ADVERTISEMENT

ಬಂದೇ ಬರತಾದ ಕಾಲ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 19:30 IST
Last Updated 12 ಅಕ್ಟೋಬರ್ 2012, 19:30 IST

 ಒಡಲ ದನಿ

ಪ್ರೀತಿಯ ಗೆಳತಿ,

ಮೊನ್ನೆಯ ನಿನ್ನ ಭೇಟಿ, ಅದೂ ಸುದೀರ್ಘ 10 ವರ್ಷಗಳು ಕಳೆದ ನಂತರ ಮನಸ್ಸಿಗೆ ಅದೆಷ್ಟು ಮುದ ನೀಡಬೇಕಿತ್ತು. ಆದರೆ, ನಿನ್ನನ್ನು ಕಾಣುತ್ತಲೇ ನಿನ್ನನ್ನು ಚಿತ್ರಿಸಿಕೊಂಡಿದ್ದ ನನ್ನ ಮನಃಪಟಲದ ಚಿತ್ರ, ಅದೇ ತಾನೇ ಬಣ್ಣ ಹಚ್ಚಿಟ್ಟು ಆಕಸ್ಮಿಕ ಮಳೆಯಲ್ಲಿ ತೋಯ್ದ ಕಾಗದದಂತಾಯ್ತು!

ನಮ್ಮನ್ನೆಲ್ಲಾ ವೈಚಾರಿಕತೆಯ ಮೊನಚಿಗೆ ತೀವ್ರವಾಗಿ ಒಡ್ಡಿ ಸದಾ ಗೆಲ್ಲುತ್ತಿದ್ದ ನೀನೇ ಇಂದು ಸೋತುಹೋದವಳಂತೆ ಹತಾಶಳಾಗಿರುವುದು ಸರಿಯೇ? ಸ್ಸಾರಿ, ನಿನಗೆ ಸರಿ-ತಪ್ಪುಗಳ ಪಾಠ ಹೇಳಿಕೊಡುತ್ತಿಲ್ಲ. ಆದರೆ ನಿನ್ನನ್ನು ಅಪರಾಧಿಯಂತೆ ಕಾಣಲು ನನಗಿಷ್ಟವಿಲ್ಲ.
 
ಸಣ್ಣಪುಟ್ಟ ಅನ್ಯಾಯಕ್ಕೂ ಸಿಂಹಿಣಿಯಂತೆ ಎಗರಿ ಪ್ರತಿಭಟಿಸಿ ನಮ್ಮಂತಹ ಅಂಜುಬುರುಕರಲ್ಲಿ ಸಣ್ಣ ನಡುಕ ಹುಟ್ಟಿಸಿ `ಭಲಾ! ಭೇಷ್~ ಎನಿಸಿಕೊಳ್ಳುತ್ತಿದ್ದ ನೀನೀಗ ಮಾತು ಮಾತಿಗೂ ಕಣ್ಣಂಚಿಗೆ ಕರ್ಚೀಫು ಒತ್ತುತ್ತಿದ್ದದ್ದು ಕಂಡು ಕರುಳು ಕರಗಿತು ಕಣೇ.
ನೀನು ಹೀಗಾಗಲು ಕಾರಣ ಏನು? `ನಾನ್ಯಾವ ತಪ್ಪು ಮಾಡಿದ್ದೆ? ನನಗ್ಯಾಕೆ ಈ ರೀತಿ ಆಯ್ತು?~ ಎಂದು ಪ್ರಶ್ನಿಸಿಕೊಳ್ಳುತ್ತಿದ್ದೆಯಲ್ಲಾ, ಯಾಕೆ ಗೆಳತಿ ಈ ಪಶ್ಚಾತ್ತಾಪದ ಬೇಗುದಿ? ಬಹುಶಃ ನನ್ನ ಮಟ್ಟಿಗೆ ನಿನ್ನದೇನೂ ತಪ್ಪಿರುವುದಿಲ್ಲ. ನಿನ್ನನ್ನು ಅರ್ಥೈಸಿಕೊಳ್ಳದ ನಿನ್ನ ಸುತ್ತಣ ಪರಿಸರ, ಕುಟುಂಬ, ದುಡಿಮೆಯ ಸ್ಥಳ ನಿನ್ನಲ್ಲಿ ಈ ಆಘಾತ ಉಂಟುಮಾಡಿರಬಹುದು.

