ADVERTISEMENT

ನೈತಿಕ ಅಧಃಪತನ

ಮಿನಿ ಕಥೆ

ಶೇಖರಗೌಡ ವೀ ಸರನಾಡಗೌಡರ್
Published 6 ಸೆಪ್ಟೆಂಬರ್ 2013, 19:59 IST
Last Updated 6 ಸೆಪ್ಟೆಂಬರ್ 2013, 19:59 IST

`ಥೂ ನೀನೊಬ್ಬ ಮನುಷ್ಯನಾ? ನರರಾಕ್ಷಸ. ಗಂಡನನ್ನು ಕಳೆದುಕೊಂಡಿದ್ದ ನನಗೆ ಬಾಳು ಕೊಡುವುದಾಗಿ ನಂಬಿಸಿ ಬುಟ್ಟಿಗೆ ಹಾಕಿಕೊಂಡೆ. ನಿನ್ನ ಮಗಳೂ ನನ್ನ ಮಗಳೇ ಎನ್ನುತ್ತಿದ್ದವನು ಇಂದು ಅವಳ ಮೇಲೇ ಅಮಾನುಷವಾಗಿ ಅತ್ಯಾಚಾರ ಎಸಗಿದ್ದೀ. ನಿನ್ನಲ್ಲಿ ನೈತಿಕತೆ ಎಂಬುದೇ ಇಲ್ಲವೇ? ಪೋಲೀಸರೇ ಇವನನ್ನು ಎಳೆದೊಯ್ಯಿರಿ. ಇಂತಹ ನೀಚ ಮನುಷ್ಯನ ಮರ್ಮಾಂಗವನ್ನು ಇಂಚಿಂಚಾಗಿ ಕತ್ತರಿಸಿ ಹಾಕಿ ಚಿತ್ರಹಿಂಸೆ ಕೊಟ್ಟರೆ ಮಾತ್ರ ಈ ರೀತಿಯ ಅಮಾನುಷ, ಅಕ್ಷಮ್ಯ ಅಪರಾಧಿಗಳಿಗೆ ಕರೆಗಂಟೆ ಆಗಬಹುದು. ಬರೀ ಜೈಲಿನಲ್ಲಿ ಕೂಡಿಸಿದರೆ ಕೂಳು ದಂಡ ಅಷ್ಟೇ'- ಅವಳ ಮಾತೃ ಹೃದಯ ಯಾರ ಇರುವನ್ನೂ ಲೆಕ್ಕಿಸದೆ ಗೋಳಾಡುತ್ತಿತ್ತು.

ಪೊಲೀಸರು ಪ್ರಸಾದನನ್ನು ಠಾಣೆಗೆ ಎಳೆದೊಯ್ಯುತ್ತಿದ್ದಂತೆಯೇ, ಚಿಕಿತ್ಸೆ ಪಡೆಯುತ್ತಿದ್ದ ಮಗಳು ಉಜ್ವಲಾಳ ಕಡೆ ಗಮನ ಹರಿಸಿದಳು ಮಾಲತಿ. ಶಸ್ತ್ರಚಿಕಿತ್ಸಾ ಕೊಠಡಿಯಿಂದ ಡಾಕ್ಟರು ಹೊರಗೆ ಬರುವುದನ್ನೇ ಚಡಪಡಿಸುತ್ತಾ ಕಾಯುತ್ತಿದ್ದಳು.

ಮಾಲತಿ 29 ವರ್ಷದವಳಿದ್ದಾಗ, ಸರ್ಕಾರಿ ನೌಕರನಾಗಿದ್ದ ಗಂಡ ವಸಂತ್ ರಸ್ತೆ ಅಪಘಾತದಲ್ಲಿ ಮೃತನಾಗಿದ್ದ. ಸುಂದರ ಹೆಂಡತಿ ಮತ್ತು 8 ವರ್ಷದ ಮಗಳನ್ನು ಅನಾಥರನ್ನಾಗಿ ಮಾಡಿ ಹೋಗಿದ್ದ. ಪತಿಯ ಹಟಾತ್ ಸಾವಿನಿಂದ ನಲುಗಿ ಹೋಗಿದ್ದ ಮಾಲತಿಗೆ ಆಗ ಸಹಾಯ, ಸಹಕಾರ ನೀಡಿದವನು ವಸಂತನ ಸಹೋದ್ಯೋಗಿ ಮತ್ತು ಆತ್ಮೀಯ ಗೆಳೆಯ ಪ್ರಸಾದ್. ಅನುಕಂಪದ ಆಧಾರದ ಮೇಲೆ ಗಂಡನ ನೌಕರಿ ಅವಳಿಗೆ ಸಿಗುವಂತೆ ಮಾಡಲು ಬಹಳಷ್ಟು ಶ್ರಮಿಸಿದ್ದ. ಆಗೆಲ್ಲ ಹಲವಾರು ಬಾರಿ ಮಾಲತಿಯ ಮನೆಗೆ ಎಡತಾಕಿದ್ದ.

