
`ಚಾಕೊಲೇಟ್ ಅಂದರೆ ನನಗೆ ಅದೇಕೋ ಮೊದಲಿನಿಂದಲೂ ಮೋಹ. ಹಾಗಾಗಿ ಚಾಕೊಲೇಟ್ ಫ್ಯಾಕ್ಟರಿಯನ್ನೇ ಆರಂಭಿಸಿದೆ~ ಎನ್ನುತ್ತಾರೆ ಕಳೆದ ಮೂರು ವರ್ಷಗಳಿಂದ ಬಿಗ್ರೊ ಆಗ್ರೋಟೆಕ್ ಹೆಸರಿನಲ್ಲಿ ಚಾಕೊಲೇಟ್ ಉದ್ಯಮ ನಡೆಸುತ್ತಿರುವ ಸುಳ್ಯದ ರಾಜಿ ಆರ್.ಕೆ.
`ಯಾವುದೇ ಕೆಲಸ ಮಾಡಬೇಕಿದ್ದರೂ ಅದು ವೃತ್ತಿಪರವಾಗಿರಬೇಕು. ಅಗತ್ಯ ತರಬೇತಿ ಬೇಕು. 2009ರಲ್ಲಿ ಕೆನಡಾದಲ್ಲಿ ಕಲಾತ್ಮಕವಾಗಿ ಚಾಕೊಲೇಟ್ ತಯಾರಿಸುವ ತರಬೇತಿ ಪಡೆದೆ. ಮನೆಯ ಪಕ್ಕದಲ್ಲೇ ಕೈಗಾರಿಕಾ ಶೆಡ್ ನಿರ್ಮಿಸಿ ಚಾಕೊಲೇಟ್ ತಯಾರಿ ಆರಂಭಿಸಿದೆ.
ಅಪರೂಪದ ಉದ್ಯಮ ಎಂಬ ಕಾರಣಕ್ಕೆ ಇರಬೇಕು ಉದ್ಯಮ ಪರವಾನಗಿ, ಯಂತ್ರೋಪಕರಣಗಳ ಆಮದಿಗೆ ಯಾವುದೇ ಸಮಸ್ಯೆ ಆಗಲಿಲ್ಲ. ಕೈಗಾರಿಕೆ, ವಿದ್ಯುತ್ ಸೇರಿದಂತೆ ಎಲ್ಲ ಇಲಾಖೆಗಳ ಅಧಿಕಾರಿಗಳಿಂದ ಉತ್ತಮ ಸಹಕಾರ ಸಿಕ್ಕಿತು. ಆರಂಭದಲ್ಲಿ 20 ಲಕ್ಷ ರೂಪಾಯಿ ಬಂಡವಾಳ ತೊಡಗಿಸಿದೆ. ಮಾರುಕಟ್ಟೆ ಕೂಡಾ ಉತ್ತಮವಾಗಿದೆ~ ಎನ್ನುತ್ತಾರೆ ಅವರು.
ಇಡೀ ಘಟಕವನ್ನು ಹವಾನಿಯಂತ್ರಿತ ಮಾಡಿರುವ ರಾಜಿ, `ಆಹಾರ ಉದ್ಯಮ ಆಗಿದ್ದರಿಂದ ಶುಚಿತ್ವಕ್ಕೆ ಹೆಚ್ಚು ಒತ್ತು ನೀಡಬೇಕು, ಬೆಲೆಯಲ್ಲೂ ಅತಿಯಾಗಬಾರದು. ರುಚಿಯೂ ಗ್ರಾಹಕರಿಗೆ ಇಷ್ಟವಾಗಬೇಕು. ನಮ್ಮ ರುಚಿ ನೋಡಿ ಜನ ತಿನ್ನುವ ಹಾಗೆ ಆಗಬೇಕು. ಆಗ ಎಂತಹ ಸ್ಪರ್ಧೆ ಇದ್ದರೂ ಗೆಲ್ಲಬಹುದು~ ಎಂದು ಭಾವಿ ಉದ್ಯಮಿಗಳಿಗೆ ಕಿವಿಮಾತು ಹೇಳುತ್ತಾರೆ.
