ADVERTISEMENT

ವೈಶಾಖದ ಸೂರ್ಯ ಮತ್ತು ಭೂಮಿ ಮೇಲಿನ ನಾವು

ದೀಪಾ ಫಡ್ಕೆ
Published 23 ಫೆಬ್ರುವರಿ 2018, 19:30 IST
Last Updated 23 ಫೆಬ್ರುವರಿ 2018, 19:30 IST
ವೈಶಾಖದ ಸೂರ್ಯ ಮತ್ತು ಭೂಮಿ ಮೇಲಿನ ನಾವು
ವೈಶಾಖದ ಸೂರ್ಯ ಮತ್ತು ಭೂಮಿ ಮೇಲಿನ ನಾವು   

ಭರ್ರನೆ ನೀರಿನ ಕೊಳಾಯಿ ಬಿಟ್ಟುಕೊಂಡು, ನೀರಿನ ರಭಸಕ್ಕೇ ಸರಿಯಾಗಿ ಮಾತಾಡುತ್ತಾ ಪಾತ್ರೆ ತೊಳೆಯುತ್ತಿದ್ದ ಲಕ್ಷ್ಮಿಗೆ ತಟ್ಟನೇ ಏನೋ ಜ್ಞಾನೋದಯವಾದಂತೆ ಅಂದೆ, 'ನೀರು ಸಣ್ಣಗೆ ಬಿಡು ಮಾರಾಯ್ತಿ, ಬೇಸಿಗೆ ಶುರುವಾಯ್ತು’. ಏನೋ ದೊಡ್ಡ ಆತಂಕ ಎದುರಿಸಲು ಸಿದ್ಧವಾದಂತೆ ಲಕ್ಷ್ಮೀಯೂ `ಅಯ್ಯೋ ದೇವ್ರೆ, ಇನ್ನು ವಾರಕ್ಕೊಮ್ಮೆ ನೀರು ಬಿಡಲು ಶುರು ಮಾಡ್ತಾರೆ ಅಕ್ಕಾ, ನೀರು ಹಿಡಿದಿಡಲು ಒಂದು ದೊಡ್ಡ ಪ್ಲಾಸ್ಟಿಕ್ ಡ್ರಮ್ ತಕ್ಕೊಬೇಕು’ ಎನ್ನುತ್ತಾ ಇನ್ನು ಕರೆಂಟೂ ನಡುನಡುವೆ ಇರಲ್ಲ, ಸೆಕೆ ಬೇರೆ ಎನ್ನುತ್ತಾ ಬೇಸಿಗೆಯ ತಯಾರಿ ಬಗ್ಗೆ ಬಿಡದೇ ಮಾತಾಡಲಾರಂಭಿಸಿದಳು. ಆ ಶಿವನ ರಾತ್ರಿ ಕಳೆಯುತ್ತಿದ್ದಂತೆಯೇ, ಬಾನದೊರೆ ಸೂರ್ಯ ತನ್ನ ಬಣ್ಣ, ಲಕ್ಷಣಗಳನ್ನು ಬದಲಾಯಿಸಲು ಆರಂಭಿಸುತ್ತಾನೆ. 

