ADVERTISEMENT

ಸ್ಪಂದನ

ಡಾ.ವೀಣಾ ಭಟ್ಟ
Published 12 ಜುಲೈ 2013, 19:59 IST
Last Updated 12 ಜುಲೈ 2013, 19:59 IST

ರೂಪಾ (45), ಮೈಸೂರು 
*ಮೇಡಂ, ಗೃಹಿಣಿಯಾಗಿರುವ ನನಗೆ ಇಬ್ಬರು ಮಕ್ಕಳಿದ್ದಾರೆ. ಸಂತಾನಹರಣ ಶಸ್ತ್ರಚಿಕಿತ್ಸೆ ಆಗಿದೆ. ಈಗ ನನಗೆ ಸರಿಯಾಗಿ ಮುಟ್ಟು ಆಗುತ್ತಿಲ್ಲ. 2-3 ತಿಂಗಳಿಗೊಮ್ಮೆ ಆಗುತ್ತಿದೆ. ಆಗಲೂ ಕಡಿಮೆ ಸ್ರಾವ ಆಗುತ್ತದೆ. ಆಗಾಗ ಸೆಕೆ ಆದಂಥ ಅನುಭವ (ಚಳಿಗಾಲದಲ್ಲೂ) ವೈದ್ಯರ ಬಳಿ ಬಿ.ಪಿ ತಪಾಸಣೆ ಮಾಡಿಸಿಕೊಂಡೆ. ನಾರ್ಮಲ್ ಇದೆ. ಆದರೆ ಸದ್ಯದಲ್ಲೇ ನನಗೆ ಮುಟ್ಟು ನಿಲ್ಲಬಹುದು ಎಂದು ತಿಳಿಸಿದ್ದಾರೆ. ಇತ್ತೀಚೆಗೆ ದಪ್ಪವಾಗುತ್ತಿದ್ದೇನೆ ಅನಿಸುತ್ತಿದೆ. ಭಯವಾಗುತ್ತಿದೆ. ದಯವಿಟ್ಟು ಪರಿಹಾರ ತಿಳಿಸುವಿರಾ?


ನೀವು ಯಾವ ಕಾರಣಕ್ಕೂ ಭಯ ಪಡಬೇಕಾದ ಅಗತ್ಯ ಇಲ್ಲ. ನಿಮ್ಮದು ವಯೋಸಹಜವಾದ ಸಮಸ್ಯೆ. ಒಂದು ವರ್ಷಕ್ಕೂ ಹೆಚ್ಚು ಕಾಲ ನೀವು ಮುಟ್ಟಾಗದಿದ್ದರೆ ಅದನ್ನು ಋತುಬಂಧ ಅಥವಾ ಮೆನೋಪಾಸ್ ಎನ್ನುತ್ತಾರೆ. ಇದಕ್ಕೆ ನಿರ್ದಿಷ್ಟ ವಯೋಮಿತಿ ಇಲ್ಲ. 45-52 ವರ್ಷದೊಳಗೆ ಯಾವಾಗಲಾದರೂ ಋತುಬಂಧ ಆಗಬಹುದು. ಅಂಡಾಶಯದಿಂದ ಉತ್ಪತ್ತಿಯಾಗುವ ಈಸ್ಟ್ರೋಜನ್ ಹಾಗೂ ಪ್ರೊಜೆಸ್ಟಿರಾನ್ ಹಾರ್ಮೋನ್‌ಗಳು ಕಡಿಮೆಯಾಗುವುದರಿಂದ 2-3 ತಿಂಗಳಿಗೊಮ್ಮೆ ಋತುಸ್ರಾವ ಕಾಣಿಸಿಕೊಳ್ಳಬಹುದು ಅಥವಾ 15-20 ದಿನಕ್ಕೊಮ್ಮೆ ಋತುಸ್ರಾವ ಆಗುವುದು ಸಹ ಈ ವಯಸ್ಸಿನಲ್ಲಿ ಸಹಜ. ಆದರೆ ಅತಿ ರಕ್ತಸ್ರಾವ ಅಸಹಜ. ಅಂತಹ ಸಂದರ್ಭದಲ್ಲಿ ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳಿ.

ಋತುಬಂಧ ಆಗುವ ಒಂದೆರಡು ವರ್ಷ ಮೊದಲು ಶೇ 60-70ರಷ್ಟು ಮಹಿಳೆಯರಲ್ಲಿ `ಹಾಟ್ ಫ್ಲಶಸ್' ಅಥವಾ `ಹೃದಯ ಕಂಪನ'  ಕಂಡು ಬರುತ್ತದೆ. ನಿಮಗೆ ಈ ರೀತಿಯ ಅನುಭವ ಆಗುತ್ತಿರಬಹುದು. ಅಂದರೆ, ಹಠಾತ್ತಾಗಿ ಮುಖ ಬಿಸಿ ಏರಿ ಸೆಕೆಯ ಅನುಭವ ಆಗುವುದು, ಹೃದಯ ವೇಗವಾಗಿ ಬಡಿದುಕೊಳ್ಳುವುದು, ಏರುಸಿರು ಇತ್ಯಾದಿ. ಇದು ಕೇವಲ ಒಂದೆರಡು ನಿಮಿಷ ಮಾತ್ರ ಇರುತ್ತದೆ. ಇಷ್ಟಕ್ಕೆಲ್ಲ ಕಾರಣ ಶರೀರದಲ್ಲಿ ಕಡಿಮೆಯಾಗುತ್ತಿರುವ ಈಸ್ಟ್ರೋಜನ್ ಹಾರ್ಮೋನು. ಆದ್ದರಿಂದ ನೀವು ಕಾಫಿ, ಟೀ ಕಡಿಮೆ ಸೇವಿಸಿ.

ಫೈಟೋ ಈಸ್ಟ್ರೋಜನ್ ಇರುವ ಆಹಾರಗಳಾದ ಸೋಯಾ, ಅಗಸೆ ಬೀಜ, ಸುವರ್ಣ ಗಡ್ಡೆ ಮತ್ತು ಎಲ್ಲ ರೀತಿಯ ಹಸಿರು ಸೊಪ್ಪು, ತರಕಾರಿ ಹೆಚ್ಚಾಗಿ ಸೇವಿಸಿ. ನಿಯಮಿತವಾಗಿ ವಾಕಿಂಗ್ ಮಾಡಿ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ದಿನಾಲೂ 3- 4 ಲೀಟರ್ ನೀರು ಕುಡಿಯಿರಿ. ಇದು ಎಲ್ಲ ಮಹಿಳೆಯರ ಸಮಸ್ಯೆ. ಧೈರ್ಯವಾಗಿ ಇರಿ.

ಶೈಲಾ ಬಿ. (37), ಬೆಂಗಳೂರು 
*ನನಗೆ ಇಬ್ಬರು ಮಕ್ಕಳು. ಗಾರ್ಮೆಂಟ್ಸ್‌ನಲ್ಲಿ ದುಡಿಯುತ್ತಿದ್ದೇನೆ. ದಿನಕ್ಕೆ 8 ತಾಸು ಕೆಲಸ ಮಾಡಲೇಬೇಕು. ನನಗೆ ಸುಸ್ತು ಆಗುತ್ತಿರುತ್ತದೆ. ಏದುಸಿರು ಬರುತ್ತದೆ. ಏನು ಮಾಡಬೇಕು ಸಲಹೆ ಕೊಡಿ ಪ್ಲೀಸ್.


ನೀವು ಹೇಳುತ್ತಿರುವ ಲಕ್ಷಣಗಳ ಪ್ರಕಾರ ನಿಮಗೆ ರಕ್ತಹೀನತೆ (ಅನೀಮಿಯಾ) ಇರಬಹುದು. ರಕ್ತಹೀನತೆಯಲ್ಲಿ ಹಲವು ವಿಧ. ಆದರೆ ಹೆಂಗಸರಲ್ಲಿ ಸಾಮಾನ್ಯವಾಗಿ ಕಂಡುಬರುವುದು ಕಬ್ಬಿಣಾಂಶದ ಕೊರತೆಯ ರಕ್ತಹೀನತೆ. ನಿಮ್ಮ ಹಿಮೋಗ್ಲೋಬಿನ್ ಅಂಶ ರಕ್ತದಲ್ಲಿ 10 ಮಿ.ಗ್ರಾಂ/ ಡಿ.ಎಲ್. ಇದ್ದರೆ ರಕ್ತಹೀನತೆಯಿಂದ ಬಳಲುತ್ತಿದ್ದೀರಿ ಎಂದರ್ಥ. ಇದಕ್ಕೆ ಕಾರಣಗಳು ಮುಟ್ಟಿನಲ್ಲಿ ಅತಿಯಾದ ರಕ್ತಸ್ರಾವ, ಪದೇ-ಪದೇ ಆಗಿರುವ ಗರ್ಭಪಾತಗಳು, ಮೂಲವ್ಯಾಧಿಯಲ್ಲಿ ರಕ್ತ ಸೋರುವಿಕೆ, ಜಂತು ಹುಳು ಸಮಸ್ಯೆ, ಸರಿಯಲ್ಲದ ಆಹಾರ  ಕ್ರಮ ಇರಬಹುದು. ಸೂಕ್ತ ಕಾರಣ ಕಂಡು ಹಿಡಿದು ಚಿಕಿತ್ಸೆ ತೆಗೆದುಕೊಳ್ಳಿ.

ಕಬ್ಬಿಣಾಂಶ ಹೆಚ್ಚಿರುವ ನುಗ್ಗೆಸೊಪ್ಪು, ದಂಟಿನಸೊಪ್ಪು, ಬಸಳೆ, ಪಾಲಾಕ್, ಮೊಳಕೆ ಕಾಳು, ರಾಗಿ, ಅಂಜೂರ, ಬೆಲ್ಲ ಇತ್ಯಾದಿಗಳನ್ನು ಹೇರಳವಾಗಿ ಸೇವಿಸಿ. ಜೊತೆಗೆ ವಿಟಮಿನ್ `ಸಿ'ಯುಕ್ತ ಆಹಾರಗಳಾದ ನೆಲ್ಲಿ, ನಿಂಬೆ, ಕಿತ್ತಳೆ ಇತ್ಯಾದಿ ಸೇವಿಸುವುದರಿಂದ ಹೆಚ್ಚಿನ ಸಹಾಯವಾಗುತ್ತದೆ. 6 ತಿಂಗಳಿಗೊಮ್ಮೆ ಜಂತು ಹುಳುಗಳ ಮಾತ್ರೆ ಸೇವಿಸಿ. ಕಬ್ಬಿಣಾಂಶದ ಮಾತ್ರೆಯನ್ನು  ಕನಿಷ್ಠ 3 ತಿಂಗಳು ಸೇವಿಸಿ (ವೈದ್ಯರ ಸಲಹೆ ಮೇರೆಗೆ). ಇವೆಲ್ಲದರಿಂದ ರಕ್ತಹೀನತೆ ಕಡಿಮೆಯಾಗಿ ನಿಮ್ಮ ಕಾರ್ಯಕ್ಷಮತೆ ಹೆಚ್ಚುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT