ADVERTISEMENT

ತರವಲ್ಲದ ಮಾತು ತಮಗಲ್ಲ..

ಡಿ.ಯಶೋದಾ
Published 21 ಫೆಬ್ರುವರಿ 2020, 19:30 IST
Last Updated 21 ಫೆಬ್ರುವರಿ 2020, 19:30 IST
ಚಿತ್ರ: ರಘುಪತಿ ಶೃಂಗೇರಿ
ಚಿತ್ರ: ರಘುಪತಿ ಶೃಂಗೇರಿ   

‘ನೀನೇನಿದ್ದರೂ ಆಫೀಸ್‌ನಲ್ಲಿ, ಮನೇಲಿ ನಿನ್ನದೇನೂ ನಡೆಯಲ್ಲ...’

ಅದ್ಯಾಕೋ ಅತ್ತೆಯ ಈ ಮಾತು ವಸುಮತಿ ಮನಸ್ಸಿನಲ್ಲಿ ಭದ್ರವಾಗಿ ತಳವೂರಿಬಿಟ್ಟಿದೆ. ಎಷ್ಟೇ ಮರೆಯಲು ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ.ಈ ಮಾತು ಕೇಳಿದ ಮೇಲೆ ಅವಳಿಗೆ ತಾನು ಮದುವೆಯಾದ ಮೂರು ತಿಂಗಳಿನಿಂದ ಮನೆಗೆಲಸದಲ್ಲೂ ಜಾಣೆ ಎಂದೆನಿಸಿಕೊಳ್ಳಲು ಕಷ್ಟಪಟ್ಟು ಹೆಚ್ಚಿನ ಕೆಲಸ ಮಾಡಿದ್ದು ವ್ಯರ್ಥ ಆಯಿತಾ ಎಂಬ ಸಂಶಯ ಮೂಡಿದೆ. ಜೊತೆಗೆ ತಾನೇನೊ ಸೋತುಬಿಟ್ಟೆ ಎಂಬ ನಿರಾಸೆ.

ತಾನು ಮನೆಯಲ್ಲೂ ಸೈ ಅನ್ನಿಸಿಕೊಳ್ಳಬೇಕು ಎಂದು ಅವಳು ತುಂಬಾ ಕಷ್ಟಪಟ್ಟಿದ್ದಳು. ತಾನು ಮಾಡದಿದ್ದ, ತನಗೆ ಬರದ, ತನ್ನ ಮನಸ್ಸಿಗೆ ಒಪ್ಪದ, ತನ್ನ ಸಿದ್ಧಾಂತಕ್ಕೆ ವಿರುದ್ಧವಾದಂತಹ ಕೆಲಸಗಳನ್ನೆಲ್ಲ ಪ್ರಯತ್ನ ಮೀರಿ ಮಾಡಿದ್ದಳು. ಆಫೀಸ್‌ಗೆ ತಡವಾದರೂ ಕೆಲವು ಕೆಲಸಗಳನ್ನು ಮಾಡಿಯೇ ಹೋಗುತ್ತಿದ್ದಳು. ಆದರೂ ಈ ಮಾತು ಕೇಳಿದ್ದು ಅವಳಿಗೆ ತುಂಬಾ ನೋವಾಯಿತು. ನಂತರವೂ ಅತ್ತೆಯಿಂದ ಒಳ್ಳೆಯ ಮಾತು ಬರಬಹುದೇನೋ ಎಂದು ಮತ್ತಷ್ಟು ಪ್ರಯತ್ನಪಟ್ಟು ಕೆಲಸ ಮಾಡಿದಳು, ಕಾದಳು; ಆದರೆ ಅವಳು ನಿರೀಕ್ಷಿಸಿದ ಶಹಭಾಶ್‌ಗಿರಿ ಸಿಗಲೇ ಇಲ್ಲ. ನಮ್ಮ ಸಮಾಜದಲ್ಲಿ ಇಂತಹ ಅದೆಷ್ಟು ವಸುಮತಿಯರು ಇರುವರೋ?

ADVERTISEMENT

ಸಮಯ ಕೊಡಿ..

