ADVERTISEMENT

ಮಾತೃ ದೇವೋಭವ...

ಮಿನಿಕಥೆ

ಡಾ.ವಿನಯಾ ಶ್ರೀನಿವಾಸ್
Published 15 ಫೆಬ್ರುವರಿ 2013, 19:59 IST
Last Updated 15 ಫೆಬ್ರುವರಿ 2013, 19:59 IST
ಮಾತೃ ದೇವೋಭವ...
ಮಾತೃ ದೇವೋಭವ...   

ಭೀಮರಾಯರ ಆತ್ಮ ತನ್ನಷ್ಟಕ್ಕೇ ನಗುತ್ತಿತ್ತು. ಅವರು ಪರಲೋಕ ತಲುಪಿ ಒಂದು ತಾಸೂ ಆಗಿರಲಿಲ್ಲ. ಆಗಲೇ ಮಗ-ಸೊಸೆ ಲಗುಬಗೆಯಿಂದ ಅವರ ಸೊಂಟದ ದಾರದಲ್ಲಿ ಸಿಗಿಸಿದ್ದ ಲಾಕರ್‌ನ ಬೀಗದ ಕೈಯನ್ನು ತೆಗೆದುಕೊಂಡಿದ್ದರು.
ಶವಸಂಸ್ಕಾರ ಮುಗಿದಿತ್ತು. ಇನ್ನೂ ನೆಂಟರಿಷ್ಟರು ಅವರವರ ಊರನ್ನೂ ತಲುಪಿರಲಿಕ್ಕಿಲ್ಲ, ಮಗ-ಸೊಸೆ ನಿಧಾನವಾಗಿ ರಾಯರ ಕೋಣೆ ತಲುಪಿದ್ದರು. ಅಲ್ಲಿದ್ದ ಅವರ ಲಾಕರ್ ಅನ್ನು ತೆಗೆದಿದ್ದರು. ಎಷ್ಟು ಹುಡುಕಿದರೂ ಅದರಲ್ಲಿ ಒಂದು ಜೊತೆ ಪಾದರಕ್ಷೆಯನ್ನು ಬಿಟ್ಟು ಬೇರೇನೂ ಸಿಕ್ಕಿರಲಿಲ್ಲ.

`ಏನ್ರೀ ಇದು? ನಿಮ್ಮಪ್ಪ ಇಡೀ ಲಾಕರ್‌ನಲ್ಲಿ ಯಾವುದೋ ಹಳೇ ಚಪ್ಪಲಿಗಳನ್ನು ಇಟ್ಟಿದ್ದಾರೆ...?' ಸೊಸೆ ಮಗನ ಮೇಲೆ ಸಿಡುಕುತ್ತಿದ್ದಳು.
* * *
`ಯಾವಾಗಲೂ ಬೀಗದ ಕೈ ಸೊಂಟಕ್ಕೇ ಸಿಗಿಸಿಕೊಳ್ತಿದ್ದು ನೋಡಿ, ಏನೋ ಭಾರಿ ಗಂಟೇ ಇಟ್ಟಿರಬೇಕು ಅಂದ್ಕೊಂಡಿದ್ನಲ್ರೀ...' ಬೇಸರ- ತಾತ್ಸಾರ ತುಂಬಿದ ಧ್ವನಿಯಲ್ಲಿ ಮಗನ ಮೇಲೆ ಸೊಸೆ ಕೆಂಡ ಕಾರಿದ್ದಳು.
ಮಗ ಅಸಹಾಯಕನಂತೆ ನಿಂತಿದ್ದ. ಅವನಿಗೆ ತನ್ನ ಅಪ್ಪನನ್ನು ಕಳೆದುಕೊಂಡ ಅಲ್ಪ ಸ್ವಲ್ಪ ದುಃಖವಿದ್ದೀತು.
* * *
ರಾಯರ ಆತ್ಮ ಆತ್ಮಾವಲೋಕನ ಮಾಡಿಕೊಳ್ಳಲಾರಂಭಿಸಿತ್ತು. ತನ್ನ ಜೊತೆಯಲ್ಲೇ ಇದ್ದ ತನ್ನ ತಾಯಿ ಕ್ಯಾನ್ಸರ್‌ನಿಂದ ತೀರಿಕೊಂಡಾಗ ರಾಯರು ಬಹಳ ನೊಂದಿದ್ದರು. ತಂದೆ- ತಾಯಿ ಎರಡೂ ಆಗಿ, ಕಷ್ಟಪಟ್ಟು ತನ್ನನ್ನು ಸಾಕಿದ್ದಳವಳು. ಎಲ್ಲರಂತೆ ತಾನೂ ಈ ಸಮಾಜದಲ್ಲಿ ಬದುಕುವಂತೆ ಮಾಡಿದ್ದಳು. ಸಾಯುವ ಸಮಯದಲ್ಲಿ ಬಳಸುತ್ತಿದ್ದ ಅವಳ ಚಪ್ಪಲಿಗಳನ್ನು ಎಸೆಯಲು ಅದೇಕೋ ರಾಯರಿಗೆ ಮನಸ್ಸು ಬಂದಿರಲಿಲ್ಲ. ಆಕೆಯ ನೆನಪಿಗಾಗಿ ಅವುಗಳನ್ನು ಜೋಪಾನವಾಗಿ ಇರಿಸಿದ್ದರು ರಾಯರು. 