ಉದ್ಯಮವನ್ನು ಮತ್ತಷ್ಟು ಆಧುನಿಕ ಮಾಡಬೇಕು ಎಂಬ ಕಾರಣಕ್ಕೆ ಅವರು ಎರಡನೇ ಹಂತದಲ್ಲಿ ಯೂರೋಪಿಯನ್ ಮಾದರಿಯ ಚಾಕೊಲೇಟ್‌ಗಳ ತಯಾರಿಗೆ ಯೋಜನೆ ರೂಪಿಸಿ 2011ರಲ್ಲಿ ಇಟಲಿಯ ಸೆಲ್ಮಿಇಟಾ ಕಂಪೆನಿಯಲ್ಲಿ ತರಬೇತಿ ಪಡೆದರು. 50 ಲಕ್ಷದ ಹೊಸ ಸ್ವಯಂಚಾಲಿತ ಯಂತ್ರವನ್ನು ಅಲ್ಲಿಂದ ಆಮದು ಮಾಡಿಕೊಂಡು ಹೊಸ ಉತ್ಪನ್ನವನ್ನು ಬಿಡುಗಡೆ ಮಾಡಿದರು.
`ನಾಣಿ~ ಹೆಸರಿನಲ್ಲಿ ಬೇರೆ ಬಹುರಾಷ್ಟ್ರೀಯ ಕಂಪೆನಿಗಳು ತಯಾರಿಸದೇ ಇರುವ, ಒಳಗೆ ಬಾದಾಮಿ ಮತ್ತು ಹೊರಗಿನ ಪದರ ಕೋಕೊ ಚಾಕೊಲೇಟ್ ಇರುವಂತೆ ಸಂಯೋಜನೆ ಮಾಡಿದರು. ಎರಡು ಮಾದರಿ ಪ್ಯಾಕ್‌ಗಳಲ್ಲಿ ಮಾರುಕಟ್ಟೆಗೆ ಬಿಟ್ಟರು. 150 ಗ್ರಾಂನ ಫ್ಯಾಮಿಲಿ ಪ್ಯಾಕ್‌ಗೆ 140 ರೂಪಾಯಿ, 25 ಗ್ರಾಂನ ಸಣ್ಣ ಪ್ಯಾಕ್‌ಗೆ 25 ರೂಪಾಯಿ. ನಿರೀಕ್ಷೆಯಂತೆ ಇದು ಯಶಸ್ವಿಯಾಯಿತು. ಒಂದು ದಿನಕ್ಕೆ 1800 ಪ್ಯಾಕ್, ಅಂದರೆ ಸುಮಾರು 125 ಕೆ.ಜಿ ಚಾಕೊಲೇಟ್‌ಗಳನ್ನು ಅವರು ತಯಾರಿಸುತ್ತಾರೆ.
ರಾಜಿ ಅವರ ಮಗ ಅವ್ಯಕ್ತ ಬೆಂಗಳೂರಿನಲ್ಲಿದ್ದು, ಮಾರುಕಟ್ಟೆ ಮೇಲ್ವಿಚಾರಣೆ ನಡೆಸುತ್ತಾರೆ. ಕರ್ನಾಟಕ, ಆಂಧ್ರ ಪ್ರದೇಶದ ಬಹುಭಾಗದಲ್ಲಿ ಈಗಾಗಲೇ ಮಾರುಕಟ್ಟೆ ಹೊಂದಲಾಗಿದೆ. ತಮಿಳುನಾಡಿನಲ್ಲಿ ವಿತರಕರ ನೇಮಕ ನಡೆದಿದೆ.