ಕೆಲ ದಿನಗಳ ನಂತರ ಪ್ರಸಾದನ ವರ್ತನೆ ತುಸು ಬೇರೆ ಅನಿಸತೊಡಗಿತ್ತು. ಅದೊಂದು ದಿನ ನೇರವಾಗಿ ಮಾತಿಗಿಳಿದಿದ್ದ ಅವನು `ನೋಡು ಮಾಲತಿ ನೀನಿನ್ನೂ ಚಿಕ್ಕವಳು. ನಿನ್ನವರೆನ್ನುವವರು ಯಾರೂ ಕಷ್ಟಕಾಲದಲ್ಲಿ ನಿನ್ನ ಕೈ ಹಿಡಿಯಲಿಲ್ಲ. ನಿನಗಿನ್ನೂ ತುಂಬು ಯೌವನ. ಅದೆಷ್ಟು ದಿನ ಅಂತ ಒಂಟಿ ಜೀವನ ನಡೆಸುವಿ? ಗಂಡನ ನೆನಪಲ್ಲೇ ಇಡೀ ಜೀವನವನ್ನು ತಳ್ಳಲಿಕ್ಕೆ ಆಗುತ್ತದೆಯೇ? ನಿನ್ನ ಯೌವನ ಕಾಡ ಬೆಳದಿಂಗಳಿನಂತೆ ವ್ಯರ್ಥವಾಗಿ ಹೋಗುತ್ತದೆ. ನಿನ್ನ ಮಗಳೂ ತಂದೆಯ ಪ್ರೀತಿ, ಆಸರೆಯಿಂದ ವಂಚಿತಳಾಗಿದ್ದಾಳೆ. ನೀನು ಮನಸ್ಸು ಮಾಡಿದರೆ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳಬಹುದು. ನಾನು ನಿನ್ನ ಜೊತೆಗಿದ್ದರೆ ಯಾವ ಗಂಡೂ ನಿನ್ನತ್ತ ಕಣ್ಣು ಹಾಕುವ ಸಾಹಸ ಮಾಡುವುದಿಲ್ಲ' ಎಂದು ಹೇಳಿದ್ದ.

ಹೀಗೆ ಪ್ರಸಾದ ಬಿಟ್ಟ ಆಸೆಯ ಹುಳು ಮಾಲತಿಯ ಮೆದುಳನ್ನು ಚೆನ್ನಾಗೇ ಕೊರೆದಿತ್ತು. ಗಂಡ ಸತ್ತ ನಂತರ ಗಂಡಸಿನ ಸಂಗಕ್ಕಾಗಿ ಹಪಹಪಿಸುತ್ತಿದ್ದ ಮಾಲತಿಗೆ ಪ್ರಸಾದನ ಮಾತಿನಿಂದ ಸ್ವರ್ಗಕ್ಕೆ ಮೂರೇ ಗೇಣಿದೆ ಎನಿಸಿತ್ತು. ಇಬ್ಬರ ಮೈ, ಮನಸ್ಸುಗಳೂ ತಣಿದಿದ್ದವು. ಮುಂದೆ ಇವರ ಸಂಬಂಧ ಗೋಪ್ಯವಾಗೇನೂ ಉಳಿಯಲಿಲ್ಲ. ಜನರ ಕುಹಕದ ಮಾತುಗಳನ್ನು ಎದುರಿಸಲು ಅವರು ತಯಾರಾಗೇ ಇದ್ದರು. ಪ್ರಸಾದನ ಪ್ರೀತಿಯ ಹೊಳೆಯಲ್ಲಿ ಕೊಚ್ಚಿ ಹೋಗಿದ್ದ ಮಾಲತಿಗೆ ಗಂಡನ ನೆನಪು ಮಾಸಿ ಹೋಗಿತ್ತು. ಉಜ್ವಲಾಳ ಮೇಲೂ ಪ್ರೀತಿ, ಕರುಣೆ ಹರಿಸುತ್ತಿದ್ದ ಪ್ರಸಾದ್.

