ಹೆಸರು ರಸಿಕಾ ಕಡೋಲ್ಕರ್. ಕುಂದಾನಗರಿ ಬೆಳಗಾವಿಯ ಹಿಂದವಾಡಿಯಲ್ಲಿ ವಾಸವಾಗಿರುವ ಇವರು ಬಿಬಿಎ ಪದವೀಧರೆ. ಕಳೆದ ಏಳು ವರ್ಷಗಳಿಂದ ನೈಸರ್ಗಿಕವಾದ ಸುಗಂಧ ದ್ರವ್ಯ ತಯಾರಿಸುತ್ತ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ದಿನಕ್ಕೆ 15 ಗಂಟೆ ಕೆಲಸ ಮಾಡುವ ಇವರು ಮಾರುಕಟ್ಟೆಗೆ ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ಸುಗಂಧ ದ್ರವ್ಯವನ್ನು ಒದಗಿಸುತ್ತಿದ್ದಾರೆ.
ಇಂದಿನ ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ, ಇತರ ಉತ್ಪನ್ನಗಳಿಗೆ ಸ್ಪರ್ಧೆಯೊಡ್ಡಿ, ಗ್ರಾಹಕರನ್ನು ಸೆಳೆದುಕೊಳ್ಳುವುದು ಕಷ್ಟದ ಕೆಲಸ. ರಸಿಕಾ ಇಂಥ ಸವಾಲುಗಳನ್ನು ಎದುರಿಸಿದ ಬಗೆಯನ್ನು ಅವರಿಂದಲೇ ಕೇಳಿ, `ಸುಂಗಂಧ ದ್ರವ್ಯ ಎಲ್ಲ ವರ್ಗದ ಜನರಿಗೆ ಇಷ್ಟವಾಗುವುದಿಲ್ಲ.
ಕೆಲವೊಂದು ಹಿತವಾದ ಅನುಭವ ನೀಡಿದರೆ, ಇನ್ನೂ ಕೆಲವು ತಲೆ ನೋವು, ವಾಕರಿಕೆ, ಅಲರ್ಜಿಯನ್ನು ಉಂಟುಮಾಡುತ್ತವೆ. ಆದರೆ ಜನರಿಗೆ ಇಷ್ಟವಾಗುವ ಹಾಗೂ ವಾತಾವರಣಕ್ಕೆ ತಕ್ಕಂತ ಸುಗಂಧ ದ್ರವ್ಯವನ್ನು ಉತ್ಪಾದಿಸುವುದು ನಿಜಕ್ಕೂ ಕಷ್ಟದ ಕೆಲಸ. ನಾನು ಬಿಬಿಎ ಓದಿದ್ದರಿಂದ ಮಾರುಕಟ್ಟೆಯ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದೆ.
ಹೀಗಾಗಿ ಗ್ರಾಹಕರ ಮನಸ್ಥಿತಿಯನ್ನು, ಅಭಿರುಚಿಯನ್ನು ಅರ್ಥೈಸಿಕೊಳ್ಳುವುದಕ್ಕೋಸ್ಕರ ಪ್ರತಿವಾರ ಉತ್ಪನ್ನಗಳ ಬಗ್ಗೆ ಗ್ರಾಹಕರಿಂದ ಸಮೀಕ್ಷೆ ನಡೆಸುತ್ತಿದ್ದೆ. ಹೀಗಾಗಿ ಗ್ರಾಹಕರ ಅಭಿರುಚಿಯನ್ನು ಅರ್ಥಮಾಡಿಕೊಳ್ಳಲು ಸುಲಭವಾಯಿತು~ ಎನ್ನುತ್ತಾರೆ ರಸಿಕಾ.
ಸುಗಂಧ ದ್ರವ್ಯದ ಬಗ್ಗೆ ಮುಂಚೆಯಿಂದಲೂ ವಿಶೇಷ ಆಸಕ್ತಿ ಹೊಂದಿದ್ದ ಇವರು ಅದರಲ್ಲಿಯೇ ಜೀವನ ರೂಪಿಸಿಕೊಳ್ಳಲು ಉತ್ತರ ಪ್ರದೇಶದ ಕನೋಜ್‌ದ ಎಂ.ಎಸ್.ಎಂ.ಇ ಸಂಸ್ಥೆಯಲ್ಲಿ ಸುಗಂಧ ದ್ರವ್ಯ ತಯಾರಿಕಾ ತರಬೇತಿ ಕೋರ್ಸ್‌ಗೆ ಸೇರಿಕೊಂಡರು.