ಅದುವರೆಗೂ ಮಳೆ, ಚಳಿಗಾಲದಲ್ಲಿ ’ನನ್ನ ಅಬ್ಬರ, ಗುಣಲಕ್ಷಣ ತೋರಲು ನಂಗೆ ಅವಕಾಶನೇ ಆಗಿಲ್ಲ’ ಎನ್ನುವಂತೇ ಭೋರಿಡಿದು ಅಳುತ್ತಿದ್ದವ ಈಗ ಹಗಲನ್ನು ದೊಡ್ಡದಾಗಿಸಿ ತನ್ನ ಪೂರಾ ಶೌರ್ಯವನ್ನೂ ಪ್ರದರ್ಶನಕ್ಕೆ ಇಟ್ಟವನಂತೆ ಬೆಳಗಲು, ಭೂಮಿಯನ್ನು ಸುಡಲು ಆರಂಭಿಸಿದ ಎಂದರೆ ವೈಶಾಖದ ದಿನಗಳು ಶುರುವಾಯಿತು ಎಂದರ್ಥ. ಹೆಸರಲ್ಲೇ ಶಾಖ ತುಂಬಿಕೊಂಡಿರುವ ಚೈತ್ರ–ವೈಶಾಖದ ಬೇಸಿಗೆ, ಸುಡುಬೇಸಿಗೆ ಆರಂಭವಾಗುತ್ತಿದ್ದಂತೆ ಭೂಮಿ ಮೇಲೆ ನಮ್ಮಂಥ ಹುಲುಮಾನವರಿಗೆ ನೆನಪಾಗುವುದೇ ನೀರು. ಅದುವರೆಗೂ ಎಷ್ಟು ಸಾಧ್ಯವೋ ಅಷ್ಟು ನಿರ್ಲಕ್ಷ್ಯ ಮಾಡಿದ್ದ, ಪೋಲು ಮಾಡಿದ್ದ, ಹರಿದು ಹೋಗಲು ಬಿಟ್ಟಿದ್ದ ನೀರು ಈಗ ಅಮೃತವಾಗಿ ಕಾಣತೊಡಗುತ್ತದೆ ಎಂದರೆ ಬೇಸಿಗೆಯ ದಿನಗಳಿಗೆ ಸ್ವಾಗತ.

ನಮ್ಮಲ್ಲಿ ಮಲೆನಾಡು, ಕರಾವಳಿ ತೀರದ ನಾಡಹೆಂಚಿನ ಮನೆಗಳಲ್ಲಿ ಮಳೆಗಾಲ ಬರುವ ಮುನ್ನ ಒಂದಷ್ಟು ತಯಾರಿಗಳು ನಡೆಯುವುದುಂಟು. ತುಂಡಾದ ಹೆಂಚು ತೆಗೆದು ಹೊಸದನ್ನು ಹಾಕಿ ಮಳೆಯ ನೀರು ಒಳ ಸೇರದಂತೆ ಮಾಡುವ ವ್ಯವಸ್ಥೆಯದು. ಬೆಂಗಳೂರಿನಂಥ ನಗರಗಳಲ್ಲಿ ಚಳಿಗಾಲದಲ್ಲಿ ಬೆಚ್ಚಗಿನ ಉಡುಪುಗಳ ಅಗತ್ಯ ಬೀಳುವಂತೆ ಬೇಸಿಗೆಯಲ್ಲಿ ಪೂರ್ತಿ ಮಾನವಸಂಕುಲಕ್ಕೆ ಮಾತ್ರವಲ್ಲದೇ ಪ್ರಾಣಿಪಕ್ಷಿಗಳಿಗೂ ಬಿಸಿಲಿಂದ ಕಾಪಾಡಿಕೊಳ್ಳಲು ಒಂದಷ್ಟು ತಯಾರಿ ಅಗತ್ಯವಾಗಿ ಕಾಣುತ್ತದೆ. ನೀರು, ಈ ಎಲ್ಲ ಅಗತ್ಯಗಳ ಪಟ್ಟಿಯಲ್ಲಿ ಮಹತ್ವಪೂರ್ಣ ಸ್ಥಾನವನ್ನು ಪಡೆದು ನೀರಿನಿಂದಲೇ ಬದುಕು ಎನ್ನುವುದನ್ನು ಸಾಬೀತು ಪಡಿಸಿದೆ. ಇದಂತೂ ನಿಜಕ್ಕೂ ವೈರುಧ್ಯ ತುಂಬಿದ ತಮಾಷೆ! ನೀರು ದುರ್ಭರ ಎನಿಸುವ ಕಾಲದಲ್ಲೇ ನೀರಿನ ಅಗತ್ಯ ಅತಿ ಹೆಚ್ಚುವುದು. ‘ನಿನ್ನ ಅಗತ್ಯಗಳಿಂದಲೇ ನಿನಗೆ ಪಾಠ ಕಲಿಸುವೆ’ ಎಂದು ಪ್ರಕೃತಿ ಅಂದುಕೊಂಡಿರಬೇಕು! ಹಾಗೆ ಅಟ್ಟ ಸೇರಿದ್ದ ಬಿಂದಿಗೆ, ಡ್ರಮ್ಮಗಳು ಮತ್ತೆ ಮುಖ್ಯಸ್ಥಾನಗಳನ್ನು ಅಲಂಕರಿಸಲಿವೆ.

