ADVERTISEMENT

ನೃತ್ಯ ಮೋಹಕ ಮದ್ದು!

ವಿದ್ಯಾ ಶಿಮ್ಲಡ್ಕ
Published 26 ಏಪ್ರಿಲ್ 2013, 19:59 IST
Last Updated 26 ಏಪ್ರಿಲ್ 2013, 19:59 IST

`ಕ್ರಿಕೆಟ್ಟಿಗೂ ಬ್ಯಾಲೆಗೂ ಏನು ಸಂಬಂಧ?', `ಮಧುಮೇಹಕ್ಕೂ ಭರತನಾಟ್ಯಕ್ಕೂ ಯಾವ ಸಂಬಂಧ?' ಎಂಬ ಪ್ರಶ್ನೆಗಳು ಎದುರಾದರೆ `ಹ್ಹೆ...ಹ್ಹೆ... ಇಮಾಮ್ ಸಾಬಿಗೂ ಗೋಕುಲಾಷ್ಟಮಿಗೂ ಏನು ಸಂಬಂಧ?' ಎಂದು ಮರುಪ್ರಶ್ನಿಸಿ ನಗಬೇಡಿ. ಕ್ರಿಕೆಟ್ಟಿಗೂ ಬ್ಯಾಲೆಗೂ, ಮಧುಮೇಹಕ್ಕೂ ಭರತನಾಟ್ಯಕ್ಕೂ ಸಂಬಂಧ ಇದೆ. ತಿಳಿಯುವ ಆಸಕ್ತಿ ಇದ್ದರೆ ಮುಂದೆ ಓದಿ.

ಕ್ರಿಕೆಟ್- ಬ್ಯಾಲೆ, ಮಧುಮೇಹ- ಭರತನಾಟ್ಯ ಇವೆಲ್ಲವೂ ಪೋಣಿಸಿಕೊಂಡಿರುವುದು `ನೃತ್ಯ ಚಿಕಿತ್ಸೆ' ಎಂಬ ದಾರದಲ್ಲಿ. ಹೆಸರೇ ತಿಳಿಸುವಂತೆ ನೃತ್ಯದ ಚಲನೆಗಳನ್ನು ದೈಹಿಕ- ಮಾನಸಿಕ ರೋಗದ ಚಿಕಿತ್ಸೆಯಲ್ಲಿ ಬಳಸುವುದಕ್ಕೆ `ನೃತ್ಯ ಚಿಕಿತ್ಸೆ' ಎಂದು ಹೆಸರು.
ಬೆಂಗಳೂರಿನಲ್ಲಿ ಕೆಲವು ಮಧುಮೇಹಿಗಳು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಭರತನಾಟ್ಯದ ಅಡವುಗಳನ್ನು ಮಾಡಿದರೆ, ದಶಕದ ಹಿಂದೆ ಆಸ್ಟ್ರೇಲಿಯಾದ ನುರಿತ ವೈದ್ಯರು ದಕ್ಷಿಣ ಆಫ್ರಿಕಾದ ಗಾಯಾಳು ಕ್ರಿಕೆಟಿಗರಿಗೆ ಚಿಕಿತ್ಸೆ ನೀಡಿ, ಸಂಪೂರ್ಣವಾಗಿ ಗುಣಮುಖರಾಗಲು ಬ್ಯಾಲೆ ನೃತ್ಯದ ಚಲನೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ವ್ಯಾಯಾಮಗಳನ್ನು ಮಾಡುವಂತೆ ಸಲಹೆ ನೀಡಿದ್ದರು.

