ADVERTISEMENT

ಆರಾಮದಾಯಕ ಪ್ಯಾರಲಲ್ ಪ್ಯಾಂಟ್‌

ಮನಸ್ವಿ
Published 20 ಡಿಸೆಂಬರ್ 2019, 19:30 IST
Last Updated 20 ಡಿಸೆಂಬರ್ 2019, 19:30 IST
   

ಫ್ಯಾಷನ್ ಕ್ಷೇತ್ರ ಎಂಬುದು ಹರಿವ ನದಿಯಂತೆ. ಅದು ನಿರಂತರ. ದಿನಕ್ಕೊಂದು ಫ್ಯಾಷನ್ ಈ ಕ್ಷೇತ್ರಕ್ಕೆ ಲಗ್ಗೆ ಇಡುತ್ತದೆ. ಅದರಲ್ಲೂ ಹೆಣ್ಣುಮಕ್ಕಳಿಗೆ ಫ್ಯಾಷನ್ ಕ್ಷೇತ್ರದಲ್ಲಿ ಆಯ್ಕೆಗಳು ಹೆಚ್ಚು. ಸೀರೆ, ಲೆಹಂಗಾ, ಚೂಡಿದಾರ್‌ನೊಂದಿಗೆ ಈಗೀನ ಜೀನ್ಸ್, ಟಾಪ್, ಸ್ಕರ್ಟ್, ಪ್ಯಾಂಟ್‌ಗಳಲ್ಲೂ ನೂರಾರು ಟ್ರೆಂಡ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಈಗ ಫ್ಯಾಷನ್‌ಪ್ರಿಯರ ನೆಚ್ಚಿನ ದಿರಿಸಾಗಿರುವುದು ಪ್ಯಾರಲಲ್ ಪ್ಯಾಂಟ್‌ಗಳು.

ಏನಿದು ಪ್ಯಾರಲಲ್ ಬಾಟಂ?
ಪಲಾಝೊ ಪ್ಯಾಂಟ್‌ನಂತೆ ಕಾಣುವ ‍ಪ್ಯಾರಲಲ್‌ ಬಾಟಂ ಈಗಿನ ಹೊಸ ಟ್ರೆಂಡ್‌. ದೂರದಿಂದ ನೋಡಿದರೆ ಹಳೇ ಕಾಲದ ಬೆಲ್‌ಬಾಟಂ ಪ್ಯಾಂಟ್‌ನಂತೆ ಕಾಣುವ ಈ ಉಡುಪು ಲಲನೆಯರ ನೆಚ್ಚಿನ ದಿರಿಸು. ಸೊಂಟದಿಂದ ತೊಡೆಯವರೆಗೆ ತುಸು ಬಿಗಿಯಾಗಿದ್ದು ತೊಡೆಯಿಂದ ಪಾದದವರೆಗೂ ಅಗಲವಾಗಿರುವ ಈ ಪ್ಯಾಂಟ್ ಧರಿಸಲು ಸುಲಭ. ಸೆಕೆಗಾಲ ಹಾಗೂ ಚಳಿಗಾಲ ಎರಡಕ್ಕೂ ಹೇಳಿ ಮಾಡಿಸಿದಂತಹದ್ದು.

ಆಫೀಸ್‌ಗೂ ಸೈ ಪಾರ್ಟಿಗೂ ಸೈ
ಪ್ಯಾರಲಲ್ ಪ್ಯಾಂಟ್ ನೋಡಲು ಸರಳವಾಗಿದ್ದರೂ ಅದರ ಮೇಲೆ ಧರಿಸುವ ಟಾಪ್‌ಗಳ ಮೇಲೆ ಅದರ ಅಂದ ನಿರ್ಧಾರವಾಗಿರುತ್ತದೆ. ಕಾಟನ್‌ ಪ್ಯಾರಲಲ್ ಪ್ಯಾಂಟ್‌ನ ಮೇಲೆ ಸ್ಲೀವ್‌ಲೆಸ್‌ ಸ್ಟೈಲಿಶ್ ಟಾಪ್ ಧರಿಸಿದರೆ ಅದು ಪಾರ್ಟಿಗೆ ಹೊಂದುವಂತಹ ಡ್ರೆಸ್‌ ಆಗುವುದರಲ್ಲಿ ಸಂಶಯವಿಲ್ಲ. ಜೊತೆಗೆ ತಕ್ಕುದಾದ ದಪ್ಪನಾದ ಸಿಲ್ವರ್‌ ನೆಕ್ಲೇಸ್ ಧರಿಸಿದರೆ ಪಾರ್ಟಿಯಲ್ಲಿ ನೀವು ಎದ್ದು ಕಾಣಬಹುದು. ‌