ADVERTISEMENT

ಮನೆ ಮುಂದಿನ ಗುಲಾಬಿ ಟಬುಬಿಯಾ ಬೋಳಾಗಿ ನಿಂತಿದ್ದಾಳೆ ಮತ್ತು ಒಡಲಲ್ಲಿರುವ ಅದಮ್ಯ ಪ್ರೀತಿಯಿಂದ ಸೂರ್ಯನನ್ನು ನೋಡುತ್ತಾ ಮತ್ತೆ ಹಸಿರನ್ನು ಮೂಡಿಸಲು ಶುರುವಿಟ್ಟುಕೊಂಡಿದ್ದಾಳೆ. ಪಕ್ಕದ ರಸ್ತೆಯ ಮಾಮರ ಹೂಬಿಟ್ಟು ಮಿಡಿಯಾಗುವ ತವಕದಲ್ಲಿದೆ. ಆಗಲೇ ಸ್ಪಷ್ಟವಾಯ್ತು, ನೆತ್ತಿ ಮೇಲೆ ಸೂರ್ಯ ಸುಡಲು ಪೂರ್ತಿ ತಯಾರಾಗಿದ್ದಾನೆ ಎಂದು. ಊರ ಜಾತ್ರೆಗಳ, ರಥೋತ್ಸವಗಳ ಪರ್ವ ಆರಂಭವಾಗುತ್ತಿದ್ದಂತೆ ರಸ್ತೆ ಬದಿಯಲ್ಲಿ ಹಚ್ಚಹಸುರಿನ ಕಲ್ಲಂಗಡಿಯೂ ಹಾಜರು. ಜೊತೆಯಲ್ಲಿ ಕಿತ್ತಳೆಯ ರಾಶಿ. ಕಲ್ಲಂಗಡಿಯೊಳಗಿನ ಕೆಂಪುಬಣ್ಣವನ್ನು ಇನ್ನೂ ತೀವ್ರವಾಗಿಸಲು ರಾಸಾಯನಿಕವನ್ನು ಚುಚ್ಚುತ್ತಾರೆ ಎನ್ನುವ ಸುದ್ದಿಯಿದ್ದರೂ ಅದರ ಶೀತಲ, ರಸಭರಿತ ಸ್ವಾದದಿಂದ ತಪ್ಪಿಸಿಕೊಳ್ಳಲಾಗದೇ ಹೊತ್ತುಕೊಂಡು ಬಂದು ತುಂಡು ಮಾಡಿ ಬಾಯಿಗಿಡುತ್ತಿದ್ದರೆ ಕಲ್ಲಂಗಡಿಯ ಕೆಂಪು ತಿರುಳಿನ ಬಣ್ಣ ಮತ್ತು ಸ್ವಾದಕ್ಕೂ ಸೂರ್ಯನ ರಣಬಿಸಿಲಿಗೂ ಏನೋ ಗಾಢ ನಂಟಿದೆ ಎಂದು ಅನಿಸುತ್ತದೆ. ಎಲ್ಲಾ ಒಳಒಪ್ಪಂದಗಳ ಈ ಕಾಲದಲ್ಲಿ ಕಲ್ಲಂಗಡಿಗೂ ಸೂರ್ಯನಿಗೂ ಏನೋ ಒಳಒಪ್ಪಂದವಾಗಿದೆ ಎನ್ನುವಂತೆ ಕಲ್ಲಂಗಡಿಯ ತಣ್ಣಗಿನ ತುಂಡು ಬಾಯಲ್ಲಿ ಕರಗುತ್ತಾ ಸೂರ್ಯನ ಶಾಖ ಈ ಹಣ್ಣಿನಲ್ಲಿ ರುಚಿಯಾಗಿ ಸೇರಿರಬಹುದೇನೋ ಎನ್ನುವ ಯೋಚನೆಗೆ ತಳ್ಳುತ್ತದೆ. ಒಂದಂತೂ ಸತ್ಯ, ಬೇಸಿಗೆ ಅದೆಷ್ಟು ಕಡುವಾಗಿದ್ದರೂ, ಅಬ್ಬಾ ಸಾಕಪ್ಪಾ ಸಾಕು ಎಂದೆನಿಸಿದರೂ ನಾಲಿಗೆಗೆ ರುಚಿಯೆನ್ನಿಸುವ ಮತ್ತು ಹೊಟ್ಟೆ ತಂಪಾಗಿಸುವ ಹಣ್ಣುಗಳ ದರ್ಬಾರು ಆರಂಭವಾಗುವುದೇ ಬೇಸಿಗೆಯಲ್ಲಿ. ಹಣ್ಣುಗಳ ರಾಜ ಮಾವು ಮತ್ತು ಹೊರಮೈ ಬಿರುಸಾಗಿದ್ದರೂ ಒಳಗೆ ಜೇನಿನಂತಹ ತೊಳೆಗಳನ್ನು ಒಡಲಲ್ಲಿ ತುಂಬಿಕೊಂಡಿರುವ ಹಲಸು ಸ್ವಲ್ಪದಿನಗಳಲ್ಲಿ ಮನೆಮನೆಗಳಲ್ಲಿ ಘಮ್ಮೆನ್ನುವುದೂ ಈ ಬಿರುಬೇಸಿಗೆಯಲ್ಲೇ.