ಅಷ್ಟೇ ಏಕೆ? ತೀರಾ ಈಚೆಗೆ ರಾಜಸ್ತಾನ್ ರಾಯಲ್ಸ್ ಕ್ರಿಕೆಟ್ ತಂಡದ ಹುರಿಯಾಳುಗಳು ಮುಂಬೈನ ಚಲನ ಚಿಕಿತ್ಸಕಿ ದಿಲ್ಷದ್ ಪಟೇಲ್ ಅವರ ಕಾರ್ಯಾಗಾರಗಳಲ್ಲಿ ನೃತ್ಯದ ಪ್ರಾಥಮಿಕ ಚಲನೆಗಳನ್ನು ಮಾಡಿದ್ದಾರಂತೆ. ರಾಜಸ್ತಾನ್ ರಾಯಲ್ಸ್ ತಂಡದ ಫಿಸಿಯೊ ಜಾನ್ ಗ್ಲಾಸ್ಟರ್ ಅವರು ಪಟೇಲ್ ಅವರ ಕಾರ್ಯವೈಖರಿ ಕಂಡು `ಆಟಗಾರರ ಸಾಮರ್ಥ್ಯ ಹೆಚ್ಚಿಸುವಲ್ಲಿ, ಅವರ ಸಂಭವನೀಯ ಗಾಯದ ಸಮಸ್ಯೆ ಕಡಿಮೆ ಮಾಡುವಲ್ಲಿ ಮತ್ತು ಪ್ರತಿ ಆಟಗಾರನ ವೈಯಕ್ತಿಕ ಚಲನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಈ ಚಿಕಿತ್ಸೆ ಅತ್ಯಂತ ಪರಿಣಾಮಕಾರಿ' ಎಂದು ಶ್ಲಾಘಿಸಿದ್ದಾರೆ. 

ನೃತ್ಯ ಚಿಕಿತ್ಸೆ (ಡಾನ್ಸ್ ಥೆರಪಿ ಅಥವಾ ಮೂವ್‌ಮೆಂಟ್ ಥೆರಪಿ) ಮೂಲಕ  ಹಲವು ರೋಗಗಳಿಂದ ಮುಕ್ತರಾಗುವ, ಉತ್ತಮ ಆರೋಗ್ಯ ಪಡೆಯುವ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುವ ಕುರಿತು ಸಾಕಷ್ಟು ವೈಜ್ಞಾನಿಕ, ವೈದ್ಯಕೀಯ ಅಧ್ಯಯನಗಳು ನಡೆದಿವೆ, ಇಂದಿಗೂ ನಡೆಯುತ್ತಲೇ ಇವೆ. ಪಾರ್ಕಿನ್ಸನ್, ಮಧುಮೇಹ ರೋಗಿಗಳಿಗೆ ನೃತ್ಯ ಚಿಕಿತ್ಸೆ ಹೇಳಿ ಮಾಡಿಸಿದ್ದು. ಬೊಜ್ಜು ನಿವಾರಣೆ, ಖಿನ್ನತೆಗೆ ಇದು ರಾಮ ಬಾಣ. ಕೆಲವು ಬಗೆಯ ಕ್ಯಾನ್ಸರ್ ಚಿಕಿತ್ಸೆಯ ಅಡ್ಡಪರಿಣಾಮಗಳಿಗೆ ವಿದಾಯ ಹೇಳಲು ಇದು ಉತ್ತಮ ಚಿಕಿತ್ಸಾ ವಿಧಾನ. ಒತ್ತಡ ನಿವಾರಣೆ, ಹೆಚ್ಚಿನ ಆತ್ಮವಿಶ್ವಾಸ, ಸುಧಾರಿತ ಚಲನೆ, ಮಾಂಸಖಂಡ- ಮೂಳೆಗಳ ಆರೋಗ್ಯ ಇತ್ಯಾದಿಗಳು ನೃತ್ಯ ಚಿಕಿತ್ಸೆಯಿಂದ ಮೇಲ್ನೋಟಕ್ಕೆ ಕಂಡು ಬರುವ ಕೆಲವು ಉಪಯೋಗಗಳು.

