ಹೊಡೆಸಿಕೊಳ್ಳುವವರಿಗಿಂತಲೂ ಹೊಡೆಯುವವರು ನಿಜವಾದ ದುರ್ಬಲರು. ಆ ಕ್ಷಣಕ್ಕೆ ಕೋಪವನ್ನು ನಿಯಂತ್ರಿಸುವ ಶಕ್ತಿ ಹಾಗೂ ವಿವೇಚನೆಯನ್ನು ಹೊಡೆಯುವವರು ಕಳೆದುಕೊಂಡಿರುತ್ತಾರೆ. ಕೌಟುಂಬಿಕ ದೌರ್ಜನ್ಯದ ಜಾಲದಲ್ಲಿ ಸಿಲುಕಿ ನಲುಗುವುದಕ್ಕೆ ಹೆಣ್ಣು–ಗಂಡಿನ ಭೇದವಿಲ್ಲವಾದರೂ ಇಲ್ಲಿಯೂ ಈ ದೌರ್ಜನ್ಯವನ್ನು ತುಟಿಕಚ್ಚಿ ಸಹಿಸುವವರು ಬಹುಪಾಲು ಹೆಣ್ಣುಮಕ್ಕಳೇ.
‘ಎಷ್ಟು ಅಂತ ಹೇಳೋದು? ಕೇಳಿಸಿಕೊಳ್ಳುವ ತಾಳ್ಮೆಗೂ ಮಿತಿ ಇದೆ. ಇದನ್ನೆ ಮಾಡ್ತಿದ್ದರೆ ಬಂದು ಎದೆಗೆ ಒದ್ದು ಬಿಡ್ತೀನಿ’ ಹೀಗೆ ಪಕ್ಕದ ಮನೆಯ ಗಂಡಸಿನ ದನಿ ಬಿರುಸಿನಂತೆ ತೂರಿಬಂತು. ಅಲ್ಲಿಯವರೆಗೆ ನಾಲ್ಕುಗೋಡೆಗಳ ಮೇರೆ ಮೀರಿ ತಾರಕಕ್ಕೇರಿದ್ದ ಆ ಮನೆಯಲ್ಲಿ ವಾಸವಿದ್ದ ದಂಪತಿಯ ಕಲಹ ನಿಧಾನಕ್ಕೆ ತಣ್ಣಗಾದಂತೆ ಅನಿಸಿದರೂ, ಮುಗಿದಿದ್ದು ಮಾತ್ರ ಆತ, ಆಕೆಯ ಮೇಲೆ ಒಂದೆರಡು ಏಟು ಹೊಡೆಯುವ ಪ್ರಸ್ತಾಪ ಮಾಡಿದಾಗಲೇ. ಯಾರಿಗೆ ಗೊತ್ತು?! ಅವನು ಎದೆಗೆ ಒದ್ದಿರಬಹುದು; ಅವಳು ಪೆಟ್ಟು ತಿಂದು ಬಿಕ್ಕಿರಬಹುದು. ಇವೆಲ್ಲ ಯಾರಿಗೂ ಗೊತ್ತಾಗದೇ ಹೋಗಬಹುದು. ಅಥವಾ ಅದು ಮಾತಿನಲ್ಲಿಯೇ ಉಳಿದಿರಬಹುದು!
