ADVERTISEMENT

ನಮ್ಮದು ಎನ್ನುವ ಸಮಯವೇ ಇಲ್ಲ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2012, 19:30 IST
Last Updated 13 ಏಪ್ರಿಲ್ 2012, 19:30 IST

ಮೈಸೂರಿನಲ್ಲಿ ಶ್ರೀ ಚಾಮುಂಡೇಶ್ವರಿ  ವಿದ್ಯುತ್ ಸರಬರಾಜು ನಿಗಮ (ಸೆಸ್ಕ್)  ಮುಖ್ಯ ಎಂಜಿನಿಯರ್ ಆಗಿರುವ ಎಂ.ಶಾಂತಿ ರಾಜ್ಯದಲ್ಲಿಯೇ ಈ ಸ್ಥಾನದಲ್ಲಿರುವ ಏಕೈಕ ಮಹಿಳೆ.
 
ತಮ್ಮ ವೃತ್ತಿ ಜೀವನದ ಉದ್ದಕ್ಕೂ ಹಲವಾರು ಪ್ರಥಮಗಳನ್ನು ತಮ್ಮ ಬಗಲಲ್ಲಿ ಇಟ್ಟುಕೊಂಡು ಸಾಧನೆಯ ಮೆಟ್ಟಿಲುಗಳನ್ನು ಏರುತ್ತಾ ಬಂದಿರುವ ಅವರು ಈಗ ಅತ್ಯಂತ ಜವಾಬ್ದಾರಿಯ ಸ್ಥಾನವನ್ನು ಅಲಂಕರಿಸಿದ್ದಾರೆ.
 
ಮೂಲತಃ ಕೆಜಿಎಫ್‌ನವರಾಗಿರುವ ಶಾಂತಿ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೆಜಿಎಫ್‌ನಲ್ಲಿಯೇ ಮುಗಿಸಿದರು. ನಂತರ ಬೆಂಗಳೂರಿನಲ್ಲಿ ಬಿಇ ಎಲೆಕ್ಟ್ರಿಕಲ್ ಪದವಿ ಪಡೆದುಕೊಂಡರು. ಮನೆ ಮಾತು ತಮಿಳು. ಆದರೆ ಮಿನಿ ಭಾರತದಂತೆ ಇರುವ ಕೆಜಿಎಫ್‌ನಲ್ಲಿ ಬಾಲ್ಯ ಕಳೆದಿದ್ದರಿಂದ ಶಾಂತಿ ಅವರಿಗೆ ತೆಲುಗು, ಕನ್ನಡ, ಹಿಂದಿ, ಇಂಗ್ಲಿಷ್ ಮುಂತಾದ ಭಾಷೆಗಳು ಬರುತ್ತವೆ. ಮಲಯಾಳಂ ಸಂಪರ್ಕ ಕೂಡ ಇದೆ.

ದಲಿತ ವರ್ಗಕ್ಕೆ ಸೇರಿದ್ದರೂ ಬಾಲ್ಯದಿಂದಲೂ ಆರ್ಥಿಕ ಅಡಚಣೆ ಅವರನ್ನು ಕಾಡಲಿಲ್ಲ. ಅವರ ತಂದೆ ಬಿಜಿಎಂನಲ್ಲಿ ನೌಕರಿಯಲ್ಲಿದ್ದರು. ಮಕ್ಕಳ ಶಿಕ್ಷಣ ಸೇರಿದಂತೆ ಎಲ್ಲ ವೆಚ್ಚವನ್ನೂ ಕಂಪೆನಿಯೇ ನೋಡಿಕೊಳ್ಳುತ್ತಿದ್ದರಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗಲಿಲ್ಲ.
 