ವ್ಯಾಯಾಮ ಮತ್ತು ನೃತ್ಯ ಚಿಕಿತ್ಸೆ- ಏನು ವ್ಯತ್ಯಾಸ?
ಇತರ ಯಾವುದೇ ವ್ಯಾಯಾಮದಂತೆ ನೃತ್ಯವು ರಕ್ತ ಪರಿಚಲನೆ, ಶ್ವಾಸಕೋಶದ ಕಾರ್ಯಕ್ಷಮತೆ ಹೆಚ್ಚಿಸುವುದಲ್ಲದೆ, ಸದೃಢ ಮೂಳೆ ಮತ್ತು ಮಾಂಸಖಂಡಗಳನ್ನು ನೀಡುತ್ತದೆ. ಈ ಮೂಲಕ, ದೇಹ ಮತ್ತು ಮನಸ್ಸಿನ ನಡುವೆ ಸೇತುವೆಯಾಗಿ ಕೆಲಸ ನಿರ್ವಹಿಸುತ್ತದೆ. ಇದು ನೃತ್ಯ ಚಿಕಿತ್ಸೆಯ ಹೆಗ್ಗಳಿಕೆಯೂ ಹೌದು. ಲಯಬದ್ಧ ಚಲನೆ ಇಲ್ಲಿನ ವಿಶೇಷ. ದೇಹಕ್ಕೂ ತನ್ನದೇ ಆದ ಲಯವೊಂದಿದೆ. ದೇಹದ ವಿವಿಧ ಅಂಗ, ಉಪಾಂಗ, ಪ್ರತ್ಯಂಗಗಳು ಲಯಬದ್ಧವಾಗಿ ಚಲಿಸುವಂತೆ ಮಾಡುವುದೇ ಒಂದು ಖುಷಿ ನೀಡುವ ಪ್ರಕ್ರಿಯೆ.

ಏರೋಬಿಕ್ಸ್, ನೃತ್ಯ ಅಥವಾ ಯಾವುದೇ ವ್ಯಾಯಾಮ ಮಾಡಿದರೆ ಮೆದುಳಿನಲ್ಲಿ ಬಿಡುಗಡೆ ಆಗುವ ಎಂಡಾರ್ಫಿನ್ (ನ್ಯೂರೋಟ್ರಾನ್ಸ್‌ಮಿಟರ್) ಎಂಬ ರಾಸಾಯನಿಕ ನಮ್ಮನ್ನು ಉಲ್ಲಸಿತರನ್ನಾಗಿ ಮಾಡುತ್ತದೆ. ಮೇಲ್ನೋಟಕ್ಕೆ ನೃತ್ಯ ಮತ್ತು ವ್ಯಾಯಾಮದಿಂದ ಒಂದೇ ರೀತಿಯ ಪ್ರಯೋಜನ ಅನ್ನಿಸಿದರೂ ನೃತ್ಯದಿಂದಾಗುವ ಪರಿಣಾಮ ಅತಿ ಹೆಚ್ಚು.

`ನೃತ್ಯದಲ್ಲಿ ಇರುವ ಸಂಗೀತ, ಸುಂದರವಾಗಿ ಹೆಣೆದುಕೊಂಡಿರುವ ಚಲನೆಗಳು, ಅದರಲ್ಲಿನ ಭಾವ ನರ್ತಿಸುವವರನ್ನು ಮತ್ತು ನೋಡುಗರನ್ನು ಅವರಿಗೇ ಅರಿವಿಲ್ಲದಂತೆ ಸೆಳೆದುಕೊಳ್ಳುತ್ತದೆ, ಸಮ್ಮೊಹಿಸುತ್ತದೆ. ಇದೇ ನೃತ್ಯಕ್ಕೂ ವ್ಯಾಯಾಮಕ್ಕೂ ಇರುವ ವ್ಯತ್ಯಾಸ. ಈ ಅಂಶವನ್ನು ಪರಿಗಣಿಸಿ ನೃತ್ಯ ಚಿಕಿತ್ಸೆ ಬಳಕೆಗೆ ಬಂದಿದೆ' ಎನ್ನುತ್ತಾರೆ ಬೆಂಗಳೂರಿನ ನೃತ್ಯ ಸಂಶೋಧಕಿ ಸುಮನಾ. `ಭಾರತೀಯ ನೃತ್ಯದ ಹಸ್ತಮುದ್ರೆಗಳು, ಚಲನೆಗಳು, ರಸ ಥಿಯರಿ ಹಾಗೂ ನೃತ್ಯ ಚಿಕಿತ್ಸೆ ಕುರಿತು ಉನ್ನತ ಮಟ್ಟದ ವೈದ್ಯಕೀಯ ಅಧ್ಯಯನ ನಡೆಸುವುದು ಅಗತ್ಯ' ಎಂದು ಗಮನ ಸೆಳೆಯುತ್ತಾರೆ ಅವರು.