ಒದ್ದು ಬಿಡ್ತೀನಿ ಅಂದ ಮಾತ್ರಕ್ಕೆ ಒದ್ದಿರ್ತನಾ? ಅನ್ನುವ ಪ್ರಶ್ನೆ ಸಹಜವಾಗಿ ಬರುತ್ತದೆ. ಆದರೆ, ‘ಒದೆಯುತ್ತೀನಿ, ಹೊಡೆದುಬಿಡ್ತೀನಿ, ಸಾಯಿಸ್ತೀನಿ, ಸಾಯುವ ಹಾಗೆ ಹೊಡೆಯುತ್ತೀನಿ’ ಇಂಥ ಮಾತುಗಳು, ಆಲೋಚನೆಗಳು, ಕಾರ್ಯರೂಪಕ್ಕೆ ಬರಲು ಎಷ್ಟು ಬೆರಳೆಣಿಕೆಯ ದಿನಗಳು ಬೇಕಾಗಬಹುದು. ಇದರ ಸಣ್ಣ ಅರಿವು ಇಲ್ಲದೇ ಮಾತಿನ ಭರದಲ್ಲಿ ಇಂಥ ಹೊಡೆಯುವ ಮಾತುಗಳಿಗೆಲ್ಲ ಅವಕಾಶ ಸಿಗುವುದರ ಹಿಂದಿನ ಸದರ ಯಾವುದು?
‘ಹೊಡೆದು, ಬಡಿದು ಅಂಕೆಯಲ್ಲಿ ಇಟ್ಟುಕೊಳ್ತೀನಿ, ತಾನು ಹೇಳಿದ ಹಾಗೆ ಕೇಳಬೇಕು. ಕೇಳಿಲ್ವಾ, ಅಂಥವರಿಗೆ ತಕ್ಕ ಶಾಸ್ತಿ ಮಾಡಬೇಕು’ ಇಂಥ ವಿಚಾರಗಳೇ ಹೊಡೆಯುವ ಮನಸ್ಥಿತಿಯನ್ನು ಪೊರೆಯುವುದು. ಜತೆಗೆ ಸಂಬಂಧಗಳ ನಡುವೆ ಪರಸ್ಪರ ಗೌರವವೇ ಇಲ್ಲದಿದ್ದಾಗ, ಒಂದು ಸಣ್ಣ ಮಾತನ್ನು ಸಹಿಸಿಕೊಳ್ಳಲು ಆಗದೇ ಇದ್ದಾಗ, ಅಸಮಾಧಾನ, ಹತಾಶೆ, ಕೋಪ ಎಲ್ಲವೂ ಸೇರಿ ಹೊಡೆಯುವ ಮಟ್ಟಕ್ಕೆ ಹೋಗುವ ಸಾಧ್ಯತೆಗಳನ್ನು ಅಲ್ಲಗಳೆಯುವ ಹಾಗಿಲ್ಲ. ಹದ ತಪ್ಪಿದ ಸಂಬಂಧದಲ್ಲಿ ಒಂದು ಸಲ ಕೈಎತ್ತುವ ಮಟ್ಟಕ್ಕೆ ಹೋಗಿಬಿಟ್ಟರೆ ಪದೇ ಪದೇ ಅದು ಮರುಕಳಿಸುವ ಸಾಧ್ಯತೆಯಂತೂ ಇರುತ್ತದೆ. ಹಾಗಾಗಿ ಕೈ ಎತ್ತುವ ಮುನ್ನ ಹಾಗೂ ಹೊಡೆತ ತಿನ್ನುವ ಮುನ್ನ ಯೋಚಿಸಿ.