ಆರಂಭದಿಂದಲೂ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದ ತಂದೆ ಬೇಗನೆ ತೀರಿಕೊಂಡರೂ ತಾಯಿಯ ಶ್ರಮದಿಂದ ಎಲ್ಲ ಮಕ್ಕಳೂ ದಡ ಸೇರಿದರು. ಮೂವರು ಸಹೋದರಿಯರು, ಇಬ್ಬರು ಸಹೋದರರ ದೊಡ್ಡ ಸಂಸಾರದ ಭಾಗವಾಗಿದ್ದು, ಸೀಮೆಎಣ್ಣೆ ದೀಪದ ಸುತ್ತಾ ಕುಳಿತುಕೊಂಡು ಓದಿದ್ದು, ಪ್ರತಿ ದಿನ 4 ಕಿಮೀ ನಡೆದುಕೊಂಡೇ ಶಾಲೆಗೆ ಹೋಗಿದ್ದು ಎಲ್ಲವನ್ನೂ ನೆನಪಿಸಿಕೊಳ್ಳುವ ಶಾಂತಿ ಅತ್ಯಂತ ಉನ್ನತ ಹುದ್ದೆಯಲ್ಲಿದ್ದರೂ ಶಾಂತಿಯನ್ನು ಕಳೆದುಕೊಂಡಿಲ್ಲ. ಇದಕ್ಕೆ ಕಾರಣ ದೊಡ್ಡ ಸಂಸಾರದ ಅನುಕೂಲ ಎನ್ನುವುದು ಅವರ ನಂಬಿಕೆ.

ಬಿಇ ಮುಗಿಸಿದ ನಂತರ ಬಿಇಎಂಎಲ್‌ನಲ್ಲಿ ಪ್ರಥಮ ನೌಕರಿ. ಈ ನೌಕರಿಗೆ ಸೇರಿದ ಮೊದಲ ಮಹಿಳೆ. ನಂತರ ಭಾರತೀಯ ಉಕ್ಕು ಪ್ರಾಧಿಕಾರದಲ್ಲಿ ಕೆಲಸ. ಅಲ್ಲಿಯೂ ಕೂಡ ಮೊದಲ ಮಹಿಳೆ ಎಂಬ ಗೌರವ. 1988ರಲ್ಲಿ ಕೆಇಬಿ ಸೇರಿದ ಭಾರತಿ ಹಂತ ಹಂತವಾಗಿ ಮೇಲೇರಿದ್ದಾರೆ. 1995ರಲ್ಲಿ ಡಾ.ಸುದರ್ಶನ್ ಅವರನ್ನು ಮದುವೆ ಆಗಿ ಮೈಸೂರಿನಲ್ಲಿ ನೆಲಸಿದ್ದಾರೆ. ಇಬ್ಬರು ಗಂಡು ಮಕ್ಕಳಿದ್ದಾರೆ.

ಶಾಲಾ ಶಿಕ್ಷಕರು, ತಂದೆ, ತಾಯಿ ಹಾಗೂ ಎಲೆಕ್ಟ್ರಿಕಲ್ ಕ್ಷೇತ್ರದಲ್ಲಿ ಮುಂದುವರಿಯಲು ತಮ್ಮ ಭಾವ ಕಾರಣ ಎಂದು ಹೇಳುವ ಶಾಂತಿ ತಮ್ಮ ಬದುಕಿನ ಕ್ಷಣಗಳನ್ನು ಇಲ್ಲಿ ಹಂಚಿಕೊಂಡಿದ್ದಾರೆ.

* * *
ಹೆಣ್ಣು ಎಷ್ಟೇ ದೊಡ್ಡ ಸ್ಥಾನವನ್ನು ಅಲಂಕರಿಸಿದರೂ, ಆಕೆ ತನ್ನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಗಂಡ, ಮಕ್ಕಳು, ಹಿರಿಯರು ಎಲ್ಲರನ್ನೂ ಆಕೆ ಸಂಭಾಳಿಸಬೇಕು. ಅದಕ್ಕೆ ರಿಯಾಯಿತಿ ಇಲ್ಲ. ಉನ್ನತ ಸ್ಥಾನಕ್ಕೆ ಏರುತ್ತಾ ಸಾಗಿದಂತೆ ಸಮಸ್ಯೆ ಕೂಡ ಹೆಚ್ಚಾಗುತ್ತದೆ.