ನೃತ್ಯ ಚಿಕಿತ್ಸೆಯ ಮೂಲದ ಬಗ್ಗೆ ಪ್ರಶ್ನಿಸಿದರೆ, ಭಾರತವೂ ಸೇರಿದಂತೆ ಜಗತ್ತಿನ ಎಲ್ಲ ಪ್ರಾಚೀನ ಸಂಸ್ಕೃತಿಗಳಲ್ಲಿ ದೇವರನ್ನು ಆರಾಧಿಸುವಾಗ, ಚಿಕಿತ್ಸೆ ನೀಡುವಾಗ ನರ್ತಿಸುವ ಸಂಪ್ರದಾಯ ಇದ್ದದ್ದು ಗೋಚರವಾಗುತ್ತದೆ. ಅದನ್ನೇ 'ಹೀಲಿಂಗ್ ರಿಚುಯಲ್ಸ್' ಎಂದು ನಾವೀಗ ಕರೆಯುತ್ತೇವೆ.

`ರೋಗ ಮುಕ್ತರಾಗುವುದಕ್ಕಿಂತಲೂ ರೋಗ ನಿರೋಧಕ ಶಕ್ತಿ ಪಡೆಯುವುದು, ರೋಗ ವಾಸಿಯಾದ ಮೇಲೆ ಮತ್ತೆ ಮೊದಲಿನಂತೆ ಆಗುವುದು (ರಿಹ್ಯಾಬಿಲಿಟೇಷನ್) ಮತ್ತು ನವಚೈತನ್ಯ (ರಿಜುವಿನೇಷನ್) ಪಡೆಯುವ ನಿಟ್ಟಿನಲ್ಲಿ ಈ ಚಿಕಿತ್ಸೆ ಹೆಚ್ಚು ಪರಿಣಾಮಕಾರಿ' ಎನ್ನುತ್ತಾರೆ ಮನಃಶಾಸ್ತ್ರಜ್ಞೆ ಡಾ. ಸುಜನಾ. ಉದಾಹರಣೆಗೆ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳಿಗೆ ನೀಡುವ ಅಲೋಪಥಿ ಚಿಕಿತ್ಸೆಯಿಂದ ಹಣ್ಣಾದ, ನಲುಗಿ ಹೋದ ಶರೀರಕ್ಕೆ ಇದು ಹೊಸ ಚೈತನ್ಯ ನೀಡುತ್ತದೆ. ಇದೇ ನಿಲುವನ್ನು ವ್ಯಕ್ತಪಡಿಸುವ ನೃತ್ಯ ಚಿಕಿತ್ಸಕಿ ಅನುರಾಧಾ, ಸ್ತನ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ಒಳಗಾಗಿ ತೀವ್ರ ಭುಜದ ಸಮಸ್ಯೆಯಿಂದ ತಮ್ಮ ಬಳಿ ಬಂದ ಒಬ್ಬಾಕೆ ನೃತ್ಯ ಚಿಕಿತ್ಸೆಯಿಂದ ಮರಳಿ ಶೇ 90ರಷ್ಟು ಸುಧಾರಣೆ ಕಂಡ ಬಗ್ಗೆ ವಿವರಿಸುತ್ತಾರೆ. ಈ ಚಿಕಿತ್ಸೆಯಲ್ಲಿನ ಹಿತವಾದ ಸಂಗೀತ, ಸುಂದರ ಚಲನೆಗಳು, ಅರಿವಿಲ್ಲದೆ ನೃತ್ಯದೊಳಗೊಂದಾಗಿ ಪಡೆಯುವ ತಾದಾತ್ಮ್ಯ, ಇದು ಚಿಕಿತ್ಸೆ ಎಂಬ ಅರಿವಿಲ್ಲದೆ ಖುಷಿಯಾಗಿ ನರ್ತಿಸುವಾಗ ಸಿಗುವ ಗಮ್ಮತ್ತು ಇತ್ಯಾದಿ ವೈಶಿಷ್ಟ್ಯಗಳು ಬೇರೆ ಚಿಕಿತ್ಸಾ ಪದ್ಧತಿಗಳಲ್ಲಿ ಇಲ್ಲ ಎಂಬತ್ತ ಗಮನ ಸೆಳೆಯುತ್ತಾರೆ. ಇವೆಲ್ಲವೂ ಒಟ್ಟಾರೆಯಾಗಿ ಕೆಲಸ ಮಾಡಿದಾಗ ನಿರೀಕ್ಷಿತ ಫಲಿತಾಂಶ ದೊರೆಯುತ್ತದೆ ಎನ್ನುವುದು ಅವರ ಅಭಿಪ್ರಾಯ.

