ADVERTISEMENT

ಅವಳ ಸ್ವಾತಂತ್ರ್ಯದ ಸುತ್ತ..

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 19:30 IST
Last Updated 9 ಆಗಸ್ಟ್ 2019, 19:30 IST
   

‘ಇವತ್ತಂತೂ ಮನೆಯಲ್ಲಿ ಮಹಾಭಾರತ ಯುದ್ಧವೇ ನಡೆದು ಹೋಯಿತು’ 30ರ ಹರೆಯದ ಮಾನ್ವಿತಾ ಭಿಡೆ ನಿಟ್ಟುಸಿರು ಬಿಡುತ್ತ ಹೇಳಿದಾಗ, ‘ಅರೆ ಮದುವೆಯಾಗಿ ಎರಡು ತಿಂಗಳಲ್ಲೇ ಶುರುವಾಯಿತೇ ಗಂಡ– ಹೆಂಡತಿಯ ಮಧ್ಯೆ ಜಗಳ’ ಎಂದು ಅಚ್ಚರಿಯೆನಿಸಿತು. ‘ಹೆಚ್ಚು ಓದಿಕೊಂಡ, ಉದ್ಯೋಗಸ್ತ ಹೆಣ್ಣನ್ನು ಸೊಸೆಯಾಗಿ ತಂದುಕೊಂಡರೆ ಹೀಗೇ. ಒಂದು ಸಂಪ್ರದಾಯವಿಲ್ಲ, ಮನೆಯ ಗೌರವ ಎನ್ನುವುದಿಲ್ಲ’ ಎಂಬ ತನ್ನ ಅತ್ತೆಯ ಮಾತನ್ನು ಪುನರುಚ್ಚರಿಸಿ ಇನ್ನಷ್ಟು ಅಚ್ಚರಿಗೆ ದೂಡಿದಳು, ಖಾಸಗಿ ಬ್ಯಾಂಕ್‌ನಲ್ಲಿ ಎನಾಲಿಸ್ಟ್‌ ಆಗಿರುವ ಮಾನ್ವಿತಾ.

ನವ ವಿವಾಹಿತೆಯಾದ ಆಕೆ ತನ್ನ ಗಂಡ, ಅತ್ತೆಯ ಜೊತೆ ವಾಸಿಸತೊಡಗಿದ ಮೇಲೆ ಕಿರಿಕಿರಿ ಶುರುವಾಗಿದ್ದು. ಸ್ವತಂತ್ರ ಮನೋಭಾವದ ಆಕೆ ಗಂಡನ ಹೆಸರನ್ನು ತನ್ನ ಹೆಸರಿನ ಜೊತೆ ಜೋಡಿಸಿಕೊಳ್ಳದೇ, ಮದುವೆಗಿಂತ ಮುಂಚಿನ ತನ್ನ ಸರ್‌ನೇಮ್‌ ಅನ್ನೇ ಮುಂದುವರಿಸಿದ್ದು ಆಕೆಯ ಅತ್ತೆಯ ಸಿಡಿಮಿಡಿಗೆ ಕಾರಣ. ತನಗೆ ಅಷ್ಟೂ ಸ್ವಾತಂತ್ರ್ಯವಿಲ್ಲವೇ ಎಂಬುದು ಈಕೆಯ ವಾದ.

ಹೌದು, ಮಹಿಳಾ ಸ್ವಾತಂತ್ರ್ಯ ಎನ್ನುವುದು ಎರಡು ಪದಗಳಾದರೂ ಅಡಗಿರುವ ಅರ್ಥಗಳು ಹಲವಾರು. ಸ್ವಾತಂತ್ರ್ಯ ಬಂದು ಏಳು ದಶಕಗಳ ಮೇಲಾದರೂ ಇನ್ನೂ ಮಹಿಳಾ ಸ್ವಾತಂತ್ರ್ಯದ ಬಗ್ಗೆ ಮಾತನಾಡಬೇಕಾಗಿ ಬಂದಿರುವುದು ದುರದೃಷ್ಟಕರ ಅಲ್ಲವೇ? ಬದಲಾಗುತ್ತಿರುವ ಭಾರತೀಯ ಮಹಿಳೆ, ಮಹಿಳಾ ಸಶಕ್ತೀಕರಣ.. ಹೀಗೆ ಹೇಳಿಕೆಗಳು, ಹೋರಾಟಗಳು ನಡೆಯುತ್ತಲೇ ಇವೆ. ಆದರೆ ಬದಲಾವಣೆಗಳು? ಸದ್ಯಕ್ಕಂತೂ ಮಾರ್ಗ ಮಧ್ಯದಲ್ಲೇ ಇದೆ ಎಂದಿರಾ?