ADVERTISEMENT

ಆಫೀಸ್‌ಗೆ ದಿನಾ ಕುರ್ತಾ, ಚೂಡಿದಾರ್, ಜೀನ್ಸ್ ಹಾಕಿ ಬೇಸರವಾಗಿದ್ದರೆ ಪ್ಯಾರಲಲ್ ಬಾಟಂ ಮೇಲೆ ವಿವಿಧ ವಿನ್ಯಾಸದ ಟಾಪ್‌ಗಳನ್ನು ಧರಿಸಿಕೊಂಡು ಹೋಗಬಹುದು. ಇದು ಆರಾಮದಾಯಕ ಡ್ರೆಸ್‌ ಕೂಡ ಹೌದು. ಪ್ಯಾರಲಲ್ ಪ್ಯಾಂಟ್‌ ಮೇಲೆ ತುಂಬು ತೋಳಿನ ಟಾಪ್ ಧರಿಸಿದರೆ ಇನ್ನೂ ಚೆನ್ನಾಗಿ ಕಾಣಬಹುದು.

ಸ್ಟೈಲಿಶ್ ಡ್ರೆಸ್‌
ಇದನ್ನು ಮಿಲೇನಿಯಲ್ ಯುಗದ ಸ್ಟೈಲಿಶ್ ಡ್ರೆಸ್ ಎಂದೂ ಹೇಳಬಹುದು. ಪ್ಯಾರಲಲ್‌ ಪ್ಯಾಂಟ್‌ಗೆ ತಕ್ಕುದಾದ ಮ್ಯಾಚಿಂಗ್ ಕ್ರಾಪ್ ಟಾಪ್‌ಗಳು ಜೋಡಿಯಾಗಿ ಸಿಗುತ್ತವೆ. ಡಂಗ್ರೀಸ್ ರೂಪದಲ್ಲೂ ಪ್ಯಾರಲಲ್ ಪ್ಯಾಂಟ್‌ಗಳು ಸಿಗುತ್ತವೆ. ಕೋಲ್ಡ್‌ ಶೋಲ್ಡರ್ ಟಾಪ್ ಹಾಗೂ ಶೋಲ್ಡರ್‌ಲೆಸ್ ಟಾಪ್‌ಗಳಿಗೂ ಈ ಪ್ಯಾಂಟ್ ಸೈ ಎನ್ನಿಸಿಕೊಳ್ಳುತ್ತದೆ.

ಕುರ್ತಾದೊಂದಿಗೂ ಹೊಂದುತ್ತದೆ
ನಿಮಗೆ ಸಾಂಪ್ರದಾಯಕ ನೋಟ ಇಷ್ಟವಾದರೆ ಕುರ್ತಾ ಟಾಪ್‌ನೊಂದಿಗೂ ಪ್ಯಾರಲಲ್ ಪ್ಯಾಂಟ್ ಧರಿಸಬಹುದು. ಅದರಲ್ಲೂ ಹೆಚ್ಚು ಅಗಲವಿಲ್ಲದ ಪ್ಯಾರಲಲ್ ಪ್ಯಾಂಟ್ ಕುರ್ತಾ ಟಾಪ್‌ಗೆ ಹೆಚ್ಚು ಹೊಂದುತ್ತದೆ. ಟಾಪ್‌ನ ಬಣ್ಣದ್ದೇ ಪ್ಯಾಂಟ್‌ ಅನ್ನು ಧರಿಸಿದರೆ ಚೆನ್ನಾಗಿ ಕಾಣುತ್ತದೆ.