ಪ್ರತಿದಿನ 30-45 ನಿಮಿಷ ಮಾಡುವ ನೃತ್ಯ ಚಿಕಿತ್ಸೆಯಿಂದ ಹೃದಯದ ಸಮಸ್ಯೆ ಮತ್ತು ಕೆಲವು ಬಗೆಯ ಕ್ಯಾನ್ಸರ್ ರೋಗವನ್ನು ದೂರವಿಡಬಹುದು ಎಂದು ಅಮೆರಿಕನ್ ಕ್ಯಾನ್ಸರ್ ಸೊಸೈಟಿ ತಿಳಿಸಿದೆ.

ದೇಹ ಮತ್ತು ಮನಸ್ಸಿನ ನಡುವೆ ಅವಿನಾಭಾವ ಸಂಬಂಧ ಇದೆ ಎಂಬ ಮೂಲ ಮಂತ್ರವೇ ನೃತ್ಯ ಚಿಕಿತ್ಸೆಯ ಗಟ್ಟಿ ಅಡಿಪಾಯ. ಇದು ನಂಬಿಕೆಯ ಪ್ರಶ್ನೆಯೂ ಹೌದು. ಹಲವು ದೈಹಿಕ ಸಮಸ್ಯೆಗಳ ಬೀಜ ಇರುವುದು ಮನದಾಳದ ನೋವಿನಲ್ಲಿ. ಸುಪ್ತ ಮನಸ್ಸಿನಲ್ಲಿ ಅಡಗಿರುವ ನೋವಿನ ಕಾರಣಗಳನ್ನು ಮನಸ್ಸಿನ ಮೇಲ್‌ಸ್ತರಕ್ಕೆ ಎಳೆದು ತರುವುದು ನೃತ್ಯ ಚಿಕಿತ್ಸೆಯಿಂದ ಸುಲಭ. ನೃತ್ಯದಿಂದ ದೇಹ ಹಗುರಾಗುವುದಲ್ಲದೆ ಮನಸ್ಸಿನ ಕಹಿ ಹೊರಹಾಕಲು ಸಾಧ್ಯ. ಇದರಿಂದ ಮನಸ್ಸು- ದೇಹದ ನಡುವಿನ ಸಂಬಂಧ `ಸಿಹಿ'ಯಾಗಿರುತ್ತದೆ ಎಂಬುದು ನೃತ್ಯ ಚಿಕಿತ್ಸಕರ ಅಭಿಪ್ರಾಯ. 