ನೀರಿಳಿಸುವ ಬಿಸಿಲಿನ ಝಳದ ಹೊತ್ತಲ್ಲೂ ನಾಲಿಗೆಯ ರುಚಿಯನ್ನಂತೂ ತಡೆಯುವಂತಿಲ್ಲ. ಅಡುಗೆಮನೆಯ ಒಡತಿಗೆ ಈಗ ಇದೂ ಒಂದು ಸವಾಲು. ಹೊಟ್ಟೆಯನ್ನೂ ತಂಪಾಗಿಸುತ್ತಾ ಆರೋಗ್ಯವನ್ನೂ ಕಾಪಾಡುತ್ತಾ ಬೇಸಿಗೆಯನ್ನು ಹೇಗೆ ದೂಡಬಹುದು ಎಂದು. ತೀರಾ ಕಾಫಿಪ್ರಿಯರನ್ನು ಹೊರತುಪಡಿಸಿದರೆ ಹೆಚ್ಚಿನವರು ಒಂದಷ್ಟು ತಿಂಗಳು ಕಾಫಿ, ಟೀಗಳನ್ನು ಕಡಿಮೆ ಮಾಡಿ ಜ್ಯೂಸ್ ಮಿಲ್ಕ್‌ಶೇಕ್‌ಗಳನ್ನು ಇಷ್ಟಪಡುವ ಕಾಲವಿದು. ಜ್ಯೂಸ್ ಎಂದೊಡನೇ ಮನಸ್ಸು ಹಾರಿ ಬಾಲ್ಯಕ್ಕೆ ಹೋಗಿ ಗಿರಕಿ ಹೊಡೆಯುತ್ತದೆ. ಅಮ್ಮ ಮಾಡುತ್ತಿದ್ದ ಹಣ್ಣಿನ ರಸಗಳು! ಮಂಗಳೂರು ಸೌತೆಯ ಸಿಪ್ಪೆ ತೆಗೆದು ಒಳತಿರುಳನ್ನು ನುಣ್ಣಗೆ ತುರಿದು ಪುಡಿಬೆಲ್ಲ ಹಾಕಿ ಮಿಶ್ರ ಮಾಡಿ ತಿನ್ನುತ್ತಿದ್ದರೆ ಈಗಿನ ಫ್ರುಟ್ ಪಂಚ್‌ಗಳು ಸಪ್ಪೆ ಎನಿಸಬೇಕು. ಕುದಿಸಿ ಆರಿಸಿದ ಲಾವಂಚದ ನೀರು, ಎಳ್ಳಿನ ಜ್ಯೂಸು, ಮಜ್ಜಿಗೆಯ ರುಚಿಗೆ ಸಾಟಿಯಿದೆಯೇ! ಮಜ್ಜಿಗೆಯಲ್ಲೂ, ಮಿಲ್ಕ್ ಶೇಕುಗಳಲ್ಲೂ ಕ್ಯಾಂಡಿಗಳಲ್ಲೂ ಈಗ ವಿವಿಧ ಪ್ಲೇವರ್‌ಗಳು. ನಾಲಗೆಯ ರುಚಿಮೊಗ್ಗುಗಳಿಗೆ ಸಂಭ್ರಮವೋ ಸಂಭ್ರಮ. ಮನೆಯಲ್ಲಿ ತಯಾರಿಸುವ ಜ್ಯೂಸ್‍ಗಳು ಕ್ಯಾಂಡಿಗಳು ಉತ್ತಮವಾದರೂ ವೃತ್ತಿನಿರತ ಮಹಿಳೆಯರಿಗೆ ಅನುಕೂಲವಾಗುವ ಸಿದ್ಧ ಹಣ್ಣಿನ ರಸಗಳೂ ಬಗೆಬಗೆಯ ಕ್ಯಾಂಡಿಗಳೂ, ಐಸ್ ಕ್ರೀಮುಗಳೂ ಲಭ್ಯ.