ಹೊಡೆಸಿಕೊಳ್ಳುವವರಿಗಿಂತಲೂ ಹೊಡೆಯುವವರು ನಿಜವಾದ ದುರ್ಬಲರು. ಆ ಕ್ಷಣಕ್ಕೆ ಕೋಪವನ್ನು ನಿಯಂತ್ರಿಸುವ ಶಕ್ತಿ ಹಾಗೂ ವಿವೇಚನೆಯನ್ನು ಕಳೆದುಕೊಂಡಿರುತ್ತಾರೆ. ಹೀಗೆ ಕೌಟುಂಬಿಕ ದೌರ್ಜನ್ಯದ ಜಾಲದಲ್ಲಿ ಸಿಲುಕಿ ನಲುಗುವುದಕ್ಕೆ ಹೆಣ್ಣು–ಗಂಡಿನ ಭೇದವಿಲ್ಲವಾದರೂ, ಇಲ್ಲಿಯೂ ದೌರ್ಜನ್ಯಕ್ಕೆ ಒಳಗಾಗಿ ತುಟಿಕಚ್ಚಿ ಸಹಿಸುವವರೂ ಬಹುಪಾಲು ಹೆಣ್ಣುಮಕ್ಕಳೇ. ಇಂಥ ನೋವಿನ ಕೂಪದಲ್ಲಿದ್ದು, ನಲಗುವ ಹೆಣ್ಣುಮಕ್ಕಳಿಗೆ ಸರಿಯಾದ ಸಾಂತ್ವನ ನೀಡಿ, ಕಾನೂನಿನ ಸೂಕ್ತ ಸಲಹೆ ನೀಡುವ ಸಲುವಾಗಿ ‘ರೀಚ್ ಲಾಯರ್’ ಎನ್ನುವ ಟ್ರಸ್ಟ್ ‘ಸೋಜ್’ ಎನ್ನುವ ಅಭಿಯಾನವನ್ನು ಹಮ್ಮಿಕೊಂಡಿದೆ.
ಮನೆ ಹಾಗೂ ಕೆಲಸದ ಸ್ಥಳಗಳಲ್ಲಿ ಹೆಣ್ಣುಮಕ್ಕಳು ಅನುಭವಿಸುವ ಯಾವುದೇ ಬಗೆಯ ದೌರ್ಜನ್ಯಗಳ ವಿರುದ್ಧ ಮಾತನಾಡಲು ‘ಸೋಜ್’ ಅವಕಾಶ ಮಾಡಿಕೊಡುತ್ತದೆ. ಹೆಣ್ಣುಮಕ್ಕಳು ಅರ್ಥಿಕವಾಗಿ ಸಬಲರಾಗಿದ್ದರೂ ಕುಟುಂಬದಲ್ಲಿ ಅವರು ಎದುರಿಸುವ ಕ್ರೌರ್ಯ ನಾನಾ ಬಗೆಯದ್ದು. ಅದು ಗಾರ್ಮೆಂಟ್ಸ್ ಕಾರ್ಮಿಕ ಹೆಣ್ಣುಮಗಳಿಂದ ಹಿಡಿದು ಐಟಿ–ಬಿಟಿಯಲ್ಲಿ ಕೆಲಸ ಮಾಡುವ, ಆರ್ಥಿಕವಾಗಿ ಸದೃಢರಾಗಿರುವ ಹೆಣ್ಣುಮಕ್ಕಳೂ ಕೌಟುಂಬಿಕ ದೌರ್ಜನ್ಯವನ್ನು ಅನುಭವಿಸಿರುವ ಉದಾಹರಣೆಗಳು ಕಣ್ಮುಂದಿವೆ ಎನ್ನುತ್ತಾರೆ ಟ್ರಸ್ಟ್‌ನ ಸಂಸ್ಥಾಪಕ ಬಿ.ಟಿ. ವೆಂಕಟೇಶ್.
ಹೆಣ್ಣುಮಕ್ಕಳು ಎದುರಿಸುವ ಕಷ್ಟ ಹಾಗೂ ಸವಾಲುಗಳನ್ನು ಸರಿಯಾದ ರೀತಿಯಲ್ಲಿ ಗ್ರಹಿಸಲು ನಮ್ಮ ಸಾಮಾಜಿಕ ವ್ಯವಸ್ಥೆ ವಿಫಲವಾಗಿದೆ. ಅವಳ ಕಷ್ಟಗಳನ್ನು ಸರಿಯಾದ ರೀತಿಯಲ್ಲಿ ಕೇಳಿಸಿಕೊಂಡು, ವ್ಯಾಖ್ಯಾನಿಸುವಲ್ಲಿ ಸೋತಿದ್ದೇವೆ. ಇನ್ನು ಕೇಳಿಸಿಕೊಂಡ ಮೇಲೆ ಸೂಕ್ತ ಕಾನೂನು ಸಲಹೆ ನೀಡುವ ವ್ಯವಸ್ಥೆಯೂ ಇಲ್ಲ. ಇದನ್ನು ತಿಳಿದ ‘ರೀಚ್ ಲಾಯರ್’ ತನ್ನ ‘ಸೋಜ್’ ಮೂಲಕ ಅರಿವಿನ ಬೀಜವನ್ನು ಬಿತ್ತುತ್ತಿದೆ.