ಧಾನ್ಯಗಳನ್ನು ಮೊಳಕೆ ಬರಿಸಿ ಅದರೊಂದಿಗೆ ಹಾಲು, ಖನಿಜಾಂಶದಿಂದ ಸಮೃದ್ಧಗೊಂಡ ಮಾಲ್ಟೆಡ್ ಮಿಲ್ಕ್‌ಬಾಲ್‌ಗಳನ್ನು ಮಧ್ಯದಲ್ಲಿ ಇಟ್ಟು, ಹೊರಗಿನ ಪದರದಲ್ಲಿ ಚಾಕೊಲೇಟ್ ಹೊಂದಿರುವ `ಗೋಲಿ~ ಹೆಸರಿನ ಮತ್ತೊಂದು ಉತ್ಪನ್ನವನ್ನು ತಯಾರಿಸುತ್ತಿದ್ದಾರೆ ರಾಜಿ. ಮಧ್ಯದಲ್ಲಿ ಸ್ವಲ್ಪ ಸಿಹಿ ಮತ್ತು ಸ್ವಲ್ಪ ಖಾರ ಇರುವ ಇದು ವಿಶಿಷ್ಟ ರುಚಿ ಹೊಂದಿದೆ. ಇದರ 5 ರೂಪಾಯಿಯ ಸಣ್ಣ ಸಣ್ಣ ಪೌಚ್‌ಗಳು ಸದ್ಯದಲ್ಲೇ ಮಾರುಕಟ್ಟೆ ಪ್ರವೇಶಿಸಲಿವೆ.
ಮಧ್ಯದಲ್ಲಿ ಒಣದ್ರಾಕ್ಷಿ ಇಟ್ಟು ಹೊರಗಿನ ಪದರ ಕೋಕೊ ಚಾಕೊಲೇಟ್ ಇರುವ ಮತ್ತೊಂದು ಉತ್ಪನ್ನದ ಪ್ರಯೋಗ ಕೂಡಾ ಯಶಸ್ವಿಯಾಗಿದೆ ಎನ್ನುತ್ತಾರೆ ಅವರು.
ಕೋಕೊ ಬಟರ್ ಮಾತ್ರ ಸ್ವದೇಶಿಯಾಗಿದ್ದು, ಉಳಿದಂತೆ ಎಲ್ಲ ಕಚ್ಛಾ ವಸ್ತುಗಳನ್ನೂ ಆಮದು ಮಾಡಿಕೊಳ್ಳಲಾಗುತ್ತಿದೆ. ಸಾಮಾನ್ಯ ಜನರ ಕೈಗೂ ಎಟುಕುವ ಸಕ್ಕರೆ ಲೇಪಿತ ಚಾಕೊಲೇಟ್‌ಗಳನ್ನು ಬಿಡುಗಡೆ ಮಾಡುವ ಯೋಜನೆ ಇದೆ. ಫ್ಯಾಕ್ಟರಿಯನ್ನು ವಿಸ್ತರಿಸಿ ಇನ್ನೂ ದೊಡ್ಡ ಮಟ್ಟದಲ್ಲಿ ಚಾಕೊಲೇಟ್‌ಗಳನ್ನು ಉತ್ಪಾದಿಸುವ ಕಾರ್ಯವನ್ನು ಮೂರನೇ ಹಂತದಲ್ಲಿ ಕೈಗೆತ್ತಿಕೊಳ್ಳಲು ಅವರು ಬಯಸಿದ್ದಾರೆ.
ಕಳೆದ 10 ವರ್ಷಗಳಿಂದ ಅಡಿಕೆ ತೋಟದಲ್ಲಿ `ಜಿಂಜರ್ ಲಿಲ್ಲಿ~ಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಿರುವ ರಾಜಿ, ತಮ್ಮ ಎಲ್ಲ ಕೆಲಸಗಳ ಹಿಂದೆ ಪತಿ ಆರ್.ಕೆ.ಭಟ್ ಹಾಗೂ ಮಗನ ಬೆಂಬಲವನ್ನು ಸ್ಮರಿಸುತ್ತಾರೆ. ಪತಿ ಪ್ರೋತ್ಸಾಹ ನೀಡದಿದ್ದರೆ ಇಷ್ಟೊಂದು ಬಂಡವಾಳ ಹೂಡಲು ಸಾಧ್ಯವೇ ಎಂದು ಪ್ರಶ್ನಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.