ADVERTISEMENT

ವೈಯಕ್ತಿಕ ಸ್ವಾತಂತ್ರ್ಯ

ಈ ಮೇಲಿನವು ಗಂಭೀರ ಸಮಸ್ಯೆಗಳಾದರೆ, ಸದ್ಯ ಹೇಳ ಹೊರಟಿರುವುದು ಕುಟುಂಬದಲ್ಲಿ ಹುಡುಗಿಯರಿಗೆ, ಯುವತಿಯರಿಗೆ, ವಯಸ್ಸಾದ ಮಹಿಳೆಯರಿಗೆ ಮೊಟಕಾಗಿರುವ ಆಯ್ಕೆಯ ಸ್ವಾತಂತ್ರ್ಯ, ವೈಯಕ್ತಿಕ ಸ್ವಾತಂತ್ರ್ಯ. ತನ್ನಿಚ್ಛೆಯಂತಹ ಉಡುಪು ಧರಿಸಲು ಪೋಷಕರ ಅನುಮತಿ ಬೇಕು; ಕತ್ತಲೆಯಾದ ಮೇಲೆ ಸ್ನೇಹಿತೆಯರ ಜೊತೆ ಸುತ್ತಾಡಲೂ ಒಪ್ಪಿಗೆ ಬೇಕು; ಸ್ನೇಹಿತೆಯರೊಟ್ಟಿಗೆ ದೂರ ಪ್ರವಾಸಕ್ಕೆ ತೆರಳುವಾಗಲೂ ಹುಡುಗರೂ ಬರುತ್ತಾರಾ ಎಂಬ ಅನುಮಾನ. ಅಷ್ಟೇಕೆ, ತನ್ನಿಚ್ಛೆಯ ಓದಿಗೂ ಹೆತ್ತವರ ಒಪ್ಪಿಗೆಗಾಗಿ ಹೋರಾಟ ನಡೆಸಬೇಕು.

35ರ ಅನುಪಮ ಶಂಕರ್‌ಗೆ ಪ್ರವಾಸೋದ್ಯಮ ಓದಿ ಪ್ರವಾಸಿ ಗೈಡ್‌ ಆಗುವ ಆಸೆಯಿತ್ತು. ‘ಟೂರ್‌ ಅಂದರೇ ಒಂಥರಾ ಥ್ರಿಲ್‌. ಅದನ್ನೇ ಓದಬೇಕು ಎಂದು ಎಲ್ಲಾ ವಿವರಗಳನ್ನು ಸಂಗ್ರಹಿಸಿದ್ದೆ. ಮುಂದೆ ಟೂರಿಸಂ ಕಂಪನಿಯಲ್ಲಿ ನೌಕರಿ ಪಡೆದು ದೇಶ– ವಿದೇಶಗಳನ್ನು ಸುತ್ತುವ ಆಸೆಯಿತ್ತು’ ಎನ್ನುವಾಗ ಮಿಂಚಿದ ಕಂಗಳಲ್ಲಿ ಒಮ್ಮೆಲೇ ನಿರಾಶಾ ಭಾವನೆ ಮೂಡಿತು.

ಪ್ರವಾಸಿ ಗೈಡ್‌ ಎಂದರೆ ಊರೂರು ಸುತ್ತಬೇಕು. ಗಂಡಸರ ಜೊತೆ ಒಡನಾಡಬೇಕು. ಮುಂದೆ ಮದುವೆ ಮಾಡಲು ತೊಂದರೆಯಾಗಬಹುದು ಎಂದೆಲ್ಲಾ ಯೋಚಿಸಿದ ಆಕೆಯ ಪೋಷಕರು ಎಂ.ಕಾಂ. ಮಾಡಿಸಿ, ಆಡಿಟಿಂಗ್‌ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರಿಸಿ, ತಾವು ನೋಡಿದ ಹುಡುಗನ ಜೊತೆ ಮದುವೆ ಮಾಡಿ ಹೊಣೆಗಾರಿಕೆಯನ್ನು ಕಳಚಿಕೊಂಡ ಧನ್ಯತಾಭಾವ ಅನುಭವಿಸಿದರು. ಆದರೆ ಅನುಪಮ ಈಗಲೂ ಕಚೇರಿಯಲ್ಲಿ ಅಂಕಿ– ಸಂಖ್ಯೆಗಳ ಮಧ್ಯೆ ಹೋರಾಡುವಾಗ, ಮನೆಯಲ್ಲಿ ಮಕ್ಕಳಿಗೆ ಆಟವಾಡಿಸುವಾಗ ದೂರದ ಶಿಮ್ಲಾ, ಹಿಮಾಲಯದ ದೃಶ್ಯಗಳನ್ನು ಕಲ್ಪಿಸಿಕೊಂಡು ನಿಟ್ಟುಸಿರು ಬಿಡುತ್ತಾಳೆ. ತನ್ನಿಚ್ಛೆಯಂತೆ ಓದುವ ಸ್ವಾತಂತ್ರ್ಯ ಕಳೆದುಕೊಂಡ ತಾನು ತನ್ನ ಮಗಳಿಗೆ ಮಾತ್ರ ಹಾಗಾಗಲು ಬಿಡುವುದಿಲ್ಲ ಎಂಬ ಶಪಥವನ್ನಂತೂ ಮಾಡಿದ್ದಾಳೆ.

