ನನಗೆ ವಿಜ್ಞಾನ ಓದುವುದಕ್ಕೆ ಇಷ್ಟ ಇರಲಿಲ್ಲ. ಆದರೂ ಅಪ್ಪ ಒತ್ತಾಯ ಮಾಡಿದ್ದರಿಂದ ನಾನು ಅದನ್ನು ಓದಿದೆ. ನಂತರ ವೈದ್ಯಕೀಯ ಓದುವುದಕ್ಕಂತೂ ಸ್ವಲ್ಪವೂ ಮನಸ್ಸಿರಲಿಲ್ಲ. ಆಗಲೂ ಅಪ್ಪ ದಬಾಯಿಸಿ, ವೈದ್ಯಕೀಯಕ್ಕೆ ಸೇರಿಸಿದರು. ಬಹಳ ಕಷ್ಟಪಟ್ಟು ಓದಿ, ಡಾಕ್ಟರ್ ಆದೆ. ಈಗ ಅವರು ಹೇಳಿದ ಹುಡುಗನನ್ನೇ ಮದುವೆಯಾಗು ಅನ್ನುತ್ತಿದ್ದಾರೆ. ನನಗೆ ಇಷ್ಟವಿಲ್ಲ. ನಾನು ಇಷ್ಟಪಟ್ಟವನನ್ನೇ ಮದುವೆಯಾಗಬೇಕು. ಅದನ್ನು ಪಾಲಕರ ಬಳಿ ಹೇಳುವುದಕ್ಕೆ ಭಯ. ಅವರಿಗೆ ಗೊತ್ತಾದರೆ ಪ್ರಳಯವಾಗುತ್ತದೆ. ನನ್ನನ್ನು ಹಿಂಸಿಸುತ್ತಾರೆ ಅಥವಾ ಅವರೇ ಸಾಯ್ತೀನಿ ಎಂದೆಲ್ಲ ಹೇಳುತ್ತಾರೆ. ನನಗೆ ಜುಗುಪ್ಸೆಯಾಗಿದೆ, ಏನು ಮಾಡಲಿ?
–ಡಾ. ಅನಘಾ ರಾಘವೇಂದ್ರ, ಹಾಸನ
ಬಹಳ ಪಾಲಕರು ತಮ್ಮ ಮಕ್ಕಳಿಂದ ಅತಿಯಾದದ್ದನ್ನು ನಿರೀಕ್ಷಿಸುತ್ತಾರೆ. ತಾವು ಹೇಳಿದಂತೆಯೇ ತಮ್ಮ ಮಕ್ಕಳು ಕೇಳಬೇಕು, ಅದರಿಂದ ಒಳ್ಳೆಯದಾಗುತ್ತದೆ ಎಂದು ನಂಬಿರುತ್ತಾರೆ. ಅವರ ಕಾಳಜಿ ಅಥವಾ ಪ್ರೀತಿ ತಪ್ಪು ಅಂತಲ್ಲ. ಅದು ಸರಿಯಂತೂ ಅಲ್ಲ.