ಸುಡುಬೇಸಿಗೆಗೆ ಹೆಸರಾದ ಕರಾವಳಿ ತೀರದಲ್ಲಿ ಮತ್ತು ಮಲೆನಾಡಿನಲ್ಲಿ ವರ್ಷವಿಡಿ ತಯಾರಿಸುವ ನಾನಾ ಬಗೆಯ ತಂಬುಳಿಗಳು ಈ ಬೇಸಿಗೆಯ ಊಟಕ್ಕೆ ಹೇಳಿ ಮಾಡಿಸಿದವುಗಳು. ಒಂದೆಲಗ, ಮೆಂತೆ, ಸೀಬೆ ಗಿಡದ ಎಳೆಚಿಗುರಿನ ತಂಬುಳಿ – ಹೀಗೆ ಹತ್ತಾರು ಬಗೆಯ ತಂಬುಳಿಗಳು ಹೊಟ್ಟೆಗೆ ತಂಪೆರೆಯುತ್ತವೆ.

ಸೌತೆಕಾಯಿ ಮತ್ತು ಹಸಿ ತರಕಾರಿ ಸಲಾಡ್‍ಗಳೂ ಬಿಸಿಲಿನ ಈ ದಿನಗಳಿಗೆ ಸಮರ್ಪಕವಾದುದು. ಮೊಸರು–ಮಜ್ಜಿಗೆಯ ಬಳಕೆಯಂತೂ ಬೇಸಿಗೆಯಲ್ಲಿ ತಪ್ಪಿಸಲು ಅಸಾಧ್ಯವೆನ್ನುವಷ್ಟು ಅಗತ್ಯವಾಗಿದೆ. ಬೇಸಿಗೆಯಲ್ಲಿ ತಪ್ಪದೇ ತರುವ ಕಲ್ಲಂಗಡಿ ಹಣ್ಣಿನಲ್ಲಂತೂ ಹೊರಗಿನ ಹಸುರು ಸಿಪ್ಪೆ ಮಾತ್ರ ಎಸೆಯಬಹುದೇನೋ! ಅಷ್ಟು ಉಪಯುಕ್ತ. ಹೊರಗಿನ ಹಸುರಿನ ತೆಳು ಸಿಪ್ಪೆ ಮತ್ತು ಒಳಗಿನ ಕೆಂಪು ತಿರುಳಿನ ನಡುವೆ ಇರುವ ಬಿಳಿಬಣ್ಣದ ಭಾಗವನ್ನು ನೆನೆಸಿಟ್ಟ ಅಕ್ಕಿಯ ಜೊತೆ ನುಣ್ಣಗೆ ರುಬ್ಬಿದರೆ ಘಮ್ಮೆನ್ನುವ ದೋಸೆ ರೆಡಿಯಾಗುತ್ತದೆ. ಇಂಥವೆಲ್ಲ ದೋಸೆಗಳನ್ನು ಇನ್ನು ಸ್ವಲ್ಪ ಸಮಯದಲ್ಲಿ ಸಿಗುವ ಮಾವಿನ ಸೀಕರಣೆಯೊಂದಿಗೆ ಮೆಲ್ಲುತ್ತಿದ್ದರೆ ತೆಳುದೋಸೆಗಳು ಲೆಕ್ಕವಿಲ್ಲದಷ್ಟು ಹೊಟ್ಟೆ ಸೇರುತ್ತಿರುತ್ತವೆ. ಊಟ ತಿಂಡಿಗಳಲ್ಲಿ ಆಯಾ ಋತುಮಾನಗಳಲ್ಲಿ ಸಿಗುವ ಹಣ್ಣುಗಳ ಯಥೇಚ್ಛ ಬಳಕೆಯೇ ಆರೋಗ್ಯಕ್ಕೆ ಸಹಕಾರಿ ಎನ್ನುತ್ತಾರೆ ಸಹಜ ಭಾರತೀಯ ಆಹಾರವನ್ನು ಸೂಚಿಸುವ ವೈದ್ಯ ಡಾ ಬಿ. ಎಂ. ಹೆಗ್ಡೆಯವರು.

