಂಟಾಗುತ್ತದೆ.

ನನ್ನ ನಂಬಿಕೆಯನ್ನು ಬದಲಿಸಿಕೊಂಡು ಎಲ್ಲರೂ ತಮ್ಮಿಷ್ಟದ ಉಡುಗೆ- ತೊಡುಗೆ ತೊಡಬಹುದು ಎಂಬ ಮನೋಭಾವ ಅಪ್ಪಿಕೊಂಡಾಗ ಒತ್ತಡ ತಾನೇತಾನಾಗಿ ಮಾಯವಾಗುತ್ತದೆ. ನಾನು ಮುಕ್ತನಾಗುತ್ತೇನೆ, ಆರೋಗ್ಯವಂತನಾಗುತ್ತೇನೆ. ಯಾವುದೇ ಬಾಹ್ಯ ಅಥವಾ ಆಂತರಿಕ ಸಂಘರ್ಷಗಳಿಲ್ಲದೇ ಬದುಕು ಸರಳವಾಗುತ್ತದೆ. ಜಗತ್ತಿನೆಲ್ಲೆಡೆಯ ಸಂತರು, ವಿಜ್ಞಾನಿಗಳು, ಜ್ಞಾನಿಗಳು, ಚಿಂತಕರ ಅಭಿಪ್ರಾಯವನ್ನು ನಾನು ಮುಕ್ತವಾಗಿ ಸ್ವೀಕರಿಸುತ್ತೇನೆ.

ಒತ್ತಡ ತರುವಂತಹ ಆಲೋಚನೆಗಳಿಂದ ಮನಸ್ಸನ್ನು ಮುಕ್ತವಾಗಿಸಬೇಕು. ಒತ್ತಡ ತರುವ ಜೀವನಶೈಲಿಯಿಂದ ದೇಹವನ್ನು ಮುಕ್ತಗೊಳಿಸಬೇಕು. ಪ್ರತಿ ಕ್ಷಣವೂ ಸಂತಸ ಮತ್ತು ಶಾಂತಿ ಅನುಭವಿಸುವಂತೆ ಎಲ್ಲವನ್ನೂ ಸ್ವೀಕರಿಸಬೇಕು. ಒತ್ತಡದಿಂದ ತುಂಬಿದ ಆಲೋಚನೆಯಿಂದ ಆ ಕ್ಷಣದ ಸಂತಸ ಹಾಗೂ ಆರೋಗ್ಯ ಎರಡಕ್ಕೂ ಕುತ್ತು ಬರುತ್ತದೆ. ಆಗ ನಾವು ವಿಶ್ವದ ಪ್ರಗತಿ ಪಥದಿಂದ ದೂರಾಗಿರುತ್ತೇವೆ.

ಎಲ್ಲವನ್ನೂ ಸ್ವೀಕರಿಸುವ ಮತ್ತು ಶಾಂತಿಯ ಪಥವನ್ನು ಅಪ್ಪಿಕೊಳ್ಳಿ. ಬೇರೆಯವರಲ್ಲಿನ ವ್ಯತ್ಯಾಸಗಳ ಬಗ್ಗೆ ಗೊಣಗಾಡುವುದನ್ನು ಬಿಟ್ಟು ಅದನ್ನು ನಿಮ್ಮಳಗೆ ಇಂಗಿಸಿಕೊಳ್ಳಿ. ನಿಮ್ಮಳಗಿನ ಜಾಗೃತ ಶಕ್ತಿಯನ್ನು ಎಲ್ಲದರಲ್ಲೂ ದೈವಿಕತೆಯನ್ನು ಕಾಣಲು ನೀಡಿದ ಉಡುಗೊರೆ ಅಂದುಕೊಳ್ಳಿ. ಆ ಜಾಗೃತ ಶಕ್ತಿ ಆಗ ಸಣ್ಣ ಸಣ್ಣದರಲ್ಲೂ ತಪ್ಪು ಹುಡುಕುವುದಿಲ್ಲ. ಆಗ ನಿಮ್ಮ ಶಕ್ತಿ ಮತ್ತಷ್ಟು ಹೆಚ್ಚುತ್ತದೆ.

ಆರಂಭದಲ್ಲಿ ಇದು ಕಷ್ಟ ಅನ್ನಿಸಬಹುದು. ಪೂರ್ವಗ್ರಹಗಳು ಮತ್ತೆ ಮತ್ತೆ ತಲೆ ಎತ್ತಬಹುದು. ಆದರೆ, ಎಲ್ಲವನ್ನೂ ಸ್ವೀಕರಿಸುವುದನ್ನು ಅಭ್ಯಾಸ ಮಾಡಿಕೊಂಡಾಗ ಹಳೆಯ ಜಾಡ್ಯಗಳೆಲ್ಲ ಕರಗಿ ಹೋದಂತೆ ಅನಿಸುತ್ತದೆ. ಜಾದೂ ಮಾಡಿದಂತೆ ಒತ್ತಡವೆಲ್ಲ ಮಾಯವಾಗುತ್ತದೆ. ನಾವು ಮತ್ತು ಅವರು ಬೇರೆ ಬೇರೆ ಅಂದುಕೊಂಡಾಗ ಒತ್ತಡ ಉಂಟಾಗುತ್ತದೆ. ನಾವೆಲ್ಲ ಒಂದೇ ಅಂದುಕೊಂಡಾಗ ಒತ್ತಡಕ್ಕೆ ಜಾಗವೇ ಇರುವುದಿಲ್ಲ. ಮನಸ್ಸು ಮತ್ತು ದೇಹ ಸೌಹಾರ್ದದಲ್ಲಿ ಇದ್ದಾಗ, ಸ್ವಯಂ ನಿಯಂತ್ರಣ, ಶಿಸ್ತು, ಜಾಗೃತ ಮನೋಭಾವ ಇದ್ದಾಗ ಇದು ಸಾಧ್ಯವಾಗುತ್ತದೆ.

ಸಂಪೂರ್ಣವಾಗಿ ಸ್ವೀಕರಿಸುವ ಮನೋಭಾವ ಅಪ್ಪಿಕೊಳ್ಳಿ. ಆಗ ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಶಾಂತಿ ಅರಳುತ್ತದೆ. ನೀವು ಮತ್ತಷ್ಟು ಜೀವಂತಿಕೆಯಿಂದ ಪುಟಿಯುತ್ತೀರಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.