ಪಾಲಕರು ಮಕ್ಕಳನ್ನು ಈ ಜಗತ್ತಿಗೆ ತಂದವರು ಎನ್ನುವುದು ನಿಜ. ಮಕ್ಕಳನ್ನು ಹೊತ್ತು, ಹೆತ್ತು ಸಾಕಿ, ಸಲಹುತ್ತಾರೆ. ಮಕ್ಕಳ ಏಳ್ಗೆಗಾಗಿ ಶ್ರಮಿಸುತ್ತಾರೆ. ಅವರ ಒಳ್ಳೆಯ ಭವಿಷ್ಯಕ್ಕಾಗಿ ಬೆವರು ಹರಿಸುತ್ತಾರೆ. ಮಕ್ಕಳ ಬಗ್ಗೆ ನೂರೆಂಟು ಕನಸು ಕಂಡಿರುತ್ತಾರೆ. ಎಲ್ಲವೂ ನಿಜ. ಎಲ್ಲರ ಎಲ್ಲ ಕನಸುಗಳೂ ನನಸಾಗುವುದಿಲ್ಲ. ಕಂಡ ಕನಸುಗಳನ್ನೆಲ್ಲ ನನಸು ಮಾಡಿಕೊಳ್ಳುವ ಅಥವಾ ನನಸು ಮಾಡಿಕೊಳ್ಳಲು ಸಾಧ್ಯವಾಗದಿರುವುದಕ್ಕೆ ಬಹಳಷ್ಟು ಕಾರಣಗಳು ಇರುತ್ತವೆ. ಮಕ್ಕಳ ವಿಷಯದಲ್ಲಿ ಮನುಷ್ಯರಿಗಿಂತ ಪ್ರಾಣಿಗಳು ಮೇಲು ಎನ್ನಿಸುತ್ತದೆ.
ಜಗತ್ತಿನಲ್ಲಿ ಮನುಷ್ಯನೂ ಒಂದು ಪ್ರಾಣಿ. ಮನುಷ್ಯನಲ್ಲಿಯೂ ಪ್ರಾಣಿಸಹಜವಾದ ಅನೇಕ ಗುಣಲಕ್ಷಣಗಳು ಇವೆ. ಬುದ್ಧಿವಂತಿಕೆ, ವಿವೇಕ, ಅರಿವು, ಜ್ಞಾನ, ತಿಳಿವಳಿಕೆ, ಆಲೋಚನೆಗಳು, ಕರ್ತೃತ್ವ ಶಕ್ತಿ, ಕ್ರಿಯಾಶೀಲತೆಯಿಂದ ಮನುಷ್ಯ ತನಗೆ ಬೇಕಾದ ಹಾಗೆ ಬಹಳಷ್ಟು ಅನುಕೂಲಗಳನ್ನು ಮಾಡಿಕೊಂಡಿದ್ದಾನೆ. ಸಾಮಾಜಿಕ, ಆರ್ಥಿಕ, ವೈಜ್ಞಾನಿಕ, ರಾಜಕೀಯ ವ್ಯವಸ್ಥೆಗಳನ್ನು ಕಾಲಕಾಲಕ್ಕೆ ಬದಲಾಯಿಸುತ್ತಾ ಸಾಗಿದ್ದಾನೆ. ಎಲ್ಲವೂ ತನ್ನ ಹಾಗೂ ತನ್ನ ಮುಂದಿನವರ ಒಳಿತಿಗಾಗಿ ಎನ್ನುವ ಸಿದ್ಧಾಂತವನ್ನು ನಂಬಿಕೊಂಡಿದ್ದಾನೆ. ಇರಲಿ.
ಇಲ್ಲಿ ಹುಟ್ಟಿದ ಪ್ರತಿಯೊಬ್ಬರೂ ಭಿನ್ನವಾಗಿದ್ದಾರೆ. ಒಬ್ಬರಂತೆ ಇನ್ನೊಬ್ಬರಿಲ್ಲ. ದೇಹರಚನೆಯಲ್ಲಿ ಎಲ್ಲರೂ ಸಮರಂತೆ ಕಾಣುತ್ತೇವೆ. ಆದರೆ ಯಾವುದರಲ್ಲಿಯೂ ಸಮಾನತೆ ಇಲ್ಲ. ಸೃಷ್ಠಿಯಲ್ಲಿ ಎಲ್ಲವೂ ವೈವಿಧ್ಯಮಯವಾಗಿವೆ. ಯಾವುದೂ ಒಂದರಂತೆ ಇನ್ನೊಂದಿಲ್ಲ. ಅದೇ ಜೀವವೈವಿಧ್ಯ. ಸೃಷ್ಟಿಯ ವಿಶೇಷ. ನಮ್ಮ ಮಕ್ಕಳು ನಮ್ಮಿಂದ ಹುಟ್ಟಿದ್ದಾರೆ. ಅವರು ನಮಗಾಗಿಯೇ ಹುಟ್ಟಲಿಲ್ಲ. ಅವರು ಅವರ ಸ್ವಂತ ವ್ಯಕ್ತಿತ್ವವನ್ನು ಬೆಳೆಸಿಕೊಂಡು, ತಮ್ಮ ಆಲೋಚನೆಗಳ ಮೂಲಕ ತಮ್ಮ ಜೀವನವನ್ನು ತಮ್ಮದೇ ದಾರಿಯಲಿ ಬದುಕಿ ಬಾಳಲಿಕ್ಕಾಗಿ ಹುಟ್ಟಿದ್ದಾರೆ. ಇಷ್ಟನ್ನು ಪಾಲಕರು ಅರ್ಥಮಾಡಿಕೊಳ್ಳಬೇಕು.