ಪ್ರಭಾವವೋ, ಪ್ರಹಾರವೋ!

ನಿಮ್ಮ ಸುತ್ತಮುತ್ತಲಿನವರು, ಅಂದರೆ ನಿಮ್ಮ ಕುಟುಂಬದವರು, ಸ್ನೇಹಿತರು, ಶಿಕ್ಷಕರು, ಮುಂದೆ ಕಂಪನಿಯ ಸಹೋದ್ಯೋಗಿಗಳು, ಬಾಸ್‌.. ನಿಮ್ಮ ಆಯ್ಕೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಪ್ರಭಾವ, ಪ್ರಹಾರ ಮಾಡುತ್ತಲೇ ಇರುತ್ತಾರೆ. ಸಮಾಜದ, ಬದುಕಿನ ಎಲ್ಲ ಸ್ತರಗಳಲ್ಲೂ ಸಮಾನವಾಗಿ ಕಾಣಬೇಕಾಗಿರುವ ಮಹಿಳೆಗೆ ಶಿಕ್ಷಣ, ಉದ್ಯೋಗ, ಅಧಿಕಾರ ಮೊದಲಾದವುಗಳು ದಾರಿದೀಪವಾಗಬೇಕಾಗಿರುವಾಗ ಪ್ರತಿಯೊಂದರಲ್ಲೂ ಮೂಗು ತೂರಿಸಿ ಹಿಂದಕ್ಕೆ ಸರಿಸುವ ಹುಕಿ ಯಾಕೋ!

ಧಾರ್ಮಿಕ ಸ್ವಾತಂತ್ರ್ಯವನ್ನೇ ತೆಗೆದುಕೊಳ್ಳಿ. ಅಂತರ್‌ಜಾತೀಯ ಅಥವಾ ಅಂತರ್‌ಧರ್ಮೀಯ ವಿವಾಹಗಳಲ್ಲಿ ಆಕೆ ಗಂಡನ ಜಾತಿ ಅಥವಾ ಧರ್ಮವನ್ನೇ ಅನುಸರಿಸಬೇಕಾದ ಪರಿಸ್ಥಿತಿ ಇನ್ನೂ ಇದೆ. ಎಲ್ಲೋ ಕೆಲವು ಕಡೆ ತಾನು ಹುಟ್ಟಿದ ಜಾತಿ/ ಧರ್ಮವನ್ನೇ ಅನುಸರಿಸುವ ಅಥವಾ ಎಲ್ಲವನ್ನೂ ಧಿಕ್ಕರಿಸಿ ನ್ಯೂಟ್ರಲ್‌ ಆಗಿ ಉಳಿದ ಉದಾಹರಣೆಗಳು ಸಿಗಬಹುದು.

‘ನಾನು ಮಾಂಸಾಹಾರಿ. ಆದರೆ ಗಂಡ, ಆತನ ಮನೆಯವರು ಸಸ್ಯಾಹಾರಿಗಳು. ಹೀಗಾಗಿ ನಾನು ಮನೆಯಲ್ಲಿ ಮಾಂಸಾಹಾರ ತಯಾರಿಸುವುದು ಹೋಗಲಿ, ಹೊರಗಿನಿಂದ ತಂದುಕೊಂಡು ತಿನ್ನುವುದೂ ಸಾಧ್ಯವಿಲ್ಲ. ಎಲ್ಲೋ ಹೋಟೆಲ್‌ನಲ್ಲಿ ತಿಂದಿದ್ದು ಗೊತ್ತಾದರೂ ಮನೆಯಲ್ಲಿ ರಂಪಾಟ’ ಎನ್ನುವ ಲೇಖಾ ಶೇಟ್‌ ತನ್ನ ಆಹಾರ ಆಯ್ಕೆಯ ಸ್ವಾತಂತ್ರ್ಯವನ್ನೇ ಕಳೆದುಕೊಂಡು ಪರಿತಪಿಸುತ್ತಿದ್ದಾಳೆ.

