ADVERTISEMENT

ಚಳಿಗಾಲಕ್ಕೆ ಸ್ಟೈಲಿಷ್‌ ಕೋ–ಆರ್ಡ್‌ ಸೆಟ್ಸ್

ರೂಪಾ .ಕೆ.ಎಂ.
Published 4 ಜನವರಿ 2025, 0:22 IST
Last Updated 4 ಜನವರಿ 2025, 0:22 IST
   

ಟ್ರೆಂಡಿಯಾಗಿಯೂ ಕಾಣಬೇಕು. ಆದರೆ, ಎಲ್ಲ ಸಂದರ್ಭಗಳಲ್ಲಿಯೂ ಉಪಯುಕ್ತವೂ ಎನಿಸಬೇಕು ಅನ್ನುವ ದಿರಿಸಿದ್ದರೆ ಅದು ಕೋ–ಆರ್ಡಿನೇಟೆಡ್‌ ಸೆಟ್ಸ್‌. ಒಂದೇ ಬಗೆ ಹಾಗೂ ಬಣ್ಣದ ಟಾಪ್‌ ಆ್ಯಂಡ್‌ ಬಾಟಮ್‌ ಧರಿಸುವುದೇ ಇದರ ವಿಶೇಷ. ಸದ್ಯಕ್ಕೆ ಟಾಪ್‌ ಆ್ಯಂಡ್‌ ಟ್ರೌಷರ್‌ ಇರುವ ಕೋ–ಆರ್ಡ್‌ ಸೆಟ್‌ಗಳು ಜನಪ್ರಿಯಗೊಂಡಿವೆ.

ಚಳಿಗಾಲಕ್ಕೆ ಹಲವು ಬಗೆಯ ಕೋ–ಆರ್ಡ್‌ ಸೆಟ್‌ಗಳು ಪರಿಪೂರ್ಣ ದಿರಿಸು ಎನಿಸಿವೆ. ಉಣ್ಣೆ ಬಟ್ಟೆ ಮೇಲೆ ಫ್ಲೋರಲ್‌ ಪ್ರಿಂಟ್ ಇರುವ ಕೋ–ಆರ್ಡ್‌ ಸೆಟ್‌ಗಳು ವೈಬ್ರೆಂಟ್‌ ಆಗಿಯೂ ಕಾಣಿಸುತ್ತವೆ. ಇದನ್ನು ಧರಿಸಿದಾಗ ಹೆಚ್ಚು ಆಭರಣಗಳು ಬೇಕಂತಿಲ್ಲ.

ಇದರ ಜತೆಗೆ ಚಳಿಗಾಲದ ಮೋಜಿನಕೂಟಗಳಿಗೆ ಸೂಕ್ತವೆನಿಸುವುದು ತೆಳು ಎಂಬ್ರಾಯಡರಿಗಳಿರುವ ವೆಲ್ವೆಟ್‌ ಮಾದರಿಯ ಕೆಂಪು, ಹಸಿರಿನಂಥ ಗಾಢ ಬಣ್ಣದ ಕೋ–ಆರ್ಡ್‌ ಸೆಟ್‌. ಇದರ ಜತೆಗೆ ದೊಡ್ಡ ಗಾತ್ರದ ಚಿನ್ನದ ಇಯರಿಂಗ್‌ ಜತೆ ಧರಿಸಿದರೆ, ಆಕರ್ಷಕವಾಗಿ ಕಾಣುತ್ತದೆ. ತರಂಗಗಳಂತೆ ಕಾಣುವ ರಿಬ್ಡ್‌ ವೂಲನ್‌ ಸೆಟ್‌ಗಳು ಹೆಚ್ಚು ಆರಾಮದಾಯಕ ಎನಿಸುತ್ತವೆ. ಇದನ್ನು ಧರಿಸಿ ಗುಂಡಗಿರುವವರು ತೆಳ್ಳಗೆ ಕಾಣಿಸಬಹುದು. ಆಫೀಸಿಗೂ ಸರಿ, ವರ್ಕ್‌ಫ್ರಂ ಹೋಂ ಆದರೂ ಸರಿ ಇದು ಹೆಚ್ಚು ಸೂಕ್ತದಾಯಕ ದಿರಿಸು. ಇದರ ಮೇಲೆ ಲೆದರ್‌ ಜಾಕೆಟ್ ಹಾಕಿಕೊಂಡು ಹೊರಗೂ ಸುತ್ತಾಡಿ ಬರಬಹುದು.