ನಮ್ಮ ಕನಸುಗಳನ್ನು ನಾವು ನನಸು ಮಾಡಿಕೊಳ್ಳಬೇಕು. ನಮ್ಮ ಕನಸುಗಳನ್ನು ನನಸು ಮಾಡುವಂತೆ ಮಕ್ಕಳನ್ನು ಒತ್ತಾಯಿಸುವುದು ತಪ್ಪು. ಅದಕ್ಕಾಗಿ ಅವರು ಹುಟ್ಟಿರಲಿಕ್ಕಿಲ್ಲ. ಅವರ ಹುಟ್ಟಿನ ಕಾಲ, ಪರಿಸರ, ಬೆಳವಣಿಗೆ ಎಲ್ಲವೂ ಪಾಲಕರಿಗಿಂತ ಭಿನ್ನವಾಗಿರುತ್ತವೆ. ಹಾಗಾಗಿ, ನಮ್ಮ ಮಕ್ಕಳು ಸ್ವತಂತ್ರ ವ್ಯಕ್ತಿಗಳಾಗುವಂತೆ ಅವಕಾಶವನ್ನು ಕೊಡಬೇಕು. ಜೀವಜಗತ್ತಿನ ಎಲ್ಲ ಪ್ರಾಣಿಗಳು ಸಹ ತಮ್ಮ ಮರಿಗಳನ್ನು ಒಂದು ಹಂತದವರೆಗೆ ಕಾಳಜಿಯಿಂದ ಬೆಳೆಸುತ್ತವೆ. ನಂತರ ಅವುಗಳ ಪಾಡಿಗೆ ಅವುಗಳನ್ನು ಸ್ವತಂತ್ರವಾಗಿ ಬಿಡುತ್ತವೆ. ಮನುಷ್ಯರು ಅದನ್ನು ಗಮನಿಸಬೇಕು. ಮಕ್ಕಳ ಮೇಲೆ ಅತಿಯಾದ ಪ್ರೀತಿಯನ್ನು, ಅವಲಂಬನೆಯನ್ನು ಹೊಂದಿರಬಾರದು. ಅತಿಯಾದರೆ ಅಮೃತವೂ ವಿಷವಂತೆ. ಮಕ್ಕಳನ್ನು ತಮ್ಮಂತೆಯೇ, ತಮ್ಮ ನಿರೀಕ್ಷೆಯಂತೆಯೇ ಬೆಳೆಸಲು ಪ್ರಯತ್ನಿಸುವ ಪಾಲಕರು ಗೆಲ್ಲುವುದು ಕಡಿಮೆ. ಅದರಿಂದ ಪಾಲಕರು ಮತ್ತು ಮಕ್ಕಳ ಮಧ್ಯೆ ವಿಷಾದ, ಬೇಸರ, ಕೋಪ, ದ್ವೇಷ ಬೆಳೆದು ಬದುಕುನ್ನು ನರಕವಾಗಿಸುತ್ತದೆ. ಬದುಕು ಹಾಗಾಗಬಾರದು.