ನಿನಗೆ ನೆನಪಿದೆಯಾ? ಕಾಲೇಜು ದಿನಗಳಲ್ಲಿ ನೀನು ನಮ್ಮೆಲ್ಲರ `ಹೀರೋಯಿನ್~ ಆಗಿದ್ದೆ. ಬುದ್ಧಿ, ಗುಣ, ಚೆಲುವು, ಧೈರ್ಯ ನಿನ್ನಲ್ಲಿ ಮಿಳಿತಗೊಂಡಿತ್ತು. ನಾವೆಲ್ಲಾ ನಿನ್ನನ್ನು ನಿಜಕ್ಕೂ ಆರಾಧಿಸುತ್ತಿದ್ದೆವು. ಒಮ್ಮೆ ನಮ್ಮ ಜೂನಿಯರ್ ಒಬ್ಬಳು ನಿನ್ನಿಂದ `ಆಟೋಗ್ರಾಫ್~ ಪಡೆದದ್ದು ಇನ್ನೂ ಮರೆಯಲಾಗಿಲ್ಲ.
 
ಅದೂ ಆಕೆ ನಿನ್ನ `ಫ್ಯಾನ್~ ಎಂದು ಹೇಳಿಕೊಂಡದ್ದನ್ನು ಕೇಳಿ ನಮ್ಮ ಗುಂಪಲ್ಲೇ ಎಷ್ಟೋ ಜನಕ್ಕೆ ಅಸೂಯೆ ಆಗಿತ್ತು ಗೊತ್ತಾ? ಪಾಠದಲ್ಲೂ ಅಷ್ಟೆ, ನೀನು ಸದಾ ಮುಂದೆ. ಲೆಕ್ಚರರ್‌ಗಳ ಜೊತೆ ವಾದಕ್ಕಿಳಿದೇ ಬಿಡುತ್ತಿದ್ದೆ. ಸರಿಯಾದುದನ್ನು ಸರಿ ಎನ್ನಲು ನೀನು ಯಾವುದನ್ನೂ ಲೆಕ್ಕಕ್ಕೇ ತೆಗೆದುಕೊಳ್ಳುತ್ತಿರಲಿಲ್ಲ.

ಗೆಳತಿ, ನಿನ್ನ ಆಯ್ಕೆ ಎಲ್ಲ ಹಂತದಲ್ಲೂ ಸರಿಯಾಗೇ ಇರುತ್ತಿತ್ತು. ನಾವೆಲ್ಲಾ ನೀನೆಷ್ಟು ಅದೃಷ್ಟವಂತಳೆಂದು ಹಾಗೂ ನೀನು ಸದಾ ಗೆಲ್ಲುವ ಕುದುರೆ ಎಂದು ಮಾತನಾಡಿ ಕೊಳ್ಳುತ್ತಿದ್ದೆವು. ಹಾಗೆಂದು ನೀನೀಗ ಸೋತೆ ಎಂದು ನಾನು ಹೇಳುತ್ತಿಲ್ಲ. ನೀನು ಸೋತಿಲ್ಲ ಗೆಳತಿ, ಈಗಲೂ ನೀನು ಗೆಲ್ಲುವುದು ನಿಶ್ಚಿತ.

ಮರಳಿ ಮೈ-ಮನ ಕೊಡವಿ ಎದ್ದೇಳು, ಗುರಿ ನಿಶ್ಚಯಿಸಿಕೋ, ಮುನ್ನಡೆ ಎಂದೆಲ್ಲಾ ನಿನ್ನನ್ನು ಹುರಿದುಂಬಿಸುವಷ್ಟು ಶಕ್ತಿವಂತಳಲ್ಲ ನಾನು. ಶಕ್ತಿ ನೀನೇ, ನಿನ್ನೊಳಗೇ ಧೀಮಂತ ಪ್ರತಿಭೆ ಇದೆ. ಬೆಳಕು-ದಾರಿ ನಿನಗೆ ನೀನೇ ಆಗಿದ್ದೀಯ ಕಣೇ. ಉರಿಯೋ ಜ್ವಾಲೆ ನೀನು ಮಂಕಾಗಿರಬೇಡ್ವೇ. ನಿನ್ನ ಸ್ವಪ್ರಯತ್ನ, ಛಲದಿಂದಲೇ ಮೇಲೆ ಬಂದವಳು ನೀನು. ಎಷ್ಟೋ ಬಾರಿ ನಾವು ಗೆಳತೀರು ನಿನ್ನನ್ನು ಆದರ್ಶವಾಗಿಟ್ಟುಕೊಂಡು ಹೆಮ್ಮೆಪಡ್ತೀವಿ ಗೊತ್ತಾ?