ADVERTISEMENT

ಹೊಸತೇನಲ್ಲ 1960ರಿಂದಲೂ ಕೋ–ಆರ್ಡ್‌ ಸೆಟ್ ಚಾಲ್ತಿಯಲ್ಲಿದೆ. ಎಲ್ಲ ಕಾಲಕ್ಕೂ ಒದಗುವುದರಿಂದ ಈ ದಿರಿಸು ಬಹಳ ಪ್ರಸಿದ್ಧಿ ಪಡೆದಿದೆ. ಕ್ಯಾಷುಯಲ್‌, ಸಂಜೆಯ ಪಾರ್ಟಿಗಳಿಗೂ ಈ ದಿರಿಸು ಹೇಳಿ ಮಾಡಿಸಿದ್ದು. ಎಂಥ ದೇಹದ ಆಕಾರಕ್ಕೆ ಯಾವ ಬಗೆಯ ಕೋ– ಆರ್ಡ್‌ ಸೆಟ್‌ಗಳು ಸೂಕ್ತ ಅನ್ನುವುದನ್ನು ನಿರ್ಧರಿಸಿ, ಖರೀದಿಸಿದರೆ ಇನ್ನೂ ಟ್ರೆಂಡಿಯಾಗಿ ಕಾಣಿಸಿಕೊಳ್ಳಬಹುದು.

ಹವರ್‌ಗ್ಲಾಸ್‌ ಕಾಯದವರಲ್ಲಿ ನಡು ಸಪೂರವಾಗಿದ್ದು, ಎದೆ ಹಾಗೂ ಸೊಂಟ ಅಗಲವಾಗಿರುತ್ತದೆ. ಇಂಥವರು ತೆಳ್ಳಗೆ ಕಾಣಿಸಲು ಎಲ್ಲ ಬಗೆಯ ಕೋ–ಆರ್ಡ್‌ ಸೆಟ್‌ಗಳು ಹೊಂದುತ್ತವೆ.

ಹೈವೆಸ್ಟೆಡ್‌ ಸ್ಕರ್ಟ್ ಅಥವಾ ಪ್ಯಾಂಟ್‌ ಜತೆಗೆ ಕ್ರಾಪ್‌ ಟಾಪ್‌ ಧರಿಸಿದರೆ ಉತ್ತಮ ಲುಕ್‌ ನೀಡಬಲ್ಲದು.

ಎತ್ತರ ಕಾಯದವರಿಗೆ ಪ್ರಿಂಟ್‌ ಹಾಗೂ ಪ್ಯಾಟರ್ನ್‌ಗಳಿರುವ ಕೋ–ಆರ್ಡ್‌ ಸೆಟ್‌ಗಳು ಇನ್ನಷ್ಟು ಎತ್ತರ ಕಾಣುವಂತೆ ಮಾಡುತ್ತದೆ. ಎತ್ತರದ ನಿಲುವಿಗೆ ಒಂದು ಘನತೆಯನ್ನು ಒದಗಿಸುತ್ತದೆ. ಕುಳ್ಳನೆಯ ಕಾಯದವರು ಸಾಧ್ಯವಾದಷ್ಟು ಅತಿ ಉದ್ದವಲ್ಲದ ಟಾಪ್‌ ಮತ್ತು ಬಾಟಮ್‌ ಅನ್ನು ಆರಿಸಿಕೊಂಡರೆ ಉದ್ದನೆಯ ನಿಲುವು ಇರುವಂತೆ ಕಾಣಿಸಿಕೊಳ್ಳಬಹುದು. ⇒v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.