ಚಳಿಗಾಲದಲ್ಲಿ ಹೀಗೆ ಧರಿಸಿ
ಚಳಿಗಾಲದಲ್ಲಿ ಕಾಟನ್ ಪ್ಯಾರಲಲ್ ಪ್ಯಾಂಟ್ ಧರಿಸಿ ಅದರ ಮೇಲೆ ತೋಳಿಲ್ಲದ ಟೀ ಶರ್ಟ್ ಧರಿಸಿ ಪ್ಯಾಂಟ್‌ನ ಬಣ್ಣದ ಬ್ಲೇಝರ್ ಧರಿಸಿ. ಇದು ನಿಮ್ಮ ನೋಟವನ್ನೇ ಬದಲಾಯಿಸುವುದರಲ್ಲಿ ಸಂಶಯವಿಲ್ಲ. ನಿಮಗೊಂದು ಟ್ರೆಂಡಿ ನೋಟ ಸಿಗುವಂತೆ ಮಾಡುತ್ತದೆ. ಜೀನ್ಸ್ ಪ್ಯಾರಲಲ್ ಮೇಲೆ ಉಣ್ಣೆಯ ಸ್ವೆಟ್‌ ಶರ್ಟ್ ಕೂಡ ಧರಿಸಬಹುದು.

ನಟಿಮಣಿಯರ ಟ್ರೆಂಡಿ ಉಡುಪು
ಹಗುರವಾಗಿ, ಆರಾಮದಾಯಕ ಎನ್ನಿಸುವ ಪ್ಯಾರಲಲ್ ಪ್ಯಾಂಟ್ ನಟಿ, ನಿರೂಪಕಿಯರ ನೆಚ್ಚಿನ ಉಡುಪು ಎನ್ನಿಸಿಕೊಂಡಿದೆ. ಶಾಪಿಂಗ್ ಹೋಗುವಾಗ, ಟ್ರಾವೆಲ್‌ ಮಾಡುವಾಗ, ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ಹೋಗುವಾಗಲೆಲ್ಲಾ ಪ್ಯಾರಲಲ್ ಪ್ಯಾಂಟ್ ಮೇಲೆ ತಮ್ಮ ದೇಹಸಿರಿಗೆ ಸರಿ ಹೊಂದುವಂತಹ ಟಾಪ್ ಧರಿಸಿಕೊಂಡು ಹೋಗುವುದು ಈಗ ಟ್ರೆಂಡ್ ಆಗಿದೆ.

ವಿವಿಧ ಬಣ್ಣ ಹಾಗೂ ವಿನ್ಯಾಸದಲ್ಲಿ
ಪ್ಯಾರಲಲ್ ಪ್ಯಾಂಟ್‌ನಲ್ಲಿ ಕೇವಲ ಒಂದೇ ಬಣ್ಣ, ವಿನ್ಯಾಸವಿಲ್ಲ. ಇದು ಬೇರೆ ಬೇರೆ ವಿನ್ಯಾಸದ ಮೂಲಕ ಲಲನಾಮಣಿಯರ ಮನ ಗೆದ್ದಿದೆ. ಫ್ರಿಲ್ ರೂಪದಲ್ಲಿ ಇರುವ ಪ್ಯಾರಲಲ್ ಪ್ಯಾಂಟ್ ಹೊಸ ಟ್ರೆಂಡ್‌. ಪ್ಲೇನ್ ಇರುವ ಪ್ಯಾರಲಲ್ ಜೊತೆ ಪ್ಲೇನ್ ಟಾಪ್ ಹೊಂದಿಕೆಯಾಗುತ್ತದೆ. ಪ್ರಿಂಟ್ ಇರುವ ಪ್ಯಾರರಲ್‌ ಪ್ಯಾಂಟ್ ಕೂಡ ಮಾರುಕಟ್ಟೆಯಲ್ಲಿ ಸಿಗುತ್ತಿದ್ದು ಇದು ಪ್ಲೇನ್ ಹಾಗೂ ಪ್ರಿಂಟ್ ಟಾಪ್‌ಗಳಿಗೆ ಸೂಕ್ತವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.