ಪಾಶ್ಚಾತ್ಯ ದೇಶಗಳು ಮತ್ತು ಅಮೆರಿಕದಲ್ಲಿ ನೃತ್ಯದ ಚಿಕಿತ್ಸಕ ಶಕ್ತಿಯ ಕುರಿತು 70-80 ವರ್ಷಗಳಿಂದಲೂ ಸಂಶೋಧನೆ, ಅಧ್ಯಯನ ನಡೆಯುತ್ತಲೇ ಇದೆ. ಆರಂಭದಲ್ಲಿ 1942ರಲ್ಲಿ ವಾಷಿಂಗ್ಟನ್‌ನ ಸೇಂಟ್ ಎಲಿಜಬೆತ್ ಆಸ್ಪತ್ರೆಯಲ್ಲಿ ಮಾರಿಯನ್ ಚೇಸ್ ಎನ್ನುವ ನರ್ತಕಿ ಮಾನಸಿಕ ರೋಗಿಗಳಿಗೆ ನೀಡುವ ಚಿಕಿತ್ಸೆಗೆ ಪೂರಕವಾಗಿ ನೃತ್ಯ ಚಿಕಿತ್ಸೆ ಆರಂಭಿಸಿದರು. ಇದೇ ಸಂದರ್ಭದಲ್ಲಿ ಕ್ಯಾಲಿಫೋರ್ನಿಯಾ ಸ್ಟೇಟ್ ಆಸ್ಪತ್ರೆಯಲ್ಲೂ ಇದೇ ಮಾದರಿಯ ಕ್ರಮಬದ್ಧ ಚಿಕಿತ್ಸೆ ಆರಂಭವಾಯಿತು. ಮುಂದೆ ಕೆಲವೇ ವರ್ಷಗಳಲ್ಲಿ ಚಿಕಿತ್ಸೆ ಜನಪ್ರಿಯವಾಗಿ 1956ರಲ್ಲಿ `ನೃತ್ಯ ಚಿಕಿತ್ಸಕರ ಸಂಸ್ಥೆ' ರೂಪುಗೊಂಡಿತು. ಅಲ್ಲಿಂದೀಚೆಗೆ ಅಮೆರಿಕವೊಂದರಲ್ಲೇ ಸಾವಿರದೈನೂರಕ್ಕೂ ಹೆಚ್ಚು ಅಧಿಕೃತ ನೃತ್ಯ ಚಿಕಿತ್ಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಭಾರತದಲ್ಲಿ ನೃತ್ಯ ಚಿಕಿತ್ಸೆ
`ಭಾರತೀಯ ನೃತ್ಯದಲ್ಲಿ ಚಿಕಿತ್ಸಕ ಚಲನೆಗಳು ಸಾಕಷ್ಟಿವೆ. ನಮ್ಮ ಶಾಸ್ತ್ರೀಯ ನೃತ್ಯದ ಹಿಂದಿನ ಆಧ್ಯಾತ್ಮಿಕ ಮೌಲ್ಯ, ತತ್ವ, ಸಾರ ತಿಳಿದವರಿಗೆ ಅದು ದೈಹಿಕ ವ್ಯಾಯಾಮಕ್ಕಿಂತಲೂ ಒಂದು ರೀತಿಯ ಧ್ಯಾನ ಇದ್ದಂತೆ ಎನ್ನುವ ಅರಿವು ಇದೆ' ಎನ್ನುತ್ತಾರೆ ಚೆನ್ನೈನ ಡಾ. ಅಂಬಿಕಾ ಕಾಮೇಶ್ವರ್.

ಭರತನಾಟ್ಯ, ಶಾಸ್ತ್ರೀಯ ಸಂಗೀತದಲ್ಲಿ ಪರಿಣತಿ ಪಡೆದಿರುವ ಅಂಬಿಕಾ `ರಸ' ಸಂಸ್ಥೆಯ ಮೂಲಕ ಕಳೆದ ಎರಡು ದಶಕಗಳಿಂದ ನಾಟ್ಯ ಚಿಕಿತ್ಸೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ನೃತ್ಯ, ಸಂಗೀತ, ಕಥೆ, ಕರಕುಶಲ ಕಲೆ, ಮೈಮ್ ಮೂಲಕ ನಾಟ್ಯ ಚಿಕಿತ್ಸೆಯನ್ನು ವಿಶೇಷ ಕೌಶಲ ಇರುವ ಸ್ಪ್ಯಾಸ್ಟಿಕ್, ಆಟಿಸ್ಟಿಕ್ ಮಕ್ಕಳ ಚಿಕಿತ್ಸೆಯಲ್ಲಿ ಬಳಸುತ್ತಾರೆ.