ಒತ್ತಡ ಕೂಡ ಹೆಚ್ಚಾಗುತ್ತದೆ. ಕಚೇರಿಯಲ್ಲಿ ಕೆಲಸ, ಜವಾಬ್ದಾರಿ ಹೆಚ್ಚಿದ ಹಾಗೆ ಮನೆಯಲ್ಲಿ ಜವಾಬ್ದಾರಿ ಕಡಿಮೆ ಏನಾಗುವುದಿಲ್ಲ. ಮನೆಯ ಎಲ್ಲ ಜವಾಬ್ದಾರಿಯನ್ನು ನಿಭಾಯಿಸಿಕೊಂಡೇ ಕಚೇರಿಯ ಕೆಲಸವನ್ನೂ ಮಾಡಬೇಕಾಗುತ್ತದೆ.

ಕಚೇರಿಯ ಕೆಲಸವನ್ನೆಲ್ಲಾ ಮುಗಿಸಿಕೊಂಡು ಮನೆಗೆ ಹೋದರೆ ಪ್ರೀತಿಯಿಂದ ಒಂದು ಲೋಟ ಕಾಫಿ ಮಾಡಿಕೊಡುವವರು ಇರುವುದಿಲ್ಲ. ನೀನು ಊಟ ಮಾಡಿದ್ಯಾ? ನಿನಗೆ ಏನಾದರೂ ತೊಂದರೆ ಆಯಿತಾ ಎಂದು ಯಾರೂ ಕೇಳುವುದಿಲ್ಲ.
 
ಮನೆಯಲ್ಲಿ ಮಹಿಳೆ ಬಹುತೇಕ ಬಾರಿ ಬೇರೆಯವರಿಗಾಗಿಯೇ ಬದುಕುತ್ತಿರುತ್ತಾಳೆ. ದುಡಿದು ಬಂದು ಮನೆ ಸೇರಿದ ನಂತರ ವಿಶ್ರಾಂತಿ ಎನ್ನುವುದು ಹೆಣ್ಣಿಗೆ ಇರುವುದಿಲ್ಲ. `ಅಯ್ಯೋ ಮನೆಯಲ್ಲಿ ಹಿರಿಯರಾದ ಅತ್ತೆ ಮಾವ ಇದ್ದಾರೆ. ಅವರನ್ನು ಸರಿಯಾಗಿ ನೋಡಿಕೊಳ್ಳಬೇಕು. ಮಕ್ಕಳ ಜವಾಬ್ದಾರಿಯನ್ನು ಮರೆಯುವಂತಿಲ್ಲ.
 
ಗಂಡನ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವಂತಿಲ್ಲ. ಮಕ್ಕಳ ಅಗತ್ಯ, ಶಿಕ್ಷಣ ಯಾವುದನ್ನೂ ಹೆಣ್ಣು ಮರೆಯುವಂತಿಲ್ಲ. ಮರೆಯುವುದೂ ಇಲ್ಲ. ಮನೆ ಮತ್ತು ಕಚೇರಿಯಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುವುದು ಹೆಣ್ಣಿಗೆ ಅನಿವಾರ್ಯ.
 
ಅದಕ್ಕೆ ಸೂಕ್ತ ಯೋಜನೆ ಮತ್ತು `ವಿಲ್‌ಪವರ್~ ಇದ್ದರೆ ಸಮತೋಲನ ಸಾಧ್ಯ. ನಾನು ಮನೆಯಲ್ಲಿ ನನ್ನ ಕರ್ತವ್ಯವನ್ನು ಪಾಲಿಸಲು ಈಗೀಗ ಸಾಧ್ಯವಾಗುವುದಿಲ್ಲ. ಆದರೂ ಬೆಳಿಗ್ಗೆ 4.30ಕ್ಕೇ ಏಳುತ್ತೇನೆ.
 
ನಮ್ಮ ಮನೆಯಲ್ಲಿ ಇತರ ಎಲ್ಲ ಕೆಲಸವನ್ನು ಮಾಡಲು ಆಳುಗಳಿದ್ದರೂ ಅಡುಗೆಯನ್ನು ಮಾತ್ರ ನಾನೇ ಮಾಡುತ್ತೇನೆ. ಮಕ್ಕಳನ್ನು ಎಬ್ಬಿಸಿ ಅವರ ಅಗತ್ಯಗಳನ್ನು ಪೂರೈಸುತ್ತೇನೆ. ಹಾಸಿಗೆ ಹಿಡಿದಿದ್ದ ಮಾವ ಕೂಡ ನಮ್ಮ ಜೊತೆಯೇ ಇದ್ದರು. ಅವರ ಅಗತ್ಯಗಳನ್ನೂ ನಾನು ಪೂರೈಸುತ್ತಿದ್ದೆ. ಈಗಲೂ ಅತ್ತೆ ನಮ್ಮಂದಿಗೇ ಇದ್ದಾರೆ.

