ADVERTISEMENT

ಬೇಡ ಹೀನ ದೃಷ್ಟಿ

ಅನ್ನಪೂರ್ಣ ವೆಂಕಟನಂಜಪ್ಪ
Published 20 ಸೆಪ್ಟೆಂಬರ್ 2013, 19:59 IST
Last Updated 20 ಸೆಪ್ಟೆಂಬರ್ 2013, 19:59 IST

‘ಹಾಳ್ ಕಣ್, ಮೂಳ್ ಕಣ್
ಮುಂಡೇರ್ ಕಣ್, ರಂಡೇರ್ ಕಣ್
ಉರಿದೇ ಹೋಗ್ಲಿ, ಬೆಂಕಿ ಬೀಳ್ಲಿ’
ಅಂತ ಹೇಳಿ ತಾಯಿ ಹಂಚಿಕಡ್ಡಿಯನ್ನು ಹೊತ್ತಿಸಿ, ನಿವಾ­ಳಿಸಿ ಹಿತ್ತಿಲ ಬಾಗಿಲಿನ ಮೂಲೆಗಿಟ್ಟಳು. ಒಣಗಿದ ಕಡ್ಡಿ ಪಟ­ಪಟ ಎಂದು ಸಿಡಿದು, ಒಂದು ಗಳಿಗೆಯಲ್ಲೇ ಬೂದಿ­ಯಾ­ಯಿತು. ಅದರಿಂದ ಬಂದ ಕರಕಲನ್ನು ಮಗುವಿನ ಹಣೆ, ಹೊಕ್ಕಳು, ಪಾದಕ್ಕೆ ಇಟ್ಟು, ಎರಡೂ ಕೈಗಳಿಂದ ನೆಟಿಕೆ ಮುರಿದು `ನೋಡಿದ್ಯಾ ಎಷ್ಟೊಂದು ದೃಷ್ಟಿ­ಯಾ­ಗಿತ್ತು ನಮ್ಮ ರಾಜಕುಮಾರನಿಗೆ' ಎಂದಳು. ಮಗು ಕಿಲಕಿಲ ನಕ್ಕಿತು.

ಹೀಗೆ ತನ್ನ ಅಳುತ್ತಿದ್ದ ಮಗುವಿಗೆ `ದೃಷ್ಟಿ' ತೆಗೆದದ್ದು ನನ್ನ ಆಪ್ತ ಗೆಳತಿಯ ಮಗಳು. ಅವಳು ಎಂಜಿನಿಯರ್. ಆಗ ಅವಳ ಅತ್ತೆ ಮಗುವನ್ನು ಎತ್ತಿಕೊಂಡು ರಮಿಸುತ್ತಿದ್ದರು. ಅವರು ವಿಧವೆ! ಒಂದು ಗಳಿಗೆ ನನಗೆ ಪಿಚ್ಚೆನ್ನಿಸಿತು. ಆದರೆ ಅವರ ಮುಖದಲ್ಲಿ ಮಾತ್ರ ಯಾವ ಬದಲಾವಣೆಯೂ ಕಾಣಲಿಲ್ಲ. ಬಹುಶಃ ಅವರು ಇದಕ್ಕೆ ಒಗ್ಗಿ ಹೋಗಿದ್ದರೇನೋ?

ಇದು ಒಂದು ಮನೆಯ ಕಥೆಯಲ್ಲ. ನಮ್ಮ ಯಾವುದೇ ಊರಿನಲ್ಲಿ, ಮಕ್ಕಳಿರುವ ಎಲ್ಲ ಮನೆಗಳಲ್ಲೂ ನಡೆದಿರುವ, ನಡೆಯುತ್ತಿರುವ, ನಡೆಯುತ್ತಲೇ ಇರಬಹುದಾದ ಸಂಗತಿ.

ಅವರ ಮನೆಯಿಂದ ಹೊರಬಂದ ನಂತರವೂ ನನ್ನ ಕಿವಿಯಲ್ಲಿ ಗೆಳತಿಯ ಮಗಳ ಪ್ರಾಸಬದ್ಧ ದೃಷ್ಟಿ ನಿವಾಳಿಕೆಯ ಮಾತುಗಳೇ ಗುಯ್‌ಗುಡುತ್ತಿದ್ದವು. ಹಾಳ್ ಕಣ್, ಮೂಳ್ ಕಣ್ ಏನೋ ಹೋಗಲಿ. ಅದು ಯಾವುದೋ ಕೆಟ್ಟ ಮನುಷ್ಯರ ಕಣ್ಣಾಗಿದ್ದಿರಬಹುದು. ಆದರೆ ಮುಂಡೇರ್ ಕಣ್,  ರಂಡೇರ್ ಕಣ್ ಎನ್ನುವುದು ಯಾಕೆ? ಅದರಲ್ಲೂ ಮೊದಲನೆಯದನ್ನು ಯೋಚಿಸಿದಾಗ, ವಿಧವೆಯರಾಗುವುದರಲ್ಲಿ ಅವರ ತಪ್ಪೇನಿದೆ? ಮುತ್ತೈದೆಯರಾಗಿದ್ದಾಗ ಒಳ್ಳೆಯವಾಗಿದ್ದ ಅವರ ಕಣ್ಣುಗಳು ಗಂಡ ಸತ್ತಾಕ್ಷಣ ಕೆಟ್ಟವಾದವೇ? ವಿದ್ಯಾವಂತರು ಎನಿಸಿಕೊಂಡವರು, ನಗರದ ನಾಗರಿಕತೆಯನ್ನು ಅಳವಡಿಸಿಕೊಂಡವರೂ ಹೀಗೇಕೆ ಯೋಚಿಸುತ್ತಾರೆ?