ನಿನಗೆ ನೆನಪಿರಬಹುದು ನಮ್ಮ ಗೆಳತಿಯರ ಗುಂಪಿನಲ್ಲಿ ಒಬ್ಬಳು ದೂರದೂರಲ್ಲಿ ಓದಲು ಹೋಗಿ ಆತ್ಮಹತ್ಯೆ ಮಾಡಿಕೊಂಡ ವಿಷಯ. ನೀನಾಗ ಎಷ್ಟು ನೊಂದು ಕೇಳಿದ್ದೆ,  `ಅನ್ಯಾಯವಾಗಿ ಸತ್ತಳು, ಬದುಕಿ ಸಾಧಿಸುವ ಬದಲು ಸತ್ತು ಪಡೆದದ್ದೇನು?~.

ಆತ್ಮಹತ್ಯೆಯ ಕಡುವಿರೋಧಿ ನೀನು. ಇಷ್ಟೆಲ್ಲಾ ಹೇಳಿ ಮಾನಸಿಕವಾಗಿ ದೃಢವಾಗಿರಬೇಕೆಂದು ಹೇಳಿದ್ದ ನೀನೇ ಇಂದು ಸಾಯುವ ಮಾತಾಡಿದ್ದು?! ಅಬ್ಬಾ ನಿಜಕ್ಕೂ ನನಗೆ ನಂಬಲಾಗುತ್ತಿಲ್ಲ. ನೀನು ಅವಳೇನಾ?

ಈ ಶತಮಾನದ ಮಾದರಿ ಹೆಣ್ಣು ಕಣೇ ನೀನು. ಎಲ್ಲ ಕಾಲಕ್ಕೂ ಸಲ್ಲುತ್ತೀಯ. ನಿನ್ನಿಂದ ಇಂಥ ಮಾತು ಕೇಳಬೇಕಾದವರು ನಾವು. ನಿನ್ನ ಸ್ಥಾನ ಎಲ್ಲಿ ಮರೆತೆ? ಕಷ್ಟ, ತೊಂದರೆಗಳು, ಅಪಮಾನ, ತಿರಸ್ಕಾರಗಳು ಚಲಿಸುವ ಮೋಡಗಳ ಹಾಗೆ. ಇದು ನಿನಗೂ ಗೊತ್ತು. ನಿನ್ನ ಒಳ್ಳೆಯ ದಿನಗಳು ಎಲ್ಲೂ ಕಳೆದುಹೋಗಿಲ್ಲ. ನಿನ್ನೊಳಗೇ ಹುದುಗಿವೆ, ಹುಡುಕಿ ಮೇಲೆತ್ತು.

ಬಾ ಬೆಳಗು ಮನವನ್ನು ಗೆಳತಿ, ನಿನ್ನ ಮುಖದಲ್ಲಿ ಛಲದ ಕಳೆ ಕಾಣುವ ಬಯಕೆ ನನಗೆ. ನಿನಗಾಗಿ ಕಾಯುತ್ತಿರುತ್ತೀನಿ. ಕಡೇಪಕ್ಷ ನನಗೆ ಒಂದು ಫೋನ್ ಕರೆಯಾದರೂ ಮಾಡು. ನಿನ್ನ ದನಿಯಲ್ಲಿ ಆತ್ಮವಿಶ್ವಾಸದ ಗಟ್ಟಿತನವಾದರೂ ನನಗೆ ಕೇಳಿಸಲಿ.
ಈಡೇರಿಸಲಾರೆಯಾ...?
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.