ಆರೇಳು ತಿಂಗಳು ಕಳೆಯುವಷ್ಟರಲ್ಲಿ, ಅವನಿಗೆ ತಾನಲ್ಲದೆ ಇನ್ನೂ ಕೆಲವು ಹೆಂಗಸರ ಸಂಬಂಧ ಇರುವುದು ತಿಳಿದಾಗ ಮಾಲತಿ ನೇರವಾಗಿ ಪ್ರಸ್ತಾಪಿಸಿದ್ದಳು. `ಅದು ನನ್ನ ವೈಯಕ್ತಿಕ ವಿಚಾರ. ನಿನ್ನ ಮೇಲಿನ ಪ್ರೀತಿಯಂತೂ ಕಡಿಮೆಯಾಗಿಲ್ಲವಲ್ಲ, ನಿನಗೇಕೆ ಅದರ ಚಿಂತೆ' ಎಂದು ಸಮಜಾಯಿಷಿ ಕೊಟ್ಟು ಅವಳ ಬಾಯಿ ಮುಚ್ಚಿಸಿದ್ದ.

ಉಜ್ವಲಾ ಋತುಮತಿಯಾಗಿದ್ದಳು. ದಿನದಿಂದ ದಿನಕ್ಕೆ ಅರಳುತ್ತಿದ್ದ ಅವಳ ಕೌಮಾರ್ಯ ಪ್ರಸಾದನ ಮನಸ್ಸನ್ನು ಕೆಣಕತೊಡಗಿತ್ತು. ಇದು ಮಾಲತಿಯ ಗಮನಕ್ಕೆ ಬರಲೇ ಇಲ್ಲ. ವಯಸ್ಸಿಗೆ ಮೀರಿ ಬೆಳೆಯುತ್ತಿದ್ದ ಉಜ್ವಲಾಳನ್ನು ಅನುಭವಿಸಲು ಸಮಯ, ಸಂದರ್ಭಕ್ಕಾಗಿ ಅವನು ಹೊಂಚುಹಾಕತೊಡಗಿದ್ದ. ಅಂದು ಮಾಲತಿ ಮನೆಯಲ್ಲಿ ಇಲ್ಲದ ಸಮಯ ನೋಡಿಕೊಂಡು, ಉಜ್ವಲಾಳ ಮೇಲೆ ಎರಗಿದ್ದ. ಬೆದರಿದ ಜಿಂಕೆಯಂತಾದ ಅವಳು ಹುಲಿಯಂತೆ ಎರಗಿದ ಅವನ ಆರ್ಭಟಕ್ಕೆ ನಲುಗಿ ಹೋಗಿದ್ದಳು. ಎಲ್ಲ ಮುಗಿದ ಬಳಿಕ ಪ್ರಸಾದ್ ಹೊರಡಲು ಅನುವಾಗುತ್ತಿದ್ದಂತೆಯೇ ಮಾಲತಿ ಮನೆಗೆ ಬಂದುಬಿಟ್ಟಿದ್ದಳು. ಪ್ರಸಾದ್ ಸಾಕ್ಷಿ ಸಮೇತ ಸಿಕ್ಕಿ ಬಿದ್ದಿದ್ದ.

ತನ್ನ ಬದುಕಿನಲ್ಲಿ ಘಟಿಸಿಹೋದ ಈ ಸಂಗತಿಗಳನ್ನೆಲ್ಲ ನೆನಪಿಸಿಕೊಳ್ಳುತ್ತಾ ಆಸ್ಪತ್ರೆಯ ಹಾಲಿನಲ್ಲಿ ಕುಳಿತು ದುಃಖಿಸುತ್ತಿದ್ದಳು ಮಾಲತಿ. ಎದುರಿಗೆ ಇದ್ದ ಟಿ.ವಿ.ಯಲ್ಲಿ `ಪ್ರೇಯಸಿಯ ಮಗಳ ಮೇಲೆ ಪ್ರಿಯಕರನಿಂದ ಅತ್ಯಾಚಾರ' ಎಂಬ `ಬ್ರೇಕಿಂಗ್ ನ್ಯೂಸ್' ಪ್ರಸಾರ ಆಗತೊಡಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.