ಮತ್ತೊಂದು ಉದಾಹರಣೆಯೆಂದರೆ, ಪತಿಯನ್ನು ಕಳೆದುಕೊಂಡ ನೋವಿನಲ್ಲಿ ಇದ್ದ ನನ್ನ ಆಪ್ತ ಗೆಳತಿಯೊಬ್ಬಳಿಗೆ ಮತ್ತೊಬ್ಬ ಸಾಹಿತಿ ಮಿತ್ರೆ ಮೊಮ್ಮಗನ ಹುಟ್ಟುಹಬ್ಬಕ್ಕೆ ಕರೆದಿದ್ದಳು. ಆಗ ಎಲ್ಲರಿಗೂ ಕುಂಕುಮ ಕೊಟ್ಟು ಇವಳಿಗೆ ಕೊಡದೆ ಅವಮಾನಿಸಿದ್ದಳು. ತಮ್ಮ ನಡತೆಯಿಂದ ಮತ್ತೊಬ್ಬರಿಗೆ ಎಷ್ಟು ನೋವಾಗುತ್ತದೆ ಎಂಬುದನ್ನು ಅರಿಯದಷ್ಟು ವಿಚಾರ ಶೂನ್ಯರಾದವರಿಗೆ `ವಿದ್ಯಾವಂತರು' ಎನ್ನಬೇಕೇ?

ಗಂಡಸು ತನ್ನ ಸೇವೆಯನ್ನು ಜೀವನ ಪರ್ಯಂತ ಮಾಡಲೆಂದೇ ತನಗಿಂತ ಚಿಕ್ಕ ವಯಸ್ಸಿನ ಹೆಣ್ಣನ್ನೇ ಮದುವೆಯಾಗುವ ಹುನ್ನಾರವನ್ನು  ಭಾರತೀಯ ವೈವಾಹಿಕ ವ್ಯವಸ್ಥೆ ಹೊಂದಿದೆ. ಹೀಗಾಗಿ ವಿಧುರರಿಗಿಂತ `ವಿಧವೆ'ಯರ ಸಂಖ್ಯೆ ಸಹಜವಾಗಿಯೇ ಇಲ್ಲಿ ಹೆಚ್ಚಾಗಿದೆ. ಎಷ್ಟೇ ವಿದ್ಯಾವಂತರಿರಲಿ, ಶ್ರೀಮಂತರಿರಲಿ, ಯಾವುದೇ ವಯಸ್ಸಿನವರಾಗಿರಲಿ ಗಂಡನನ್ನು ಕಳೆದು­ಕೊಂಡವರು ಇಂದಿಗೂ ಶುಭ ಸಮಾರಂಭಗಳಲ್ಲಿ ಎರಡನೇ ದರ್ಜೆಯವರೇ ಆಗಿರುತ್ತಾರೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಏರ್ಪ­ಡಿಸಿ, ಮಗಳಿಗೆ ಧಾರೆ ಎರೆಯಲು ಸಹ ಆಕೆ ಬೇರೆಯವ­ರನ್ನು ಅವಲಂಬಿಸ­ಬೇಕಾಗಿ ಬರುವ ವಿಷಾದನೀಯ ಪರಿಸ್ಥಿತಿ ಇನ್ನೂ ಜ್ವಲಂತವಾಗಿದೆ.

ಇಂತಹ ಅವಮಾನಕ್ಕೆ ಕೊನೆ ಎಂದು? ಹೀಗೆ ನೊಂದ­ವರು ಮಾನನಷ್ಟ ಮೊಕದ್ದಮೆಯನ್ನು ಹೂಡಲಾರರು! ಕಾನೂನು ಜಾರಿಯಂತೂ ಸಾಧ್ಯವೇ ಇಲ್ಲ. ಇದಕ್ಕಿರುವ ಏಕೈಕ ಪರಿಹಾರವೆಂದರೆ, ಜನ ತಮ್ಮ ಮನಸ್ಸನ್ನು ಪರಿವರ್ತಿಸಿಕೊಳ್ಳುವುದಷ್ಟೆ. ಹಾಗೆಯೇ ವಿಧವೆಯರೂ ಧೈರ್ಯ ತಾಳಬೇಕು. ತಮ್ಮ ಮಕ್ಕಳ ಮದುವೆಯಲ್ಲಿ ಅವರೇ ಮುಂದೆ ನಿಂತು ಧಾರೆ ಎರೆಯಬೇಕು. ಮನಸ್ಸಿನಲ್ಲಿ ಇರುವ ಪರಂಪರಾಗತ ಕೀಳರಿಮೆಯನ್ನು ಕಿತ್ತೆಸೆಯಬೇಕು. ಹಾಗಾದಲ್ಲಿ ಮಾತ್ರ ಪರಿಸ್ಥಿತಿ ಸುಧಾರಿಸೀತು. l

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.