ಕ್ಯಾನ್ಸರ್, ಆರ್‌ಥ್ರೈಟಿಸ್, ಹೃದ್ರೋಗ, ಮಧುಮೇಹ, ಹೆಚ್ಚಿನ ರಕ್ತದೊತ್ತಡ ಇತ್ಯಾದಿ ಗಂಭೀರ ಆರೋಗ್ಯ ಸಮಸ್ಯೆ ಇರುವವರು ತಮ್ಮ ವೈದ್ಯರ ಬಳಿ ಚರ್ಚಿಸಿದ ನಂತರವೇ ನೃತ್ಯ ಚಿಕಿತ್ಸೆ/ ಚಲನ ಚಿಕಿತ್ಸೆ ಆರಂಭಿಸಬೇಕು ಎನ್ನುವುದು ಎಲ್ಲ ಚಿಕಿತ್ಸಕರ ಅಭಿಪ್ರಾಯ.
`ನಾವು ನಮ್ಮ ದೇಹದ ಚಲನೆಗಳಿಗೆ ಇಷ್ಟೇ ಎಂಬ ಮಿತಿ ಹಾಕಿಕೊಂಡಿರುತ್ತೇವೆ. ಆ ಮೂಲಕ ನಮ್ಮ ಶರೀರದ ಚಲನಾ ಸಾಧ್ಯತೆಗಳಿಗೆ ಕಡಿವಾಣ ಹಾಕಿರುತ್ತೇವೆ. ನಮ್ಮ ದೇಹ ಹಲವು ಸೃಜನಾತ್ಮಕ ಚಲನೆಗಳನ್ನು ಮಾಡುವ ಶಕ್ತಿ ಹೊಂದಿದೆ.


ಆದರೆ ನಾವು ಅದನ್ನು ಕೇವಲ ಕ್ರಿಯಾತ್ಮಕ ಚಲನೆಗಳನ್ನು ಮಾಡುವ ಮೂಲಕ ಮಿತಿ ಹೇರಿಕೊಂಡಿದ್ದೇವೆ' ಅನ್ನುತ್ತಾರೆ ತ್ರಿಪುರಾ ಕಶ್ಯಪ್. ಅವರು ಬೆಂಗಳೂರಿನ ನೃತ್ಯ ಚಿಕಿತ್ಸಕಿ ಬೃಂದಾ ಜೇಕಬ್ ಅವರ ಸ್ಟುಡಿಯೊ ಫಾರ್ ಮೂವ್‌ವೆುಂಟ್ ಆರ್ಟ್ಸ್ ಅಂಡ್ ಥೆರಪೀಸ್ ಸಂಸ್ಥೆಯ ಸಹಭಾಗಿತ್ವದಲ್ಲಿ ಆಸಕ್ತರಿಗೆ ಒಂದು ವರ್ಷದ ನೃತ್ಯ ಚಿಕಿತ್ಸೆ ಕೋರ್ಸ್ ನಡೆಸುತ್ತಾರೆ.

ಮತ್ತೊಬ್ಬ ಚಿಕಿತ್ಸಕ ಬೆಂಗಳೂರಿನ ಎ.ವಿ.ಸತ್ಯನಾರಾಯಣ ಅವರು ಚಿಕಿತ್ಸೆಯಲ್ಲಿ ಶಾಸ್ತ್ರೀಯ ನೃತ್ಯ ಆಧಾರಿತ ಚಲನೆಗಳನ್ನು ಬಳಸಿಕೊಳ್ಳುತ್ತಾರೆ. ಭರತನಾಟ್ಯದ ಹಸ್ತಮುದ್ರೆಗಳು, ಅಡವುಗಳು, ಕೆಲವು ಸ್ಥಾನಕಗಳು ಚಿಕಿತ್ಸಕ ಗುಣ ಹೊಂದಿವೆ ಎನ್ನುವ ಅಭಿಪ್ರಾಯ ಅವರದು.

ಮನಸ್ಸು ಮತ್ತು ದೇಹಕ್ಕೆ ಅದರದ್ದೇ ಆದ ಒಂದು ಲಯವಿದೆ. ಆ ಲಯದಲ್ಲಿ ಆಗುವ ಏರುಪೇರು ಯಾವುದೋ ಒಂದು ರೋಗ, ಮನೋವೇದನೆಯ ಮೂಲಕ ಕಾಣಿಸಿಕೊಳ್ಳಬಹುದು. ಅಂತಹ ಲಯ ತಪ್ಪಿದ ಮನಸ್ಸು ಮತ್ತು ಶರೀರದ ನಡುವೆ ಸೌಹಾರ್ದ ಏರ್ಪಡಿಸಿ ಉತ್ತಮ ಆರೋಗ್ಯ ಪಡೆಯುವಲ್ಲಿ ನೃತ್ಯ ಚಿಕಿತ್ಸೆ ಪ್ರಯೋಜನಕಾರಿ. ಆದರೆ ಈ ಚಿಕಿತ್ಸೆಯ ಅಗಾಧ ಸಾಧ್ಯತೆಗಳು ಹಾಗೂ ಮಿತಿಗಳ ಬಗ್ಗೆ ಹೆಚ್ಚಿನ ವೈದ್ಯಕೀಯ ಸಂಶೋಧನೆಗಳು ನಮ್ಮಲ್ಲಿ ನಡೆದಿಲ್ಲ.