ಸಾಮಾನ್ಯವಾಗಿ ದೌರ್ಜನ್ಯ ಅನುಭವಿಸಿದ ಹೆಣ್ಣುಮಕ್ಕಳ ಮನಸ್ಸಿನಲ್ಲಿ ತುಂಬಾ ಸಿಟ್ಟಿರುತ್ತದೆ. ತನ್ನೆಲ್ಲ ನೋವುಗಳನ್ನು ಒಬ್ಬ ಅಪರಿಚಿತ ವಕೀಲನ ಎದುರು ತೆರೆದಿಡುವಾಗ ಆಕೆ ಅನುಭವಿಸುವ ಮುಜುಗರ ಎಂಥದ್ದು ಎಂಬುದನ್ನು ಊಹೆ ಮಾಡುವುದು ಕಷ್ಟ. ಸವಾಲುಗಳ ನಡುವೆಯೂ ಅವಳ ಆಯ್ಕೆ ಮತ್ತು ಸ್ವಾತಂತ್ರ್ಯಕ್ಕೆ ಬೆಲೆ ಇರುವುದಿಲ್ಲ. ಹಾಗಾಗಿ ವಕೀಲರು ಹೇಳಿದಂತೆ ಐದಾರು ದಾವೆಗಳನ್ನು ಹೂಡಿ, ಯಾವುದೂ ಸಫಲಗೊಳ್ಳದೇ ಹೋಗಬಹುದು. ಇದರಿಂದ ಹೆಣ್ಣುಮಕ್ಕಳೆಲ್ಲ ಬೇಕಂತಲೇ ಈ ಕಾನೂನುಗಳನ್ನು ಇಟ್ಟುಕೊಂಡು ‘ದೌರ್ಜನ್ಯದ ನೆಪ’ ಹೇಳುತ್ತಾರೆ ಎಂಬ ಅಪಪ್ರಚಾರವೂ ಸಿಕ್ಕಿದೆ. ಇದನ್ನು ತೊಡೆದು ಹಾಕಲು ಮೊದಲಿಗೆ ನೋವಿನಲ್ಲಿರುವ ಹೆಣ್ಣಿನಲ್ಲಿ ಆತ್ಮಸ್ಥೈರ್ಯ ಮತ್ತು ನಂಬುಗೆಯನ್ನು ಬೆಳೆಸಬೇಕು ಎನ್ನುತ್ತಾರೆ ವೆಂಕಟೇಶ್.
ಶೇ 33ರಷ್ಟು ಮಂದಿ ಹೆಣ್ಣುಮಕ್ಕಳು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎನ್ನುತ್ತದೆ ಅಧ್ಯಯನ. ಇಷ್ಟರಲ್ಲಿ ಎಷ್ಟು ಪ್ರಕರಣಗಳು ದಾಖಲಾಗಿವೆ ಎಂದು ಗಮನಿಸಿದರೆ ಬಹಳ ಕಡಿಮೆ. ಗಂಡ ಹೊಡೆಯದೇ, ಬಡಿಯದೇ ಇರಬಹುದು. ಅವಳ ಅಸ್ತಿತ್ವವೇ ಕ್ಷುಲ್ಲಕವೆಂದು ಭಾವಿಸುವುದು ಕೂಡ ದೌರ್ಜನ್ಯವೇ ಅಲ್ಲವೇ?. v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.