ಅವರನ್ನೂ ನೋಡಿಕೊಳ್ಳುತ್ತೇನೆ. ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಬೇರೆ ಕಡೆ ಸಭೆಗಳಿದ್ದರೆ ನನ್ನ ದಿನಚರಿಯಲ್ಲಿ ವ್ಯತ್ಯಾಸವಾಗುತ್ತದೆ. ಆದರೂ ನನ್ನ ಪಾಲಿನ ಕರ್ತವ್ಯವನ್ನು ಮರೆಯುವುದೇ ಇಲ್ಲ. ಮನೆಯ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುವುದಿಲ್ಲ.

ನನ್ನ ವಿಪರೀತ ಕೆಲಸಗಳ ನಡುವೆ ಸಂಬಂಧಿಕರ ಮದುವೆ ಹಬ್ಬಗಳಿಗೆ ಹೋಗುವುದು ಸಾಧ್ಯವಿಲ್ಲ. ನನ್ನ ಸಹೋದರಿ ಮಗಳ ಮದುವೆಗೇ ನನಗೆ ಹೋಗಲು ಆಗಲಿಲ್ಲ. ನಾನು ಬರುವುದಿಲ್ಲ ಎಂಬ ಆಕ್ಷೇಪವನ್ನು ಕೇಳಿ ಕೇಳಿ ಸಾಕಾಗಿದೆ. ಆದರೆ ಇದೂ ಕೂಡ ಅನಿವಾರ್ಯ. ನಾನು ಶಾಲಾ ಕಾಲೇಜುಗಳಿಗೆ ಹೋಗುತ್ತಿದ್ದಾಗ ಪತ್ರಿಕೆ, ನಿಯತಕಾಲಿಕೆಗಳನ್ನು ಓದುವ ಹವ್ಯಾಸ ಇಟ್ಟುಕೊಂಡಿದ್ದೆ. ಶಾಲೆಯಲ್ಲಿ ಭರತನಾಟ್ಯ ಕ್ಲಾಸಿಗೆ ಕೂಡ ನನ್ನನ್ನು ಸೇರಿಸಿದ್ದರು. ಆದರೆ ಆ ಹವ್ಯಾಸಗಳನ್ನು ಮುಂದುವರಿಸಿಕೊಂಡು ಹೋಗುವುದು ಸಾಧ್ಯವಾಗುತ್ತಿಲ್ಲ. ಈಗಲೂ ಸಮಯ ಸಿಕ್ಕಾಗ ನಿಯತಕಾಲಿಕೆಗಳನ್ನು ಓದುತ್ತೇನೆ.

ನನಗಾಗಿಯೇ ಒಂದಿಷ್ಟು ಸಮಯವನ್ನು ಇಟ್ಟುಕೊಳ್ಳುವುದು ಸಾಧ್ಯವಾಗುವುದೇ ಇಲ್ಲ. ನನ್ನ ಸಮಯ ಎಂದು ನಾನು ಕುಳಿತಾಗಲೆಲ್ಲಾ ನನ್ನ ಕರ್ತವ್ಯ ನನ್ನನ್ನು ಕರೆದು ಬಿಡುತ್ತದೆ. ಇದು ಬಹುತೇಕ ಮಹಿಳೆಯರ ದೌರ್ಬಲ್ಯ. ನಮ್ಮಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರಿಗೆ ಅವರದ್ದು ಎನ್ನುವ ಸಮಯ ಇರುವುದೇ ಇಲ್ಲ. ಅವರು ಇನ್ನೊಬ್ಬರಿಗಾಗಿಯೇ ಬದುಕುತ್ತಿರುತ್ತಾರೆ. ಒಬ್ಬ ಯಶಸ್ವಿ ಮಹಿಳೆಯಾಗಬೇಕು ಎಂದರೆ ಸ್ಪಷ್ಟ ಗುರಿ ಇರಬೇಕು. ಆ ಗುರಿಯನ್ನು ತಲುಪಲು ಸೂಕ್ತ ಪರಿಶ್ರಮ ಇರಬೇಕು.