ನೀವು ಕೂಡ ಪಾಲಕರ ಒತ್ತಾಸೆಯಂತೆ ಇಷ್ಟವಿಲ್ಲದ ವಿಷಯಗಳನ್ನು ಕಷ್ಟಪಟ್ಟು ಓದಿದ್ದೀರಿ. ಅದನ್ನು ಪಾಸೂ ಮಾಡಿದ್ದೀರಿ. ನಿಮಗೆ ಅಭಿನಂದನೆಗಳು. ನೀವೀಗ ನಿಮ್ಮ ತಂದೆ– ತಾಯಿಯೊಂದಿಗೆ ಕುಳಿತು ಮಾತನಾಡುವಷ್ಟು ಪ್ರಬುದ್ಧರಾಗಿದ್ದೀರಿ. ಅವರೂ ಈಗ ನಿಮ್ಮನ್ನು ಪ್ರಬುದ್ಧರಂತೆ ಕಾಣುವ ಸಾಧ್ಯತೆ ಇದೆ. ಅದರ ಬಗ್ಗೆ ವಿಶ್ವಾಸದಿಂದ ಮಾತನಾಡಿರಿ. ನಿಮ್ಮ ಜೀವನದಲ್ಲಿ ಪಾಲಕರ ಮಹತ್ವ ಹಾಗೂ ನೀವು ಅವರನ್ನು ಅದೆಷ್ಟು ಪ್ರೀತಿಸುತ್ತೀರಿ ಎನ್ನುವುದನ್ನು ಹೇಳಿಕೊಳ್ಳಿ. ನಿಮ್ಮ ಜೀವನದಲ್ಲಿ ನಿಮ್ಮ ಆಯ್ಕೆ ಮತ್ತು ನಿಮ್ಮ ಬದುಕಿನ ಗಮ್ಯದ ಬಗ್ಗೆ ವಿವರಿಸಿ. ಇಷ್ಟವಿಲ್ಲದವರ ಜೊತೆಗೆ ಬದುಕುವ ಕಷ್ಟಕ್ಕಿಂತಲೂ ಇಷ್ಟ ಇರುವವರ ಜೊತೆಗೆ ಬದುಕುತ್ತಾ, ಆ ಹಾದಿಯಲ್ಲಿ ಬರುವ ಕಷ್ಟವನ್ನು ಎದುರಿಸುವುದು ಸುಲಭ ಎನ್ನುವುದನ್ನು ತಿಳಿಸಿರಿ.
ಇಷ್ಟೆಲ್ಲವೂ ನಿಮ್ಮಿಂದ ಸಾಧ್ಯವಿಲ್ಲ ಎನ್ನಿಸಿದರೆ, ನಿಮ್ಮ ಕುಟುಂಬದ ಹಿತೈಷಿ, ಹಿರಿಯರ ಸಹಾಯವನ್ನು ಪಡೆದುಕೊಳ್ಳಿ. ಅವರೊಂದಿಗೆ ನೀವೆಲ್ಲರೂ ಕುಳಿತುಕೊಂಡು ಮಾತನಾಡಿ, ಪರಸ್ಪರರಲ್ಲಿ ಪ್ರೀತಿ, ವಿಶ್ವಾಸ ಹೆಚ್ಚುವಂತೆ ಮಾಡುವುದು ಅಗತ್ಯ. ಇವೆಲ್ಲವೂ ಕಷ್ಟಸಾಧ್ಯ ಎನ್ನಿಸಿದರೆ ಕೌಟಂಬಿಕ ಸಲಹೆಗಾರ ಅಥವಾ ಕೌಟುಂಬಿಕ ಸಮಾಲೋಚಕರನ್ನು ಭೇಟಿ ಮಾಡಿ ಸಮಸ್ಯೆಯನ್ನು ಪರಿಹರಿಸಿಕೊಳ್ಳುವುದು ಉತ್ತಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.