ಮದುವೆಯಾಗಿ ತನ್ನವರನ್ನೆಲ್ಲ ತೊರೆದು ಮತ್ತೊಂದು ಮನೆಗೆ ಬಂದು ಅಲ್ಲಿನ ವ್ಯವಸ್ಥೆಗೆ ಹೊಂದಿಕೊಳ್ಳಲು ಯಾವುದೇ ಹೆಣ್ಣಿಗಾದರೂ ಸ್ವಲ್ಪ ಸಮಯ ಬೇಕಾಗುತ್ತದೆ. ಆ ಹಂತದಲ್ಲಿ ಕೆಲವು ಗೊಂದಲಗಳಿಂದ ತಪ್ಪುಗಳು ಆಗಬಹುದು. ಅದು ಅಪರಾಧವೇನಲ್ಲ, ಕೆಲವೊಮ್ಮೆ ಯಾವ ತಪ್ಪೂ ಆಗದೆಯೂ ಇರಬಹುದು. ಕೆಲವು ಹೆಣ್ಣುಮಕ್ಕಳಿಗೆ ತಮ್ಮ ಕಷ್ಟಗಳ ಬಗ್ಗೆ ತವರುಮನೆಯಲ್ಲಿ ಹೇಳಿಕೊಂಡು ಪರಿಹಾರ ಕಂಡುಕೊಳ್ಳುವ, ಸಮಾಧಾನ ಮಾಡಿಕೊಳ್ಳುವ ಅವಕಾಶ ಇರುತ್ತದೆ. ಆದರೆ ಕೆಲವು ಹೆಣ್ಣುಮಕ್ಕಳಿಗೆ ಆ ಭಾಗ್ಯವೂ ಇರುವುದಿಲ್ಲ. ಕೆಲವು ಮನೆಗಳಲ್ಲಿ ಹೆಣ್ಣುಮಕ್ಕಳಿಗೆ ಮದುವೆ ಮಾಡಿ ಕಳುಹಿಸುವುದೇ ದೊಡ್ಡ ಸಮಸ್ಯೆ ಆಗಿರುತ್ತದೆ. ಮದುವೆಯಾದ ಮೇಲೆ ಆ ಮಗಳಿಂದ ಯಾವುದೇ ಸಮಸ್ಯೆ ಕೇಳಲು ಯಾರೂ ತಯಾರಿರುವುದಿಲ್ಲ. ಇನ್ನೂ ಕೆಲವು ಮನೆಗಳಲ್ಲಿ ಹೇಳಿದರೂ ಪ್ರಯೋಜನವಾಗುವುದಿಲ್ಲ. ಇಂಥ ಸಮಯದಲ್ಲಿ ಗಂಡನ ಸಹಕಾರ ಮುಖ್ಯ. ಕೆಲವು ಹೆಂಡತಿಯರಿಗೆ ಆ ಸಹಕಾರ ಸಿಗಬಹುದು, ಕೆಲವರಿಗೆ ಅದೂ ಇಲ್ಲವಾಗಬಹುದು.

ಇಲ್ಲಿ ಸಮಸ್ಯೆ ಇರುವುದು ಅತ್ತೆ ಏನೋ ಅಂದುಬಿಟ್ಟರು ಎಂಬುದರಲ್ಲಿ ಅಲ್ಲ, ಬದಲಾಗಿ ಆ ವಿಷಯವನ್ನು ವಸುಮತಿ ಗಂಭೀರವಾಗಿ ಪರಿಗಣಿಸಿದ್ದು. ಅತ್ತೆ ಏನೋ ಅಂದುಬಿಟ್ಟರು ಎಂಬುದನ್ನೇ ದೊಡ್ಡದು ಮಾಡಿಕೊಳ್ಳುವ ಮನಃಸ್ಥಿತಿ ಯಾಕೆ? ಸಮಸ್ಯೆ ಇಷ್ಟಕ್ಕೇ ಮುಗಿಯುವುದಿಲ್ಲ, ಮುಂದೆ ಇನ್ನೂ ಬೇರೆ ಬೇರೆ ಮಾತೂ ಕೇಳಬೇಕಾಗಬಹುದು.

ಕೆಲವೊಮ್ಮೆ ಅತ್ತೆಯರು ಯಾವುದೇ ಉದ್ದೇಶವಿಲ್ಲದೆ ಸಹಜವಾಗೇ ಏನಾದರೂ ಹೇಳಬಹುದು, ಕೆಲವೊಂದು ಅತ್ತೆಯರಿಗೆ ತಮ್ಮ ಸೊಸೆ ತಮಗಿಂತ ಚೂಟಿಯಾಗಿರಬೇಕೆಂಬ ಬಯಕೆ. ಹಾಗಾಗಿ ಆಗಾಗ ಸೊಸೆಯನ್ನು ಎಚ್ಚರಿಸುವ ರೀತಿಯಲ್ಲಿ ಏನಾದರೂ ಹೇಳುತ್ತಿರುತ್ತಾರೆ. ಇನ್ನು ಕೆಲವರಿಗೆ ಸೊಸೆ ಏನು ಮಾಡಿದರೂ ತಪ್ಪೇ, ತಮಗಿಂತ ತಮ್ಮ ಸೊಸೆ ಸಾವಿರ ಪಾಲು ಮೇಲು ಎನಿಸಿದರೂ ಅದನ್ನು ಒಪ್ಪಿಕೊಳ್ಳಲು ತಯಾರಿರುವುದಿಲ್ಲ. ಕೆಲವರಿಗೆ ತಮಗಿಂತ ತಮ್ಮ ಸೊಸೆ ತುಂಬಾ ಚೂಟಿ ಎಂದು ಬೇರೆಯವರು ಹೇಳಿಬಿಡುತ್ತಾರೇನೋ ಎಂಬ ಆತಂಕ, ಮತ್ತೂ ಕೆಲವರಿಗೆ ಸೊಸೆ ತಮ್ಮನ್ನು ಹಿಂದಿಕ್ಕಿ ಮುಂದೆ ಹೋಗಿಬಿಡುತ್ತಾಳೇನೋ ಎಂಬ ಕಳವಳ. ಇವರ ನಡುವೆ ಸೊಸೆಗೆ ಏನೂ ಅನ್ನದೇ ತಮ್ಮ ಪಾಡಿಗೆ ತಾವು ಇರುವ ಹಾಗೂ ಸೊಸೆಗೆ ಸಹಕರಿಸುತ್ತ ಆತ್ಮೀಯತೆಯಿಂದ ಇರುವ ಅತ್ತೆಯರೂ ಇದ್ದಾರೆ.