ಯಾವುದೇ ಸಂದರ್ಭದಲ್ಲಿಯೂ ನಮ್ಮ ಗುರಿ ಮತ್ತು ಶ್ರಮವನ್ನು ಬಿಡಬಾರದು. ಅಂದಾಗ ಮಾತ್ರ ನಾವು ಬದುಕಿನಲ್ಲಿ ಏನಾದರೂ ಸಾಧಿಸಲು ಸಾಧ್ಯ. ಯಶಸ್ಸಿಗೆ ಇದಕ್ಕಿಂತ ಬೇರೆ ಮಂತ್ರ ಇಲ್ಲ. ತಂತ್ರವೂ ಇಲ್ಲ.

ನಾನು ಮಹಿಳೆ ಅದರಲ್ಲೂ ದಲಿತ ಮಹಿಳೆ ಎಂಬ ಕಾರಣದಿಂದ ನನಗೆ ತೊಂದರೆಯಾದ ಸನ್ನಿವೇಶ ನನ್ನ ಬದುಕಿನಲ್ಲಿ ಬರಲೇ ಇಲ್ಲ. ನಾನು ಕೆಲಸ ಮಾಡಿದ ಎಲ್ಲ ಕಡೆಯೂ ನನ್ನ ಸಹೋದ್ಯೋಗಿಗಳು ಒಳ್ಳೆಯವರೇ ಆಗಿದ್ದರು. ನನ್ನ ಜೊತೆ ಸಹಕರಿಸಿದರು. ನಾನು ಬೆಳೆಯುವುದಕ್ಕೆ ಅವರ ಕೊಡುಗೆ ಕೂಡ ಇದೆ.

ಇಷ್ಟೆಲ್ಲಾ ಆದರೂ ನನಗೆ ನನ್ನ ಅಮ್ಮನಿಗಾಗಿ ಒಂದಿಷ್ಟು ಸಮಯವನ್ನು ಮಾಡಿಕೊಳ್ಳಬೇಕು ಅನ್ನಿಸುತ್ತದೆ. ಅಪ್ಪ ಸತ್ತ ನಂತರ ನಮ್ಮನ್ನೆಲ್ಲಾ ಸರಿದಾರಿಯಲ್ಲಿ ಸಾಗಿಸಿದ ಅಮ್ಮ ನಾನು ಇಷ್ಟೊಂದು ಉನ್ನತ ಮಟ್ಟಕ್ಕೆಬಂದು ತಲುಪಲು ಅಡಿಪಾಯವನ್ನು ಹಾಕಿದ ಅಮ್ಮನ ಋಣ ತೀರಿಸುವುದಕ್ಕಾದರೂ ಆಕೆಗಾಗಿಯೇ ಒಂದಿಷ್ಟು ಸಮಯ ಮೀಸಲಿಡಬೇಕು.
 
ಆದರೆ ಈಗ ಅದಕ್ಕೂ ಸಮಯ ಸಿಗುತ್ತಿಲ್ಲ. ತಡವಾಗುವ ಮೊದಲೇ ಒಂದಿಷ್ಟು ಸಮಯ ಹೊಂದಾಣಿಕೆ ಮಾಡಿಕೊಂಡು ಅಮ್ಮನ ಸೇವೆ ಮಾಡಬೇಕು ಎನ್ನುವ ಹವಣಿಕೆ ನನ್ನದು. ಅದನ್ನು ಕರುಣೀಸು ದೇವಾ ಎನ್ನುವುದೇ ನನ್ನ ಬೇಡಿಕೆ.

(ಆಡಳಿತ ಸೂತ್ರ ಹಿಡಿದ ಯಶಸ್ವಿ ಮಹಿಳೆಯರ ಮನದಾಳದ ಮಾತುಗಳಿಗೆ ಭೂಮಿಕೆಯಾಗಿರುವ ಈ ಅಂಕಣ ಪ್ರತಿ ಹದಿನೈದು ದಿನಗಳಿಗೊಮ್ಮೆ ಪ್ರಕಟವಾಗುತ್ತದೆ.)


 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.