ತಜ್ಞರ ಸಹಕಾರ ಹಾಗೂ ಮಾರ್ಗದರ್ಶನದಿಂದ ವಿನೂತನ ಶೈಲಿಯ ಸುಗಂಧ ದ್ರವ್ಯವನ್ನು ಮಾಡುವುದನ್ನು ಕಲಿತರು.
25 ಸಾವಿರ ರೂಪಾಯಿ ಬಂಡವಾಳ ತೊಡಗಿಸಿ ಉದ್ಯೋಗ ಆರಂಭಿಸಿದ ಅವರು, ಆರಂಭದ ದಿನಗಳಲ್ಲಿ ಮಾರುಕಟ್ಟೆ, ಪೂರೈಕೆದಾರರ, ಉತ್ಪಾದಕರ ಸಮಸ್ಯೆ ಎದುರಿಸಬೇಕಾಯಿತು. ಅದ್ಯಾವುದಕ್ಕೂ ಹೆದರದೇ ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡತೊಡಗಿದರು. ದಿನಕಳೆದಂತೆ ಅವರು ತಯಾರಿಸಿದ ಸುಗಂಧ ದ್ರವ್ಯಕ್ಕೆ ಬೇಡಿಕೆಯೂ ಹೆಚ್ಚಾಯಿತು.
ಎಚ್‌ಟುಒ, ಕುಕೂಬಾ, ಬಿಸಿನೆಸ್ ವುಮನ್, ಕೂಜಿ, ಸ್ಪ್ರಿಂಗ್, ರಾಯಲ್ ಬ್ಲೂ, ಪೊಲಿಂಗ್ ಸ್ಟಾಲ್, ರಾಯಲ್ ಮಾಸ್ಕ್ ಹೀಗೆ ಒಂಬತ್ತು ತರಹದ ವಿನೂತನವಾದ ಸುಗಂಧ ದ್ರವ್ಯವನ್ನು ತಯಾರಿಸಿರುವ ಅವರು, ಈ ಉತ್ಪನ್ನವನ್ನು `ಸಿದ್ಧ~ ಎನ್ನುವ ಹೆಸರಿನಲ್ಲಿ ಮಾರುಕಟ್ಟೆಗೆ ಪರಿಚಯಿಸಿದ್ದಾರೆ.
ಅಂಗವಿಕಲ ಮಹಿಳೆಯರ ಮೇಲಿರುವ ಅನುಕಂಪದಿಂದ ತಮ್ಮ ಕಾರ್ಖಾನೆಯಲ್ಲಿ 15 ಜನರಿಗೆ ಕೆಲಸವನ್ನು ನೀಡಿದ್ದಾರೆ ರಸಿಕಾ. ಇತರ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸಾಕಷ್ಟು ಅವಕಾಶಗಳು ಇದ್ದೇ ಇರುತ್ತವೆ; ಆದರೆ ಅಂಗವಿಕಲರಿಗೆ ಅಂಥ ಅವಕಾಶಗಳನ್ನು ಹೆಚ್ಚು ಹೆಚ್ಚಾಗಿ ಮಾಡಿಕೊಡಬೇಕು ಎನ್ನುವುದು ಇವರ ಅಭಿಪ್ರಾಯ.
ಅವರು ತಯಾರಿಸಿದ ಸುಗಂಧದ್ರವ್ಯಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಕಳೆದ ಮೂರು ವರ್ಷಗಳಿಂದ ಬೆಳಗಾವಿ, ಧಾರವಾಡ, ವಿಜಾಪುರ, ಬೆಂಗಳೂರು ಹಾಗೂ ಗೋವಾಗಳಲ್ಲಿ ಸುಗಂಧ ದ್ರವ್ಯ ಹಾಗೂ ನವನವೀನ ಮಾದರಿಯ ಕ್ಯಾಂಡಲ್ ಪ್ರದರ್ಶನ ಆಯೋಜಿಸುತ್ತಿದ್ದಾರೆ.