`ಲೈಫ್ ಸ್ಟೈಲ್ ಡಿಸೀಸ್' ಎಂದೇ ಕರೆಸಿಕೊಳ್ಳುವ ಮಧುಮೇಹ, ರಕ್ತದ ಒತ್ತಡ, ಥೈರಾಯಿಡ್ ಸಮಸ್ಯೆಗಳು ಹಿಂದೆಂದಿಗಿಂತಲೂ ಇಂದು ಎಲ್ಲರನ್ನೂ ಕಾಡುತ್ತಿರುವ ಈ ಸಂದರ್ಭದಲ್ಲಿ, ಯಾವುದೇ ಅಡ್ಡಪರಿಣಾಮಗಳಿಲ್ಲದ ನೃತ್ಯ ಚಿಕಿತ್ಸೆ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯಬೇಕು. ನಮ್ಮ ಶಾಸ್ತ್ರೀಯ ನೃತ್ಯಗಳು ಯೋಗಕ್ಕೆ ಬಹಳ ಸಮೀಪದ ಸಂಬಂಧ ಹೊಂದಿವೆ. ಅವುಗಳ ಬಗ್ಗೆ ವ್ಯವಸ್ಥಿತ ಅಧ್ಯಯನ ನಡೆಯುವುದು ಈ ಹೊತ್ತಿನ ಜರೂರು.

ಇಷ್ಟು ಓದಿದ ಮೇಲೆ ಇನ್ನೇಕೆ ತಡ? `ನಕ್ಕು ಹಗುರಾಗಿ' ಎನ್ನುವಂತೆ `ನರ್ತಿಸಿ ಹಗುರಾಗಿ' ಅನ್ನೋಣ ಅಲ್ಲವೇ?

ನೃತ್ಯ ಅತ್ಯುನ್ನತ ನೆಲೆಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಮತ್ತು ಮನೋರಂಜಕ ಎನ್ನುವ ಗಡಿಗಳನ್ನು ಮೀರಿ ಅಧ್ಯಾತ್ಮದ ಹಂತವನ್ನು ತಲುಪುತ್ತದೆ. ಈ ಆಧ್ಯಾತ್ಮಿಕ ಮೌಲ್ಯಕ್ಕೆ ಉದ್ವಿಗ್ನ ಮನಸ್ಸನ್ನು ಶಾಂತಗೊಳಿಸುವ ಶಕ್ತಿ ಇದೆ.
ಡಾ. ಅಂಬಿಕಾ ಕಾಮೇಶ್ವರ್,  ನೃತ್ಯ ಚಿಕಿತ್ಸಕಿ


ADVERTISEMENT

ದೇಹದಲ್ಲಾಗುವ ಸಂಕಟ ದೇಹಕ್ಕೇ ಚೆನ್ನಾಗಿ ತಿಳಿದಿರುತ್ತದೆ. ಅದನ್ನು ಮಾತಿನಲ್ಲಿ ವ್ಯಕ್ತಪಡಿಸುವುದಕ್ಕಿಂತಲೂ ದೇಹದ ಚಲನೆಗಳ ಮೂಲಕ ವ್ಯಕ್ತಪಡಿಸುವುದು ಸುಲಭ. ಅಣಬೆಗಳಂತೆ ತಲೆ ಎತ್ತುತ್ತಿರುವ, ಯಾವುದೇ ಸೂಕ್ತ ತರಬೇತಿ- ಹಿನ್ನೆಲೆ ಇಲ್ಲದ ಚಿಕಿತ್ಸಕರ ಬಗ್ಗೆ ಜನ ಜಾಗರೂಕರಾಗಿ ಇರಬೇಕು.
-ತ್ರಿಪುರಾ ಕಶ್ಯಪ್, ನೃತ್ಯ ಚಿಕಿತ್ಸಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.