ಹೊಂದಾಣಿಕೆ ಅನಿವಾರ್ಯ

ಸಮಾಜದಲ್ಲಿ ಎಲ್ಲಾ ರೀತಿಯ ಅತ್ತೆಯರನ್ನೂ ಕಾಣುತ್ತೇವೆ. ತಮಗೆ ಸಿಗುವ ಅತ್ತೆಯರಿಗೆ ಹೊಂದಿಕೊಳ್ಳಬೇಕಾದ್ದು ಸೊಸೆಯರಿಗೆ ಅನಿವಾರ್ಯ. ಅತ್ತೆ ಏನೋ ಹೇಳಿದಾಗ ಅದರಲ್ಲಿ ತಾನು ತಿದ್ದಿಕೊಳ್ಳುವಂತಹದ್ದು ಇದ್ದರೆ ಖಂಡಿತಾ ತಿದ್ದಿಕೊಳ್ಳಬಹುದು, ಇಲ್ಲವಾದರೆ ಅದು ತನಗಲ್ಲ ಎಂದು ಸುಮ್ಮನಿರುವುದೇ ಲೇಸು. ತನಗೆ ಒಪ್ಪದ, ತನಗೆ ಸರಿಹೋಗದ ಮಾತುಗಳನ್ನು ಯಾರಾದರೂ ಆಡಿದರೆ ಅದು ತನಗಲ್ಲ ಎಂದೇ ಭಾವಿಸಬೇಕಾಗುತ್ತದೆ. ಯಾರೋ ಏನೋ ಅಂದುಬಿಟ್ಟರು ಎಂದ ಮಾತ್ರಕ್ಕೇ ಸೋತಭಾವ ಯಾಕೆ?

ಕೆಲಸದ ಒತ್ತಡ

ಅತ್ತೆ ಮಾತಿಗೆ ತಲೆಕೆಡಿಸಿಕೊಂಡರೆ ಹೊರಗಿನ ಕೆಲಸದ ಮೇಲೂ ಅದು ಪರಿಣಾಮ ಬೀರಬಹುದು. ತಾನು ಮಾಡಿದ ಕೆಲಸಕ್ಕೆ ಅತ್ತೆ ಹೊಗಳಬೇಕು ಎಂದು ನಿರೀಕ್ಷಿಸುವುದು ತಪ್ಪು, ಹಾಗೆಯೇ ಅತ್ತೆ ಮೆಚ್ಚಲೆಂದೇ ಕೆಲಸ ಮಾಡುವುದು ಸಲ್ಲ.

ಮನೆ ಒಳಗಿರಲಿ ಅಥವಾ ಹೊರಗಿರಲಿ ನಾವು ಮಾಡುವ ಕೆಲಸಕ್ಕೆ ಸಹಜವಾಗೇ ಮನ್ನಣೆ ದೊರೆತರೆ ಅಡ್ಡಿಯಿಲ್ಲ, ಆದರೆ ಒಬ್ಬರನ್ನು ಮೆಚ್ಚಿಸಲೆಂದೇ ಕೆಲಸ ಮಾಡುವುದು, ಅತ್ತೆ ಹೊಗಳಲೆಂದೇ ಅವರ ಸೆರಗು ಹಿಡಿದು ತಿರುಗುವುದು ಎಷ್ಟು ಸರಿ? ಹಾಗೆಯೇ ಯಾರೇ ಏನೇ ಅಂದರೂ, ಟೀಕಿಸಿದರೂ ನಮ್ಮ ಕೆಲಸವನ್ನು ಉತ್ತಮಪಡಿಸಿಕೊಳ್ಳಲು ನೆರವಾಗುವಷ್ಟರ ಮಟ್ಟಿಗೆ ಮಾತ್ರ ನಾವು ಅವರ ಮಾತನ್ನು ಪರಿಗಣಿಸಿದರೆ ಸಾಲದೇ?

(ಲೇಖಕಿ ಬೆಂಗಳೂರಿನಲ್ಲಿ ಆಪ್ತ ಸಮಾಲೋಚಕಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.