ಇವರು ತಯಾರಿಸಿದ ಸುಗಂಧ ದ್ರವ್ಯ ಇಂದು ಕರ್ನಾಟಕದ ಸೇರಿದಂತೆ ಉತ್ತರಪ್ರದೇಶ. ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ ಹೀಗೆ 15ಕ್ಕೂ ಹೆಚ್ಚು ರಾಜ್ಯಗಳಲ್ಲಿ ಮಾರಾಟವಾಗುತ್ತಿದೆ.
ಇವರು ಕೇವಲ ಸುಗಂಧ ದ್ರವ್ಯ ಜೊತೆಗೆ ನೂರಕ್ಕಿಂತ ಹೆಚ್ಚು ವಿನೂತನ ಶೈಲಿಯ ಕ್ಯಾಂಡಲ್ ತಯಾರಿಸುತ್ತಾರೆ. ಇವುಗಳಿಗೂ ತುಂಬಾ ಬೇಡಿಕೆಯಿದೆ. ನಗರದಲ್ಲಿ ನಡೆಯುವ ಹುಟ್ಟುಹಬ್ಬದ ಸಮಾರಂಭ, ಸ್ನೇಹಿತರ ದಿನ, ಪ್ರೇಮಿಗಳ ದಿನ, ದೀಪಾವಳಿ, ಕ್ರಿಸ್‌ಮಸ್ ಹಾಗೂ ಶಾಲಾ ಕಾಲೇಜುಗಳಲ್ಲಿ ನಡೆಯುವ ಸಮಾರಂಭಕ್ಕೆ ತಕ್ಕಂತ ವಿವಿಧ ಮಾದರಿಯ ಕ್ಯಾಂಡಲ್ ತಯಾರಿಸುತ್ತಾರೆ.
`ನನ್ನ ಕಾರ್ಯಕ್ಕೆ ಪಾಲಕರು ಹಾಗೂ ಪತಿ ತುಂಬಾ ಸಹಕಾರ ನೀಡುತ್ತಾರೆ. ಪರಿಶ್ರಮ, ಅರ್ಪಣಾ ಭಾವನೆ ಇದ್ದರೆ ಪ್ರತಿ ಕೆಲಸದಲ್ಲೂ ಯಶಸ್ವಿಯಾಗಬಹುದು. ತಿಂಗಳಿಗೆ ಎಲ್ಲ ಖರ್ಚು ತೆಗೆದು 70 ಸಾವಿರ ರೂಪಾಯಿ ಸಂಪಾದಿಸುತ್ತೇನೆ. ಪುರುಷರಿಗಿಂತಲೂ ಮಹಿಳೆ ಯಾವುದರಲ್ಲೂ ಕಡಿಮೆ ಇಲ್ಲ. ಅವರಿಗಿಂತ ಹೆಚ್ಚು ದುಡಿಯುವ ಸಾಮರ್ಥ್ಯ ಮಹಿಳೆಗಿದೆ. ಇನ್ನೊಬ್ಬರನ್ನು ಅವಲಂಬಿಸದೇ ಮಹಿಳೆ ಇಂದು ದುಡಿಯಬೇಕು. ಅಂದಾಗ ಸಮಾಜದಲ್ಲಿ ಮಹಿಳೆಗೆ ಒಳ್ಳೆಯ ಸ್ಥಾನಮಾನ ಸಿಗತ್ತದೆ~ ಎನ್ನುತ್ತಾರೆ ರಸಿಕಾ.
ದಿನಕ್ಕೆ ತನ್ನ ಕಾರ್ಖಾನೆಯಲ್ಲಿ 15 ಗಂಟೆ ಕೆಲಸ ಮಾಡಿದರೂ ಇವರಿಗೆ ಸಮಾಧಾನವಿಲ್ಲ. ಐಎಎಸ್ ಅಧಿಕಾರಿಯಾಗಬೇಕು ಎನ್ನುವ ಅಭಿಲಾಷೆ ಅವರದು. ಅದರ ಸಿದ್ಧತೆಗೆ ದಿನಕ್ಕೆ 4 ಗಂಟೆ ಮೀಸಲಿಟಿದ್ದಾರೆ. ಸರಳ ವ್ಯಕ್ತಿತ್ವದ ಈ ಶ್ರಮಜೀವಿ ಮತ್ತೊಬ್ಬರಿಗೆ ಮಾದರಿ ಎನ್ನುವುದರಲ್ಲಿ ಎರಡು ಮಾತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.