ADVERTISEMENT

ಹೆಣ್ಣು ಮತ್ತು ಬಳೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2011, 19:30 IST
Last Updated 4 ಮಾರ್ಚ್ 2011, 19:30 IST

 ಬಳೆ ಎಂದರೆ ವೃತ್ತ ಗೋಳ
ಬದುಕಿನ ವರ್ತುಲದ ಹಾಗೆ
ಸ್ಥಿರ ಆಕಾರ - ಗುಂಡಗೆ
ಹೇಗೆ ಸುತ್ತಿದರೂ ಮುಖಾಮುಖಿ
ಚಿತ್ತಾರದ ಗಾಜಿನ ಬಳೆ ಸೂಕ್ಷ್ಮ
ಒಡೆದರೆ ಚೂರು ಚೂರು
ಸಂಬಂಧಗಳ ಹಾಗೆ

ಬಳೆ ಹೆಣ್ಣಿನ ಕೈಗಳಿಗೆ ಶೃಂಗಾರ
ಶೋಭಿಸುವ ಆಭರಣ
ಮುತ್ತೈದೆಯ ಸಂಕೇತ
ಗಂಡಿನ ಸಾಂಗತ್ಯದ ಮಹತ್ವಕೆ ರಸಿಕತೆಗೆ
ಅಂಕಿತವಾದರೆ ಹೆಣ್ಣಿಗೆ ಅಂಕೆ
ಬಳೆಗಳ ಗಲಗಲ ಶಬ್ದ ಅವಳ ಅಸ್ತಿತ್ವ
ಅವಳ ಚಲನೆ - ಇರುವಿಕೆಯ ಸಾಕ್ಷಿ
ಯಾಗಿತ್ತು ಅಂದು -

ಆದರೆ ಇಂದು -
ಬಳೆಯ ಆಕಾರ ಬದಲಾಗಿದೆ
ಚಚ್ಚೌಕ, ವಂಕಿ ಅಂಕುಡೊಂಕು
ಬರೀ ಗಾಜಿನ ಬಳೆಯಾಗಿ ಉಳಿದಿಲ್ಲ
ಲೋಹ, ಪ್ಲಾಸ್ಟಿಕ್ ರಬ್ಬರು ಬಳೆಗಳು
ಹಾಗೆಯೇ ಹೆಣ್ಣಿನ ಬದುಕೂ ಹಾಗೆ
ಬಿಚ್ಚಿಕೊಳ್ಳುತ್ತಿದೆ ವಿವಿಧ ಆಕಾರಗಳಲಿ
ವಿವಿಧ ವರ್ಣಗಳಲ್ಲಿ ವಿನ್ಯಾಸಗಳಲಿ
ಸ್ತರಗಳಲ್ಲಿ ಹೇಗೆಂದರೆ ಹಾಗೆ
- ಸೆಡ್ಡು ಹೊಡೆದಂತೆ

ADVERTISEMENT

ಬಳೆ ತೊಡುವ ಕೈಗಳು ಅನ್ನುವ
ಹಗುರ ಮಾತಿಗೆ ಬೇಡಿಹಾಕಿದ್ದಾಳೆ
ಅದಕ್ಕೆ ಈಗ ಗಂಡಿನ ಕೈಗಳಲ್ಲೂ ಬಳೆ
ಸಮಾನತೆ ಅಂದರೆ ತಪ್ಪಾದೀತು
ಅವಳು ಎರಡೇ ಕೈಗಳಿಂದ
ಎಲ್ಲವನ್ನೂ ಗಳಿಸಿಕೊಂಡಿದ್ದಾಳೆ
ಬಳೆಗಳ ಶಬ್ದ ನಿಶ್ಶಬ್ದಗಳಲ್ಲಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.