ಬೇಸಿಗೆಯ ಬಹಳ ದೊಡ್ಡ ಕಾರ್ಯಕ್ರಮವೆಂದರೆ ನೀರಿನ ಸಮರ್ಪಕ ಬಳಕೆ. ಕೈತೋಟದ ಗಿಡಗಳಿಗೆ ನೀರಿನ ಮರುಬಳಕೆಯನ್ನು ಮಾಡಬಹುದು. ಪಾತ್ರ ತೊಳೆದ ನೀರನ್ನು ಹಳ್ಳಿಗಳಲ್ಲಿ ತರಕಾರಿ, ಬಸಳೆ ಚಪ್ಪರಗಳಿಗೆ ಹಾಯಿಸುವಂತೆ ನಗರದಲ್ಲಿಯೂ ಕೈಲಾದಷ್ಟು ಮರುಬಳಕೆ ಮಾಡಬಹುದು. ಅಡುಗೆಮನೆಯಲ್ಲೂ ಕೊಳಾಯಿಯನ್ನು ಸಣ್ಣ ಧಾರೆಯಾಗಿ ಬಳಸುವುದಷ್ಟೇ ಅಲ್ಲದೇ ಪದೇಪದೇ ಕೈತೊಳೆಯಲು ಪುಟ್ಟ ಪಾತ್ರೆಯಲ್ಲಿಯೂ ನೀರಿಟ್ಟುಕೊಳ್ಳಬಹುದು. ಅಂಗಳ ತೊಳೆಯಲು ಕಾರುಗಳನ್ನು ತೊಳೆಯಲು ನೀರಿನ ಹಿತವಾದ ಬಳಕೆ ಈ ಹೊತ್ತಿನ ಅಗತ್ಯ. ಪ್ರತಿ ಬೇಸಿಗೆಯ ಹೊತ್ತಲ್ಲೂ ಹಕ್ಕಿಗಳಿಗೆ ನೀರನ್ನು ಇಡಿ ಎನ್ನುವ ಸಂದೇಶ ತಪ್ಪದೇ ಬರುತ್ತಿರುತ್ತದೆ. ಟೆರೇಸಿನ ಅಂಚಿನಲ್ಲಿ ಮಣ್ಣಿನ ಪಾತ್ರೆಯಲ್ಲಿ ಹತ್ತಾರು ವರ್ಷಗಳಿಂದ ನೀರಿಟ್ಟು ಸಾರ್ಥಕತೆ ಅನುಭವಿಸಿದವರಿದ್ದಾರೆ. ಕೆಂಪು ಕಿರೀಟ ತಲೆಯಲ್ಲಿ ಇಟ್ಟುಕೊಂಡಿರುವ ಪುಟ್ಟ ಬುಲ್ ಬುಲ್ ಮತ್ತು ಸೂರ್ಹಕ್ಕಿಗಳು ದಿನಾ ಸಂಜೆ ಸ್ನಾನ, ಸಂಧ್ಯಾವಂದನೆ ಮಾಡಿ ಸುತ್ತ ನೀರನ್ನು ಚೆಲ್ಲಿ, ಬಂದು ಹೋದ ಕುರುಹು ಬಿಟ್ಟು ಹೋಗುತ್ತಿರುತ್ತವೆ. ಮಣ್ಣಿನ ಪಾತ್ರೆಯಲ್ಲಿ ನೀರು ಕಡಿಮೆಯಿದ್ದ ದಿನದಂದು ಕಿಣಕಿಣ ಎಂದು ಚೆನ್ನಾಗಿ ಬೈದು ಹೋದಂತೆ ಗಲಾಟೆ ಮಾಡಿ ಹಾರಿ ಹೋಗುತ್ತವೆ. ಗಲಾಟೆ ಜಾಸ್ತಿಯಿದ್ದ ದಿನ ಹೆಚ್ಚು ಬಿಸಿಲಿರಬೇಕು ಎಂದು ಅರ್ಥೈಸಲು ಪ್ರಯತ್ನಿಸುತ್ತಿದ್ದೇನೆ.

ಮುದುಡಿಸುವ ಚಳಿಗಿಂತ ನೀರಿಳಿಸುವ ಬೇಸಿಗೆ ಮನುಷ್ಯನಿಗೆ ಪಾಠ ಕಲಿಸಲು ಹೆಚ್ಚು ಸೂಕ್ತ ಎನಿಸುವುದಿದೆ. ನೀರಿನ ಸರಿಯಾದ ಬಳಕೆಯನ್ನು ಬೇಸಿಗೆ ಕಲಿಸುತ್ತದೆ, ಬಿಸಿಲು, ಎಷ್ಟೇ ದೊಡ್ಡ ಮನುಷ್ಯನಿರಲಿ, ಬೆವರಿಳಿಸಿ ಸೋಲಿಸಿ ಹೈರಾಣಾಗಿಸುತ್ತದೆ. ಪ್ರಕೃತಿ ವಿಧವಿಧ ಹಣ್ಣು ತರಕಾರಿಗಳನ್ನು ನೀಡಿ ಹೊಟ್ಟೆ ತುಂಬಿಸುತ್ತದೆ, ಜೊತೆಯಲ್ಲೇ ಪ್ರಕೃತಿಯ ಮುಂದೆ ತಲೆ ಬಾಗು ಎಂದೂ ಹೇಳುವಂತೆ ಬಿಸಿಲು ಸುಡುತ್ತದೆ.

(ದೀಪಾ ಫಡ್ಕೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.