ADVERTISEMENT

ಬೆನ್ನಿನ ಬಿಗಿತ ನಿವಾರಣೆಗೆ ಕಟಿ ಚಕ್ರಾಸನ

ಗೋಪಾಲಕೃಷ್ಣ ದೇಲಂಪಾಡಿ
Published 16 ಮಾರ್ಚ್ 2018, 19:30 IST
Last Updated 16 ಮಾರ್ಚ್ 2018, 19:30 IST
ಕಟಿ ಚಕ್ರಾಸನ
ಕಟಿ ಚಕ್ರಾಸನ   

ಬೆನ್ನುನೋವಿನ ಸಮಸ್ಯೆಯ ನಿಯಂತ್ರಣಕ್ಕೆ ನಿಂತುಕೊಂಡು ಅಭ್ಯಾಸ ಮಾಡುವ ಆಸನಗಳಲ್ಲಿ ಸರಳವಾದ ಆಸನವೇ ಕಟಿ ಚಕ್ರಾಸನ. ಕಟಿ ಅಂದರೆ ಸೊಂಟ. ಕಟಿ ಚಕ್ರಾಸನ ಎಂದರೆ ಸೊಂಟವನ್ನು ಚಕ್ರಾಕೃತಿಯಲ್ಲಿ ತಿರುಗಿಸುವುದು ಎಂದರ್ಥ. ಈ ಆಸನ ಅಭ್ಯಾಸ ಮಾಡಿದಾಗ ಸ್ನಾಯುಗಳಿಗೆ ಉತ್ತಮ ವ್ಯಾಮಾಮ ಸಿಗುತ್ತದೆ. ಬೆನ್ನು ಹುರಿಯ ನರಗಳಿಗೆ ಚೈತನ್ಯ ದೊರಕುತ್ತದೆ.

ಅಭ್ಯಾಸ ಕ್ರಮ: ಜಮಖಾನ ಹಾಸಿದ ನೆಲದ ಮೇಲೆ ತಾಡಾಸನದಲ್ಲಿ ನಿಲ್ಲಬೇಕು. ಅನಂತರ ಕಾಲುಗಳನ್ನು ಸುಮಾರು ಎರಡು ಅಡಿ ಅಂತರಕ್ಕೆ ಇರಿಸಿಕೊಳ್ಳಿ. ಆಮೇಲೆ ಬಲಗೈಲಿ ಸೊಂಟ ಸುತ್ತಿ ಬಳಸಬೇಕು. ಎಡ ಕೈಯನ್ನು ಭುಜದ ಮೇಲೆ ಇಡಬೇಕು. ಅನಂತರ ಉಸಿರನ್ನು ಬಿಡುತ್ತಾ ಎಡ ಬದಿಗೆ ದೇಹವನ್ನು ತಿರುಗಿಸಬೇಕು. ಈ ಸ್ಥಿತಿಯಲ್ಲಿ 5ರಿಂದ 10 ಸಲ ಸಾಮಾನ್ಯ ಉಸಿರಾಟ ನಡೆಸಬೇಕು. ಇಲ್ಲಿ ಭುಜಗಳು ಸಮಾ ನಾಂತರವಾಗಿರಬೇಕು. ಕಾಲಿನ ಪಾದ ಮೇಲಕ್ಕೆ ಬರಬಾರದು. ಈ ಆಸನ ಅಭ್ಯಾಸ ಮಾಡುವಾಗ ದೇಹವನ್ನು ಬಿಗಿ ಗೊಳಿಸಬಾರದು. ಅದೇರೀತಿ ಈ ಆಸನವನ್ನು ಇನ್ನೊಂದು ಬದಿಯಲ್ಲಿಯೂ ಅಭ್ಯಾಸ ಮಾಡಬೇಕು. ಸುಮಾರು 3ರಿಂದ 4 ಬಾರಿ ಅಭ್ಯಾಸ ಮಾಡಬಹುದು.

ಪ್ರಯೋಜನಗಳು: ಬೆನ್ನುಮೂಳೆ ಬಲಗೊಳ್ಳುತ್ತದೆ. ಸೊಂಟಕ್ಕೆ ಉತ್ತಮ ತಿರುಚುವಿಕೆಯ ವ್ಯಾಯಾಮ ದೊರಕುತ್ತದೆ. ಸೊಂಟನೋವು, ಬೆನ್ನು ನೋವು ನಿಯಂತ್ರಣಕ್ಕೆ ಈ ಆಸನ ತುಂಬಾ ಸಹಕಾರಿಯಾಗಿದೆ. ಸೊಂಟದ ಕೊಬ್ಬು ಕರಗುತ್ತದೆ. ಕುತ್ತಿಗೆ, ಹೆಗಲುಗಳು ಬಲಿಷ್ಠಗೊಳ್ಳುತ್ತವೆ. ಇದು ಸೊಂಟ, ಪೃಷ್ಠ, ತೊಡೆಗಳ ಕೊಬ್ಬನ್ನು ಕರಗಿಸಲು ಸಹಕಾರಿ. ಇದರಿಂದ ದೈಹಿಕ ಆಯಾಸ, ಮಾನಸಿಕ ಒತ್ತಡವನ್ನು ನಿಯಂತ್ರಿಸಬಹುದು. ಬೆನ್ನಿನ ಬಿಗಿತ ನಿವಾರಣೆಗೆ ಸಹಕಾರಿಯಾಗುತ್ತದೆ. ಕರುಳಿನ ದೋಷ ನಿವಾರಣೆಗೆ ಸಹಕಾರಿ.

ADVERTISEMENT

ವಿಶೇಷ ಸೂಚನೆ: ತೀವ್ರ ಬೆನ್ನು ನೋವು, ಸೊಂಟನೋವು, ಕತ್ತು ನೋವು ಇದ್ದವರು ಈ ಆಸನ ಅಭ್ಯಾಸ ಮಾಡುವುದು ಬೇಡ. ಈ ಆಸನ ಅಭ್ಯಾಸ ನಡೆಸುವಾಗ ಮೊಣಕಾಲು ಬಾಗಿಸಬಾರದು. ಆದಷ್ಟು ಭುಜಗಳನ್ನು ಒಂದೇ ರೇಖೆಯಲ್ಲಿ ತರಲು ಪ್ರಯತ್ನಿಸಬೇಕು. ಅಭ್ಯಾಸ ನಡೆಸುವಾಗ ನಿಧಾನವಾಗಿ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.