ಮನೆ ಕ್ಲೀನ್ ಮಾಡುವಾಗ ಸೊಸೆ ಅದನ್ನು ಬಿಸಾಡಲು ಹೊರಟಿರುವುದು ಅವರ ಗಮನಕ್ಕೆ ಬಂದಿತ್ತು. ಕರುಳು ಚುರುಕ್ ಎಂದಿತ್ತು ರಾಯರಿಗೆ. ಕೂಡಲೇ ಅವುಗಳನ್ನು ತಂದು ತಮ್ಮ ಲಾಕರಿನಲ್ಲಿ ಇರಿಸಿದ್ದರು. ಎಂದಾದರೂ ಕೆಟ್ಟ ಒಂಟಿತನ ಕಾಡಿದಾಗ ರಾಯರು ಅವುಗಳ ಮೇಲೆ ಕೈಯಾಡಿಸುತ್ತಿದ್ದರು. ಅಮ್ಮನನ್ನು ನೆನಪಿಸಿಕೊಳ್ಳುತ್ತಿದ್ದರು.

ರಾಯರು ಲಾಕರಿನ ಬೀಗದ ಕೈ ಯಾರಿಗೂ ಸಿಗದಂತೆ ಜೋಪಾನವಾಗಿ ಇಡುತ್ತಿದ್ದುದನ್ನು ನೋಡಿದ್ದ ಸೊಸೆಯ ಕಲ್ಪನೆಯಲ್ಲಿ ಏನಿತ್ತೋ ತಿಳಿಯದು, ಆಕೆ ಮೂರೂ ಹೊತ್ತು ರಾಯರಿಗೆ ಬಿಸಿಬಿಸಿ ಊಟ ಬಡಿಸುತ್ತಿದ್ದಳು. ಮಗನೂ ಅಷ್ಟೆ, ಮಾತ್ರೆ- ಔಷಧಿಗಳನ್ನು ತಿಂಗಳಿಗೊಮ್ಮೆ ತಪ್ಪದೇ ತಂದುಕೊಡುತ್ತಿದ್ದ.
* * *
`ಅಮ್ಮ ತಾನು ಸತ್ತ ನಂತರವೂ ನನ್ನನ್ನು ಜೋಪಾನ ಮಾಡಿದಳೇನೋ...' ರಾಯರ ಆತ್ಮ ಯೋಚಿಸತೊಡಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.