‘ಮದುವೆಯಾಗಿ ಎರಡು ವರ್ಷಗಳಾದವು. ದಾಂಪತ್ಯದಲ್ಲಿ ಸೊಗಸಿದೆ, ಖುಷಿಯಿದೆ.ಆತ ವೈವಾಹಿಕ ಸಂಕೇತವಾಗಿ ಯಾವುದನ್ನೂ ಮೈ ಮೇಲೆ ಇಟ್ಟುಕೊಂಡಿಲ್ಲ. ಹೀಗಿರುವಾಗ ನಾನ್ಯಾಕೆ ಮದುವೆಯಾದ ಹೆಣ್ಣು ಎಂದು ಸಾಬೀತುಪಡಿಸಲು ಕತ್ತಿಗೆ, ಕಾಲ್ಬೆರಳಿಗೆ ಸಂಕೇತಗಳನ್ನು ಧರಿಸಲಿ! ಹೇಗೆ ಬೇಕೋ ಹಾಗೆ ಡ್ರೆಸ್‌ ಮಾಡಿಕೊಳ್ಳುವ ಸ್ವಾತಂತ್ರ್ಯ ನನಗಿಲ್ಲವೇ’ ಎಂದು ಕಂಪನಿಯೊಂದರ ಸ್ವಾಗತಕಾರಿಣಿಯಾದ ನೀರಜಾ ತಮ್ಮಯ್ಯ ಪ್ರಶ್ನಿಸಿದಾಗ ಹೌದಲ್ಲ ಎಂದೆನಿಸದೇ ಇರದು.

ಮಹಿಳೆಯೆಂದರೆ ಎಲ್ಲವೂ..

ಸ್ತ್ರೀ ಎಂದರೆ ಸೌಂದರ್ಯ ಎಂದರು; ಆದರೂ ಆ ಸೌಂದರ್ಯ ಮುಚ್ಚಿಕೊಳ್ಳಬೇಕು. ಆಕೆ ದೇವರ ಅಪೂರ್ವ ಸೃಷ್ಟಿ ಎಂದರು; ಆದರೂ ಮುಟ್ಟಾದಾಗ ದೇವನ ಸನ್ನಿಧಿಯಿಂದ ದೂರವಿರಬೇಕು. ಹೀಗೇಕೆ? ಆಕೆ ಸೃಷ್ಟಿಕರ್ತಳು, ಏಕೆಂದರೆ ಆಕೆಯೊಬ್ಬಳು ತಾಯಿ. ಆಕೆ ನಿಮ್ಮೊಟ್ಟಿಗೇ ಬೆಳೆಯುವವಳು, ಏಕೆಂದರೆ ಆಕೆಯೊಬ್ಬಳು ಸಹೋದರಿ. ಪ್ರೀತಿಯೆಂದರೆ ಏನೆಂದು ಪಾಠ ಮಾಡುವವಳು, ಏಕೆಂದರೆ ಆಕೆಯೊಬ್ಬಳು ಸ್ನೇಹಿತೆ. ಬದುಕಿನ ಏರಿಳಿತಗಳಲ್ಲಿ ಜೊತೆಯಾಗುವವಳು, ಏಕೆಂದರೆ ಆಕೆಯೊಬ್ಬನ ಪತ್ನಿ. ನಿಮ್ಮನ್ನು ಸೂಕ್ಷ್ಮವಾಗಿ ಅರಿತು ನಡೆದುಕೊಳ್ಳುವವಳು, ಏಕೆಂದರೆ ಆಕೆಯೊಬ್ಬಳು ಮಗಳು. ಮಹಿಳೆಯೆಂದರೆ ಎಲ್ಲವೂ. ಹಾಗಾದರೆ ಆಕೆ ಬಯಸಿದ ಸ್ವಾತಂತ್ರ್ಯ? ತನ್ನ ಹಿಂದಿನ ಸರ್‌ನೇಮ್‌ ಅನ್ನೇ ಉಳಿಸಿಕೊಳ್ಳುವ ಮಾನ್ವಿತಾ ಭಿಡೆಯ ಹಠ, ಈಗಲೂ ಪ್ರವಾಸೋದ್ಯಮ ಕೋರ್ಸ್‌ ಓದಿ ಗೈಡ್‌ ಆಗುವ ಅನುಪಮಳ ಪ್ರಬಲ ಇಚ್ಛೆ, ಆಹಾರ ತನ್ನಿಚ್ಛೆ ಎಂದು ಮೀನಿನ ಖಾದ್ಯ ಸವಿಯುವ ಲೇಖಾ ಶೇಟ್‌, ತಾಳಿಯ ಬದಲು ವಜ್ರದ ಪೆಂಡೆಂಟ್‌ನ ಸರ ಧರಿಸುವ ನೀರಜಾ ತಮ್ಮಯ್ಯ ತಮ್ಮ ಆಯ್ಕೆ, ತಮ್ಮ ವೈಯಕ್ತಿಕ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವಾಗ ಸನಿಹದಲ್ಲೇ ಇದೆ ಸ್ವಾತಂತ್ರ್ಯ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.